ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ’ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳೆಂದೇ ಗುರುತಿಸಿ

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸು­ತ್ತೇ­ವೆಂದು ಛಾಪಾ ಕಾಗದದಲ್ಲಿ ಬರೆದು­ಕೊಟ್ಟು ಇಂಗ್ಲಿಷ್‌ನಲ್ಲಿ ಪಾಠ ಮಾಡುತ್ತಿರುವ ಶಾಲೆ­ಗಳನ್ನು ಆದಷ್ಟು ಬೇಗನೇ ಎಡಬಿಡಂಗಿತನ­ದಿಂದ ತಪ್ಪಿಸುವುದು ಉಚಿತ. ನ್ಯಾಯಾಲಯವೂ ಅದನ್ನೇ ಹೇಳಿದೆ. ಅದು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಸರ್ಕಾರದ ನೀತಿಯನ್ನೇ ಪ್ರಶ್ನಿಸಿದೆ. ಎಂತಹ ಪ್ರಶ್ನೆ ಅಂದರೆ ನಮಗೀಗ ಗೊಂದಲ.

ಪ್ರಜೆಗಳಿಂದ ಆಯ್ಕೆಯಾದ ಸರ್ಕಾರಕ್ಕೆ ನಾಡಿಗೆ ಯಾವುದು ಸೂಕ್ತವೋ ಅದನ್ನು ಮಾಡುವ ಹಕ್ಕೂ ಇಲ್ಲ! ಕರ್ನಾಟಕದಲ್ಲಿ ಕನ್ನಡ ಮಾಧ್ಯಮದ ಶಾಲೆಗಳನ್ನೇ ತೆರೆಯಬೇಕೆಂಬ ಕಾನೂನನ್ನೂ ಮಾಡುವಂತಿಲ್ಲವೆಂದಾದರೆ ಇದಕ್ಕೆ ಏನರ್ಥ? ನೆಲ–ಜಲದ, ಭಾಷೆ-–ಸಂಸೃತಿಯ ಬಗ್ಗೆ ಕಾನೂನು ಮಾಡುವ ಹೊಣೆ ಮತ್ತು ಹಕ್ಕು ಸರ್ಕಾರಕ್ಕಿಲ್ಲವೇ? ಇದು ನ್ಯಾಯಾಲಯದ ಕ್ರಿಯಾಶೀಲತೆಯೇ? ಅಥವಾ ವಿಶಾಲ ಸಾಂಸ್ಕೃತಿಕ ದೃಷ್ಟಿಕೋನದ ಅವಜ್ಞೆಯೇ? 

ಪ್ರಸ್ತುತ ಇಂಗ್ಲಿಷ್‌ನಲ್ಲಿ ಪಾಠ ಮಾಡುತ್ತಿರುವ ಶಾಲೆಗಳನ್ನು ಆಂಗ್ಲಮಾಧ್ಯಮದ ಶಾಲೆಗಳೆಂದೇ ಗುರುತಿಸಿ ಮಾನ್ಯತೆ ನೀಡುವುದರಿಂದ ಕೆಲ­ವೊಂದು ಉಪಯೋಗಗಳಿವೆ. ಮುಖ್ಯವಾಗಿ ಅವು­ಗಳಲ್ಲಿ ಕಲಿಯುವ ಮಕ್ಕಳಿಗೆ ಶಾಲೆ ಬದಲಾ­ಯಿಸುವಾಗ ‘ಕನ್ನಡದಲ್ಲಿ ಕಲಿತದ್ದು’ ಎಂದು  ಸುಳ್ಳು ವರ್ಗಾವಣೆ ಪತ್ರ ನೀಡಬೇಕಾ­ಗಿಲ್ಲ. ಉದ್ಯೋಗ ನಿಮಿತ್ತ ಊರಿಂದ ಊರಿಗೆ ವರ್ಗಾ­ವಣೆ ಪಡೆಯುವ ಹೆತ್ತವರಿಗೆ ಇದರಿಂದಾಗಿ ಆತಂಕ ಕಡಿಮೆಯಾಗುತ್ತದೆ.

ಇನ್ನು ಮಕ್ಕಳು ಎರಡೆರಡು ಮಾಧ್ಯಮಗಳ ಪುಸ್ತಕಗಳನ್ನು ಹೊರ­ಬೇಕಾಗಿಲ್ಲ. ‘ನಾವು ಇಂಗ್ಲಿಷ್ ಮಾಧ್ಯಮ­ದವರೇ’ ಎಂಬುದಾಗಿ ನಿರ್ಭೀತಿಯಿಂದ ಹೇಳ­ಬಹುದು.  ಶಿಕ್ಷಕರು ಸಾಚಾ ಮತ್ತು ಖೊಟ್ಟಿ ಅಂಕಪಟ್ಟಿಗಳನ್ನು ಇಟ್ಟುಕೊಳ್ಳಬೇಕಾಗಿಲ್ಲ. ಶಾಲಾ ತಪಾಸಣಾಧಿ­ಕಾರಿಗಳು ಯಾವ ಹೊತ್ತಿನಲ್ಲಿ ಬಂದರೂ ಹೆದರ­ಬೇಕಾಗಿಲ್ಲ. ಆಂಗ್ಲ ಮಾಧ್ಯಮ ಶಾಲೆಯೆಂದು ಹಣೆ­ಪಟ್ಟಿ ಸಿಕ್ಕಿದ ಬಳಿಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಪರಿಶೀಲನೆಗೆಂದು ಯಾರೂ ಬರು­ವು­ದಿಲ್ಲ.

ಹಾಗಾಗಿ ಶಿಕ್ಷಕರ ಗುಣಮಟ್ಟ ಹಾಗೂ ಸಾಮರ್ಥ್ಯ ವೃದ್ಧಿಯ ಕುರಿತಾಗಿ ಯಾವುದೇ ಚಿಂತೆಯ ಅಗತ್ಯವಿಲ್ಲ. ಪ್ರಾಥಮಿಕ ಹಂತದಲ್ಲಿ ಹೇಗೂ ವಿದ್ಯಾರ್ಥಿಗಳ ಪರೀಕ್ಷೆಯ ಉತ್ತರಪತ್ರ­ಗಳನ್ನು ಶಾಲೆಗಳಲ್ಲೇ ಮೌಲ್ಯಮಾಪನ ಮಾಡು­ವು­ದ­­ರಿಂದ ದೇಣಿಗೆ ಪಡೆದದ್ದಕ್ಕೆ ತೃಪ್ತಿಯಾಗು­ವಂತೆ ಅಂಕಗಳನ್ನು ನೀಡಿ ಮಗುವಿನ ಸಾಮರ್ಥ್ಯ­ವನ್ನು ಹೊಗಳುತ್ತ ಏಳನೇ ತರಗತಿ ದಾಟಿಸಿಬಿಟ್ಟ ಬಳಿಕ ಆ ಶಾಲೆ ಮತ್ತೆ ಯಾವುದಕ್ಕೂ ಹೊಣೆಯಲ್ಲ.

ಶಾಲೆಗೆ ಆಕರ್ಷಕ ಹೆಸರಿಟ್ಟು ಆ ಮೂಲಕ ಮಂಕುಬೂದಿ ಹಾಕುತ್ತಾರೆ. ಈ ವಿಷಯ­ವನ್ನು ನ್ಯಾಯಾಲಯದ ಗಮನಕ್ಕೆ ತರುವುದಕ್ಕೆ ಯಾರು ಮುಂದೆ ಬರುತ್ತಾರೆ? ಸಾರ್ವ­ಜನಿಕ ಹಿತಾಸಕ್ತಿ ಅರ್ಜಿ ಹಾಕಿದರೂ ಸಾಕ್ಷ್ಯ ಎಲ್ಲಿಂದ ತರುವುದು? ಶಿಕ್ಷಣ ಇಲಾಖೆ­ಯಂತೂ ಈ ವಿಚಾರ­ದಲ್ಲಿ ಸ್ಪಂದನಶೂನ್ಯ ಸಂಸ್ಥೆ­ಯಾಗಿದೆ. ಅದೆಲ್ಲಿ­ಯಾ­ದರೂ ಕರುಣೆಯಿಂದ ಸ್ಪಂದಿಸಿದರೆ ಅದು ಇಂಗ್ಲಿಷ್‌ನ ಕಡೆಗೆ ಹೊರತು ಕನ್ನಡದ ಕಡೆಗಲ್ಲ. ಏಕೆಂದರೆ ಶಿಕ್ಷಣ ಇಲಾಖೆಗೆ ನಿರ್ದಿಷ್ಟ ಪ್ರಯೋಜನ­ಗಳಿವೆ.

ಇಂತಹ ಶಾಲೆಗಳಿಗೆ ಪ್ರತಿವರ್ಷ ಮಾನ್ಯ­ತೆಯ ನವೀಕರಣ ಮಾಡುವ ಸಂಪ್ರದಾಯವನ್ನು ಹಾಕಿಕೊಂಡರೆ ಕಾಯಂ ಆದಾ­ಯದ ವ್ಯವಸ್ಥೆ­ಯಾಗುತ್ತದೆ. ಆಂಗ್ಲ ಮಾಧ್ಯಮ­­ವಾದುದರಿಂದ ಹೆಚ್ಚು ಶುಲ್ಕ ವಸೂ­ಲಾತಿಯ ಸಾಧ್ಯತೆಗಳಿರುವು­ದರಿಂದ ಶಿಕ್ಷಕರಿಗೆ ನೀಡುವ ವೇತನವನ್ನು ಹೆಚ್ಚಿಸಬೇಕೆಂಬ ನಿಯ­ಮಾ­­ವಳಿಯನ್ನು ರೂಪಿಸಬ­ಹುದು. ಅದು ಬಹುತೇಕ ಜಾರಿಗೆ ತರಲಾಗದ ಸ್ಥಿತಿ ಇದ್ದಾಗ ಮಾನ್ಯತೆಯ ಸಂಕೋಲೆಯನ್ನು ಒಂದಿಷ್ಟು ಬಿಗಿಯಬಹುದು. ಇದಲ್ಲದೆ ಪಠ್ಯ ಪುಸ್ತಕ­ಗಳನ್ನು ತಮಗೆ ತಾವೇ ಆಯ್ಕೆ ಮಾಡಲು ಬಿಡದೆ ಪುಸ್ತಕ ಮಾರಾಟದ ಲಾಬಿಯನ್ನು ಪುಷ್ಟಿಗೊಳಿಸ­ಬಹುದು. 

ಇನ್ನು, ಗುರುತಿಸಲಾದ ಆಂಗ್ಲ ಮಾಧ್ಯಮದ ಶಾಲೆಗಳನ್ನು ಕಳೆದು ಉಳಿದವುಗಳಷ್ಟೇ ನಿಜ­ವಾದ ಕನ್ನಡ ಮಾಧ್ಯಮದ ಶಾಲೆಗಳೆಂದು ಮಾನ್ಯತೆ­ನೀಡಬಹುದು. ಅವುಗಳ ಸಂಖ್ಯೆ ಕಡಿಮೆ ಇರುವುದ­ರಿಂದ ಈ ತನಕ ಅನುದಾನ ಸಿಗದಿರುವ ಕನ್ನಡ ಶಾಲೆಗಳಿಗೆ ತಕ್ಷಣದಿಂದಲೇ ಅನುದಾನ ನೀಡಬ­ಹುದು. ಈವರೆಗೆ ಅನುದಾನದ ಬೇಡಿಕೆ ಇಟ್ಟಾಗ ಆಂಗ್ಲಮಾಧ್ಯಮದ ಶಾಲೆಗಳೂ ‘ನಮ್ಮದು ಕನ್ನಡ ಮಾಧ್ಯಮದ ಅನುಮತಿ’ ಎನ್ನುತ್ತ ಅನುದಾನಕ್ಕೆ ಅಡ್ಡ ಬರುತ್ತಿದ್ದುವು.

ಒಮ್ಮೆ ಅವುಗಳನ್ನು ಆಂಗ್ಲ ಮಾಧ್ಯಮದವು­ಗಳೆಂದೇ ಗುರು­ತಿಸಿ ಪಕ್ಕಕ್ಕಿಟ್ಟ ಬಳಿಕ ಅನುದಾನದ ಪ್ರಕ್ರಿಯೆ ಸುಲಭವಾಗಬಹುದು. ಹತ್ತು ವರ್ಷ­ಗಳಲ್ಲಿ ಆಂಗ್ಲ ಮಾಧ್ಯಮದ ಹುಚ್ಚು ಇಳಿದಾಗ ಕನ್ನಡ ಮಾಧ್ಯಮದ ಶಾಲೆಗಳು ಬಲಗೊಳ್ಳಬಹುದು. ಬಹುಶಃ ಈ ಆಶಾಭಾವನೆಯನ್ನು ಈಗ ಯಾರೂ ಒಪ್ಪಲಾರರು. ಆದರೆ ನನಗೆ ಅಂತಹ ದಿನಗಳು ಬರಬಹುದೆಂಬ ಒಂದು ಆಸೆ ಇದೆ. ಏಕೆಂದರೆ ಇತಿಹಾಸ ಮರುಕಳಿಸುವ ಅಗತ್ಯ ಬೀಳ­ಲಿದೆ.

ಇಂದು ಶ್ರೀಮಂತ ಹಾಗೂ ಮಧ್ಯಮ ವರ್ಗ­ದ­ವರಷ್ಟೇ ಅಲ್ಲ, ಕೂಲಿಕಾರರೂ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗಳಿಗೇ ಕಳಿಸುತ್ತಾರೆ. ‘ನಾವು ಇಂಗ್ಲಿಷ್ ಕಲಿಯುವ ಯೋಗ ಇಲ್ಲದೆ ಹಿಂದುಳಿದಿದ್ದೇವೆ. ನಮ್ಮ ಮಕ್ಕ­ಳಿಗೂ ಹಾಗಾಗು­ವುದು ಬೇಡ’. - ಇದು ಅವರ ಧೋರಣೆ. ಅದ­ಕ್ಕಾಗಿ ಬೇಕಾದ ಸಂಪನ್ಮೂಲ­ವನ್ನು ಹೇಗಾದರೂ ಸಂಗ್ರಹಿಸುತ್ತಾರೆ. ಆದರೆ ಅವರಿಗೆ ತಾವು ತಮ್ಮ ಮಗುವಿಗಾಗಿ ಆಯ್ಕೆ ಮಾಡಿರುವುದು ಇಂಗ್ಲಿಷ್ ಶಾಲೆ ಎಂದಷ್ಟೇ ಗೊತ್ತು.

ಅದರ ಗುಣಮಟ್ಟ­ವಾಗಲೀ, ಶಿಕ್ಷಕರ ಕಲಿಸುವ ಕೌಶಲದ ಬಗೆಗಾ­ಗಲೀ, ಅದರ ಮಾನ್ಯತೆಯ ಕುರಿತಾಗಲೀ ವಿಚಾರಿ­ಸಿ­­ಕೊಳ್ಳು­ವುದಕ್ಕಿದೆ­ಯೆಂದೇ ಅವರಿಗೆ ಗೊತ್ತಿರುವು­ದಿಲ್ಲ. ಇಂಗ್ಲಿಷ್‌­ನಿಂದ ಮಗು ಉದ್ಧಾರವಾಗುತ್ತದೆ ಎಂಬ ಒಂದೇ ಗುರಿ ಅವರಿಗೆ. ಮಗುವಿಗೂ ಕಲಿಕೆಯೆಂಬುದರ ಸ್ಪಷ್ಟ ಕಲ್ಪನೆ ಇರುವುದಿಲ್ಲ. ಕಲಿಸಿದ್ದನ್ನು ಉರು ಹೊಡೆಯುವುದೇ ಕಲಿಕೆ ಎಂಬ ಸರಳ ತಿಳಿವಳಿಕೆಗೆ ಅದು ಬರುತ್ತದೆ.

ಜ್ಞಾನ ಮತ್ತು ಮಾಹಿತಿಯ ವ್ಯತ್ಯಾಸ ಅದಕ್ಕೆ ಹೇಗೆ ತಿಳಿಯಲು ಸಾಧ್ಯ? ಅದು ಶಿಕ್ಷಕರಿಗೆ ಗೊತ್ತಿದ್ದರೆ ಭಾಗ್ಯ! ಇಂತಹ ಶಿಕ್ಷಣದಲ್ಲಿ ಹೆಣಗಾಡಿದ ಮಗು ಬೆಳೆದು ಅಪೇಕ್ಷಿತ ನೆಲೆಯನ್ನು ಕಾಣದಿದ್ದಾಗ ಮುಂದೆ ತನ್ನ ಮಕ್ಕಳಿಗೆ ತನ್ನ ಪಾಡು ಬರದಿರಲಿ, ಅರ್ಥವಾಗುವ ಮಾಧ್ಯಮದಲ್ಲೇ ಕಲಿಯಲಿ ಎಂಬ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ. ಅಷ್ಟರವರೆಗೆ ಕನ್ನಡ ಶಾಲೆಗಳನ್ನು ಚೆನ್ನಾಗಿ ಬೆಳೆಸಿ ಉಳಿಸಿಕೊಳ್ಳಬೇಕು. ಅವುಗಳಲ್ಲಿ ನಿಜವಾದ ಶಿಕ್ಷಣದ ಪ್ರಕ್ರಿಯೆ ಜರಗುತ್ತಿರುವಂತೆ ನೋಡಿಕೊಳ್ಳಬೇಕು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT