ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆನೆ ಪಥಕ್ಕೆ ಅಡ್ಡಿ; ಸಂಘರ್ಷಕ್ಕೆ ಕಾರಣ’

Last Updated 24 ಏಪ್ರಿಲ್ 2014, 10:39 IST
ಅಕ್ಷರ ಗಾತ್ರ

ಮಡಿಕೇರಿ: ಆನೆ ಪಥಕ್ಕೆ (ಎಲೆಫಂಟ್‌ ಕಾರಿಡಾರ್‌) ಅಡ್ಡಲಾಗಿ ಸೋಲಾರ್‌ ಬೇಲಿ ಹಾಗೂ ಆನೆ ಕಂದಕಗಳನ್ನು ನಿರ್ಮಿಸಿರುವುದರಿಂದಲೇ ಕೊಡಗು ಜಿಲ್ಲೆಯಲ್ಲಿ ಆನೆ–ಮಾನವ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ ಎಂದು ಆನೆತಜ್ಞೆ ಪ್ರಜ್ಞಾ ಚೌಟಾ ಹೇಳಿದರು.

ನಗರದಲ್ಲಿ ಮಂಗಳವಾರ ಸಂಜೆ ರೋಟರಿ ಮಿಸ್ಟಿ ಹಿಲ್ಸ್‌ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಆನೆಗಳ ಜೀವನ ಕ್ರಮದ ಬಗ್ಗೆ ಅವರು ಉಪನ್ಯಾಸ ನೀಡಿದರು.

ದಕ್ಷಿಣ ಏಷ್ಯಾ ಸೇರಿದಂತೆ ಕೊಡಗು, ನಾಗರಹೊಳೆ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಆನೆಗಳು ಸಂಚರಿಸುತ್ತಿವೆ. ಇವು ಸಾಮಾನ್ಯವಾಗಿ ನದಿ ಪಕ್ಕದ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ, ಈಚಿನ ವರ್ಷಗಳಲ್ಲಿ ಆನೆಗಳ ಪಥಕ್ಕೆ ಸಂಚಕಾರ ಬಂದೊದಗಿದೆ. ಆನೆಗಳ ಓಡಾಟವನ್ನು ತಪ್ಪಿಸುವ ಉದ್ದೇಶದಿಂದ ಸೋಲಾರ್‌ ವಿದ್ಯುತ್‌ ತಂತಿ ಹಾಗೂ ಆನೆ ಕಂದಕಗಳನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ಅವು ದಾರಿ ತಪ್ಪಿಸಿಕೊಂಡು ತೋಟಗಳತ್ತ, ನಾಡಿನತ್ತ ನುಗ್ಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತ ಸನ್ನಿವೇಶದಲ್ಲಿ ಆನೆ ಕಂದಕಗಳಾಗಲಿ ಅಥವಾ ಸೋಲಾರ್‌ ವಿದ್ಯುತ್‌ ಬೇಲಿಯಾಗಲಿ ಆನೆಗಳನ್ನು ತಡೆ ಹಿಡಿಯಲು ಸಾಧ್ಯವಿಲ್ಲ. ಈ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದರು.

ಆನೆಗಳ ಚಲನವಲನಗಳನ್ನು ಗುರುತಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಬೇಕಾಗಿದೆ. ಜಿಪಿಎಸ್‌ ಕಾಲರ್‌ಗಳನ್ನು ಆನೆಗಳಿಗೆ ಅಳವಡಿಸಿದರೆ, ಅವುಗಳ ಚಲನವಲನಗಳನ್ನು ಗುರುತಿಸಿ, ಆ ಪ್ರದೇಶದ ಜನರಿಗೆ ಮುಂಜಾಗ್ರತೆ ವಹಿಸಿಕೊಳ್ಳುವಂತೆ ಎಚ್ಚರಿಸಬಹುದಾಗಿದೆ ಎಂದರು.

ಭಾರತದಲ್ಲಿ ಸುಮಾರು 28,000 ಆನೆಗಳಿವೆ. ಇವುಗಳಲ್ಲಿ 3,800 ಆನೆಗಳು ಪಳಗಿಸಲ್ಪಟ್ಟಿವೆ. ಕರ್ನಾಟಕದಲ್ಲಿ 6,000 ಆನೆಗಳಿದ್ದು, ಇವುಗಳಲ್ಲಿ 150 ಆನೆಗಳನ್ನು ಪಳಗಿಸಲಾಗಿದೆ. ನಾವು ಪ್ರಯೋಗ ಕೈಗೊಳ್ಳುವ ಉದ್ದೇಶದಿಂದ ದುಬಾರೆಯ ಆನೆ ಶಿಬಿರದಲ್ಲಿ ಆನೆಗಳನ್ನು ಸಾಕುತ್ತಿದ್ದೇವೆ. ಇವುಗಳಿಗೆ ಜಿಪಿಎಸ್‌ ಕಾಲರ್‌ಗಳನ್ನು ಅಳವಡಿಸಿದ್ದೇವೆ. ಇವುಗಳ ಚಲನವಲನಗಳನ್ನು ಇಂಟರ್‌ನೆಟ್‌ ಮೂಲಕ ನಾವು ಎಲ್ಲಿದ್ದರೂ ಗುರುತಿಸಬಹುದು ಎಂದು ಹೇಳಿದರು.

ಅರಣ್ಯ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದರಿಂದ ಆನೆಗಳ ಸಂಖ್ಯೆ ಕ್ಷೀಣವಾಗಲು ಕಾರಣವಾಗಿದೆ. ಹೀಗಾಗಿ ಇಂದು ಏಷ್ಯಾದ ಆನೆಗಳ ಸಂತತಿ ಕ್ಷೀಣಿಸುತ್ತ ಸಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್‌ ಅಧ್ಯಕ್ಷ ಪ್ರಶಾಂತ್‌, ಅಸಿಸ್ಟಂಟ್‌ ಗವರ್ನರ್‌ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಜಿ.ಆರ್‌. ರವಿಶಂಕರ್‌, ಮುಂದಿನ ಅಧ್ಯಕ್ಷ ಎ.ಕೆ. ವಿನೋದ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT