ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲೋ ಹುಡುಕಿದೆ ಇಲ್ಲದ ದೇವರ’

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ದೇವರು ಇದ್ದಾನೋ, ಇಲ್ಲವೋ ಎಂಬ ಪ್ರಶ್ನೆ ಸದಾ ಅನೇಕರನ್ನು ಕಾಡುತ್ತಿರುತ್ತದೆ. ದೇವರನ್ನು ಹುಡುಕಿಕೊಂಡು ಹೋದವರು ಅನೇಕರಿದ್ದಾರೆ. ಕೊನೆಗೆ ಏನೋ ಒಂದು ಶಕ್ತಿ ಇದೆ, ಅದು ಈ ಜಗತ್ತನ್ನು ಕಾಪಾಡುತ್ತಿದೆ ಎಂದು ನಮ್ಮ ಮನಸ್ಸಿಗೆ ಸಮಾಧಾನ ಹೇಳಿಕೊಂಡು ಸುಮ್ಮನಾಗುತ್ತೇವೆ. ಓದು, ಕೈಯಲ್ಲೊಂದು ಕೆಲಸ, ಸಾಕಷ್ಟು ಹಣ ಇವೆಲ್ಲ ಇದ್ದೂ ದೇವರ ಇರುವಿಕೆಯನ್ನು ಹುಡುಕಲು ಹೊರಟಿದ್ದು ಓಂ ಸ್ವಾಮಿ. ದೇವರನ್ನು ಹುಡುಕುತ್ತ ಹೊರಟ ಅವರ ಜೀವನ ಪಯಣ ತುಂಬ ದೊಡ್ಡದಿದೆ. 

ಹಲವಾರು ತಿಂಗಳುಗಳನ್ನು ಅವರು ಹಿಮಾಲಯ, ಗುಹೆಯಲ್ಲಿ ಕಳೆದರು. ತಮ್ಮ ಜೀವನದ ಅನುಭವಗಳನ್ನು ಆಧರಿಸಿ ಅವರು ‘If Truth Be Told: A Monk’s Memoir’ ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬರೆದ ಉದ್ದೇಶ ಮತ್ತು ಸಾಗಿದ ಹಾದಿಯ ಕುರಿತು ‘ಮೆಟ್ರೊ’ದೊಂದಿಗೆ ಅವರು ಮಾತು ಹಂಚಿಕೊಂಡರು.

ಮಲ್ಟಿಮಿಲಿಯನೇರ್‌ನಿಂದ ಸ್ವಾಮೀಜಿ ಆಗುವವರೆಗಿನ ನಿಮ್ಮ ಪಯಣ ಹೇಗಿತ್ತು?
ನನ್ನೂರು ಪಂಜಾಬ್. ಹತ್ತು ವರ್ಷ ಹುಡುಗನಾಗಿನಿಂದ ವೇದಾಭ್ಯಾಸ ಮಾಡುತ್ತಿದ್ದೆ. ಅಧ್ಯಾತ್ಮದ ಬಗ್ಗೆ ತುಂಬಾ ಒಲವಿತ್ತು. ಇವೆಲ್ಲದರ ಜತೆಗೆ ಜೀವನದಲ್ಲಿ ಸದಾ  ಬ್ಯುಸಿಯಾಗಿರಬೇಕು ಎಂಬ ತುಡಿತವಿತ್ತು. ಬ್ಯುಸಿಯಾಗಿರುವುದೇ ಜೀವನದ ದೊಡ್ಡ ಸವಾಲು ಎಂದುಕೊಂಡಿದ್ದೆ. 18ನೇ ವರ್ಷಕ್ಕೆ ಆಸ್ಟ್ರೇಲಿಯಾಕ್ಕೆ ಹೋದೆ. ಅಲ್ಲಿ ಎಂಬಿಎ ಪದವಿ ಮುಗಿಸಿದೆ.

ಹಣ ಮಾಡುವುದು, ಬ್ಯುಸಿನೆಸ್ ವಿಸ್ತರಿಸುವುದು ಯಾವುದೂ ನನಗೆ ತೃಪ್ತಿ ನೀಡಲಿಲ್ಲ. ಎಲ್ಲರೂ ದೇವರು ಇದ್ದಾನೆ ಎಂದು ಹೇಳುತ್ತಿದ್ದರು. ‘ಜನ ಯಾಕೆ ದೇವರನ್ನು ಹುಡುಕುತ್ತ ಸುಮ್ಮನೇ ಸಮಯ ಕಳೆಯುತ್ತಿದ್ದಾರೆ? ಇದ್ದರೆ ಅವನು ಕಣ್ಣಮುಂದೆ ಕಾಣಿಸಿಕೊಳ್ಳಬೇಕು ಅಲ್ಲವೇ?’ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತ, ನಾನೂ ದೇವರನ್ನು ಹುಡುಕಲು ಶುರುಮಾಡಿದೆ. ದೇವರು ಎಂಬ ಶಕ್ತಿ ಇರುವುದಾದರೆ ನನ್ನ ಕಣ್ಣಮುಂದೆ ಬರಲಿ ಎಂದು ಕಾದೆ. ದೇವರ ಕುರಿತು ಸಾಕಷ್ಟು ಪುಸ್ತಕಗಳನ್ನು ಓದಿದೆ. ಈ ಹಾದಿಯಲ್ಲಿ ನನ್ನನ್ನೇ ನಾನು ಕಂಡುಕೊಂಡೆ.

ನಿಮ್ಮ ಪುಸ್ತಕದ ಕುರಿತು ಹೇಳಿ. ಈ ಪುಸ್ತಕ ಬರೆಯಲು ಕಾರಣವೇನು?
ಪ್ರತಿಯೊಬ್ಬ ಮನುಷ್ಯನಲ್ಲಿ ಶಕ್ತಿ ಇದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದು ಅವರವರ ಕೈಯಲ್ಲಿಯೇ ಇದೆ. ಇದಕ್ಕಾಗಿ ಯಾವುದೇ ಗುಹೆಯೊಳಗೋ, ಹಿಮಾಲಯದಲ್ಲೋ ಕುಳಿತು ತಪಸ್ಸು ಮಾಡಬೇಕಾಗಿಲ್ಲ. ಭೂಮಿ, ನಕ್ಷತ್ರಗಳು ಇವೆಲ್ಲ ಸಾವಿರಾರು ವರ್ಷ ಬದುಕುತ್ತವೆ. ಆದರೆ ಮನುಷ್ಯನ ಜೀವಿತಾವಧಿ ಹೆಚ್ಚೆಂದರೆ ಈಗ 75ರಿಂದ 80 ವರ್ಷ.  ಈ ಕ್ಷಣ ನನ್ನದು ಎಂದು ಪ್ರತಿಕ್ಷಣವನ್ನು ಪ್ರೀತಿಸಿ, ಅದನ್ನು ಅನುಭವಿಸಿ. ನೀವು ಮನಸಾರೆ ನಗಿ, ಇನ್ನೊಬ್ಬರ ಮುಖದಲ್ಲೂ ನಗು ತರಲು ಪ್ರಯತ್ನಿಸಿ. ಈ ಜೀವನ ಚಿಕ್ಕದು. ಅರಿತು ಬಾಳಬೇಕು ಎಂಬುದನ್ನು ತಿಳಿಸಿ ಹೇಳುವ ಪ್ರಯತ್ನದ ರೂಪವೇ ಈ ಪುಸ್ತಕ.

ಈ ಪುಸ್ತಕ ಬರೆಯಲು ನಿಮಗೆ ಸ್ಫೂರ್ತಿ ನೀಡಿದ ಅಂಶ ಯಾವುದು? ತಯಾರಿ ಹೇಗಿತ್ತು?
ಇದು ನನ್ನ ಮೊದಲ ಪುಸ್ತಕ. ‘ನಿಮ್ಮ ಜೀವನದ ಬಗ್ಗೆ ಸ್ವಲ್ಪ ಹೇಳಿ, ನಾನು ತಿಳಿದುಕೊಳ್ಳಬೇಕು’ ಎಂದು ವ್ಯಕ್ತಿಯೊಬ್ಬರು ಬಂದು ಕೇಳಿದರು. ಅವರಿಗೆ ಉತ್ತರವನ್ನು ಹೇಳಲು ಸಾಧ್ಯವಿರಲಿಲ್ಲ. ‘ನನಗೆ ಎರಡು ವರ್ಷ ಸಮಯ ಕೊಡಿ, ಬರೆಯುತ್ತೇನೆ’ ಎಂದೆ. ಎರಡು ವರ್ಷವಾಯಿತು. ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕಾಗಿ ನಾನು ಈ ಪುಸ್ತಕ ಬರೆದೆ. ಇದನ್ನು ಬರೆಯಲು ಹತ್ತು ದಿನ ತೆಗೆದುಕೊಂಡೆ. ಇದಕ್ಕೆ ಯಾವುದೇ ಪೂರ್ವ ತಯಾರಿ ಬೇಕಿರಲಿಲ್ಲ. ನಾನು ನಡೆದುಬಂದ ಹೆಜ್ಜೆಯ ಗುರುತನ್ನು ಹೇಳುವುದಕ್ಕೆ ತಯಾರಿ ಯಾಕೆ ಬೇಕು?

ಈ ಶೀರ್ಷಿಕೆ ಹಿಂದಿನ ಅರ್ಥವೇನು?
ಸತ್ಯವೊಂದೇ ಇದರ ಅರ್ಥ. ನನ್ನ ಜೀವನ ಹೇಗಿದೆಯೋ ಅದನ್ನು ಈ ಪುಸ್ತಕದಲ್ಲಿ ಬರೆದಿದ್ದೇನೆ. ಸುಳ್ಳು ನನಗೆ ಇಷ್ಟವಿಲ್ಲ. ಹಣ ಮಾಡುವುದು, ಆಶ್ರಮ ಕಟ್ಟುವುದು ಇದೆಲ್ಲಾ ಉದ್ದೇಶವಲ್ಲ. ಈ ಪುಸ್ತಕ ಆತ್ಮಚರಿತ್ರೆಯಲ್ಲ. ಯಾವುದೇ  ಕತೆಗಳಿಂದಲೂ ಕೂಡಿಲ್ಲ. ಜನರನ್ನು ಸೆಳೆಯುವುದು ನನ್ನ ಉದ್ದೇಶವಲ್ಲ. ಅದಕ್ಕಾಗಿ ಈ ಹೆಸರಿಟ್ಟಿದ್ದು.

ನಿಮ್ಮ ಮಾನಸಿಕ ಮತ್ತು ದೈಹಿಕ ಫಿಟ್‌ನೆಸ್‌ನ ಹಿಂದಿರುವ ಗುಟ್ಟೇನು?
ಸತ್ಯ ಹೇಳುತ್ತೇನೆ. ಸುಳ್ಳು ಹೇಳಿದಾಗ ಅದು ಕಾಡುತ್ತಾ ಇರುತ್ತದೆ. ನಮ್ಮ ನೆಮ್ಮದಿಯನ್ನು ನಾವು ಹೇಳುವ ಸುಳ್ಳೇ ಹಾಳುಮಾಡುತ್ತದೆ. ಯಾರ ಬಗ್ಗೆಯೂ ನನಗೆ ನಕಾರಾತ್ಮಕ ಯೋಚನೆ ಇಲ್ಲ. ಇನ್ನೊಬ್ಬರ ಬಗ್ಗೆ ಹೊಟ್ಟೆಕಿಚ್ಚು ಪಡುವುದಿಲ್ಲ. ನನಗೆ ಯಾರೂ ಆತ್ಮೀಯರೂ ಇಲ್ಲ. ಯಾರನ್ನೂ ನಾನು ದ್ವೇಷಿಸುವುದಿಲ್ಲ. ಇದರಿಂದ ಮಾನಸಿಕವಾಗಿ ನೆಮ್ಮದಿಯಾಗಿದ್ದೇನೆ.

ನಾನು ನಿಧಾನವಾಗಿ ತಿನ್ನುತ್ತೇನೆ. ಬೇಗ ಬೇಗ ತಿಂದರೆ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಆರೋಗ್ಯ ಹದಗೆಡುತ್ತದೆ. ತುಂಬ ಧ್ಯಾನ ಮಾಡುತ್ತೇನೆ. ಇದು ಮನಸ್ಸು, ದೇಹ ಎರಡನ್ನೂ ಸ್ವಸ್ಥವಾಗಿರಿಸುತ್ತದೆ.

ನೀವು ಸ್ವಾಮೀಜಿ ಆಗುವುದಕ್ಕೆ ಕಾರಣವೇನು?
ಮದುವೆ–ಮಕ್ಕಳು ಇವು ಯಾವುವೂ ನನಗೆ ಇಷ್ಟವಿಲ್ಲ. ಇದೆಲ್ಲ ತಪ್ಪು ಎಂದು ನಾನು ಹೇಳುವುದಿಲ್ಲ. ದೇವರು ಇದ್ದಾನೆ, ನಾನು ನೋಡಿದ್ದೇನೆ ಎಂದು ನನಗೆ ಈವರೆಗೂ ಯಾರೂ ಹೇಳಿರಲಿಲ್ಲ. ನನ್ನ ಗುರು ನೋಡಿದ್ದಾರೆ, ಇನ್ಯಾರೋ ನೋಡಿದ್ದಾರೆ ಎಂದು ಹೇಳುತ್ತಾರೆ. ದೇವರ ಹುಡುಕಾಟದಲ್ಲಿ ನಾನಿದ್ದೇನೆ.

ಧ್ಯಾನ ಇಂದಿನ ಜೀವನ ಶೈಲಿಗೆ ಎಷ್ಟು ಅಗತ್ಯ?
ಇಂದಿನ ಒತ್ತಡದ ಬದುಕಿಗೆ ಧ್ಯಾನ ತುಂಬ ಅಗತ್ಯ. ಇದು ನೆಮ್ಮದಿಯ ಬದುಕಿಗೆ ಅಗತ್ಯ. ಭಾವೋದ್ವೇಗವನ್ನು ಕಡಿಮೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT