ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಹೊಸ ಮುಖ ಹಾರ್ದಿಕ್‌

ವ್ಯಕ್ತಿ
Last Updated 29 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಎರಡು ತಿಂಗಳ ಹಿಂದೆ ಈ ಯುವಕನ ಬಗ್ಗೆ ಗುಜರಾತ್‌ನಲ್ಲಿ ಯಾರಿಗೂ ಅಷ್ಟಾಗಿ ಗೊತ್ತೇ ಇರಲಿಲ್ಲ. ಆದರೆ ಈಗ ಗುಜರಾತ್‌ ಏಕೆ ಇಡೀ ದೇಶದಲ್ಲಿ ಸುದ್ದಿಯಲ್ಲಿದ್ದಾನೆ.

ಕ್ರಿಕೆಟ್‌ ಆಡುವ ಸೀದಾ ಸಾದಾ ತರುಣನೊಬ್ಬ ಗುಜರಾತ್‌ ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದ ಪರಿ ನಿಜಕ್ಕೂ ಸೋಜಿಗ. ರಾತ್ರಿ ಬೆಳಗಾಗುವುದರೊಳಗೆ ಗುಜರಾತ್‌ನಲ್ಲಿ  ಮನೆಮಾತಾದ ಈ ಯುವಕನ ಬಗ್ಗೆ ಅನುಮಾನ ಕೂಡ ಏಳುವುದು ಸಹಜವೇ.

22 ವರ್ಷದ ಹಾರ್ದಿಕ್‌ ಪಟೇಲ್‌ ಬಗ್ಗೆ ಹೇಳುವುದಕ್ಕೆ ಸಾಕಷ್ಟು ವಿಷಯಗಳು ಇವೆ. ಪಟೇಲ್‌ ಸಮುದಾಯವು ಗುಜರಾತ್‌ನಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ  ‌ ಪ್ರಭಾವಶಾಲಿಯಾಗಿರುವ ಸಮುದಾಯ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 20ರಷ್ಟು ಇರುವ ಇವರನ್ನು ಯಾವ ರಾಜಕೀಯ ಪಕ್ಷಗಳೂ ಕಡೆಗಣಿಸುವುದಕ್ಕೆ ಸಾಧ್ಯವಿಲ್ಲ.

ಪಟೇಲರು ಎಂದಾಕ್ಷಣ ಶ್ರೀಮಂತರು ಎನ್ನುವ ಭಾವನೆ ಮೂಡುವುದು ಸಹಜ.  ಆದರೆ ತಮ್ಮ  ಸಮುದಾಯವನ್ನು  ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿಸಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು ಎಂದು  ಆಗ್ರಹಿಸಿ  ಈ ಸಮುದಾಯ ಪ್ರತಿಭಟನೆ ಹಾದಿ ತುಳಿದಿದೆ. ಇದಕ್ಕೆ ಹಾರ್ದಿಕ್‌ ಪಟೇಲ್‌ ರೂವಾರಿ. ಆಗಸ್ಟ್‌ 25ರಂದು ಅಹಮದಾಬಾದ್‌ನಲ್ಲಿ ನಡೆದ ‘ಮಹಾಕ್ರಾಂತಿ’ ರ‍್ಯಾಲಿ ಬಳಿಕ ಹಾರ್ದಿಕ್‌  ಈ ಸಮುದಾಯದ ಯುವಜನರ ಪಾಲಿಗೆ ಹೀರೊ ಎನಿಸಿಕೊಂಡಿದ್ದಾರೆ.

ಕೇವಲ ಎರಡರಿಂದ ಮೂರು ತಿಂಗಳಿನಲ್ಲಿ ತಮ್ಮ ಸಮುದಾಯವನ್ನು ಸಂಘಟಿಸಿದ್ದನ್ನು ನೋಡಿದರೆ ಹಾರ್ದಿಕ್‌ ಇವರೆಲ್ಲರ ಮೇಲೆ ಎಷ್ಟೊಂದು ಗಾಢವಾಗಿ ಪ್ರಭಾವ ಬೀರಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ಈ ಎರಡು ತಿಂಗಳ ಅವಧಿಯಲ್ಲಿ  ಅವರು ರಾಜ್ಯದಾದ್ಯಂತ 100ಕ್ಕೂ ಹೆಚ್ಚು ರ‍್ಯಾಲಿಗಳನ್ನು ಮಾಡಿ ರಾಜ್ಯದ ಆಡಳಿತವನ್ನು ದಂಗುಬಡಿಸಿದ್ದಾರೆ.

ಪ್ರಖರ ಭಾಷಣ, ಹಾವಭಾವದ ಕಾರಣಕ್ಕೋ ಏನೋ ಕೆಲವರು ಇವರನ್ನು  ಮೋದಿ ಅವರಿಗೆ ಹೋಲಿಸುತ್ತಾರೆ. ‘ಹೊಸ ಮೋದಿ’, ‘ಗುಜರಾತ್‌ನ ಕೇಜ್ರಿವಾಲ್’ ಎಂದೆಲ್ಲ ಕರೆಯುತ್ತಾರೆ. ಇವರ ಹೋರಾಟದ ಅಬ್ಬರವನ್ನು ಕಂಡು ಕೆಲವರಿಗೆ ಅಣ್ಣಾ ಹಜಾರೆ ಅವರ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಹಾಗೂ ‘ಅರಬ್‌ ಕ್ರಾಂತಿ’ಯ ನೆನಪಾಗಿರಲಿಕ್ಕೆ ಸಾಕು. ಪಟೇಲ್‌ ಹೋರಾಟ ಎಲ್ಲಿಗೆ ತಲುಪುತ್ತದೆ ಎಂದು ಕೆಲವರು ಕುತೂಹಲದಿಂದ ಎದುರು ನೋಡುತ್ತಿರುವುದು ನಿಜ. ಈ ಹೋರಾಟವು  ಗುರ್ಜರ್‌ ಹೋರಾಟದ ಸ್ವರೂಪ ಪಡೆಯುವ ದಿನಗಳು ದೂರ ಇಲ್ಲ.  ಹೋರಾಟವನ್ನು ತೀವ್ರಗೊಳಿಸುವುದಕ್ಕೆ ಗುರ್ಜರ್‌ ಮುಖಂಡರನ್ನು ಭೇಟಿಯಾಗುವ  ತಯಾರಿಯಲ್ಲಿದ್ದಾರೆ ಹಾರ್ದಿಕ್‌.

ಬಾಲ್ಯ, ಓದು: ಇವರು ಹುಟ್ಟಿದ್ದು 1993ರ ಜುಲೈ 20ರಂದು. ಊರು ಅಹಮದಾಬಾದ್‌ನ ವಿರಾಮ್‌ಗಾಮ್‌ ಪಟ್ಟಣದ ಬಳಿಯ ಚಂದ್ರಾಪುರ. ತಂದೆ ಭರತ್‌ಭಾಯ್‌ ಪಟೇಲ್‌  ಕೃಷಿಕರು. ಜತೆಗೆ ಸಬ್‌ ಮರ್ಸಿಬಲ್‌ ಪಂಪ್‌ ಡೀಲರ್ ಕೂಡ ಹೌದು. ಇವರದ್ದು  ಮಧ್ಯಮವರ್ಗದ ಕುಟುಂಬ. ಹಾರ್ದಿಕ್‌ ಅವರಿಗೆ ಒಬ್ಬ ತಂಗಿ ಇದ್ದಾಳೆ. ಈಕೆ ಕಳೆದ ವರ್ಷವಷ್ಟೇ ಪ್ರೌಢಶಾಲೆ ಮುಗಿಸಿದ್ದಾಳೆ. ಅಹಮದಾಬಾದ್‌ನ ಸಹಜಾನಂದ ಕಾಲೇಜಿನಲ್ಲಿ ಬಿ.ಕಾಂ. ಮುಗಿಸಿರುವ ಹಾರ್ದಿಕ್‌  ಓದಿನಲ್ಲಿ ಅಷ್ಟೇನೂ ಜಾಣರಲ್ಲ ಎನ್ನುವುದನ್ನು ಅವರು ಪಡೆದ ಅಂಕಗಳು (ಶೇ 50ಕ್ಕಿಂತಲೂ ಕಮ್ಮಿ) ಹೇಳುತ್ತವೆ. ಆದರೆ ಬುದ್ಧಿವಂತೆಯಾಗಿರುವ ಸಹೋದರಿಗೆ ವಿದ್ಯಾರ್ಥಿವೇತನ ಸಿಕ್ಕಿಲ್ಲ ಎನ್ನುವ ಕೊರಗು ಅವರನ್ನು ಕಾಡುತ್ತಿದೆ.

ಹಾರ್ದಿಕ್‌  ಸಾರ್ವಜನಿಕ ರಂಗ ಪ್ರವೇಶಿಸಿದ್ದು ‘ಸರ್ದಾರ್‌ ಪಟೇಲ್ ಗ್ರೂಪ್‌’ (ಎಸ್‌ಪಿಜಿ) ಮೂಲಕ. ಈ ಸಂಘಟನೆಯ ವಿರಾಮ್‌ಗಾಮ್‌ ಘಟಕದ ಅಧ್ಯಕ್ಷರಾಗಿಯೂ  ಕಾರ್ಯ ನಿರ್ವಹಿಸಿದ್ದರು. ಆದರೆ ಇದರ  ಮುಖಂಡ ಲಾಲ್‌ಜಿ ಪಟೇಲ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಈ ಸಂಘಟನೆಯಿಂದ ಹೊರ ಬಿದ್ದರು. ಈಗ ಇವರು ‘ಪಾಟಿದಾರ್ ಅನಾಮತ್‌ ಆಂದೋಲನ ಸಮಿತಿ’ (ಪಿಎಎಎಸ್‌–ಪಾಸ್‌) ಸಂಚಾಲಕ. ಈ ವರ್ಷ ಜುಲೈನಲ್ಲಿ ಹುಟ್ಟಿಕೊಂಡಿರುವ ಈ ಸಮಿತಿಯು ಪಟೇಲ್‌ ಸಮುದಾಯವನ್ನು ಒಗ್ಗೂಡಿಸುವ ಮೂಲಕ ಗುಜರಾತ್‌ನ ಸಾಮಾಜಿಕ ಹಾಗೂ ರಾಜಕೀಯ ಸ್ಥಿರತೆಯನ್ನೇ ಅಲ್ಲಾಡಿಸುವ ಮಟ್ಟಕ್ಕೆ ಬೆಳೆದುನಿಂತಿದೆ.

ಆರ್ಥಿಕವಾಗಿ ಬಲಾಢ್ಯರಾಗಿರುವ ಪಟೇಲರಿಗೆ ಮೀಸಲಾತಿ ಏಕೆ ಬೇಕು ಎನ್ನುವ  ಪ್ರಶ್ನೆ  ಏಳುತ್ತದೆ. ಆದರೆ ಇದಕ್ಕೂ ಹಾರ್ದಿಕ್‌ ಬಳಿ ಉತ್ತರ ಇದೆ.  ‘ಎಲ್ಲ ಪಟೇಲರು ಶ್ರೀಮಂತರಲ್ಲ. ಈ ಸಮುದಾಯದಲ್ಲಿ ಶೇ 5ರಿಂದ 10ರಷ್ಟು ಮಂದಿ ಮಾತ್ರ ಅನುಕೂಲಸ್ಥರು. ಸೌರಾಷ್ಟ್ರ ಪ್ರಾಂತ್ಯಕ್ಕೆ ಹೋದರೆ ನಿಜವಾದ ಚಿತ್ರಣ ಸಿಗುತ್ತದೆ. ಅಲ್ಲಿರುವ ಪಟೇಲರಿಗೆ ಹೊಟ್ಟೆಬಟ್ಟೆಗೂ ತತ್ವಾರ ಇದೆ. ಕಳೆದ  ಹತ್ತು ವರ್ಷಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪೈಕಿ ಬಹಳಷ್ಟು ಮಂದಿ ಪಟೇಲ್ ಸಮುದಾಯದವರು’ ಎಂದು ಅಂಕಿ ಅಂಶ ಸಮೇತ ವಿವರಿಸುತ್ತಾರೆ.

ರಾಜಕೀಯ ಇಲ್ಲ: ತಾವು ನಡೆಸುತ್ತಿರುವ ಹೋರಾಟದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಕೈವಾಡ ಇಲ್ಲ ಎಂದು ಹಾರ್ದಿಕ್‌ ಪದೇ ಪದೇ ಹೇಳಿಕೊಂಡಿದ್ದಾರೆ. ಇವರ ಹೋರಾಟದ ಹಿಂದೆ ಯಾವ ರಾಜಕೀಯ ಪಕ್ಷ ಇದೆ ಎನ್ನುವುದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಇವರ ತಂದೆ ಬಿಜೆಪಿ ಕಾರ್ಯಕರ್ತ ಎಂದು ಹಲವರು ಹೇಳುತ್ತಾರೆ. ಅಲ್ಲದೆ, ಇವರು ಪ್ರವೀಣ್‌ ತೊಗಾಡಿಯಾ ಅವರ ಆಪ್ತರು ಎಂದೂ ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್ ಅವರನ್ನು ಕೆಳಗಿಳಿಸುವುದಕ್ಕೆ   ಪಟೇಲ್ ಸಮುದಾಯದ ಕೆಲವು ಮುಖಂಡರು ಹಾರ್ದಿಕ್‌ ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ‍ಮಾತು ರಾಜ್ಯದ ರಾಜಕೀಯ ಮೊಗಸಾಲೆಯಲ್ಲಿ ಪ್ರತಿಧ್ವನಿಸುತ್ತಿದೆ. ಹಾರ್ದಿಕ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಕಟ್ಟಾ ಅಭಿಮಾನಿ ಇರಲಿಕ್ಕೆ ಸಾಕು ಎನ್ನುವುದು ಹಲವರ ಅನುಮಾನ. ಇದಕ್ಕೆ ಕಾರಣವೂ ಇದೆಯೆನ್ನಿ. ಕೇಜ್ರಿವಾಲ್‌ ಗುಜರಾತ್‌ಗೆ ಭೇಟಿ ನೀಡಿದ ವೇಳೆ ಅವರೊಂದಿಗೆ ಹಾರ್ದಿಕ್‌ ತೆಗೆಸಿಕೊಂಡ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರಿ ಸುದ್ದಿ ಮಾಡಿತ್ತು.

ಮೋದಿ, ಆನಂದಿಬೆನ್‌ ಪಟೇಲ್‌ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ತವರು ಜಿಲ್ಲೆಯಾದ ಮೆಹಸಾನ್‌ದಿಂದಲೇ ಹಾರ್ದಿಕ್‌ ತಮ್ಮ  ಹೋರಾಟ ಶುರುಮಾಡಿದ್ದು  ವಿಶೇಷ ಅರ್ಥ ಕೊಡುತ್ತದೆ. ಮೀಸಲಾತಿ ಆಂದೋಲನವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬ ಹಂಬಲ  ಅವರಿಗೆ ಇದ್ದಂತಿದೆ. ಇದೇ ಕಾರಣಕ್ಕೆ ಅವರು ಅಹಮದಾಬ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಗುಜರಾತಿ ಬದಲು ಹಿಂದಿಯಲ್ಲಿ ಮಾತನಾಡಲು ನಿರ್ಧರಿಸಿದ್ದರು. ಈ ಹಿಂದೆ ಅನೇಕ ಐತಿಹಾಸಿಕ ಹೋರಾಟಗಳಿಗೆ ಸಾಕ್ಷಿಯಾಗಿರುವ ದೆಹಲಿಯ ಜಂತರ್‌ಮಂತರ್ ಇನ್ನು ಮುಂದೆ ಪಟೇಲ್‌ ಸಮುದಾಯದ ಹೋರಾಟಕ್ಕೂ ವೇದಿಕೆಯಾಗುವ ಲಕ್ಷಣಗಳು ಕಾಣುತ್ತಿವೆ.

ಪೂರಕ ಮಾಹಿತಿ: ಪೂರ್ಣಿಮಾ ಬಳಗುಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT