ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರದ ಬೆಣೆĵ, ಕೋಳಿಗೆ ಬಲು ಬೇಡಿಕೆ

ಬಿಸಿಲೇರುವುದರೊಳಗೆ ಭರ್ಜರಿ ವ್ಯಾಪಾರ; ಕುರಿ ಮೇಕೆ ಖರೀದಿಗೂ ಮುಗಿಬೀಳುವ ಗ್ರಾಹಕರು
Last Updated 31 ಮೇ 2016, 5:42 IST
ಅಕ್ಷರ ಗಾತ್ರ

ಹೊಳೆನರಸೀಪುರ: ಪಟ್ಟಣದ ಬೆಣ್ಣೆ, ನಾಟಿ ಕೋಳಿ, ಕುರಿಗಳಿಗೆ ರಾಜ್ಯದ ವಿವಿಧ ಪಟ್ಟಣ ಹಾಗೂ ನಗರಗಳಲ್ಲಿ ಬಾರಿ ಬೇಡಿಕೆ.
ಬೆಂಗಳೂರು, ಮೈಸೂರು, ಶಿವಮೊಗ್ಗ ದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಹೊಳೆನರಸೀಪುರದ ಬೆಣ್ಣೆ ದೊರೆಯುತ್ತದೆ ಎಂದು ಬೋರ್ಡ್‌ ಹಾಕಿರುವುದನ್ನು ಈ ನಗರದಲ್ಲಿ ಸುತ್ತಾಡಿದವರ ಕಣ್ಣಿಗೆ ಅಲ್ಲಲ್ಲಿ ಕಾಣುತ್ತವೆ. ಏಕೆಂದರೆ ಇಲ್ಲಿನ ಬೆಣ್ಣೆ ಕಾಯಿಸುವಾಗ ಅದರಿಂದ ಬರುವ ಸುವಾಸನೆ ಆಹ್ಲಾದಕರ, ರುಚಿ ಕೂಡ ಅದ್ಬುತ.
ಇಂತಹ ತಾಜಾ ಬೆಣ್ಣೆಯನ್ನು ಕೊಳ್ಳಲು ಸೋಮವಾರದ ಸಂತೆಗೆ ಬೆಳಿಗ್ಗೆ 7 ರಿಂದ 10 ಗಂಟೆಗೆ ಮುಂಚೆಯೇ ಬರಬೇಕು. ಸೋಮವಾರದ ಸಂತೆಗೆ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಂದ ಸುಮಾರು 1 ರಿಂದ 2 ಟನ್‌ ಬೆಣ್ಣೆ ಬರುತ್ತದೆ. ಇಲ್ಲಿ ಬೆಣ್ಣೆ ಉಂಡೆ ಲೆಕ್ಕದಲ್ಲಿ ಮಾರಾಟವಾಗುತ್ತದೆ. 300 ರಿಂದ 320 ಗ್ರಾಂ ತೂಕದ ಒಂದು ಉಂಡೆಯ ಬೆಲೆ ಈ ವಾರದ ಸೋಮವಾರದ ಸಂತೆಯಲ್ಲಿ  ಆಧಾರದಲ್ಲಿ ₹ 120 ರಿಂದ 140 ರ ವರೆಗೆ ಮಾರಾಟವಾಯಿತು.
ಇಲ್ಲಿ ಬೆಣ್ಣೆ ಕೊಳ್ಳಲು ಬೇರೆ ಊರಿನಿಂದ ಹಲವಾರು ವರ್ತಕರು ಬರುತ್ತಾರೆ. ವರ್ತಕರು ಹೆಚ್ಚಾಗಿ ಬಂದಲ್ಲಿ ಹಳ್ಳಿಯ ಮಹಿಳೆಯರು ಬೆಣ್ಣೆ ಬೆಲೆಯನ್ನು ಹೆಚ್ಚಿಸುತ್ತಾರೆ.  ವರ್ತಕರು ಬಾರದಿದ್ದಲ್ಲಿ ಬೆಣ್ಣೆಯ ಬೆಲೆ ಕಡಿಮೆ ಆಗುತ್ತದೆ.
ಇಲ್ಲಿ ಹಸು ಹಾಗೂ ಎಮ್ಮೆ ಹಾಲಿನಿಂದ ತಯಾರಿಸಿದ ಬೆಣ್ಣೆ ದೊರೆಯುತ್ತದೆ. ಎಮ್ಮೆಯ ಬೆಣ್ಣೆ ರುಚಿ ಹೆಚ್ಚು. ಆದರೆ ಇದರಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಆದ್ದರಿಂದ  ಬಾಣಂತಿಯರಿಗೆ ಮತ್ತು ಮಕ್ಕಳಿಗಾಗಿ ಹಸುವಿನ ಬೆಣ್ಣೆಯನ್ನೇ ಖರೀದಿಸುತ್ತಾರೆ. ಹೀಗಾಗಿ ಹಸುವಿನ ಬೆಣ್ಣೆಗೆ ಸ್ವಲ್ಪ ಬೆಲೆ ಜಾಸ್ತಿ.
ಈ ಸಂತೆಯಲ್ಲಿ ನಾಟಿ ಕೋಳಿ ಮತ್ತು ಕುರಿ, ಆಡುಗಳ ಮಾರಾಟ ಕೂಡ ಬಲು ಜೋರು. ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಸನದಿಂದ ಕುರಿ, ಕೋಳಿ ಖರೀದಿಸುವವರು ಇಲ್ಲಿನ ಸಂತೆಗೆ ಬರುತ್ತಾರೆ. ಇವುಗಳ ವ್ಯಾಪಾರ ಬೆಳಿಗ್ಗೆ 6ಕ್ಕೆ ಪ್ರಾರಂಭವಾಗಿ 9 ಗಂಟೆಗೆ ಮುಕ್ತಾಯವಾಗುತ್ತದೆ.
ಕೋಳಿಗಳನ್ನು ಕೈಯಲ್ಲಿ ಹಿಡಿದು ಅಂದಾಜು ತೂಕ ಲೆಕ್ಕ ಹಾಕಿ ವ್ಯಾಪಾರ ನಡೆಯುತ್ತದೆ. 1 ರಿಂದ 2 ಕೆ.ಜಿ. ತೂಗುವ ನಾಟಿ ಕೋಳಿ ₹ 150 ರಿಂದ 250ರವರೆಗೆ ಮಾರಾಟವಾಗುತ್ತದೆ.
ಕುರಿ, ಟಗರು, ಆಡು, ಹೋತ ಎಲ್ಲವೂ ಈ ಸಂತೆಯಲ್ಲಿ ಸಿಗುತ್ತವೆ. ಇವುಗಳ ವ್ಯಾಪಾರಕ್ಕೆ ಕೆಲವು ಮಧ್ಯವರ್ತಿಗಳು ಇರುತ್ತಾರೆ. ನೇರವಾಗಿಯೂ ಖರೀದಿಸಬಹುದು.
ಇಷ್ಟೇ ಅಲ್ಲ ಸೊಪ್ಪು, ತರಕಾರಿ, ಹಲಸಿನಹಣ್ಣು ಇಲ್ಲಿ ಯಥೇಚ್ಚವಾಗಿ ದೊರೆಯುತ್ತದೆ. ಆದ್ದರಿಂದ ಸಂತೆ ದಿನವಾದ ಸೋಮವಾರ ಪಟ್ಟಣಕ್ಕೆ ಎಲ್ಲೆಡೆಯಿಂದ ವಾಹನಗಳು ಬರುವುದರಿಂದ ದಟ್ಟಣೆ ಹೆಚ್ಚಾಗಿ ಟ್ರಾಫಿಕ್‌ ಜಾಮ್‌ ಆಗುವುದುಂಟು.

ಮುಖ್ಯಾಂಶಗಳು:
* ಪ್ರತಿವಾರ ಸುಮಾರು 2 ಸಾವಿರ ಕೆ.ಜಿ.ವರೆಗೆ ಬೆಣ್ಣೆ ಮಾರಾಟ
* ಉಂಡೆ ಲೆಕ್ಕದಲ್ಲಿ ಬೆಣ್ಣೆ ಮಾರಟವಾಗುವುದು ವಿಶೇಷ
* ಕೋಳಿಗೂ ಅಂದಾಜು ತೂಕದಲ್ಲಿ ಬೆಲೆ ನಿಗದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT