ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತರ ಒದಗಿಸದ ಅಧಿಕಾರಿಗಳಿಗೆ ದಂಡ’

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಅಧಿಕಾರಿಗಳಿಗೆ ದಂಡ ವಿಧಿಸಬೇಕು ಎಂದು ಮೇಲ್ಮನೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಸರ್ಕಾರಕ್ಕೆ ಒಕ್ಕೊರಲಿನ ಮನವಿ ಮಾಡಿದರು. ತಾವು ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅವರು ಉತ್ತರ ನೀಡಲು ಕಾಲಾವಕಾಶ ಕೋರಿದಾಗ ಬಿಜೆಪಿ ಸದಸ್ಯ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

‘ಹೀಗಾದರೆ ಸದಸ್ಯರು ಪ್ರಶ್ನೆ ಕೇಳಿ ಏನು ಪ್ರಯೋಜನ? ತಂತ್ರಜ್ಞಾನ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇವೆ. ಕೆಲವೇ ಗಂಟೆಗಳಲ್ಲಿ ಉತ್ತರ ಕೊಡಬಹುದು. ಆದರೂ ಉತ್ತರಿಸಲು ವಿಳಂಬವೇಕೇ? ಈ ಬಾರಿಯ ಅಧಿವೇಶನ ಮುಗಿಯುವುದರೊಳಗೆ ಉತ್ತರ ನೀಡಿ’ ಎಂದು ಆಗ್ರಹಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಉಮಾಶ್ರೀ, ‘ನೀವು ಕೇಳಿದ ಪ್ರಶ್ನೆಗೆ ಉತ್ತರಿಸಲು ಕಾಲಾವಕಾಶ ಬೇಕು’ ಎಂದರು.

ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ವಿ.ಎಸ್‌.ಉಗ್ರಪ್ಪ, ‘ಉತ್ತರ ಒದಗಿಸಬೇಕಾದವರು ಅಧಿಕಾರಿಗಳು. ಸರಿಯಾಗಿ ಉತ್ತರ ಒದಗಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಈ ಸಂಬಂಧದ ನಿಯಮಾವಳಿಗೆ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿದರು.  ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಅವರು, ‘ಉತ್ತರ ಒದಗಿಸದ ಅಧಿಕಾರಿಗಳಿಗೆ ದಂಡ ವಿಧಿಸಿ. ಆಗ ಎಲ್ಲವೂ ಕ್ರಮಬದ್ಧವಾಗಿ ನಡೆಯುತ್ತದೆ’ ಎಂದು ಸಲಹೆ ನೀಡಿದರು.

‘ಉತ್ತರ ನೀಡದ ಮಂತ್ರಿಗಳು ಸದನದ ಎಲ್ಲಾ ಸದಸ್ಯರಿಗೆ ಊಟ ಹಾಕಿಸಬೇಕು’ ಎಂದು ಬಿಜೆಪಿಯ ಗಣೇಶ್‌ ಕಾರ್ಣಿಕ್‌ ಹೇಳಿದರು. ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ‘ಹಾಗಾದರೆ ದಿನವೂ ಊಟ ಹಾಕಿಸುತ್ತಾರೆ. ನಾಳೆಗೂ ಕಾಯ್ದಿರಿಸುತ್ತಾರೆ’ ಎಂದಾಗ ಸದನದಲ್ಲಿ ನಗುವಿನ ಅಲೆ ಎದ್ದಿತು.

ಇದಕ್ಕೆ ಸ್ಪಷ್ಟನೆ ನೀಡಿದ ಸಭಾನಾಯಕ ಎಸ್‌.ಆರ್‌.ಪಾಟೀಲ, ‘ಪ್ರಶ್ನೆಗಳ ಜತೆ ಉಪಪ್ರಶ್ನೆಗಳಿರುತ್ತವೆ. ಪಟ್ಟಿ ಮಾಡಲು ಸಮಯಾವಕಾಶ ಬೇಕಾಗುತ್ತದೆ. ಎಲ್ಲದಕ್ಕೂ ಸರ್ಕಾರ ಉತ್ತರಿಸಲೇಬೇಕು. ಮುಂದೆ ಲೋಪವಾಗದಂತೆ ನೋಡಿಕೊಳ್ಳುತ್ತೇವೆ’ ಎಂದರು.

ಉತ್ತರ ಒದಗಿಸದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಚಾಟಿ ಬೀಸಿ.  ಇಲ್ಲದಿದ್ದರೆ ನಾವು ಪ್ರಶ್ನೆ ಕೇಳುತ್ತಲೇ ಇರಬೇಕಾಗುತ್ತದೆ. ಉತ್ತರ ಮಾತ್ರ ಬರುವುದಿಲ್ಲ.
- ಕೆ.ಎಸ್‌. ಈಶ್ವರಪ್ಪ, ಮೇಲ್ಮನೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT