ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

​ಆಹ್ವಾನಕ್ಕೆ ಅಪಸ್ವರ

ನವಾಜ್‌ಗೆ ಕಾಂಗ್ರೆಸ್‌, ರಾಜಪಕ್ಸೆಗೆ ಜಯಾ ವಿರೋಧ
Last Updated 22 ಮೇ 2014, 19:36 IST
ಅಕ್ಷರ ಗಾತ್ರ

ನವದೆಹಲಿ/ ಶ್ರೀನಗರ (ಪಿಟಿಐ, ಐಎಎನ್‌ಎಸ್‌): ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಮೇ 26ರ ಪ್ರಮಾಣವಚನ ಸಮಾರಂಭಕ್ಕೆ ಪಾಕಿ­ಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಮತ್ತು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಆಹ್ವಾನಿಸಿರುವುದು  ವಿವಾದಕ್ಕೆ ಗುರಿಯಾಗಿದೆ.

ಈ ಮಧ್ಯೆ, ಸಮಾರಂಭದಲ್ಲಿ ಭಾಗಿ­ಯಾಗಲು ನೀಡಿದ ಆಹ್ವಾನಕ್ಕೆ ಪಾಕಿಸ್ತಾನ ಹೊರತುಪಡಿಸಿ ಬೇರೆಲ್ಲಾ ರಾಷ್ಟ್ರಗಳಿಂದ ಉತ್ತೇಜಕರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಘ್ಘಾನಿಸ್ತಾನ, ಮಾಲ್ಡೀವ್‌, ಶ್ರೀಲಂಕಾ ಅಧ್ಯಕ್ಷರು,  ಭೂತಾನ್‌, ನೇಪಾಳದ ಪ್ರಧಾನಿಗಳು ಕಾರ್ಯಕ್ರಮಕ್ಕೆ ಬರಲಿದ್ದಾರೆ.

ಬಾಂಗ್ಲಾ ದೇಶವನ್ನು ಅಲ್ಲಿನ ಸ್ಪೀಕರ್‌ ಪ್ರತಿ­ನಿಧಿಸಲಿದ್ದಾರೆ. ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅವರು ಶುಕ್ರವಾರ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ. ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ಅವರು ಸಾರ್ಕ್‌ ಸಹವರ್ತಿಗಳಿಗೆ ಬುಧವಾರ ಪತ್ರ ಬರೆದು ಪ್ರಮಾಣವಚನ ಸಮಾ­ರಂಭ­ದಲ್ಲಿ ಭಾಗವ­ಹಿ­ಸಲು ಆಹ್ವಾನಿಸಿದ್ದರು.

ಇದೇ ಮೊದಲ ಬಾರಿಗೆ ಭಾರತವು ಪ್ರಧಾನಿ­ಯೊಬ್ಬರ ಪ್ರಮಾಣವಚನ ಸಮಾರಂಭಕ್ಕೆ ಎಲ್ಲಾ ಸಾರ್ಕ್‌ ರಾಷ್ಟ್ರಗಳ ಗಣ್ಯರನ್ನು ಆಹ್ವಾನಿಸಿದೆ.

ಕಾಂಗ್ರೆಸ್‌ ಟೀಕಾ ಪ್ರಹಾರ: ಇದೇ ವೇಳೆ, ಪ್ರಮಾಣ­ವಚನ ಸಮಾರಂಭಕ್ಕೆ ಪಾಕಿಸ್ತಾನವನ್ನು ಆಹ್ವಾನಿಸಿದ ಬಿಜೆಪಿ ನಿರ್ಧಾರವನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದೆ. ‘ಚುನಾವಣಾ ಪ್ರಚಾರದುದ್ದಕ್ಕೂ ಬಿಜೆಪಿ ಪಾಕಿಸ್ತಾನದ ವಿರುದ್ಧ ದ್ವೇಷ ಕೆರಳಿಸುವಂತಹ ಹೇಳಿಕೆ­ಗಳನ್ನು ನೀಡಿತ್ತು.

ಆದರೆ ಈಗ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗು­ವಂತೆ ಪಾಕ್‌ ಪ್ರಧಾನಿ ಅವರನ್ನು ಆಹ್ವಾನಿಸ­ಲಾಗಿದೆ’ ಎಂದು ಅದು ಚುಚ್ಚಿದೆ. ಯುಪಿಎ ಸರ್ಕಾರ ಪಾಕ್‌ ಜತೆಗೆ ಬಾಂಧವ್ಯ ವೃದ್ಧಿಗೆ ಮುಂದಾದಾ­ಗಲೆಲ್ಲಾ, ‘ಭಯೋತ್ಪಾದನೆ ಮತ್ತು ಸಂಧಾನ ಒಟ್ಟೊಟ್ಟಿಗೆ ನಡೆಯಲು ಸಾಧ್ಯವಿಲ್ಲ’ ಎಂದು ಬಿಜೆಪಿ ಬೊಬ್ಬೆ ಹಾಕುತ್ತಿತ್ತು. ಈಗ ಬಿಜೆಪಿ, ‘ಭಯೋತ್ಪಾದನೆ ಮತ್ತು ಆಹ್ವಾನ ಒಟ್ಟೊಟ್ಟಿಗೆ ನಡೆಯಲು ಸಾಧ್ಯವೇ ಎಂಬುದನ್ನು ಅವಲೋಕಿಸಿ­ಕೊಳ್ಳಬೇಕು’ ಎಂದು ಪಕ್ಷದ ಮುಖಂಡ ಮನೀಶ್‌ ತಿವಾರಿ ವ್ಯಂಗ್ಯವಾಡಿದ್ದಾರೆ.

ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರು ಚಾಲನೆ ನೀಡಿದ್ದ ಬಾಂಧವ್ಯ ಪ್ರಕ್ರಿಯೆಯನ್ನು ಮುಂದು­ವರಿ­ಸಿದ್ದಕ್ಕಾಗಿ ಮನಮೋಹನ್‌ ಸಿಂಗ್‌ ಅವರನ್ನು ಬಿಜೆಪಿ ತೀವ್ರವಾಗಿ ಟೀಕಿಸಿತ್ತು. ಇದನ್ನು ಆ ಪಕ್ಷದ­ವರು ಮರೆಯಬಾರದು. ಹವಾನಾ, ನ್ಯೂಯಾರ್ಕ್‌ ಮತ್ತು ಶರ್ಮ್‌ ಎಲ್‌ ಶೇಖ್‌ಗಳಲ್ಲಿ ಪಾಕಿ­ಸ್ತಾನದ ಜತೆ ಮಾತುಕತೆ ನಡೆಸಿದಾಗ ಸಿಂಗ್‌ ಅವರನ್ನು ಬಿಜೆಪಿ ಕಟುವಾಗಿ ಟೀಕಿಸಿತ್ತು ಎಂದಿದ್ದಾರೆ.

ಕಾಶ್ಮೀರದಲ್ಲಿ ಹರ್ಷ: ಪಾಕ್‌ ಪ್ರಧಾನಿಯನ್ನು ಆಹ್ವಾನಿಸಿದ್ದಕ್ಕೆ ಜಮ್ಮು ಕಾಶ್ಮೀರ­ದಲ್ಲಿ ಹರ್ಷ ವ್ಯಕ್ತ­ವಾಗಿದೆ. ಪ್ರತ್ಯೇಕ­ತಾ­ವಾದಿಗಳು,  ರಾಜಕೀಯ ಪಕ್ಷ­ಗಳು, ನಾಗರಿಕರು ಈ ನಡೆ­ಯನ್ನು ಸ್ವಾಗತಿಸಿದ್ದಾರೆ.

‘ಇದೇ ವೇಳೆ, ಒಂದೊಮ್ಮೆ ರಾಹುಲ್‌ ಗಾಂಧಿ ಅವರು ಹೀಗೆ ಮಾಡಿದ್ದರೆ ಆಗ ಬಿಜೆಪಿ ಹೇಗೆ ಪ್ರತಿಕ್ರಿಯಿ­ಸುತ್ತಿತ್ತು ಎಂಬುದು ತಮ್ಮನ್ನು ಅಚ್ಚರಿಯ ಪ್ರಶ್ನೆ­ಯಾಗಿ ಕಾಡುತ್ತಿದೆ’ ಒಮರ್‌ ಅಬ್ದುಲ್ಲಾ ಅವರು ಹೇಳಿದ್ದಾರೆ.

ಸೌಮ್ಯವಾದಿ ಬಣವಾದ ಹುರಿಯತ್‌ ಅಧ್ಯಕ್ಷ ಮಿರ್ವಾಯಿಜ್‌ ಉಮರ್‌ ಫಾರೂಕ್‌, ‘ಇದು ಕಾಶ್ಮೀರ ಜನರ ಆಕಾಂಕ್ಷೆಗಳನ್ನು ಈಡೇರಿಸುವ ದಿಸೆ­ಯಲ್ಲಿ ಮೊದಲ ಹೆಜ್ಜೆಯಾಗಬೇಕು’ ಎಂದಿದ್ದಾರೆ.

ತೀವ್ರಗಾಮಿ ಪ್ರತ್ಯೇಕತಾವಾದಿ ನಾಯಕ ಸೈಯದ್‌ ಅಲಿ ಗಿಲಾನಿ, ‘ಈ ನಿರ್ಧಾರದ ಬಗ್ಗೆ ಹೆಚ್ಚಿನ ನಿರೀಕ್ಷೆ ತಾಳುವ ಅಗತ್ಯವಿಲ್ಲ. ಯಾರೇ ಪ್ರಧಾನಿ­ಯಾದರೂ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ನಿಲುವು ಬದಲಾಗದು’ ಎಂದಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯ ನಾಗರಿ­ಕರು, ಮೋದಿ ಅವರ ಬಗ್ಗೆ ತಾವು ಈವರೆಗೆ ಕೇಳಿರುವ ಸಂಗತಿಗ­ಳನ್ನೆಲ್ಲಾ ಅವರು ಸುಳ್ಳು ಮಾಡಲೂಬಹುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜಪಕ್ಸೆ ಆಹ್ವಾನಕ್ಕೆ ವಿರೋಧ
ಚೆನ್ನೈ ವರದಿ:  ಪ್ರಮಾಣ ವಚನ ಸಮಾರಂಭಕ್ಕೆ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಆಹ್ವಾನಿಸಿರುವುದಕ್ಕೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಆಡಳಿತಾರೂಢ ಪಕ್ಷವಾದ ಎಐಎ­ಡಿಎಂಕೆ, ಪ್ರತಿ­ಪಕ್ಷವಾದ ಡಿಎಂಕೆ, ಬಿಜೆಪಿ ಮಿತ್ರಪಕ್ಷವೂ ಆದ ಎಂಡಿಎಂಕೆ­ಗಳು ಈ ನಿರ್ಧಾರದ ವಿರುದ್ಧ ಆಕ್ಷೇಪ ಎತ್ತಿವೆ. ಈಗ ಖಚಿತಪಡಿಸಿರುವಂತೆ ರಾಜಪಕ್ಸೆ ಅವರು ದೆಹಲಿಗೆ ಬಂದಲ್ಲಿ, ಜಯಲಲಿತಾ ಅವರು ಪ್ರಮಾಣವಚನ ಸಮಾರಂಭಕ್ಕೆ ಗೈರುಹಾಜರಾಗುವ ಸಾಧ್ಯತೆಯೇ ಹೆಚ್ಚು.

ಕೇಂದ್ರದಲ್ಲಿ ಆಡಳಿತ ಬದಲಾದ ತಕ್ಷಣ, ಹದಗೆಟ್ಟಿರುವ ತಮಿಳುನಾಡು– ಶ್ರೀಲಂಕಾ ಬಾಂಧವ್ಯ ಸುಧಾರಣೆ­ಯಾಗದು. ಶ್ರೀಲಂಕಾ ತಮಿಳರ ಪರ ತಮಿಳುನಾಡು ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಯುಪಿಎ ಉಪೇಕ್ಷಿಸಿತ್ತು. ಹೊಸ ಸರ್ಕಾರವಾದರೂ ಆ ನಿರ್ಣಯಗಳನ್ನು ಸಹಾನುಭೂತಿಯಿಂದ ನೋಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ, ರಾಜಪಕ್ಸೆ ಅವರಿಗೆ ಆಹ್ವಾನ ನೀಡಿ ತಮಿಳರ ಭಾವನೆಗಳನ್ನು ಕೆರಳಿಸಿದೆ ಎಂದೂ ಜಯಲಲಿತಾ ಹೇಳಿದ್ದಾರೆ.

ವೈಕೊ ಟೀಕೆ: ರಾಜಪಕ್ಸೆ ಅವರ ಪಾಲ್ಗೊಳ್ಳು­ವಿಕೆಯು ತಮಿಳರ ಭಾವನೆಗಳನ್ನು ಘಾಸಿಗೊಳಿಸುತ್ತದೆ ಎಂದು ಎಂಡಿಎಂಕೆ ಸ್ಥಾಪಕ ವೈಕೊ ಧ್ವನಿ ಎತ್ತಿದ್ದಾರೆ.

‘ಮೋದಿ ಅವರು ರಾಜಪಕ್ಸೆ ಅವರಿಗೆ ಆಹ್ವಾನ ನೀಡಬಾರದಿತ್ತು. ಬಿಜೆಪಿಯು ತಮಿಳುನಾಡು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕಿತ್ತು’ ಎಂದು ಡಿಎಂಕೆ ಅಸಮಾಧಾನ ಹೊರಹಾಕಿದೆ.

ಟಿಎನ್‌ಸಿಸಿ ಸಮರ್ಥನೆ: ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರಿಗೆ ಆಹ್ವಾನ ನೀಡಿರುವುದನ್ನು ತಮಿಳುನಾಡು ಪ್ರದೇಶ ಕಾಂಗ್ರೆಸ್‌ ಸಮಿತಿ ಬಲವಾಗಿ ಸಮರ್ಥಿಸಿಕೊಂಡಿದೆ.

ದ್ವೀಪ ರಾಷ್ಟ್ರದಲ್ಲಿ ಅಲ್ಪಸಂಖ್ಯಾತ ತಮಿಳರ ಹಿತರಕ್ಷಣೆ ಸಂಬಂಧ ರಾಜಪಕ್ಸೆ ಅವರನ್ನು ಬಿಟ್ಟು ಬೇರೆ ಯಾರೊಂದಿಗೂ ಮಾತುಕತೆ ನಡೆಸುವುದು ಅಸಾಧ್ಯ. ಹೀಗಾಗಿ ಅವರನ್ನು ಆಹ್ವಾನಿಸಿರುವ ನಿರ್ಧಾರ ಸರಿಯಾಗಿಯೇ ಇದು ಎಂದು ಸಮಿತಿಯು ಹೇಳಿದೆ.

ಬಿಜೆಪಿ ಸಮರ್ಥನೆ: ಈ ನಿರ್ಧಾರವನ್ನು ಬಿಜೆಪಿ ಬಲವಾಗಿ ಸಮರ್ಥಿಸಿಕೊಂಡಿದೆ.  ‘ಇದು ಪ್ರಜಾಪ್ರಭುತ್ವದ ಸಂಭ್ರಮಾ­ಚರಣೆಯಲ್ಲಿ ಭಾಗಿಯಾಗುವ ಒಂದು ಮಹತ್ವದ ಸಂದರ್ಭ. ಸಾರ್ಕ್‌ ರಾಷ್ಟ್ರಗಳಿಗೆ ನೀಡಿರುವ ಆಹ್ವಾನವನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು’ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT