ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸಹಿಷ್ಣುತೆ’ ಪ್ರತಿಪಕ್ಷಗಳ ಪ್ರಮುಖ ಅಸ್ತ್ರ

ನಾಳೆಯಿಂದ ಸಂಸತ್ ಅಧಿವೇಶನ: ಜಿಎಸ್‌ಟಿ ಬೆಂಬಲಕ್ಕೆ ಸರ್ಕಾರ ಯತ್ನ
Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗುರುವಾರದಿಂದ (ನ. 26ರಿಂದ ಡಿ.13ರವರೆಗೆ) ನಡೆಯಲಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅಸಹಿಷ್ಣುತೆ ಅಸ್ತ್ರ ಝಳಪಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.

ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ ಮುಖಂಡರು ನಡೆಸಿದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಅದರಲ್ಲೂ ಜೆಡಿಯು, ಹೆಚ್ಚುತ್ತಿರುವ ಅಸಹಿಷ್ಣುತೆ ಹಾಗೂ ಪ್ರಶಸ್ತಿ ವಾಪಸ್ ಘಟನೆಗಳನ್ನು ದೊಡ್ಡ ಮಟ್ಟದಲ್ಲಿ ಪ್ರಸ್ತಾಪಿಸಲು ಸಜ್ಜಾಗಿದೆ.

ಸಾಂವಿಧಾನಿಕ ಹುದ್ದೆಯಲ್ಲಿದ್ದರೂ ಅಸ್ಸಾಂ ರಾಜ್ಯಪಾಲರು ಅವಹೇಳನಕಾರಿ ಮಾತನಾಡಿರುವುದನ್ನು ನೋಡಿದರೆ ಬಿಹಾರ ಚುನಾವಣೆಯಿಂದ ಆಡಳಿತಾರೂಢ ಪಕ್ಷವು ಇನ್ನೂ ಪಾಠ ಕಲಿತಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಜೆಡಿಯು ಮುಖ್ಯಸ್ಥ ಶರದ್ ಯಾದವ್ ಹೇಳಿದ್ದಾರೆ.

‘ಲವ್ ಜಿಹಾದ್‌ನಿಂದ ಹಿಡಿದು ಘರ್ ವಾಪಸಿ’ವರೆಗೆ ಹಾಗೂ ಅಸಹಿಷ್ಣುತೆ ವಿಷಯಗಳ ಬಗ್ಗೆ  ಸದನದಲ್ಲಿ  ದನಿ ಎತ್ತುವುದಾಗಿ ಅವರು ಹೇಳಿದ್ದಾರೆ. ಇದರ ಜೊತೆ ನಿಯಮ 267ರಡಿ ಅಡುಗೆ ಎಣ್ಣೆ, ತರಕಾರಿಗಳ ಬೆಲೆ ಹೆಚ್ಚಿರುವುದನ್ನು ಪ್ರಶ್ನೆ  ಮಾಡುವುದಾಗಿ ಹೇಳಿದ್ದಾರೆ. 

ಅಸಹಿಷ್ಣುತೆ ಬಗ್ಗೆ ಚರ್ಚೆ ಮಾಡಲು ಈಗಾಗಲೇ ನೋಟಿಸ್ ನೀಡಿದ್ದು, ನಿಯಮ 193ರ ಅಡಿಯಲ್ಲಿಯೇ ಚರ್ಚೆಯಾಗಬೇಕು ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜನ ಖರ್ಗೆ ಹೇಳಿದ್ದಾರೆ. ಸಂಸತ್ ಅಧಿವೇಶನ ಸಂಬಂಧ ಬುಧವಾರ  ಬೆಳಗ್ಗೆ 11 ಗಂಟೆಗೆ ಸರ್ವಪಕ್ಷ ಸಭೆಯನ್ನು ಸ್ಪೀಕರ್ ಕರೆದಿದ್ದಾರೆ. ಇದಾದ ಬಳಿಕ ಪ್ರಧಾನಿ ನಿವಾಸದಲ್ಲಿ ಬಿಜೆಪಿ ಸಂಸದೀಯ ಮಂಡಳಿಯ ಕಾರ್ಯಕಾರಿ ಸಭೆ ಹಾಗೂ ಎನ್‌ಡಿಎ ಸಂಸದರ ಸಭೆ ನಡೆಯಲಿದೆ.

ಸಂಸತ್ ಅಧಿವೇಶನದ ಮೊದಲೆರಡು ದಿನಗಳು ವಿಶೇಷ ಕಾರ್ಯಕ್ರಮಕ್ಕೆ ಮೀಸಲಾಗಿರಲಿವೆ. ನಮ್ಮ ಸಂವಿಧಾನವನ್ನು 1949ರ ನ. 26 ರಂದು ಅಡವಡಿಸಿಕೊಳ್ಳಲಾಗಿತ್ತು. ಇದನ್ನು ಸ್ಮರಿಸುವ ಕಾರ್ಯಕ್ರಮವು ಎರಡು ದಿನ ನಡೆಯುತ್ತಿದ್ದು, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಈ ವೇಳೆ ಗೌರವ ನಮನ ಸಲ್ಲಿಸಲಾಗುತ್ತದೆ.
*
ಜಿಎಸ್‌ಟಿ ಮಸೂದೆಗೆ ಕಾಂಗ್ರೆಸ್ ಬೆಂಬಲ–ಸರ್ಕಾರದ ವಿಶ್ವಾಸ
ಚಳಿಗಾಲದ ಅಧಿವೇಶದದಲ್ಲಿ ಜಿಎಸ್‌ಟಿ ಮಸೂದೆ ಸೇರಿ ಪ್ರಮುಖ ವಿಷಯಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸಹಕಾರ ನೀಡುತ್ತೆ ಎಂದು ಕೇಂದ್ರ  ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಹಿರಿಯ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಮನೋಹರ್ ಪರಿಕ್ಕರ್ ಹಾಗೂ ವೆಂಕಯ್ಯ ನಾಯ್ಡು ಅವರು ಮಂಗಳವಾರ ಸಭೆ ಸೇರಿ ಸರ್ಕಾರದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ಮಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಾತನಾಡಿ, ಪ್ರತಿಪಕ್ಷಗಳ ಸಹಕಾರದಿಂದ ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯುವ ಮೂಲಕ ಸಂಸತ್ತಿನ ಉಭಯ ಕಲಾಪಗಳನ್ನು ಸುಗಮವಾಗಿ ನಡೆಸುವುದು ಸರ್ಕಾರದ ಮುಖ್ಯ ಧ್ಯೇಯ ಎಂದು
ತಿಳಿಸಿದರು. 

ಜೇಟ್ಲಿ, ವೆಂಕಯ್ಯ ನಾಯ್ಡು ಸೇರಿದಂತೆ ಪ್ರಮುಖ ಸಚಿವರು ಈಗಾಗಲೇ ಪ್ರತಿಪಕ್ಷಗಳ ಕೆಲ ಮುಖಂಡರ ಜೊತೆ ಮಾತನಾಡಿ, ಸುಗಮ ಕಲಾಪಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಯ ಕೆಲವು ಮಸೂದೆಗಳಿಗೆ ಕಾಂಗ್ರೆಸ್ ಬೆಂಬಲದ  ಜೊತೆ ಅನುಮೋದನೆ ಪಡೆಯುವ ವಿಶ್ವಾಸವಿದೆ ಎಂದು ನಖ್ವಿ ಹೇಳಿದರು. ಪ್ರಮುಖವಾದ ಜಿಎಸ್‌ಟಿ ಮಸೂದೆ ಸೇರಿದಂತೆ  ಒಟ್ಟು 38 ಮಸೂದೆಗಳು ಸಂಸತ್ತಿನ ಅನುಮೋದನೆಗಾಗಿ ಕಾಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT