ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವ್ಯಕ್ತಿಯ ಪ್ರಾಮಾಣಿಕ ರೂಪವೇ ಸಂಗೀತ’

Last Updated 21 ಡಿಸೆಂಬರ್ 2015, 19:52 IST
ಅಕ್ಷರ ಗಾತ್ರ

ಸಂಗೀತದ ಮನೆತನದಲ್ಲಿಯೇ ಹುಟ್ಟಿ, ಸರಿಗಮ್‌ನ ಜೊತೆಗೇ ಮಾತು ಕಲಿಯುತ್ತ ಬೆಳೆದವರು ಬಿಂದು ಹಾಗೂ ಅಂಬಿ ಸುಬ್ರಹ್ಮಣ್ಯಂ. ಸಂಗೀತ ಸಹಜವಾಗಿಯೇ ಅವರ ರಕ್ತದಲ್ಲಿ ಹರಿದು, ಮೈ–ಮನವನ್ನು ತುಂಬಿ ನಿಂತಿತ್ತು. ಆದರೆ ಅಮ್ಮ–ಅಪ್ಪ ಹಾಕಿಕೊಟ್ಟ ಮಾರ್ಗದಿಂದ ಒಂದು ಹೆಜ್ಜೆ ಮುಂದೆ ಬಂದು ಏನಾದರೂ ಹೊಸದನ್ನು ಮಾಡಬೇಕೆನ್ನುವ ತುಡಿತ ಈ ಯುವ ಮನಸ್ಸುಗಳದ್ದು. ಅಂತೆಯೇ ಈ ಅಕ್ಕ–ತಮ್ಮ ಕೂಡಿ ಮತ್ತೊಂದು ಹೊಸ ಸಾಧನೆಗೆ ನಾಂದಿ ಹಾಡುತ್ತಿದ್ದಾರೆ. ಇಬ್ಬರೂ ಸೇರಿ ನಿರ್ಮಿಸಿದ ಮೊದಲ ‘ಮ್ಯೂಸಿಕ್‌ ವಿಡಿಯೊ’ (ಒಂದೇ ಹಾಡಿನದ್ದು) ‘Days in the Sun’  ಬಿಡುಗಡೆ ಕಂಡಿದೆ. ಈ ಖುಷಿಯಲ್ಲಿ ಬಿಂದು ಮೆಟ್ರೊ ಜೊತೆ ನಡೆಸಿದ ಮಾತುಕತೆ ಇಲ್ಲಿದೆ...

* ಅಪ್ಪ  ಎಲ್. ಸುಬ್ರಹ್ಮಣ್ಯಂ ವಯಲಿನ್ ವಾದಕ, ಅಮ್ಮ ಕವಿತಾ ಕೃಷ್ಣಮೂರ್ತಿ ಜನಪ್ರಿಯ ಹಿನ್ನೆಲೆ ಗಾಯಕಿ. ಸಂಗೀತ ಮನೆತನದಲ್ಲಿ ಹುಟ್ಟಿದ ನಿಮಗೆ ಸಂಗೀತ ಏಕೈಕ ಆಯ್ಕೆ ಆಗಿತ್ತಲ್ಲವೇ?
ಹಾಗೇನೂ ಇಲ್ಲ. ಅಮ್ಮ–ಅಪ್ಪ ಇಬ್ಬರೂ ಸಂಗೀತಗಾರರು. ಹೀಗಾಗಿ ಮನೆಯಲ್ಲಿ ಯಾವತ್ತೂ ಸಂಗೀತದ್ದೇ ಮಾತುಕತೆ, ಚರ್ಚೆ. ಇಂತಹ ವಾತಾವರಣ ತುಂಬ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತವನ್ನು ಅರಿತುಕೊಳ್ಳುವಂತೆ ಮಾಡಿತ್ತು. ಅಂತೆಯೇ ತಿಳಿವಳಿಕೆ ಬರುವ ಮುಂಚೆಯೇ ನಾನು ಹಾಗೂ ಅಂಬಿ ಹಾಡಲು ಆರಂಭಿಸಿದ್ದು. ಆದರೆ ಅಪ್ಪ–ಅಮ್ಮ ಸಂಗೀತವನ್ನು ನಮ್ಮ ಮೇಲೆ ಹೇರಲಿಲ್ಲ. ನಾನು ಕಾನೂನು ಪದವಿ ಪಡೆದೆ. ಆದರೆ ನಂತರ ಸಂಗೀತದಲ್ಲಿಯೇ ಭವಿಷ್ಯ ಕಟ್ಟಿಕೊಳ್ಳಬೇಕು ಎನಿಸಿತು. ಅದೇ ದಾರಿಗೆ ಹೋದೆ ಅಷ್ಟೆ.

* ಮೊದಲು ವೇದಿಕೆ ಏರಿದ್ದು ಯಾವಾಗ?
ನನಗಾಗ 12 ವರ್ಷ ಇರಬೇಕಷ್ಟೆ. ನಾರ್ವೆಯಲ್ಲಿದ್ದಾಗ ‘ಓಸ್ಲೋ ಫಿಲ್ಹಾರ್ಮೋನಿಕ್’ ಎನ್ನುವ ಆರ್ಕೆಸ್ಟ್ರಾ ಜೊತೆಗೆ ಮೊದಲ ಬಾರಿ ವೇದಿಕೆ ಏರಿದ್ದೆ.

* ಸ್ವಂತ ಗೀತೆ ರಚಿಸಬೇಕು ಎನಿಸಿದ್ದು ಯಾಕೆ? ಯಾವಾಗ?
ಕೆಲವೊಮ್ಮೆ ಬೇರೆಯವರ ಸಾಹಿತ್ಯ ಮನಸ್ಸಿಗೆ ತಾಗದೇ ಹೋಗುತ್ತಿತ್ತು. ನಮ್ಮ ಮನಸ್ಸಿಗೇ ನಾಟದ ಸಾಹಿತ್ಯವನ್ನು ಇಟ್ಟುಕೊಂಡು ಹಾಡಲು ನಿಂತರೆ ಆ ಹಾಡು ಕೇಳುಗನ ಎದೆ ಮುಟ್ಟಬೇಕು ಎಂದು ಬಯಸುವುದಾದರೂ ಹೇಗೆ? ನಾನೇ ಗೀತೆ ರಚಿಸಬೇಕು ಎನ್ನುವ ಅನಿವಾರ್ಯ ಹಾಗೂ ತುಡಿತ ಹುಟ್ಟಿಕೊಂಡಿದ್ದು ಹೀಗೆಯೇ. ಆದರೆ ಈ ಕಾಯಕ ಹೆಚ್ಚು ಗಂಭೀರವಾದುದು ಇತ್ತೀಚೆಗಷ್ಟೆ.

* ಸಾಂಪ್ರದಾಯಿಕ ಸಂಗೀತದ ಜೊತೆ ಜೊತೆಗೇ ಮೃದು ರಾಕ್ ಮತ್ತು ಜಾಝ್ ಅಂಶಗಳ ಮೂಲ ಧ್ವನಿಯನ್ನು ಹೇಗೆ ಬೆಸೆಯುವಿರಿ?
ನನ್ನ ಪ್ರಕಾರ ಸಂಗೀತ ಎಂದರೆ ಅದು ಅಭಿವ್ಯಕ್ತಿಯ ಪ್ರಾಮಾಣಿಕ ರೂಪವಷ್ಟೆ. ತೀರಾ ಸೈದ್ಧಾಂತಿಕ ಅರ್ಥಗ್ರಹಿಕೆಗೆ ನಿಲ್ಲುವ ಅಗತ್ಯವಿಲ್ಲ ಎಂದು ನನಗನಿಸುತ್ತದೆ. ಸಂಗೀತವನ್ನು ಸ್ವತಃ ಸಂಗೀತಗಾರ ಮೊದಲು ಆಸ್ವಾದಿಸಬೇಕು. ನಂತರ ಅದನ್ನು ಕೇಳುಗನೂ ಸವಿಯುವಂತೆ ಪ್ರಸ್ತುತಪಡಿಸಬೇಕು. ಇದರಲ್ಲಿಯೇ ಸಂಗೀತದ ಯಶಸ್ಸಿದೆ. ನಾನು ಯಾವುದನ್ನೂ ಸಿದ್ಧ ಮಾದರಿಗಳನ್ನಿಟ್ಟುಕೊಂಡು, ನಿರ್ದಿಷ್ಟ ಮಾನದಂಡಗಳ ಮೇಲೆ ಹೆಣೆಯುವುದಿಲ್ಲ. ಸಹಜವಾಗಿ, ಮನಮುಟ್ಟುವಂತೆ ಗೀತೆ ರಚಿಸುವುದು/ಹಾಡುವುದು ನನ್ನ ಗುಣ.

* ಯಾವುದೇ ಒಂದು ಹೊಸ ಪ್ರಯತ್ನಕ್ಕೆ ಇಳಿದಾಗ ನೀವು ಗಮನಿಸುವ ಸಂಗತಿಗಳು ಯಾವವು?
ಈಗಾಗಲೇ ಹೇಳಿದಂತೆ ನಾನು ಯಾವುದೇ  ತಾತ್ವಿಕವಾದ, ಪಾಂಡಿತ್ಯಪೂರ್ಣವಾದ ವಿವರಣೆಗೆ ನಿಲ್ಲುವುದಿಲ್ಲ. ಚಿಕ್ಕಂದಿನಿಂದ ನಾನು ಗ್ರಹಿಸಿಕೊಂಡ, ಅರಿತುಕೊಂಡ, ಗಮನಕ್ಕೆ ಬಂದ, ಮನಸ್ಸಿನಲ್ಲಿ ಮೂಡಿದ ಸಂಗತಿಗಳಿಗೆ ಹೊಸ ರೂಪ ನೀಡಿ, ಹೊಸ ತಲೆಮಾರಿನ ಆಸಕ್ತಿಗೆ ಅನುಗುಣವಾಗಿ ಮಾರ್ಪಡಿಸುತ್ತೇನಷ್ಟೆ.

* ವಿದೇಶದಲ್ಲಿಯೂ, ಭಾರತದಲ್ಲಿಯೂ ಸಾಕಷ್ಟು ಕಾರ್ಯಕ್ರಮ ನೀಡುತ್ತೀರಿ. ಎರಡೂ ಭಾಗಗಳ ಸಂಗೀತ ಶೈಲಿಗಳಿಗೆ ಹೇಗೆ ‘ಸ್ವಿಚ್‌’ ಆಗುತ್ತೀರಿ?
ದೇಶ–ಭಾಷೆ ಯಾವುದೇ ಆಗಿರಲಿ ಸಂಗೀತದ ಮೂಲ ಒಂದೇ ಆಗಿರುತ್ತದೆ. ಆಯಾ ಭಾಗದ ಸಂಸ್ಕೃತಿಯ ಆಧಾರದ ಮೇಲೆ ಕೇಳುಗರ ಆಸಕ್ತಿ–ಅಭಿರುಚಿಗಳಲ್ಲಿ ತುಸು ವ್ಯತ್ಯಾಸವಿರುತ್ತದೆ ಅಷ್ಟೆ. ಇಲ್ಲಿನ ಭಾರತೀಯ ಸಂಗೀತಕ್ಕೂ, ವಿದೇಶಗಳ ಸಂಗೀತಕ್ಕೂ ಸ್ವಿಚ್‌ ಆಗುವುದು ನನಗೇನೂ ಕಷ್ಟದ ಸಂಗತಿ ಅಲ್ಲ. ನಾನು ಎರಡೂ ಶೈಲಿಗಳಲ್ಲಿಯೂ ತರಬೇತಿ ಪಡೆದಿದ್ದೇನೆ. ಹೀಗಾಗಿ ಆಯಾ ಸಂದರ್ಭ ಹಾಗೂ ಶ್ರೋತೃಗಳನ್ನು ಆಧರಿಸಿ ಹಾಡುವುದು ನನಗೆ ಕಷ್ಟವೇನಲ್ಲ.

* ‘ಸುಬ್ರಮೇನಿಯಾ’ ಕುರಿತು ಎರಡು ಮಾತು...
ನಮ್ಮದೇ ಆದ ಬ್ಯಾಂಡ್‌ ಇರಲಿ ಎನ್ನುವ ಕಾರಣಕ್ಕೆ ನಾನು ಹಾಗೂ ಸಹೋದರ ಅಂಬಿ ಸೇರಿ ಕಟ್ಟಿದ ಬ್ಯಾಂಡ್‌ ಅದು. ನಮ್ಮನ್ನು ಆಕರ್ಷಿಸಿದ, ತಟ್ಟಿದ, ನಮ್ಮೊಳಗೆ ಸಂಚಲನವನ್ನುಂಟು ಮಾಡಿದ ಸಂಗೀತದ ವಿವಿಧ ಮಜಲುಗಳನ್ನು ಪ್ರಯೋಗಿಸಲು ನಮಗೆ ನಮ್ಮದೇ ಆದ ವೇದಿಕೆಯೊಂದು ಬೇಕಿತ್ತು. ಹೀಗಾಗಿ ಬ್ಯಾಂಡ್‌ ಹುಟ್ಟಿಕೊಂಡಿತು. ವಿವಿಧ ಪ್ರಕಾರ, ವಿವಿಧ ಧ್ವನಿ, ವೈವಿಧ್ಯಮಯ ಸಾಧನಗಳನ್ನು ಬಳಸಿ ಹೊಸ ಹೊಸ ಪ್ರಯೋಗಗಳನ್ನು ಇಲ್ಲಿ ಮಾಡುತ್ತೇವೆ.

* ಭಾರತೀಯ ಸಂಗೀತದ ಬಗ್ಗೆ ವಿದೇಶಿ ಶ್ರೋತೃಗಳ ಭಾವನೆ ಹೇಗಿದೆ?
ನಾನು ಕಂಡಂತೆ ವಿದೇಶದಲ್ಲಿ ಭಾರತೀಯ ಸಂಗೀತಕ್ಕೆ ದೊಡ್ಡ ಶ್ರೋತೃವರ್ಗವಿದೆ. ಆ ವರ್ಗದವರಿಗೆ ಭಾರತೀಯ ಸಂಗೀತ ಅರ್ಥವಾಗುವುದಿಲ್ಲ ಎಂದೇನೂ ಅಲ್ಲ. ಅವರು ಶೀಘ್ರಗ್ರಾಹಿಗಳು. ಯಾವುದೇ ಸಂಗೀತ ಕಾರ್ಯಕ್ರಮಕ್ಕೆ ಬರುವ ಮುನ್ನ ಸಾಕಷ್ಟು ತಿಳಿದುಕೊಂಡು ಬರುತ್ತಾರೆ. ಚರ್ಚಿಸುತ್ತಾರೆ, ಪ್ರಶ್ನಿಸುತ್ತಾರೆ.

* ಆಲ್ಬಂಗಳಲ್ಲಿ ವಿದೇಶಿ ಸಂಗೀತದ ಪ್ರಭಾವ ಹೆಚ್ಚಿದೆ. ಇದು ಅನಿವಾರ್ಯವೇ, ಆಯ್ಕೆಯೇ?
‘ಸಂಗೀತ’ ಒಂದು ಮುಕ್ತವಾದ ಕಲಾಕ್ಷೇತ್ರ. ಯಾವುದೇ ಒಂದು ಪ್ರಕಾರದ ಸಂಗೀತಕ್ಕೆ ಮತ್ತೊಂದು ಪ್ರಕಾರದ ಸೇರ್ಪಡೆ ಅನಿವಾರ್ಯವಲ್ಲ. ಅದು ಅವರವರ ಆಯ್ಕೆಯಷ್ಟೆ. ಅಷ್ಟಕ್ಕೂ ಜಗತ್ತಿನ ಯಾವ ಸಂಗೀತ ಪ್ರಕಾರವೂ ಹೆಚ್ಚಲ್ಲ, ಯಾವುದೂ ಕಡಿಮೆ ಅಲ್ಲ. ಪ್ರತಿಯೊಂದು ಪ್ರಕಾರಕ್ಕೆ ತನ್ನದೇ ಆದ ಅಸ್ತಿತ್ವ, ಮಹತ್ವ ಇದ್ದೇ ಇರುತ್ತದೆ.

* ನೀವು ಕೆಲಸ ಮಾಡಲು ಇಷ್ಟಪಡುವ ಸಂಗೀತ ನಿರ್ದೇಶಕ?
ಎ.ಆರ್‌. ರೆಹಮಾನ್‌.

* ನಿಮ್ಮ ನೆಚ್ಚಿನ ಗಾಯಕ, ಸಂಯೋಜಕ?
ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಗುರುಕಿರಣ್‌.

***
‘Days in the Sun’. ಜೀವನದಲ್ಲಿ ಮಹತ್ವದ್ದನ್ನು ಪಡೆಯಲು ಕೆಲವು ಬೇಕುಗಳನ್ನು ನಾವು ತ್ಯಾಗ ಮಾಡಲೇ ಬೇಕಾಗುತ್ತದೆ ಎನ್ನುವುದನ್ನು ಯುವ ಜನತೆಗೆ ಮನದಟ್ಟು ಮಾಡಿಕೊಡುವುದೇ ಈ ವಿಡಿಯೊ ಹಿಂದಿರುವ ಹಿಗ್ಗು. ಅಂಬಿ ಮೊದಲ ಬಾರಿಗೆ ಇದರಲ್ಲಿ ಹಾಡಿದ್ದಾನೆ. ನಾವಿಬ್ಬರೂ ಕೂಡಿ ಕಟ್ಟಿದ ಕನಸಿನ ಕೂಸದು.

I'd give all my days in the sun
To stand with you in the rain
I'd give all my days in the sun
To help me feel your pain... ಹೀಗೆ ಸಾಗುವ ಗೀತೆಯಲ್ಲಿ ಒಬ್ಬರ ಜೊತೆಗೊಬ್ಬರು ನಿಲ್ಲುವುದರಲ್ಲಿ, ಒಬ್ಬರ ನೋವಲ್ಲಿ ಒಬ್ಬರು ಭಾಗಿಯಾಗುವುದರಲ್ಲಿ ಇರುವ ಪರಮಾನಂದದ ಭಾವವಿದೆ. ಹಂಪಿಯಲ್ಲಿ ವಿಡಿಯೊ ಚಿತ್ರೀಕರಣ ಮಾಡಲಾಗಿದೆ.
–ಬಿಂದು ಸುಬ್ರಹ್ಮಣ್ಯಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT