ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಊಟಿ’ಯಲ್ಲಿ ಕಾವು!

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ತೊಂಬತ್ತರ ದಶಕದ ಕಾವೇರಿ ಗಲಭೆ ಹಿನ್ನೆಲೆಯ ಘಟನಾವಳಿಗಳನ್ನು ಒಳಗೊಂಡ ಕೃಷ್ಣಮೂರ್ತಿ ಚಮರಂ ಅವರ ‘ಪ್ರೀತಿಯ ಅರಸಿ’ ಕಾದಂಬರಿ ‘ಊಟಿ’ ಹೆಸರಿನಲ್ಲಿ ಸಿನಿಮಾ ಆಗಿದೆ. ಇಂದು (ಏ. 29) ತೆರೆ ಕಾಣುತ್ತಿರುವ ಚಿತ್ರದ ಕುರಿತು ನಾಯಕ ಅವಿನಾಶ್ ನರಸಿಂಹ ರಾಜು ‘ಚಂದನವನ’ದೊಂದಿಗೆ ಮಾತನಾಡಿದ್ದಾರೆ.

* ‘ಚಕ್ರವ್ಯೂಹ’ ಚಿತ್ರದ ಕಾರಣ ‘ಊಟಿ’ ತೆರೆಗೆ ಬರುವುದು ಮುಂದಕ್ಕೆ ಹೋಗುತ್ತದೆ ಎನ್ನುವ ಸುದ್ದಿ ಇತ್ತು?
ನಿರ್ಮಾಪಕರು ವಿಚಿತ್ರ ನಿರ್ಧಾರ ಮಾಡಿದ್ದಾರೆ. ನಾನು ಬೇರೆ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದೇನೆ. ‘ಊಟಿ’ಯ ಪ್ರಚಾರಕ್ಕೆ ಸಿದ್ಧವಾಗಿಯೇ ಇಲ್ಲ. ನನಗೆ ಚಿತ್ರತಂಡದವರು ಫೋನ್ ಮಾಡಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.

* ‘ಊಟಿ’ ಕಾದಂಬರಿ ಆಧಾರಿತ ಸಿನಿಮಾ. ನಿಮಗೆ ಕೃತಿ ಇಷ್ಟವಾಗಲು ಕಾರಣ?
ಊಟಿ ಅಂದಾಕ್ಷಣ ನಮ್ಮ ಕಣ್ಣೆದುರು ಬರುವ ಪ್ರವಾಸಿ ತಾಣದ ಪರಿಕಲ್ಪನೆಯನ್ನು ಸಿನಿಮಾ ಬದಲಿಸುತ್ತದೆ. ಈ ಚಿತ್ರದಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಮೂರು ರಾಜ್ಯಗಳು ಬರುತ್ತದೆ. ಇದು 1991ರಲ್ಲಿ ನಡೆದ ನೈಜ ಘಟನೆ. ನಾಯಕ ಕರ್ನಾಟಕದವನು, ನಾಯಕಿ ಕೇರಳದವಳು. ಘಟನೆ ನಡೆಯುವುದು ತಮಿಳುನಾಡಿನಲ್ಲಿ. ಕಾವೇರಿ ಗಲಭೆ ಪ್ರೇಮಿಗಳ ಮೇಲೆ ಯಾವ ಬಗೆಯ ಪರಿಣಾಮ ಬೀರುತ್ತದೆ? ಅವರಿಗೆ ಸೋಲಾಗುತ್ತದೆಯೋ, ಪ್ರೀತಿ ಗೆಲ್ಲುತ್ತದೆಯೋ ಎನ್ನುವುದು ಚಿತ್ರದ ಪ್ರಮುಖ ಅಂಶ. 1990ರ ದಶಕವನ್ನು ಯಾವ ರೀತಿ ಚಿತ್ರದಲ್ಲಿ ಕಟ್ಟಿಕೊಡುತ್ತಾರೆ ಎನ್ನುವುದು ನನ್ನಲ್ಲಿ ಕುತೂಹಲ ಮೂಡಿಸಿತ್ತು.

* ಚಿತ್ರದಲ್ಲಿ ನಿಮ್ಮ ಪಾತ್ರ ಯಾವ ಬಗೆಯದು?
‘ಲಾಸ್ಟ್ ಬಸ್‌’ ಚಿತ್ರಕ್ಕೂ ಮುನ್ನವೇ ನಾನು ಈ ಚಿತ್ರದ ಪಾತ್ರ ನಿರ್ವಹಿಸಿದ್ದೆ.  ಸಿನಿಮಾ ನೋಡಿದವರು ಉತ್ತಮವಾಗಿ ಬಂದಿದೆ ಎಂದು ಹೇಳುತ್ತಿದ್ದಾರೆ. ಎಲ್ಲರಿಗೂ ಹತ್ತಿರವಾಗುವ ಸಾಮಾನ್ಯ ಮನುಷ್ಯನ ಪಾತ್ರ ನನ್ನದು. ಪಾತ್ರ ಸರಳವಾಗಿದೆ. ನನ್ನ ನಟನೆಯ ವಿಷಯವಾಗಿ ಜನರು ಮಾತನಾಡಬೇಕು. 
ಚಿತ್ರ ಚೆನ್ನಾಗಿ ಬಂದಿದೆ. ಆದರೆ ತಾಂತ್ರಿಕವಾಗಿ ಬೇರೆಯದ್ದೇ ಹಂತಕ್ಕೆ ‘ಊಟಿ’ಯನ್ನು ಕೊಂಡೊಯ್ಯುವ ಅವಕಾಶವಂತೂ ಇದ್ದೇ ಇತ್ತು.

* ಈ ಹಿಂದೆ ಟ್ರೇಲರ್‌ನಲ್ಲಿ ಕನ್ನಡಿಗರನ್ನು ಅವಮಾನಿಸಲಾಗಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಚಿತ್ರದಲ್ಲಿ ವಿವಾದದ ಅಂಶಗಳು ಇದೆಯೇ?
ವಿವಾದದ ಅಂಶಗಳೇನೂ ಇಲ್ಲ. ಕಾವೇರಿ ಗಲಭೆ ಹಿನ್ನೆಲೆಯಲ್ಲಿ ಒಂದು ಪ್ರೇಮ ಪ್ರಸಂಗವಿದೆ.

* ನಿಮಗೆ ಚಿತ್ರದಿಂದ ಚಿತ್ರಕ್ಕೆ ಉತ್ತಮ ಪಾತ್ರಗಳು ಸಿಕ್ಕುತ್ತಿವೆ. ಆದರೆ ನಿಮ್ಮ ಸಿನಿಮಾ ಗ್ರಾಫ್ ಏಕೆ ಏರುಮುಖ ಆಗುತ್ತಿಲ್ಲ?
ನನಗೆ ಸಿನಿಮಾ ಗೆಲ್ಲುತ್ತದೆಯೋ ಸೋಲುತ್ತದೆಯೋ ಎನ್ನುವುದು ಒಂದು ಕಡೆಗೆ. ನನ್ನ ವೃತ್ತಿ ಬದುಕು ಮತ್ತು ಮನೆತನ ಇನ್ನೊಂದು ಕಡೆಗೆ. ಎರಡರ ನಡುವೆ ಸಮತೋಲನ ನನಗೆ ಮುಖ್ಯ. ಯಾವುದೇ ರೀತಿಯ ಕೆಟ್ಟ ಹೆಸರು ಬರಬಾರದು ಎನ್ನುವುದು ನನ್ನ ಯೋಚನೆ. ಹಾಗಾಗಿ ಅವಕಾಶಗಳ ಬಗ್ಗೆ ಹೆಚ್ಚು ಎಚ್ಚರದಿಂದಿರುವೆ.

* ‘ಕಳವು’, ‘ಈ ದಿಲ್ ಹೇಳಿದೆ ನೀ ಬೇಕಂತ’, ‘ಲಾಸ್ಟ್‌ ಬಸ್‌’– ಹೀಗೆ ಭಿನ್ನ ಕಥೆಯ ಚಿತ್ರಗಳನ್ನು ಮಾಡಿದ್ದೀರಿ. ಆದರೆ ನಿಮ್ಮ ಚಿತ್ರಗಳು ಕಥೆಯಲ್ಲಿ ಉತ್ತಮ ಎನಿಸಿದರೂ ಪ್ರಚಾರದ ವಿಷಯದಲ್ಲಿ ಹಿಂದೆ ಬಿದ್ದಿವೆ ಎನ್ನಿಸುತ್ತದೆ.
ಹೌದು, ಇದನ್ನು ದುರದೃಷ್ಟ ಎಂದು ಹೇಳಬೇಕು. ನನಗಷ್ಟೇ ಅಲ್ಲ, ಈ ರೀತಿಯ ಅನುಭವ ಬಹಳ ಜನರಿಗೆ ಆಗಿದೆ. ನಾನು ಮತ್ತು ಅಣ್ಣ ಅರವಿಂದ್ ‘ಲಾಸ್ಟ್ ಬಸ್‌’ ಸಿನಿಮಾವನ್ನು ಸಾಧ್ಯವಾದಷ್ಟು ಪ್ರಮೋಟ್ ಮಾಡಿದೆವು. ಈ ಪ್ರಯತ್ನ ಇನ್ನು ಕೆಲವು ಸಿನಿಮಾಗಳಲ್ಲಿ ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಚಿತ್ರ ಮಾಡುವಾಗ ಪ್ರತಿ ಹಂತದಲ್ಲೂ ಹೆಚ್ಚು ಭಾಗಿಯಾಗಬೇಕು ಎಂದುಕೊಂಡಿದ್ದೇನೆ. ತುಂಬಾ ತಾಳ್ಮೆಯಿಂದ ಸಿನಿಮಾ ಮಾಡಬೇಕಿದೆ.

* ‘ಲಾಸ್ಟ್‌ ಬಸ್‌’ ಫ್ರೆಂಚ್‌ ಭಾಷೆಗೆ ಡಬ್ ಆಗುವ ವಿಷಯ ಎಲ್ಲಿಗೆ ಬಂದಿತು?
ಚಿತ್ರದ ಮೊದಲಾರ್ಧ ಡಬ್ ಆಗಿದೆ. ಉಳಿದ ಭಾಗ ಬಾಕಿ ಇದೆ.

* ನಿಮ್ಮ ಮುಂದಿನ ಚಿತ್ರಗಳು?
‘ರಾಜತಿಲಕ’ ಚಿತ್ರೀಕರಣ ಆರಂಭವಾಗಿದೆ. ತಮಿಳು ಮತ್ತು ಕನ್ನಡದಲ್ಲಿ ಒಂದು ಸಿನಿಮಾ ಮಾಡುತ್ತಿದ್ದೇನೆ. ಕಥೆ–ಚಿತ್ರಕಥೆ ಕೇಳಿದ್ದೇನೆ. ಇದು ಭಾವುಕ, ಕೌಟುಂಬಿಕ ಮತ್ತು ಸಾಹಸ ಪ್ರಧಾನ ಚಿತ್ರ.

* ‘ಕಳವು’ ಬ್ರಿಡ್ಜ್ ರೀತಿಯ ಚಿತ್ರ. ಈ ಚಿತ್ರದ ತರುವಾಯ ಇಂಥ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ? 
ಆ ರೀತಿ ಪಾತ್ರಗಳು ಸಿಕ್ಕಿಲ್ಲ. ಕಾರಣವೂ ಗೊತ್ತಿಲ್ಲ. ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವೆ. ಭವಿಷ್ಯದಲ್ಲಿ ಸಿದ್ಧಸೂತ್ರಗಳ ಸಿನಿಮಾಗಳಿಗೆ ಖಂಡಿತ ಕಷ್ಟದ ಸ್ಥಿತಿ ಇದೆ.  

* ನೀವು ಮತ್ತು ನಿಮ್ಮ ಸಹೋದರ ಅರವಿಂದ್ ಪುನಃ ಒಗ್ಗೂಡಿ ಸಿನಿಮಾ ಮಾಡುವ ಆಲೋಚನೆ ಇದೆಯೇ?
2017 ಇಲ್ಲವೇ 2018ರಲ್ಲಿ ಮತ್ತೆ ನಾವಿಬ್ಬರೂ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT