ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಲಿಕೆ ಬೇಕೆ?

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ನಮಗಿಂತ ಜೀವನದಲ್ಲಿ  ಹೆಚ್ಚು ಯಶಸ್ವಿಯಾದವರನ್ನು ಕಂಡು ತಾವೂ ಹಾಗಾಗಬೇಕು ಎಂದು ಬಯಸುವುದು ತಪ್ಪಲ್ಲ. ಹಾಗೆಯೇ ಅವರ ಒಳ್ಳೆಯ ಗುಣಗಳನ್ನು ಕಲಿಯುವುದು ಖಂಡಿತ ಒಳ್ಳೆಯದು.

ಆ ನಿಟ್ಟಿನಲ್ಲಿ ಯಾರನ್ನು, ಯಾವಾಗ, ಎಷ್ಟರ ಮಟ್ಟಿಗೆ ಹೋಲಿಕೆ ಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಮ್ಮನ್ನು ನಾವು ಉತ್ತಮಪಡಿಸಿಕೊಳ್ಳಲು, ಹೊಸದನ್ನು ಕಲಿಯುವುದಕ್ಕೆ ಹೋಲಿಕೆ ಬಳಕೆಯಾದರೆ ಸರಿ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಹೀಗಾಗುವುದಿಲ್ಲ. ಯಾವಾಗಲೂ ಹೋಲಿಕೆ ಮಾಡುವುದರಿಂದ ಆಗುವ ಹಾನಿಗಳು ಸಾಕಷ್ಟು.

ನಕಾರಾತ್ಮಕ ಭಾವನೆಗಳು: ಬೇರೆಯವರ ಯಶಸ್ಸನ್ನು ಹೋಲಿಸುವಾಗ ಅವರ ಬಗ್ಗೆ ಮೆಚ್ಚುಗೆಗಿಂತ ಅಸೂಯೆ ಮೂಡುತ್ತದೆ. ಸಾಧಿಸಲು ಸಾಧ್ಯವಾಗದೇ ಇದ್ದ ನಮ್ಮ ಬಗ್ಗೆಯೇ ಕೀಳರಿಮೆ -ಸ್ವಾನುಕಂಪ ಹುಟ್ಟಬಹುದು.

ತಪ್ಪು–ಹೋಲಿಕೆ: ಐಷಾರಾಮಿತನವೇ ಸುಖ-ಯಶಸ್ಸಿನ ಮಾನದಂಡವಾಗಿರುವ ಈ ಕಾಲದಲ್ಲಿ ನಮ್ಮ ಹೋಲಿಕೆ ಏನಿದ್ದರೂ ಕಾರು, ಬಂಗ್ಲೆ-ಮಾರ್ಕ್ಸ್‌ಗಳಿಗೆ ಸೀಮಿತ. ಕೊಳ್ಳುಬಾಕತನವನ್ನು ಲಾಭದ ದೃಷ್ಟಿಯಿಂದ ಪ್ರೋತ್ಸಾಹಿಸುವ ಜಾಹೀರಾತುಗಳೂ ಈ ರೀತಿ ಹೋಲಿಕೆಯನ್ನು ಯಶಸ್ವಿಯಾಗಿ ಬಳಸುತ್ತವೆ (ತೆಳ್ಳಗಿನ ದೇಹ, ಶ್ರೀಮಂತಪತಿ ಹೀಗೆ). ಇತರರೊಂದಿಗೆ ಹೋಲಿಸಿಕೊಳ್ಳುವುದು ಇಂಥ ವ್ಯಕ್ತಿವಿಕಸನಕ್ಕೆ ಅಡ್ಡಿ.

ಕಂಡದ್ದೆಲ್ಲಾ ನಿಜವಲ್ಲ: ಸಾಮಾಜಿಕ ಮಾಧ್ಯಮಗಳಲ್ಲಿಯ ಚಿತ್ರ-ಸಂದೇಶಗಳು ಸಂಪೂರ್ಣ ವಸ್ತುಸ್ಥಿತಿಯನ್ನು ಬಿಂಬಿಸುವುದಿಲ್ಲ. ಪ್ರತಿಯಬ್ಬರೂ ಬೇರೆಯವರಿಗೆ ತಾವು ಹೇಗೆ ಕಾಣಿಸಬೇಕು ಎಂಬುದರ ಮೇಲೆ ಅತ್ಯುತ್ತಮವಾದದನ್ನು ಮಾತ್ರ ಆರಿಸಿ ಬಳಸುತ್ತಾರೆ. ಅಂತರ್ಜಾಲದಲ್ಲಿ ಬಂದದ್ದು ಭಾಗಶಃ ನಿಜ.  ಪ್ರತಿಯೊಬ್ಬರ ಜೀವನದಲ್ಲೂ ಇರುವ ದುಃಖ, ನೋವು, ಸೋಲುಗಳು ಇವುಗಳಲ್ಲಿ ಕಾಣುವುದಿಲ್ಲ.

ಬದಲಾದ ಮನಃಸ್ಥಿತಿ: ನಮಗಿಂತ ಮೇಲಿರುವವರನ್ನು ಕಂಡಾಗ ಅಸೂಯೆಯಾದಂತೆ ಕೆಳಗಿರುವವರ ಜೊತೆ ಹೋಲಿಸಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆದರದು ತಾತ್ಕಾಲಿಕ. ಅದರೊಂದಿಗೆ ಇತರರ ಸೋಲು-ಕಷ್ಟದಲ್ಲಿ ನಮ್ಮ ಸುಖ ಕಾಣುವ ಮನಃಸ್ಥಿತಿ ಉಂಟಾಗುತ್ತದೆ.

ಮುಗಿಯದ ಆಟ: ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಶಕ್ತಿ-ದೌರ್ಬಲ್ಯಗಳಿವೆ. ಆದರೂ ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು ಅದನ್ನು ಸಾಧಿಸಲು ಯತ್ನಿಸುವುದೇನೋ ಸರಿ. ಆದರೆ ಅಲ್ಲಿಗದು ಮುಗಿಯುವುದಿಲ್ಲ. ಒಂದರ ನಂತರ ಇನ್ನೊಂದರ ಹೋಲಿಕೆ ಶುರುವಾಗುತ್ತದೆ. ಈ ಹೋಲಿಕೆ ಎಂಬುದು ಅಂತ್ಯವಿಲ್ಲದ ಆಟ.

ಪ್ರಯತ್ನಪೂರ್ವಕವಾಗಿ ಹೋಲಿಸುವ ಚಟವನ್ನು ನಿಯಂತ್ರಣದಲ್ಲಿ ಇಡದಿದ್ದರೆ ಪ್ರತಿಯೊಂದಕ್ಕೂ ಮನಸ್ಸು ತುಲನೆ ಮಾಡಿ ನೋಡುತ್ತದೆ. ಹಾಗೆ ಮಾಡುತ್ತ ಈವರೆಗೆ ಸಾಧಿಸಿದ ಸಂತೋಷ, ಇರುವ ನೆಮ್ಮದಿ ಯಾವುದೂ ಇರುವುದಿಲ್ಲ. ಉಳಿಯುವುದು ಅವರಂತೆ ಆಗಬೇಕಿತ್ತು ಎಂಬ ಕುದಿಯುವ ಅತೃಪ್ತಿಯೊಂದೇ. ಇತರರೊಂದಿಗೆ  ಹೋಲಿಸಿ ಅವರ ಬಗ್ಗೆ ಅಸೂಯೆ, ದ್ವೇಷ ಮೂಡಿ ಸ್ನೇಹ-ಪ್ರೀತಿ ಇಲ್ಲವಾಗುತ್ತದೆ. ನಮ್ಮ ಬದುಕಿನ ನಿಯಂತ್ರಣ ಸಂಪೂರ್ಣ ತಪ್ಪುತ್ತದೆ.

ನಕಾರಾತ್ಮಕ ಭಾವನೆಗಳೇ ಹೆಚ್ಚಾಗಿ ಏನನ್ನೂ ಸಾಧಿಸಲು ಆತ್ಮವಿಶ್ವಾಸವೇ ಇರುವುದಿಲ್ಲ. ಮಕ್ಕಳನ್ನು ಸತತವಾಗಿ ಇತರರೊಂದಿಗೆ ಹೋಲಿಸಿ ಮಾತನಾಡಿದಾಗ ದುಃಖ-ಅಪಮಾನದ ಜೊತೆ ತಮ್ಮ ಸಾಮರ್ಥ್ಯದ ಬಗ್ಗೆಯೇ ಅಪನಂಬಿಕೆ ಬೆಳೆಯುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಇದು ಖಿನ್ನತೆಗೂ ಕಾರಣವಾಗುತ್ತದೆ.

ಹೀಗೆ ಹೋಲಿಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲ ಎಂದರೂ ಅದನ್ನು ನಿಲ್ಲಿಸುವುದು ಸುಲಭವಲ್ಲ. ಬೇರೆಯವರ ಒಪ್ಪಿಗೆ-ಮೆಚ್ಚುಗೆಯನ್ನು ಬಯಸುವಾಗ ಈ ರೀತಿ ಹೋಲಿಕೆ ಹೆಚ್ಚಾಗಿರುತ್ತದೆ. ಆದರೂ ಹೋಲಿಸುವುದನ್ನು ತಡೆಗಟ್ಟಲು ಕೆಲವು ಸಲಹೆಗಳು:

ಯಾರೊಂದಿಗೆ, ಯಾವ ಕಾರಣಕ್ಕಾಗಿ ಹೋಲಿಕೆ ಎಂಬುದರ ಸ್ಪಷ್ಟ ಅರಿವು. ಪ್ರಯತ್ನಪೂರ್ವಕವಾಗಿ ನಿಲ್ಲಿಸಿ ಮನಸ್ಸನ್ನು ಬೇರೆಡೆ ತಿರುಗಿಸುವಿಕೆ.
ನಮ್ಮ ಶಕ್ತಿಗಳನ್ನು ಹೆಚ್ಚಿಸಿ, ದೌರ್ಬಲ್ಯಗಳನ್ನು ಕಡಿಮೆ ಮಾಡುವತ್ತ ಗಮನ. ಇಲ್ಲದ್ದಕ್ಕಿಂತ, ಇರುವುದರ ಬಗ್ಗೆ ಸಂತೋಷ. ಯಾರೂ ಪರಿಪೂರ್ಣರಲ್ಲ: ನಾವೂ, ಮತ್ತು ಅದು ಸಹಜ ಎಂಬ ತಿಳುವಳಿಕೆ .

ಇತರರ ಯಶಸ್ಸು ಕಂಡು-ಕೇಳಿದಾಗ ಹೊಟ್ಟೆ ಉರಿಯಲ್ಲ, ಒಳ್ಳೆಯ ಮನಸ್ಸಿನಿಂದ ಮೆಚ್ಚುವುದು ಜೀವನವನ್ನು ಪ್ರೀತಿಸುತ್ತ, ಕಲಿಯುತ್ತ ಮುಂದುವರಿಯುವುದು. ಸಾಮಾಜಿಕ ಮಾಧ್ಯಮಗಳ ಹಿತ-ಮಿತ ಬಳಕೆ. ಬೇರೆಯವರೊಡನೆ ಹೋಲಿಕೆಗಿಂತ ನಮ್ಮ ಹಿಂದಿನ-ಇಂದಿನ ಜೀವನ ಗಮನಿಸಿ ಮುಂದಿನ ದಿನಗಳ ಬಗ್ಗೆ ನಿರ್ಣಯಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT