ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಭರವಸೆಯ ಆದಿಲ್‌

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಟೆನಿಸ್‌ ಆಟಗಾರರು ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ರಾಜ್ಯದ ಪ್ರತಿಭಾನ್ವಿತ ಆಟಗಾರರು ಮಿಂಚುತ್ತಿದ್ದಾರೆ.

ಭಾರತದಲ್ಲಿ ಜೂನಿಯರ್ ಮಟ್ಟದ ಟೆನಿಸ್‌ ಬೆಳೆಯಬೇಕೆನ್ನುವ ಕಾರಣಕ್ಕಾಗಿ ಇದೇ ಮೊದಲ ಬಾರಿಗೆ ‘ರೋಡ್‌ ಟು ವಿಂಬಲ್ಡನ್‌’ ಎನ್ನುವ  ವಿನೂತನ ಪ್ರಯೋಗ ನಡೆಯಿತು. ವಿಶ್ವ ವ್ಯಾಪಿ ಟೆನಿಸ್‌ ಕ್ರೀಡೆಯ ಖ್ಯಾತಿ ಹೆಚ್ಚಿಸಬೇಕು ಮತ್ತು 14 ವರ್ಷದೊಳಗಿನವರ ಆಟಕ್ಕೆ ಬೆಂಬಲ ನೀಡಬೇಕು ಎನ್ನುವುದು ‘ರೋಡ್‌ ಟು ವಿಂಬಲ್ಡನ್‌’ನ ಆಶಯವಾಗಿತ್ತು. ಅದಕ್ಕಾಗಿ ಹೋದ ವಾರ ದೆಹಲಿಯಲ್ಲಿ ಯುವ ಆಟಗಾರರಿಗೆ ಪರೀಕ್ಷೆಯೂ ನಡೆಯಿತು.

ವಿಂಬಲ್ಡನ್‌ನಲ್ಲಿ ಆಡಬೇಕೆನ್ನುವುದು ಪ್ರತಿಯೊಬ್ಬ ಟೆನಿಸ್‌ ಆಟಗಾರನ ಹೆಬ್ಬಯಕೆ. ಆದರೆ, ಜೂನಿಯರ್‌ ಮಟ್ಟದಲ್ಲಿ ಅವಕಾಶ ಸಿಗುವುದು ಬಲು ವಿರಳ. ಈ ಸಲ ಭಾರತದ ನಾಲ್ವರು (ಇಬ್ಬರು ಬಾಲಕರು ಮತ್ತು ಇಬ್ಬರು ಬಾಲಕಿಯರು)  ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅದರಲ್ಲಿ ಬಾಲಕರ ವಿಭಾಗದಲ್ಲಿ ಚಾಂಪಿಯನ್‌ ಆದ ಯುವ ಪ್ರತಿಭೆ ಬೆಂಗಳೂರಿನ ಆದಿಲ್‌ ಕಲ್ಯಾಣಪುರ ಕೂಡಾ ಒಬ್ಬರು.

14 ವರ್ಷದೊಳಗಿನವರ ‘ರೋಡ್‌  ಟು ವಿಂಬಲ್ಡನ್‌’ಗೆ ಅರ್ಹತೆ ಪಡೆಯಲು ಪ್ರತಿ ವಿಭಾಗದಲ್ಲಿ 200 ಆಟಗಾರರ ನಡುವೆ ಪೈಪೋಟಿ ನಡೆದಿತ್ತು. ಎದುರಾದ ಎಲ್ಲಾ ಸವಾಲನ್ನು ಸಮರ್ಥವಾಗಿ ಮೆಟ್ಟಿನಿಂತ ಆದಿಲ್‌ ಪ್ರತಿಷ್ಠಿತ ಕೋರ್ಟ್‌ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಯುವ ಪ್ರತಿಭೆ ಆದಿಲ್‌ ಜೂನಿಯರ್‌ ಮಟ್ಟದ ಅನೇಕ ಎಐಟಿಎ ರಾಷ್ಟ್ರೀಯ ಟೆನಿಸ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದಾರೆ. ಜೊತೆಗೆ, ಇದೇ ವಯೋಮಾನದ ಜೂನಿಯರ್‌ ಡೇವಿಸ್‌ ಕಪ್‌ನ ಭಾರತ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಉಡುಪಿಯ ಬಳಿ ಇರುವ ಕಲ್ಯಾಣಪುರದವರಾದ ಆದಿಲ್‌ ಟೆನಿಸ್‌ ಆಡಲು ಶುರುಮಾಡಿದ್ದು ಬೆಂಗಳೂರಿನಲ್ಲಿ. ಐದು ವರ್ಷದವನಿದ್ದಾಗಲೇ ರ್‍ಯಾಕೆಟ್‌ ಬಗ್ಗೆ ಪ್ರೀತಿ ಬೆಳೆದಿತ್ತು.

ನಿತ್ಯ ಶಾಲೆಗೆ ಹೋದರೆ ಟೆನಿಸ್‌ ಅಭ್ಯಾಸ ಮಾಡಲು ಎಲ್ಲಿ ತೊಂದರೆಯಾಗುತ್ತದೆಯೋ ಎನ್ನುವ ಕಾರಣಕ್ಕಾಗಿ ಕ್ಯಾಲಿಫೋರ್ನಿಯಾದ ಶಾಲೆಯೊಂದರಲ್ಲಿ ಈಗಲೂ ಆನ್‌ ಲೈನ್‌ ಮೂಲಕ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ದಿನದ ಬಹುತೇಕ ಸಮಯವನ್ನು ಅಭ್ಯಾಸದಲ್ಲಿಯೇ ಕಳೆಯುತ್ತಾನೆ. ಹಗಲಿರುಳು ಎನ್ನದೇ ಕಠಿಣ ಅಭ್ಯಾಸ ನಡೆಸಿದ್ದೇ ಈ ಗೆಲುವಿಗೆ ಕಾರಣ ಎಂದು ಹೇಳುತ್ತಾನೆ.

50ಕ್ಕೂ ಹೆಚ್ಚು ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿರುವ ಆದಿಲ್‌ 35 ಸಲ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದ್ದಾನೆ. 10 ವರ್ಷದೊಳಗಿನವರ ರಾಜ್ಯ ಮಟ್ಟದ ಟೂರ್ನಿಯಲ್ಲಿ ಆಡಿದ ಆರು ಸಲವೂ ಚಾಂಪಿಯನ್‌ ಪಟ್ಟ ಲಭಿಸಿದೆ. 14 ವರ್ಷದೊಳಗಿನವರ ಎಐಟಿಎ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ಮತ್ತು ಏಷ್ಯಾ ವಲಯದಲ್ಲಿ ಎರಡನೇ ಸ್ಥಾನ ಹೊಂದಿದ್ದಾನೆ.

‘ಈ ಯಶಸ್ಸಿಗೆ ಕಾರಣ ಏನೆಂದು ಎಲ್ಲರೂ ನನ್ನನ್ನು ಪ್ರಶ್ನಿಸುತ್ತಾರೆ. ನಿಜ ಹೇಳಬೇಕೆಂದರೆ ನನಗಿನ್ನೂ ಯಾವ ಯಶಸ್ಸು ಸಿಕ್ಕಿಲ್ಲ. ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಸೀನಿಯರ್ ವಿಭಾಗದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಬೇಕೆನ್ನುವ ಆಸೆಯಿದೆ. ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲುವ ಗುರಿಯಿದೆ. ಎಲ್ಲಾ ಕನಸುಗಳನ್ನು ನನಸು ಮಾಡಿಕೊಳ್ಳಲು ಈ ಆರಂಭಿಕ ಗೆಲುವು ಸ್ಫೂರ್ತಿ ತುಂಬಿದೆ’ ಎಂದು ಆದಿಲ್‌ ‘ಪ್ರಜಾವಾಣಿ’ ಜೊತೆ ಭವಿಷ್ಯದ ಕನಸನ್ನು ಹಂಚಿಕೊಂಡರು.

‘ಮಗ ಇಂಥದ್ದೇ ಸಾಧನೆ ಮಾಡಬೇಕೆಂದು ಎಂದಿಗೂ ಆತನ ಮೇಲೆ ಒತ್ತಡ ಹೇರಿಲ್ಲ. ಆತ ಏನೇ ಸಾಧನೆ ಮಾಡಲು ಮುಂದಾದರೂ ಬೆಂಬಲ ನೀಡುತ್ತೇವೆ. ಮಕ್ಕಳ ಇಷ್ಟದಂತೆ ಬೆಳೆಯಲು ಬಿಟ್ಟರೆ ಅವರಲ್ಲಿನ ಸೃಜನಶೀಲತೆ ಹೆಚ್ಚಾಗುತ್ತದೆ. ಮಕ್ಕಳ ಭವಿಷ್ಯವೂ ಬೆಳಗುತ್ತದೆ’ ಎಂದು ವೃತ್ತಿಯಲ್ಲಿ ವೈದ್ಯೆಯಾಗಿರುವ ಆದಿಲ್‌ ತಾಯಿ ಸುನಿತಾ ಮಹೇಶ್ವರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT