ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಜಾತಶತ್ರು’ವಿಗೆ ಅತ್ಯುನ್ನತ ಗೌರವ

Last Updated 24 ಡಿಸೆಂಬರ್ 2014, 20:37 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜಕೀಯ ವಲಯದಲ್ಲಿ ‘ಅಜಾತಶತ್ರು’ ಎಂದೇ ಖ್ಯಾತರಾಗಿರುವ ಅಟಲ್‌್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಅಪರೂಪದ  ರಾಜಕಾರಣಿಗಳಲ್ಲಿ ಒಬ್ಬರು. ಅಸಾಧಾರಣ ವಾಕ್ಪಟುತ್ವದ ಅವರು ತಮ್ಮ ಆಡಳಿತಾ­ವಧಿಯಲ್ಲಿ ತೆಗೆದು­ಕೊಂಡ ದಿಟ್ಟ ಕ್ರಮ­ಗಳಿಂದ ಮುತ್ಸದ್ದಿ ರಾಜಕಾರಣಿ ಎನಿಸಿಕೊಂಡರು.

ಕಾಂಗ್ರೆಸ್ಸೇತರ ಪ್ರಧಾನಿಯಾಗಿ  ದೀರ್ಘ­ಕಾಲ ಸೇವೆ ಸಲ್ಲಿಸಿದ ವಾಜಪೇಯಿ, ಬಿಜೆಪಿಯ ಸೌಮ್ಯವಾದಿ ನಾಯಕ ಎಂದೂ ಕರೆಸಿಕೊಂಡವರು. ಇದೇ ವೇಳೆ, ಟೀಕಾಕಾರರು ಅವರನ್ನು ಆರ್‌ಎಸ್‌ಎಸ್‌್ ‘ಮುಖ­ವಾಡ’ ಎಂದು ಜರಿದಿದ್ದೂ ಉಂಟು.
ವಾಜಪೇಯಿ ಅವರು1924ರ ಡಿಸೆಂಬರ್‌ 25ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿ­ಸಿ­­ದರು. 

ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾ ದೇವಿ.  ಬ್ರಿಟಿಷ್‌ ವಸಾಹತುಶಾಹಿ ಆಡಳಿತ­ವನ್ನು ವಿರೋಧಿಸಿದ್ದಕ್ಕೆ ಅವರು ಹದಿವಯಸ್ಸಿ­ನಲ್ಲಿ ಸ್ವಲ್ಪ ಕಾಲ ಜೈಲು ವಾಸದಲ್ಲಿದ್ದರು. ೫೦ರ ದಶಕದ ಆರಂಭದಲ್ಲಿ ಆರ್‌ಎಸ್‌ಎಸ್‌್ ನಿಯತ­ಕಾಲಿಕೆ­ಯೊಂದನ್ನು ನಡೆಸುವುದಕ್ಕಾಗಿ ಕಾನೂನು ವ್ಯಾಸಂಗವನ್ನು ತೊರೆದರು. ಅವರು ಭಾರತೀಯ ಜನ ಸಂಘದ (ಬಿಜೆಎಸ್‌) ಸ್ಥಾಪಕ ಶ್ಯಾಮಪ್ರಸಾದ್‌ ಮುಖರ್ಜಿ ಅವರ ಕಟ್ಟಾ ಅನುಯಾಯಿಯಾಗಿದ್ದರು.

ರಾಜಕೀಯ ಹೆಜ್ಜೆ ಗುರುತು: 1957ರಲ್ಲಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದರು. ಐದು ದಶಕ­ಗಳಿಗೂ ಹೆಚ್ಚು ಕಾಲ ಸಂಸದೀಯ ಪಟುವಾಗಿ ಗಮನ ಸೆಳೆದರು.1996ರಲ್ಲಿ ಮೊಟ್ಟಮೊದಲು ಪ್ರಧಾನಿ­ಯಾ­ದರು.  ಆದರೆ ಬಹು­ಮತದ ಕೊರತೆಯಿಂದ ಕೇವಲ 13 ದಿನಗಳಲ್ಲಿ ಅಧಿಕಾರ ಕಳೆದು­ಕೊಂಡರು. 1998ರಲ್ಲಿ ಎರಡನೆಯ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿ­ದರು. ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಬೆಂಬಲ ವಾಪಸ್‌ ಪಡೆದ ಕಾರಣ  13 ತಿಂಗಳಿಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು.

1999ರಲ್ಲಿ ಪ್ರಧಾನಿಯಾಗಿ ಮರು­ಆಯ್ಕೆ­ಯಾಗಿ ಪೂರ್ತಿ ಐದು ವರ್ಷ ಅಧಿಕಾರದ ಚುಕ್ಕಾಣಿ ಹಿಡಿದಿ­ದ್ದರು. ವಾಜಪೇಯಿ ಅಧಿಕಾರ­ದಲ್ಲಿ­ದ್ದಾಗ ಭಾರತವು1998ರಲ್ಲಿ ರಾಜಸ್ತಾನದ ಪೋಖ್ರಾನ್‌­ನಲ್ಲಿ ಸರಣಿ ಪರಮಾಣು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು.
ದೇಶದ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಸುವರ್ಣ ಚತುಷ್ಕೋನ ರಸ್ತೆ ನಿರ್ಮಾಣ ಯೋಜನೆ ಕೂಡ ವಾಜಪೇಯಿ ಅವರ ಪರಿಕಲ್ಪನೆಯೇ.

‌ಪಾಕಿಸ್ತಾನ ಜತೆಗಿನ ಸಂಬಂಧವನ್ನು ಸುಧಾರಿ­ಸು­ವುದು ವಾಜ­ಪೇಯಿ ಅವರ ವೈಯಕ್ತಿಕ ಗುರಿ­ಯಾ­ಗಿತ್ತು ಎನ್ನುತ್ತಾರೆ ಅವರ ನಿಕಟವರ್ತಿ­ಗಳು. 19೭೦ರ ದಶಕದ ಕೊನೆಯಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾ­ಗಿದ್ದರು. ಆಗಲೇ ಅವರು ಭಾರತ–ಪಾಕ್‌ ಸಂಬಂಧಕ್ಕೆ ಹೊಸ ಆಯಾಮ ನೀಡಲು ವೇದಿಕೆ ಅಣಿಗೊಳಿಸಿದ್ದರು.

ವಾಜಪೇಯಿ ಅವರ ಪ್ರಾಮಾಣಿಕತೆ­ಯನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಆದರೆ ಶಸ್ತ್ರಾಸ್ತ್ರ ಖರೀದಿಯಲ್ಲಿ ನಡೆದ ಲಂಚ ಪ್ರಕರಣವು  ಅವರ ಸರ್ಕಾರದ ಭ್ರಷ್ಟತೆಯನ್ನು ಬೆತ್ತಲು ಮಾಡಿತು. ಆ ಸಂದರ್ಭದಲ್ಲಿ ವಾಜಪೇಯಿ ಅವರು ತೆಗೆದು­ಕೊಂಡಿದ್ದ  ನಿರ್ಧಾರವನ್ನು ಕೂಡ ಅನುಮಾನದಿಂದ ನೋಡಲಾಯಿತು. ಅವಿವಾಹಿತರಾದ ವಾಜಪೇಯಿ ಕವಿಯೂ ಹೌದು.

ಅಗ್ನಿ ಪರೀಕ್ಷೆ...
1992ರ ಡಿಸೆಂಬರ್‌್ 6 ರಂದು ಅಯೋಧ್ಯೆ­ಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣವು ವಾಜಪೇಯಿ ಅವರಿಗೆ ಅಗ್ನಿಪರೀಕ್ಷೆ­ಯಾಗಿತ್ತು.ಆ ಸಂದರ್ಭದಲ್ಲಿ ಅವರು ಲೋಕಸಭೆ­­­ಯಲ್ಲಿ ವಿರೋಧಪಕ್ಷದ ನಾಯಕರಾ­ಗಿದ್ದರು. ಎಲ್‌.ಕೆ. ಅಡ್ವಾಣಿ ಹಾಗೂ ಬಿಜೆಪಿಯ ಇತರ ರಾಜಕಾರಣಿಗಳು ಈ ಪ್ರಕರಣವನ್ನು ಸಮರ್ಥಿಸಿ­ಕೊಂಡಿದ್ದರು. ಆದರೆ ವಾಜಪೇಯಿ ಇದನ್ನು ಖಂಡಿಸಿ ತಮ್ಮ ಧರ್ಮನಿರಪೇಕ್ಷ ನಿಲುವಿಗೆ ಅಂಟಿಕೊಂಡರು.

ಸ್ವಾತಂತ್ರ್ಯ ಹೋರಾಟಗಾರ
ವಾಜಪೇಯಿ ಕೂಡಾ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು. ದೇಶಕ್ಕೆ ಅನುಪಮ ಸೇವೆ ಸಲ್ಲಿಸಿದವರಿಗೆ, ವಿಶೇಷ ಸಾಧನೆ ಮಾಡಿದ­ವರಿಗೆ ‘ಭಾರತ ರತ್ನ’ ನೀಡಲಾಗುತ್ತಿದೆ. ಅದೇ ಬಗೆಯಲ್ಲಿ ವಾಜಪೇಯಿ ಅವರಿಗೆ ನೀಡುತ್ತಿರು­ವುದು ಸ್ವಾಗತಾರ್ಹ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಯೋಗದ ಹೆಗ್ಗಳಿಕೆ...
ವಾಜಪೇಯಿ ಅವರಿಗೆ ಯುಪಿಎ ಸರ್ಕಾರದ ಅವಧಿಯಲ್ಲಿಯೇ ಈ ಪುರ­ಸ್ಕಾರ ದೊರೆಯಬೇಕಿತ್ತು. ವಾಜಪೇಯಿ ಅವರು ಕಾರ್ಗಿಲ್‌್ ಯುದ್ಧದ ವೇಳೆ ದೇಶವನ್ನು ಸಮರ್ಥ­ವಾಗಿ ಮುನ್ನಡೆಸಿ­ದ್ದರು. ಸಮ್ಮಿಶ್ರ ಸರ್ಕಾರದ ಯಶಸ್ವಿ ಪ್ರಯೋಗದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ
– ನಿತೀಶ್‌ ಕುಮಾರ್‌, ಜೆಡಿಯು ಮುಖಂಡ

ಮುಸ್ಲಿಂ ಮಂಡಳಿ ಸ್ವಾಗತ
ವಾಜಪೇಯಿ ಅವರಿಗೆ ‘ಭಾರತ ರತ್ನ’ ಪುರಸ್ಕಾರ ನೀಡಿರುವುದು ತುಂಬಾ ಒಳ್ಳೆಯ ನಿರ್ಧಾರ. ದೇಶದ ಅಭಿವೃದ್ಧಿಗಾಗಿ ಕೊಡುಗೆ ನೀಡಿದ­ವರನ್ನು ಗೌರವಿಸಬೇಕು
– ಮೌಲಾನಾ ಖಾಲಿದ್‌ ರಷೀದ್‌, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ

ರಾಜಧರ್ಮ ಪಾಲಿಸಲಿ...
ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಮಾಳವೀಯ ಅವರು ಹಾಕಿಕೊಟ್ಟ ಮಾರ್ಗವನ್ನು ಎನ್‌ಡಿಎ  ಸರ್ಕಾರ  ಅನುಸರಿಸುತ್ತದೆ ಎಂದು ಭಾವಿಸು­ತ್ತೇವೆ. ವಾಜಪೇಯಿ ‘ರಾಜಧರ್ಮ’ದ ಬಗ್ಗೆ ಮಾತನಾಡಿ­ದ್ದರು. ನರೇಂದ್ರ ಮೋದಿ ಸರ್ಕಾರ ಇದನ್ನು ಗಮನ­ದಲ್ಲಿಟ್ಟುಕೊಳ್ಳಬೇಕು
– ಅಜಯ್‌ ಮಾಕನ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಗೌರವಾರ್ಹ ವ್ಯಕ್ತಿ
ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ನಾವೆಲ್ಲ ವಾಜಪೇಯಿ ಅವರನ್ನು ಗೌರವಿಸುತ್ತೇವೆ
–ಮಮತಾ ಬ್ಯಾನರ್ಜಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT