ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮ್ಮ’ನ ಬಿಡುಗಡೆಗೆ ಆಗ್ರಹ

ತಮಿಳುನಾಡಿನಲ್ಲಿ ಮುಂದುವರಿದ ಪ್ರತಿಭಟನೆ
Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ: ಎಐಎಡಿಎಂಕೆ ಮುಖ್ಯಸ್ಥೆ ಜೆ.­ಜಯಲಲಿತಾ ಅವರು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಿಕ್ಷೆಗೆ ಒಳ­ಪಟ್ಟಿ­ರುವುದನ್ನು ವಿರೋಧಿಸಿ ತಮಿಳು­ನಾಡಿನಾದ್ಯಂತ  ನಾಲ್ಕ­ನೆಯ ದಿನ­ವಾದ ಮಂಗಳವಾರ ಕೂಡ ಪ್ರತಿಭ­ಟನೆ, ನಿರಶನಗಳು ಮುಂದುವರಿದವು.

ತಿರುಚಿನಾಪಳ್ಳಿ, ಕಡಲೂರು, ಸೇಲಂ, ಕೊಯಮತ್ತೂರು ಹಾಗೂ ಕಾಂಚೀಪುರ ಸೇರಿದಂತೆ ವಿವಿಧ ಕಡೆ ಪಕ್ಷದ ಕಾರ್ಯಕರ್ತರು ನಿರಶನ ನಡೆಸಿದರು.ಜಯಾ ಅವರನ್ನು ಬೆಂಬಲಿಸಿ ತಮಿಳು­ಚಿತ್ರೋದ್ಯಮ ಬಂದ್‌ ಆಚರಿಸಿತು. ಎಲ್ಲಿಯೂ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲ ಎಂದು ಪೊಲೀ­ಸರು ತಿಳಿಸಿದ್ದಾರೆ.

ಕಿನತುಕಡವು ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಪಕ್ಷದ ಕಾರ್ಯಕರ್ತರು ಮೌನ ಮೆರವಣಿಗೆ ನಡೆಸಿದರು.
ತಿರುಚಿನಾಪಳ್ಳಿ, ಕರೂರು ಹಾಗೂ ಮದುರೆಯಲ್ಲಿ ಅಂಗಡಿ ಮುಂಗಟ್ಟು­ಗಳು ಮುಚ್ಚಿದ್ದವು. ತಿರುಚಿನಾಪಳ್ಳಿಯ ಗಣೇಶ ಮಂದಿರ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಹಾಗೂ ಚರ್ಚ್‌­ಗಳಲ್ಲಿ  ಜಯಾ ಪರವಾಗಿ ವಿಶೇಷ ಪ್ರಾರ್ಥ­ನೆಗಳು ನಡೆದವು.

ಮದುರೆಯಲ್ಲಿ ಬಹುತೇಕ ಅಂಗಡಿ­ಗಳು, ಹೋಟೆಲ್‌ಗಳು ಹಾಗೂ ಚಿತ್ರ­ಮಂದಿ­­ರಗಳು ಮುಚ್ಚಿದ್ದವು. ಕೆಲ ಖಾಸಗಿ ಬಸ್‌ಗಳ ಸಂಚಾರ ಕೂಡ ಬಂದ್‌ ಆಗಿತ್ತು. ರಾಜ್ಯದ ಪ್ರಮುಖ ತರಕಾರಿ ಮಾರು­ಕಟ್ಟೆಯಿರುವ ದಿಂಡಿಗಲ್‌ ಜಿಲ್ಲೆಯ ಒಡ್ಡಂಚಟ್ಟಿರದಲ್ಲಿ ವಹಿವಾಟು ಸ್ಥಗಿತ­ಗೊಂಡಿತ್ತು. ದೇಗುಲ ನಗರಿ ಪಳನಿ, ಪ್ರವಾಸಿ ತಾಣ ಕೊಡೈಕೆನಾಲ್‌­ನ­ಲ್ಲಿಯೂ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ರಾಮೇಶ್ವರದಲ್ಲಿ ಮೀನುಗಾರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮಂಗಳವಾರ ನಿರ್ಧರಿಸಿದ್ದಾರೆ. ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಕ್ಷೇತ್ರ ತಿರುವರೂರಿನಲ್ಲಿ ಕೂಡ ಅಂಗಡಿ ಮುಂಗಟ್ಟು ಮುಚ್ಚಿದ್ದವು. ಜಯಾ ಶೀಘ್ರ ಬಿಡುಗಡೆಗೆ ಒತ್ತಾ­ಯಿಸಿದ ವಿರುಧಾಚಲದಲ್ಲಿ ವಕೀಲರು ಕೋರ್ಟ್‌ ಕಲಾಪ ಬಹಿಷ್ಕರಿಸಿದ್ದರು.

ಅತಿರೇಕದ ಅಭಿಮಾನ....
‘ಅಮ್ಮ’ (ಜಯಲಲಿತಾ) ಅವರಿಗೆ ಶಿಕ್ಷೆ ಪ್ರಕಟವಾದಾಗಿನಿಂದ ಅವರೆಡೆಗಿನ ಅತಿರೇಕದ ಅಭಿಮಾನದಿಂದಾಗಿ ಕನಿಷ್ಠ ೧೮ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.    ಥೇನಿ ಜಿಲ್ಲೆಯ ಪೊಲೀಸ್‌ ಕಾನ್‌­ಸ್ಟೇಬಲ್‌ ಒಬ್ಬರು ಸಜೀವ ದಹನಕ್ಕೆ ಯತ್ನಿಸಿದ ಮತ್ತೊಂದು ಘಟನೆ ಮಂಗಳವಾರ ವರದಿಯಾಗಿದೆ.

ಜಯಾ ಜೈಲು ಪಾಲಾಗಿರುವುದಕ್ಕೆ ಖಿನ್ನರಾದ ೪೨ ವರ್ಷದ ವೇಲ್‌­ಮುರುಗನ್‌ ಎಂಬುವವರು ಚೆನ್ನೈನಲ್ಲಿ­ರುವ ಡಿಜಿಪಿ ಕಚೇರಿಗೆ ಸಮವಸ್ತ್ರ­ಧಾರಿಯಾಗಿ ಬಂದರು. ಕಚೇರಿಯ ಆವರಣ ಪ್ರವೇಶಿಸಿದದ್ದೇ   ತಡ  ‘ಅಮ್ಮ’ ಎಂದು ಘೋಷಣೆ ಕೂಗುತ್ತ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಸಜೀವ ದಹನಕ್ಕೆ ಯತ್ನಿಸಿದರು. ಅಲ್ಲಿದ್ದ ಇತರ ಸಿಬ್ಬಂದಿ ವೇಲ್‌ಮುರುಗನ್‌ ಅವರನ್ನು ಅಪಾಯದಿಂದ ಪಾರು ಮಾಡಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು.

ಜಯಾ ಶಿಕ್ಷೆಯನ್ನು ವಿರೋಧಿಸಿ ತಮಿಳುನಾಡಿನಲ್ಲಿ ಪೊಲೀಸ್‌ ಸಿಬ್ಬಂದಿ­ಯೊಬ್ಬರು ಇಂಥ ಅತಿರೇಕದ ಪ್ರಯತ್ನಕ್ಕೆ ಮುಂದಾಗಿದ್ದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ. ಕ್ರೀಡಾಪ್ರೇಮಿ ಮುರುಗನ್‌ ಈ ಮೊದಲು ಜಯಲಲಿತಾ ಅವರಿಂದ ಅನೇಕ ಪ್ರಶಸ್ತಿಗಳನ್ನು ಸ್ವೀಕರಿಸಿದ್ದರು.

ವಿಷ ಸೇವಿಸಿ ಆತ್ಮಹತ್ಯೆ: ಎಐಎಡಿಎಂಕೆ ಕಾರ್ಯಕರ್ತ  ಸಿ.ರಜನಿ ಎಂಬುವವರು ಮಂಗಳವಾರ ಬೆಳಿಗ್ಗೆ ಕೊಯ­ಮತ್ತೂ­ರಿನ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ತಮ್ಮ ಜೇಬಿನಲ್ಲಿ ಜಯ­ಲಲಿತಾ ಭಾವಚಿತ್ರ ಇಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಸಾವು: ‘ಅಮ್ಮ’ ಜೈಲು ಪಾಲಾಗಿದ್ದಕ್ಕೆ ಮನನೊಂದು ಸಜೀವ­ದಹನಕ್ಕೆ ಯತ್ನಿಸಿದ್ದ   ಶಾಲಾ ಬಾಲಕಿ ಎಂ.ನಾಗಲಕ್ಷ್ಮಿ (೧೭) ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ಮನೆ ಮಂದಿ ಹೊರಗೆ ತೆರಳಿದ್ದಾಗ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು.

ಚಿತ್ರೋದ್ಯಮದಿಂದ  ‘ಮೌನ ನಿರಶನ’
ಒಂದು ಕಾಲದಲ್ಲಿ ತಮಿಳು­ಚಿತ್ರ­ರಂಗ­ದಲ್ಲಿ ಜನಪ್ರಿಯ ನಟಿಯಾಗಿ ಮಿಂಚಿದ್ದ ಜಯಲಲಿತಾ ಬೆಂಬಲಕ್ಕೆ ಇಡೀ ಚಿತ್ರೋದ್ಯ­ಮವೇ ಟೊಂಕಕಟ್ಟಿ ನಿಂತಿದೆ. ಮಂಗಳವಾರ ಚಿತ್ರೋದ್ಯ­ಮ­ದಿಂದ ‘ಮೌನ ನಿರಶನ’ ನಡೆಸ­ಲಾಯಿತು. ತಮಿಳುನಾಡು ನಿರ್ಮಾ­ಪಕರ ಮಂಡಳಿ  (ಟಿಪಿಎಫ್‌ಸಿ), ದಕ್ಷಿಣ ಭಾರತ ಕಲಾ­ವಿ­ದರ ಸಂಘ (ಎಸ್‌­ಐಎಎ)ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಹಾಗೂ ಕಿರುತೆರೆ ಕಲಾವಿದರು ನಿರಶ ನಡೆಸಿದರು.

ನಟ ಆರ್‌.ಶರತ್‌ ಕುಮಾರ್‌, ನಿರ್ದೇ­ಶಕರಾದ ವಿಕ್ರಮನ್‌, ಲಿಯಾಕತ್‌ ಅಲಿ ಖಾನ್‌, ನಿರ್ಮಾ­ಪಕ­ರಾದ ಎಸ್‌.­ಥಾನು, ಟಿ.ಶಿವು ಮತ್ತಿತರರು ಪ್ರತಿಭಟನೆ­ಯಲ್ಲಿ ಪಾಲ್ಗೊಂ­ಡಿದ್ದರು. ಚೆನ್ನೈ ಹಾಗೂ ಸುತ್ತಮುತ್ತಲ ಪ್ರದೇಶ­ಗಳಲ್ಲಿ ಸಿನಿಮಾ ಹಾಗೂ ಧಾರಾವಾ­ಹಿಗಳ ಚಿತ್ರೀಕರಣ ಸ್ಥಗಿತ­ಗೊಂಡಿತ್ತು. ಅಲ್ಲದೇ ಸಂಜೆ ಆರು ಗಂಟೆವರೆಗೆ ಚಿತ್ರ ಪ್ರದರ್ಶನ ರದ್ದು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT