ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇತಿಹಾಸದಲ್ಲಿ ನೈಜ ಸಂಗತಿ ದಾಖಲಾಗಿಲ್ಲ’

Last Updated 26 ಜನವರಿ 2015, 10:03 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಈಗಿರುವ ಇತಿಹಾಸದಲ್ಲಿ ಪರಿಪೂರ್ಣವಾದ ನೈಜ ಸಂಗತಿ ಸಂಪೂರ್ಣವಾಗಿ ದಾಖಲಾಗಿಲ್ಲದೇ ಏಕಮುಖವಾಗಿದೆ. ಅದರಲ್ಲಿ ರಾಜರ ವೈಭವ ಮತ್ತು ಅವರು ಮಾಡಿದ ಕೆಲವು ಜನೋಪಯೋಗಿ ಕಾರ್ಯಗಳನ್ನು ಮಾತ್ರ ಇತಿಹಾಸದಲ್ಲಿ ದಾಖಲಿಸಲಾಗಿದೆ’ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್.ಹನುಮಂತಯ್ಯ ತಿಳಿಸಿದರು.

ದುರ್ಗೋತ್ಸವ-೨೦೧೫ ರ ಅಂಗವಾಗಿ ಕೋಟೆ ಆವರಣದಲ್ಲಿ ತ.ರಾ.ಸು.ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿ ೨ರಲ್ಲಿ ‘ಇತಿಹಾಸ ಮತ್ತು ಸಮಾಜ’  ಕುರಿತ ವಿಷಯದ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.

‘ಇಂಥ  ಇತಿಹಾಸ ದಾಖಲು ಮಾಡುವ ಎಲ್ಲಾ ಇತಿಹಾಸಕಾರರ ಕಾಲದಲ್ಲಿಯು ನಡೆದು ಬಂದ ಸಂಗತಿಯಾಗಿದೆ. ಆದರೆ ವಾಸ್ತವಕ್ಕೆ ಹತ್ತಿರವಾಗಿ ಕೆಲಸ ಮಾಡಿದವರಲ್ಲಿ ವಿಶೇಷವಾಗಿ ಎಡಪಂಥೀಯ ಚಿಂತನೆಯಿಂದ ಮೂಡಿ ಬಂದ ಇತಿಹಾಸಕಾರರು ಮಾತ್ರ ಸ್ವಲ್ಪವಾದರೂ ಸತ್ಯಕ್ಕೆ ಹತ್ತಿರವಾದ ಸಂಗತಿಗಳನ್ನು ದಾಖಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಎಡಪಂಥೀಯ ಚಿಂತನೆ ಇತಿಹಾಸಕಾರರು ಕೂಡ ಪರಿಪೂರ್ಣವಾದ ಚಿತ್ರಣ ಮಾಡಲು ಸಾಧ್ಯವಾಗಿಲ್ಲ, ಅದನ್ನು ಎಲ್ಲಾ ಇತಿಹಾಸಕಾರರು ಸ್ಪಷ್ಟಪಡಿಸಬೇಕಾಗಿದೆ’ ಎಂದರು.

‘ಕೆಲವು ಕಾಲವನ್ನು ಸುವರ್ಣಯುಗ ಎಂದು ಕರೆಯುತ್ತೇವೆ. ಅಂಥ ಕಾಲ ಜನಸಾಮಾನ್ಯರಿಗೆ ಪೂರಕವಾಗಿತ್ತೆ ? ಅಲ್ಲಿ ದೇವದಾಸಿ ಪದ್ದತಿ, ವೇಶ್ಯಾವಾಟಿಕೆ, ಬಡತನ ಇರಲಿಲ್ಲವೇ ? ಸಾಮಾಜಿಕ ಪಿಡುಗು ಇರಲಿಲ್ಲವೇ ? ಅವರ ಸ್ಥಿತಿಯನ್ನು ಹೇಗೆ ನಡೆಸಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಸಮಗ್ರ ಚರಿತ್ರೆಯನ್ನು ಪುನರ್ ಅವಲೋಕನ ಮಾಡಬೇಕಾಗಿದೆ ಎಂದರು.

‘ಅಸ್ಪೃಶ್ಯರನ್ನು ೧೦೦ ವರ್ಷಗಳ ಮಧ್ಯಕಾಲಿನ ಭಾರತೀಯ ಸಮಾಜದ ಇತಿಹಾಸ ದಾಖಲಿಸುತ್ತದೆ. ಪೊರಕೆಯನ್ನು ಮುಖಕ್ಕೆ, ಬಾಯಿಗೆ ಕುಡಿಕೆಯನ್ನು ಕಟ್ಟಿಕೊಂಡು ಓಡಾಡಬೇಕಾದ ದೈನೇಸಿ ಸ್ಥಿತಿ ಇತ್ತು ಎಂದು ದಾಖಲಾಗಿದೆ. ಆದರೆ ನಮ್ಮ ಇತಿಹಾಸ ಎಲ್ಲಿಯೂ ಕೂಡ ಅಧಿಕೃತವಾಗಿ ಇದನ್ನು ದಾಖಲು ಮಾಡಿಲ್ಲ. ಆದರೆ ಇದಕ್ಕೆ ಕಾರಣ ಇತಿಹಾಸ ರಾಜತ್ವದ ಪರವಾಗಿತ್ತೆ? ಹೊಗಳುಭಟ್ಟರ ಚರಿತ್ರೆಯಾಗಿದೆಯೇ? ವಾಸ್ತವವಾಗಿ ಪರಸ್ಪರರ ತುಲನೆ ಮಾಡುವ ಕೆಲಸ ಮಾಡದೆಯೇ ಇಂಥ ಅನೇಕ ಸಂಗತಿಗಳು ನಮ್ಮ ಚರಿತ್ರೆಯಲ್ಲಿ ಮಾಯವಾಗಿವೆ ಎಂದರು.

ರಾಜರ ಸುಖವನ್ನು ದಾಖಲು ಮಾಡುವ ಕೆಲಸ ಮಾಡಿವೆಯೇ ಹೊರತು ಶ್ರೀಸಾಮಾನ್ಯನ ಚರಿತ್ರೆಯನ್ನು ದಾಖಲು ಮಾಡಿಲ್ಲ ಎಂದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಡಾ. ಬಿ.ಎಂ.ಗುರುನಾಥ್ ಮಾತನಾಡಿ, ‘ಬರೆದ ಚರಿತ್ರೆಗಳಲ್ಲಿರುವ ದಾಖಲೆಗಳು ವಾಸ್ತವ ಸಂಗತಿಗಳನ್ನು ಮರೆಮಾಚುತ್ತವೆ. ಆದರೆ ಮೌಖಿಕ ಅಥವಾ ಜನಪದ ಚರಿತ್ರೆ ಯಥಾವತ್ತಾಗಿ ಸತ್ಯವನ್ನು ಯಥಾವತ್ತಾಗಿ ದಾಖಲಿಸುತ್ತವೆ. ಚರಿತ್ರೆಯ ಸಂದರ್ಭದಲ್ಲಿ ಬಲಪಂಥೀಯ ಚರಿತ್ರೆ ಮತ್ತು ಎಡ ಪಂಥೀಯ ಚರಿತ್ರೆಗಳಿವೆ ಎಂದು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ  ಅತಿಥಿಗಳಾಗಿ ಭಾಗವಹಿಸಿದ್ದರು. ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿ.ಕೆ.ಮಹೇಶ್ ಅಧ್ಯಕ್ಷತೆ ವಹಿಸಿದ್ದರು.  ಆಶಯನುಡಿಗಳನ್ನಾಡಿದರು. ಚಿತ್ರದುರ್ಗದ ಇತಿಹಾಸ ಮರು ಚಿಂತನೆ ಕುರಿತು ಖ್ಯಾತ ಇತಿಹಾಸ ಸಂಶೋಧಕ ಪ್ರೊ; ಲಕ್ಷ್ಮಣ್ ತೆಲಗಾವಿ ಮಾತನಾಡಿದರು. ಚಿತ್ರದುರ್ಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿ ಸಾಧ್ಯತೆಗಳ ಕುರಿತು ಪ್ರಜಾವಾಣಿ ಹಿರಿಯ ವರದಿಗಾರರಾದ ಗಾಣದಾಳು ಶ್ರೀಕಂಠ ವಿಷಯ ಮಂಡಿಸಿದರು. ಜಿಲ್ಲೆಯಲ್ಲಿ ನಡೆದ ವಿವಿಧ ಹೋರಾಟಗಳು ಕುರಿತು ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡಿದರು. ಚರಿತ್ರೆಯ ಪಠ್ಯಪುಸ್ತಕಗಳು ಒಂದು ಮರು ಚಿಂತನೆ ಕುರಿತು ಇತಿಹಾಸ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ:ಗುಡ್ಡದೇಶ್ವರಪ್ಪ ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣಸಿದ್ದಪ್ಪ, ಇತಿಹಾಸ ಸಂಶೋಧಕ ಡಾ; ಬಿ.ರಾಜಶೇಖರಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ತುರುವನೂರು ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಅನ್ನೆಹಾಳ್ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ರಂಗನಾಯಕ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ; ಬಸವರಾಜಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT