ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ’

ಪಂಚರಂಗಿ
Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣತೆಯ ಕುರಿತು ಬಾಲಿವುಡ್‌ ಸೂಪರ್‌ಸ್ಟಾರ್‌ಗಳಾದ ಶಾರುಖ್‌ ಖಾನ್‌ ಮತ್ತು ಅಮೀರ್‌ ಖಾನ್‌ ಹೇಳಿಕೆಗಳು ವಿವಾದಕ್ಕೆ ಎಡೆಮಾಡಿಕೊಟ್ಟಿವೆ. ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಭಾರತದಲ್ಲಿ ಇತ್ತೀಚೆಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿದ್ದಾರೆ.

‘ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಸುವ ಅವಕಾಶ ಎಲ್ಲರಿಗೂ ಇದೆ. ಆದರೆ ಇತ್ತೀಚೆಗಿನ ಕೆಲವು ವರ್ಷಗಳಿಂದ ಭಾರತದಲ್ಲಿ ಈ ಸ್ವಾತಂತ್ರ್ಯಕ್ಕೆ ಅಡೆತಡೆಗಳುಂಟಾಗುತ್ತಿವೆ’ ಎಂಬುದು ಅವರ ಅಭಿಪ್ರಾಯ.

ಖಾನ್‌ ದ್ವಯರು ಅಸಹಿಷ್ಣತೆಯ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಪ್ರಿಯಾಂಕಾ, ‘ಅದು ಕೇವಲ ಈ ವಿಷಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಪ್ರತಿಯೊಬ್ಬರಿಗೂ ಅವರೇ ಆದ ಅಭಿಪ್ರಾಯಗಳಿರುತ್ತವೆ. ನಾವು ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ. ಇಲ್ಲಿ ಎಲ್ಲರಿಗೂ ಅಭಿವ್ಯಕ್ತಿಯ ಹಕ್ಕಿದೆ.

ನಮ್ಮ ಪೂರ್ವಜರು ಭಾರತೀಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಆದರೆ ಕೆಲವು ವರ್ಷಗಳಲ್ಲಿ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿಗೆ ಪೆಟ್ಟು ನೀಡುವಂತಹ ಅನೇಕ ಘಟನೆಗಳು ನಡೆದಿವೆ’ ಎಂದು ಅವರು ಮುಂಬೈನಲ್ಲಿ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ನಟ ಅಮೀರ್‌ ಖಾನ್‌  ‘ಹೆಚ್ಚುತ್ತಿರುವ ಅಸಹಿಷ್ಣತೆ’ ಎಂಬ ವಿಷಯದ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಹೆಂಡತಿ ಕಿರಣ್‌ ರಾವ್‌ ದೇಶ ಬಿಟ್ಟು ಹೋಗುವ ಸಲಹೆ ನೀಡಿದ್ದಾಗಿ ಹೇಳಿದ್ದರು. ತಿಂಗಳ ಹಿಂದೆ ಶಾರುಖ್‌ ಖಾನ್‌ ಕೂಡ ದೇಶದಲ್ಲಿ ಅಸಹಿಷ್ಣತೆ ಹೆಚ್ಚುತ್ತಿದೆ ಎಂದಿದ್ದರು.

ಈಗ ಪ್ರಿಯಾಂಕಾ ಕೂಡ ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತಮ್ಮ ಹೊಸ ಚಿತ್ರ ‘ಬಾಜೀರಾವ್‌ ಮಸ್ತಾನಿ’ಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಹೀಗೆ ಮಾತನಾಡಿದ್ದಾರೆ.

‘ಬಾಜೀರಾವ್‌ ಮಸ್ತಾನಿ’ ಚಿತ್ರದಲ್ಲಿ ರಣ್‌ವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಸಹ ನಟಿಸುತ್ತಿದ್ದಾರೆ. ಪ್ರಿಯಾಂಕಾ ಬಾಜೀರಾವ್‌ನ ಪತ್ನಿ ಕಾಶೀಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT