ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ಕನ ವಿರುದ್ಧ ಡಿಜಿಪಿ ಓಂಪ್ರಕಾಶ್‌ ಷಡ್ಯಂತ್ರ’

ಬಂಧಿತ ರಾಜಲಕ್ಷ್ಮಿ ಸಹೋದರಿ ಆರೋಪ
Last Updated 3 ಮೇ 2016, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಆಸ್ತಿ ಕಬಳಿಸಲು ಹುನ್ನಾರ ನಡೆಸಿದ್ದ ಡಿಜಿಪಿ-ಐಜಿಪಿ ಓಂಪ್ರಕಾಶ್‌್ ಅವರ ಪುತ್ರ ಕಾರ್ತಿಕೇಶ್‌ ಹಾಗೂ ಸ್ನೇಹಿತ ರವಿಶಂಕರ್‌್ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಡಿಜಿಪಿ  ಅವರು ಅಕ್ಕನ ವಿರುದ್ಧ ಷಡ್ಯಂತ್ರ ನಡೆಸಿ ಜೈಲಿಗೆ ಕಳುಹಿಸಿದ್ದಾರೆ’ ಎಂದು  ಜಾತಿನಿಂದನೆ ಆರೋಪ ಎದುರಿಸುತ್ತಿರುವ ರಾಜಲಕ್ಷ್ಮಿ ಅವರ ಸಹೋದರಿ ಆರೋಪಿಸಿದರು. 

‘ಪ್ರಜಾವಾಣಿ’ ಜತೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ‘ನಮ್ಮ ಕುಟುಂಬಕ್ಕೆ ಜೀವ ಭಯವಿದೆ. ಸೂಕ್ತ ಭದ್ರತೆ ಹಾಗೂ ನ್ಯಾಯ ಬೇಕಾಗಿದೆ’ ಎಂದು ಹೇಳಿದರು.

‘ಅಕ್ಕ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಪಿಎಚ್‌.ಡಿ ಮಾಡಲು ಸಿದ್ಧತೆ ನಡೆಸಿದ್ದಳು. ಮದುವೆ ಕಾರಣದಿಂದ ಅರ್ಧಕ್ಕೆ ಕಲಿಕೆ ಮೊಟಕುಗೊಳಿಸಿದ್ದಳು. ಮದುವೆಯಾದ 8 ದಿನದಲ್ಲಿ ಪತಿಯಿಂದ ವಿಚ್ಛೇದನ ಬಯಸಿದ್ದಳು. ಆಗ ಓಂಪ್ರಕಾಶ್‌ ಅವರ ಪರಿಚಯವಾಗಿತ್ತು. ಅಂದಿನಿಂದ ಅವರು ಅಕ್ಕನೊಂದಿಗೆ ಚೆನ್ನಾಗಿಯೇ ಇದ್ದರು. ನಮ್ಮ ಕುಟುಂಬಕ್ಕೂ  ಅವರ ಹತ್ತಿರವಾಗಿದ್ದರು’ ಎಂದು ಅವರು ತಿಳಿಸಿದರು.

‘ವಿಚ್ಛೇದನ ಬಳಿಕ ಅಕ್ಕನ ಹೆಸರಿಗೆ ಒಂದು ನಿವೇಶನ ಹಾಗೂ ಜೀವನೋಪಾಯಕ್ಕೆ ಹಣ ದೊರಕಿತ್ತು. ಅದರ ಮೇಲೆ ಕಣ್ಣಿಟ್ಟಿದ್ದ ಕಾರ್ತಿಕೇಶ್‌ ಹಾಗೂ ರವಿಶಂಕರ್‌್ ಅಕ್ಕನಿಗೆ ನಿರಂತರವಾಗಿ ಕಿರುಕುಳ ನೀಡಲು ಆರಂಭಿಸಿದ್ದರು. ಆ ಕುರಿತು ಅಕ್ಕ ನಮಗೆ ಯಾವುದೇ ಮಾಹಿತಿ ಹೇಳಿರಲಿಲ್ಲ. ಡಿಜಿಪಿ ನಿವಾಸದ ಎದುರು ಅಕ್ಕ ಪ್ರತಿಭಟನೆ ನಡೆಸಿದಾಗಲೇ ನಮಗೆ ವಿಷಯ ಗೊತ್ತಾಯಿತು’ ಎಂದು ಅವರು ತಿಳಿಸಿದರು.

‘ಕಳೆದ ಮೂರು ವರ್ಷಗಳಿಂದ ಕಿರುಕುಳ ನೀಡುತ್ತಿದ್ದರು ಎಂದು ಅಕ್ಕ ಹೇಳಿದ್ದಾಳೆ.  ಈ ಕುರಿತು ದೂರು ನೀಡಲು ರಾಜಾಜಿನಗರದ ಠಾಣೆಗೆ ಹೋದರೆ ಅಲ್ಲಿಯ ಪೊಲೀಸರು ದೂರು ಪಡೆದಿಲ್ಲ. ಜನವರಿಯಲ್ಲಿ ಅಕ್ಕನಿಗೆ ಕರೆ ಮಾಡಿದ್ದ ರವಿಶಂಕರ್‌ ಅವರು, ದೂರು ನೀಡಿದರೆ 10 ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಆ ಬಗ್ಗೆ  ಅಕ್ಕ ಜನವರಿ 30ರಂದು ಪೊಲೀಸರಿಗೆ ದೂರು ನೀಡಿದ್ದಳು. ಅದರ ಪ್ರತಿ ನನ್ನ ಬಳಿ ಇದೆ’ ಎಂದು ಸಹೋದರಿ ತಿಳಿಸಿದರು.

‘ರಾಜಾಜಿನಗರ ಮನೆಯಲ್ಲಿದ್ದಾಗ ಅಕ್ಕನನ್ನು ಬಂಧಿಸಲು ಬಂದಿದ್ದ ಪೊಲೀಸರು ಅನಾಗರಿಕರಂತೆ ವರ್ತಿಸಿದ್ದಾರೆ. ಬಾಗಿಲು ಒದ್ದು ಸಾಮಗ್ರಿಗಳನ್ನು ಒಡೆದಿದ್ದಾರೆ. ಅದರ ವಿಡಿಯೊ ನನ್ನ ಬಳಿ ಇದ್ದು,  ಅಕ್ಕನಿಗೆ ಜಾಮೀನು ಸಿಕ್ಕ ಕೂಡಲೇ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸುತ್ತೇವೆ’ ಎಂದು ಅವರು ತಿಳಿಸಿದರು.

‘ಬಂಧನ ವೇಳೆ ಮಹಿಳಾ ಇನ್‌ಸ್ಪೆಕ್ಟರ್‌ ಒಬ್ಬರು ಅಕ್ಕನ ಹೊಟ್ಟೆಗೆ ಒದ್ದಿದ್ದಾರೆ. ಗಾಯಗೊಂಡಿರುವ ಅಕ್ಕ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ನ್ಯಾಯಾಲಯದಲ್ಲಿ ಮನವಿ ಮಾಡಿದಾಗ ವೈದ್ಯಕೀಯ ಪರೀಕ್ಷೆ ನಡೆಸಲು ಸೂಚನೆ ಸಿಕ್ಕಿತ್ತು. ಆದರೆ ವೈದ್ಯಕೀಯ ಪರೀಕ್ಷೆ ವೇಳೆ  ಅಕ್ಕನಿಂದ 6 ದಾಖಲೆಗಳಿಗೆ ಸಹಿ ಪಡೆದಿದ್ದು, ಆ ದಾಖಲೆಗಳು ಏನು ಎಂದು ಕೇಳಿದ್ದಕ್ಕೆ  ಪೊಲೀಸರು ಉತ್ತರಿಸಿಲ್ಲ’ ಎಂದು ಸಹೋದರಿ ದೂರಿದರು.

ನ್ಯಾಯಾಂಗ ಬಂಧನಕ್ಕೆ(ರಾಮನಗರ ವರದಿ): ಜಿಲ್ಲಾ ನ್ಯಾಯಾಲಯವು ಬಂಧಿತ ರಾಜಲಕ್ಷ್ಮಿ ಅವರನ್ನು ಮೇ 13ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ವಕೀಲ ಸಂಪಂಗಿ ರಾಮಯ್ಯ ಎಂಬುವವರು ನೀಡಿದ್ದ ದೂರಿನಡಿ ಬಂಧಿಸಲಾಗಿರುವ ರಾಜಲಕ್ಷ್ಮಿ ಅವರನ್ನು ಮಂಗಳವಾರ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು.

ನ್ಯಾಯಾಲಯದಿಂದ ಹೊರಬಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಾಜಲಕ್ಷ್ಮಿ ಅವರು, ‘ಡಿಜಿಪಿ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ’ ಎಂದು ದೂರಿದರು.

‘ಆಸ್ತಿ ವಿಚಾರಕ್ಕೆ ಓಂಪ್ರಕಾಶ್‌  ಹಾಗೂ ಅವರ ಪುತ್ರ ಕಾರ್ತಿಕೇಶ್‌, ಸ್ನೇಹಿತ ರವಿಶಂಕರ್‌ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ಷಡ್ಯಂತ್ರ ನಡೆಸಿ ನನ್ನನ್ನು ಬಂಧಿಸುವಂತೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT