ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮ್ಮ ನನ್ನೆಲ್ಲಾ ಸಾಧನೆಯ ಸ್ಫೂರ್ತಿ’

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ನನ್ನ ಎಲ್ಲಾ ಸಾಧನೆಯ ಹಿಂದೆ ಅಮ್ಮನ ಅಪಾರ ಶ್ರಮವಿದೆ. ಇಷ್ಟೆಲ್ಲಾ ಸಾಧನೆಗೆ ಅಮ್ಮ ತೋರಿದ ಪ್ರೀತಿ ಹಾಗೂ ಬೆಂಬಲವೇ ಸ್ಫೂರ್ತಿ. ಅವರ ಜನ್ಮದಿನಕ್ಕೆ ವಿಶ್ವ ಬಿಲಿಯರ್ಡ್ಸ್‌ನಲ್ಲಿ ಗೆದ್ದ ಪ್ರಶಸ್ತಿಯೇ ಉಡುಗೊರೆ...’ ಕರ್ನಾಟಕದ ಪಂಕಜ್‌ ಅಡ್ವಾಣಿ ಗುರುವಾರ ಲೀಡ್ಸ್‌ನಿಂದ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳಿವು.

ಬುಧವಾರ ಪಂಕಜ್‌ ಅಮ್ಮ ಕಾಜಲ್‌ ಅವರ ಜನ್ಮದಿನ. ವಿಶ್ವ ಬಿಲಿಯರ್ಡ್ಸ್‌ನ ಟೈಮ್ಡ್‌ ಮಾದರಿಯಲ್ಲಿ ಗೆದ್ದ ಪ್ರಶಸ್ತಿಯನ್ನು ಪಂಕಜ್‌ ಅಮ್ಮನಿಗೆ ಅರ್ಪಿಸಿದ್ದಾರೆ. ಅವರು ಪತ್ರಿಕೆಯೊಂದಿಗೆ ಹಂಚಿಕೊಂಡ ಅನಿಸಿಕೆಗಳು ಇಲ್ಲಿದೆ.

* ಲೀಡ್ಸ್‌ನಲ್ಲಿ ಗೆದ್ದ ಎರಡು ವಿಶ್ವ ಪ್ರಶಸ್ತಿಗಳ ಬಗ್ಗೆ ಹೇಳಿ?
ಲೀಡ್ಸ್‌ಗೆ ಬರುವ ಮುನ್ನವೇ ಎರಡೂ ಮಾದರಿಗಳಲ್ಲಿ ಪ್ರಶಸ್ತಿ ಗೆಲ್ಲಬೇಕೆನ್ನುವ ಗುರಿ ಹೊಂದಿದ್ದೆ. ಅದಕ್ಕಾಗಿ ಸ್ನೂಕರ್‌ಗಿಂತ ಹೆಚ್ಚಾಗಿ ಬಿಲಿಯರ್ಡ್ಸ್‌ಗೆ ಒತ್ತು ನೀಡಿ ಅಭ್ಯಾಸ ನಡೆಸಿದ್ದೆ. ಫಿಟ್‌ನೆಸ್‌ ಮತ್ತು ಯೋಗ ಮಾಡುವುದರತ್ತ ಗಮನ ಹರಿಸಿದ್ದೆ. ಆದ್ದರಿಂದ ನನ್ನ ಗುರಿ ಈಡೇರಿಸಿಕೊಳ್ಳಲು ಸಾಧ್ಯವಾಯಿತು.

* ಫೈನಲ್‌ ಪಂದ್ಯದ ಅನುಭವ ಹೇಗಿತ್ತು?
ರಾಬೆರ್ಟ್‌ ಹಾಲ್‌ ಅತ್ಯುತ್ತಮ ಆಟಗಾರ. ಕಠಿಣ ಸವಾಲು ಎದುರಾಗಬಹುದು ಎಂದುಕೊಂಡಿದ್ದೆ. ಆದರೆ, ಪಂದ್ಯದ ಆರಂಭದಲ್ಲಿ ಕಂಡು ಬಂದ ಚುರುಕುತನ ನಂತರ ಕಡಿಮೆಯಾಯಿತು. ಇಷ್ಟೊಂದು ಸುಲಭವಾಗಿ ಗೆಲುವು ಲಭಿಸಿದ್ದು ಅಚ್ಚರಿ ಮೂಡಿಸಿದೆ.

* ಹಲವು ವರ್ಷ ಸ್ನೂಕರ್‌, ಮತ್ತೆ ಕೆಲ ವರ್ಷ ಬಿಲಿಯರ್ಡ್ಸ್‌ ಹೀಗೆ ಬೇರೆ ಬೇರೆ ವಿಭಾಗಗಳತ್ತ ಗಮನ ಹರಿಸಲು ಕಾರಣವೇನು?
ಸ್ನೂಕರ್‌ ಮತ್ತು ಬಿಲಿಯರ್ಡ್ಸ್ ನನ್ನ ಸಾಧನೆಯ ಕ್ಷೇತ್ರಗಳು. ಎರಡೂ ವಿಭಾಗಗಳಲ್ಲಿ ಸಮಾನ ಪ್ರಶಸ್ತಿಗಳನ್ನು ಗೆಲ್ಲಬೇಕೆನ್ನುವ ಗುರಿ ಹೊಂದಿದ್ದೇನೆ. ಚಾಂಪಿಯನ್‌ಷಿಪ್‌ಗೆ ಅನುಗುಣವಾಗಿ ಅಭ್ಯಾಸ ನಡೆಸುತ್ತೇನೆ.

* ಸ್ನೂಕರ್‌ ಹಾಗೂ ಬಿಲಿಯರ್ಡ್ಸ್‌ ಇವುಗಳಲ್ಲಿ ಯಾವುದಕ್ಕೆ ಆದ್ಯತೆ ನೀಡುತ್ತೀರಿ?
ಎರಡಕ್ಕೂ ಸಮಾನ ಆದ್ಯತೆ ನೀಡುತ್ತೇನೆ. ಮೊದಲಿನಿಂದಲೂ ಸ್ನೂಕರ್ ಬಗ್ಗೆ ಹೆಚ್ಚು ಒಲವಿದೆ. ಆದರೆ, ಬಿಲಿಯರ್ಡ್ಸ್‌ ಬಗ್ಗೆ ಯಾವತ್ತೂ ನಿರ್ಲಕ್ಷ್ಯ ತೋರಿಲ್ಲ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಐಬಿಎಸ್‌ಎಫ್‌ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ ನಡೆಯಲಿದೆ. ಆದ್ದರಿಂದ ಮತ್ತೆ ಈಗ ಸ್ನೂಕರ್‌ನತ್ತ ಗಮನ ಕೇಂದ್ರೀಕರಿಸಬೇಕಿದೆ.

* ಮುಂದಿನ ಗುರಿ ಏನಿದೆ?
ಬೆಂಗಳೂರಿನಲ್ಲಿ ನಡೆಯುವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲಬೇಕು. ಹೊರ ದೇಶದಲ್ಲಿ ಎಷ್ಟೇ ಬಾರಿ ಚಾಂಪಿಯನ್‌ ಆದರೂ ತವರಿನಲ್ಲಿ ಪ್ರಶಸ್ತಿ ಗೆದ್ದಾಗ ಸಿಗುವ ಖುಷಿ ಸದಾ ಸ್ಮರಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT