ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐರಾವತ’ ಏರಿ ಬಂದ ಊರ್ವಶಿ

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ದರ್ಶನ್ ನಾಯಕರಾಗಿರುವ ‘ಐರಾವತ’ ಚಿತ್ರದ ನಾಯಕಿ ಪಾತ್ರಕ್ಕೆ 60ಕ್ಕೂ ಹೆಚ್ಚು ನಟಿಯರ ಆಡಿಷನ್‌ ನಡೆಸಿದ್ದರು ನಿರ್ದೇಶಕ ಎ.ಪಿ. ಅರ್ಜುನ್. ತುಂಬಾ ತೆಳ್ಳಗಿದ್ದಾರೆ ಎಂಬ ಕಾರಣಕ್ಕೆ ಎರಿಕಾ ಫರ್ನಾಂಡಿಸ್‌ ಚಿತ್ರತಂಡದಲ್ಲಿ ಉಳಿದುಕೊಳ್ಳಲಿಲ್ಲ. ಸತತ ಹುಡುಕಾಟದ ಬಳಿಕ ಕಂಡವರು ಬಾಲಿವುಡ್‌ ನಟಿ ಊರ್ವಶಿ ರೌತೇಲಾ. ಪಾತ್ರಕ್ಕೆ ಸೂಕ್ತವಾದ ಚಹರೆ, ಅಭಿನಯ ಅವರಲ್ಲಿ ಕಂಡ ಅರ್ಜುನ್‌, ಅವರನ್ನು ಆಯ್ಕೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲವಂತೆ.

ತಮ್ಮ ಎರಡನೇ ಚಿತ್ರಕ್ಕಾಗಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಮೊದಲ ಬಾರಿಗೆ ಕಾಲಿರಿಸಿರುವ ಊರ್ವಶಿ ‘ಐರಾವತ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ದಕ್ಷಿಣ ಭಾರತಕ್ಕೆ ಕಾಲಿಡಲು ಇದಕ್ಕಿಂತ ಒಳ್ಳೆ ಅವಕಾಶ ಸಿಗಲಾರದು ಎಂಬ ಭಾವನೆ ಅವರದು. ಕನ್ನಡ ಚಿತ್ರರಂಗದ ಬಗ್ಗೆ ಏನೂ ತಿಳಿದಿರದಿದ್ದರೂ ದರ್ಶನ್‌ ಬಗ್ಗೆ ಕೇಳಿದ್ದರಂತೆ.

ಇಲ್ಲಿನ ‘ಸ್ಟಾರ್‌’ ನಟರ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿದೆ ಎನ್ನುವ ಅವರಿಗೆ, ಇಲ್ಲಿನ ಚಿತ್ರರಂಗದ ಕುರಿತು ತಿಳಿದಿರುವ ಮತ್ತೊಂದು ಸಂಗತಿ– ದೀಪಿಕಾ ಪಡುಕೋಣೆ ಅವರ ಮೊದಲ ಚಿತ್ರ ಕನ್ನಡದ ‘ಐಶ್ವರ್ಯ’ ಎನ್ನುವುದು. ತಮ್ಮದು ‘ಗ್ರೇಟ್‌ ಡೆಬ್ಯುಟ್‌’ ಎಂದವರು ಹೇಳಿಕೊಳ್ಳುತ್ತಾರೆ. ಸಹ ನಟ ದರ್ಶನ್‌ ಕುರಿತು ಮೆಚ್ಚುಗೆ ಮಾತುಗಳನ್ನಾಡುತ್ತಾರೆ. ದರ್ಶನ್‌ ವಿನೀತ ಸ್ವಭಾವದ ಉತ್ತಮ ಮಾನವೀಯ ವ್ಯಕ್ತಿ ಎನ್ನುವ ಅವರಿಗೆ ‘ಐರಾವತ’ದ ವಾತಾವರಣ ಒಳ್ಳೆಯ ಅನುಭವ ನೀಡಿದೆ.

ಉತ್ತರಾಖಂಡದವರಾದ ಊರ್ವಶಿ, ಮೂಲತಃ ರೂಪದರ್ಶಿ. ಮಿಗಿಲಾಗಿ ಕಿರೀಟಗಳ ಬೆಡಗಿ. ಹೈಸ್ಕೂಲು ದಿನಗಳಿಂದಲೇ ಸಾಲು ಸಾಲು ಸೌಂದರ್ಯ ಸ್ಪರ್ಧೆಗಳಲ್ಲಿ ಕಿರೀಟಗಳನ್ನು ಮುಡಿಗೇರಿಸಿಕೊಂಡು ಓದಿಗೆ ತಿಲಾಂಜಲಿ ಇಟ್ಟು ಬಣ್ಣದ ಲೋಕವನ್ನೇ ಅಪ್ಪಿಕೊಂಡರು. ‘ಮಿಸ್‌ ಯೂನಿವರ್ಸ್‌ ಇಂಡಿಯಾ 2012’, ‘ಮಿಸ್ ಟೂರಿಸಂ ಕ್ವೀನ್‌ ಆಫ್‌ ದಿ ಇಯರ್‌ ಇಂಟರ್‌ನ್ಯಾಷನಲ್‌ 2011’, ‘ಏಷ್ಯನ್‌ ಸೂಪರ್ ಮಾಡೆಲ್‌ 2011’, ‘ಮಿಸ್‌ ಟೀನ್‌ ಇಂಡಿಯಾ 2009’ ಹೀಗೆ ಹಲವು ಮುಕುಟಗಳನ್ನು ಮುಡಿಗೇರಿಸಿಕೊಂಡ ಅವರು, ಅತಿ ಹೆಚ್ಚು ಸೌಂದರ್ಯ ಕಿರೀಟಗಳನ್ನು ಗೆದ್ದ ಸುಂದರಿಯರ ಸಾಲಿನಲ್ಲಿ ಗುರ್ತಿಸಿಕೊಂಡಿದ್ದಾರೆ.

ನ್ಯೂಯಾರ್ಕ್‌ ಫಿಲ್ಮ್‌ ಅಕಾಡೆಮಿ ಸ್ಕೂಲ್‌ನಲ್ಲಿ ಅಭಿನಯ ತರಬೇತಿ ಪಡೆದು ಸಿನಿಮಾ ರಂಗಕ್ಕೆ ಕಾಲಿಡಲು ತಯಾರಾದ ಅವರಿಗೆ ಬಾಲಿವುಡ್‌ ಬಾಗಿಲು ತೆರೆದಿದ್ದು ‘ಸಿಂಗ್‌ ಸಾಬ್‌ ದಿ ಗ್ರೇಟ್‌’ ಚಿತ್ರದ ಮೂಲಕ. 19ರ ಹರೆಯದ ಊರ್ವಶಿ 57 ವರ್ಷದ ಸನ್ನಿ ದೇವಲ್‌ಗೆ ಜೋಡಿಯಾಗಿದ್ದರು. ವಯಸ್ಸಿನ ಅಂತರದ ಬಗ್ಗೆ ಬಾಲಿವುಡ್‌ನಲ್ಲಿ ಭಾರಿ ಚರ್ಚೆಗಳೂ ನಡೆದಿದ್ದವು. ಚಿತ್ರ ಮುಖ್ಯವಷ್ಟೇ ಹೊರತು ವಯಸ್ಸು ಮುಖ್ಯ ಅಲ್ಲವೇ ಅಲ್ಲ ಎನ್ನುವುದು ಊರ್ವಶಿ ಲೆಕ್ಕಾಚಾರ. ತಮ್ಮ ಕುಟುಂಬದವರೆಲ್ಲರೂ ಸನ್ನಿ ದೇವಲ್‌ ಅವರ ಅಭಿಮಾನಿಗಳು.

ಪ್ರಕಾಶ್‌ ರೈ ಸಹ ಆ ಚಿತ್ರದಲ್ಲಿ ನಟಿಸಿದ್ದರು. ಆನಂದ್‌ ಶರ್ಮಾರಂಥ ಯಶಸ್ವಿ ನಿರ್ದೇಶಕರ ಚಿತ್ರವದು. ಇಷ್ಟೆಲ್ಲಾ ಸಕಾರಾತ್ಮಕ ಅಂಶಗಳಿರುವಾಗ ನಾಯಕನ ವಯಸ್ಸು ದೊಡ್ಡ ವಿಷಯವೇ ಅಲ್ಲ ಎನ್ನುತ್ತಾರೆ ಅವರು. ‘ರಜನಿಕಾಂತ್ ಜತೆ ಐಶ್ವರ್ಯಾ ರೈ, ದೀಪಿಕಾ ಪಡುಕೋಣೆಯಂಥ ಚಿಕ್ಕ ವಯಸ್ಸಿನ ನಟಿಯರು ಅಭಿನಯಿಸಿಲ್ಲವೇ?’ ಎಂದು ಕೇಳುತ್ತಾರೆ ಊರ್ವಶಿ. ಖ್ಯಾತ ಗಾಯಕ ‘ಯೋ ಯೋ ಹನಿಸಿಂಗ್‌’ರ ‘ಲವ್‌ ಡವ್‌’ ಎಂಬ ಮ್ಯೂಸಿಕ್ ಆಲ್ಬಮ್‌ನಲ್ಲಿಯೂ ಊರ್ವಶಿ ಕಾಣಿಸಿಕೊಂಡಿದ್ದಾರೆ. ಸೂರ್ಯ ನಾಯಕರಾಗಿರುವ ತಮಿಳು ಚಿತ್ರವೊಂದರಲ್ಲಿಯೂ ಅವಕಾಶ ಬಂದಿದೆಯಂತೆ.

ಊರ್ವಶಿ ಬಹುನೃತ್ಯ ಪ್ರವೀಣೆ ಕೂಡ. ಅವರು ಕಲಿತಿರುವುದು ಒಟ್ಟು ಏಳು ಪ್ರಕಾರದ ನೃತ್ಯಗಳನ್ನು. ಅಮ್ಮನೂ ನೃತ್ಯಪಟು. ಅಮ್ಮನ ಗರಡಿಯಲ್ಲಿ ಮೂರನೇ ವಯಸ್ಸಿನಲ್ಲಿರುವಾಗಿನಿಂದಲೇ ನೃತ್ಯ ಅಭ್ಯಾಸ ಶುರುಮಾಡಿಕೊಂಡ ಅವರು ಭರತನಾಟ್ಯ, ಕೂಚಿಪುಡಿ, ಸಾಲ್ಸಾ ಮುಂತಾದ ಶೈಲಿಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಅವರು ರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರ್ತಿಯೂ ಹೌದು.

‘ಐರಾವತ’ ತಮ್ಮ ಪಾಲಿನ ಕಲಿಕೆಯ ಕೇಂದ್ರವೂ ಹೌದು ಎನ್ನುತ್ತಾರೆ ಊರ್ವಶಿ. ‘ನನ್ನ ಕೆಲಸದ ರೀತಿ, ನಟನೆಯನ್ನು ನಿರ್ದೇಶಕ ಅರ್ಜುನ್ ಮೆಚ್ಚಿಕೊಂಡಿದ್ದಾರೆ. ಪ್ರತಿ ಶಾಟ್‌ ಮುಗಿದಾಗಲೂ ಪ್ರೋತ್ಸಾಹ ನೀಡುತ್ತಾರೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಚಿತ್ರ ಪ್ರಾರಂಭವಾಗುವ ಮುನ್ನವೇ ಅವರಿಗೆ ಒಳ್ಳೆಯ ಸ್ವಾಗತ ಸಿಕ್ಕಿದೆಯಂತೆ. ದರ್ಶನ್‌ ಜತೆ ನಟಿಸುತ್ತಿರುವುದಾಗಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಾಗ ಬಂದ ಪ್ರಕ್ರಿಯೆಗಳು ಅವರಲ್ಲಿ ರೋಮಾಂಚನ ಮೂಡಿಸಿದೆ.

ಕನ್ನಡಕ್ಕೆ ಕಾಲಿಡುತ್ತಿದ್ದಂತೆಯೇ ತಮಿಳು ಮತ್ತು ತೆಲುಗಿನಲ್ಲಿಯೂ ಅವಕಾಶಗಳು ಬರಲಾರಂಭಿಸಿವೆ. ಅದಕ್ಕೂ ಮುನ್ನ ಹಿಂದಿಯಲ್ಲಿ ಮತ್ತೊಂದು ಚಿತ್ರಕ್ಕೆ ಅವರು ಸಹಿ ಹಾಕಿದ್ದಾರೆ. ‘ಸಿಂಗ್ ಸಾಬ್‌...’ ಚಿತ್ರ ಪೂರ್ಣಗೊಂಡು ಒಂದು ವರ್ಷವಾದರೂ ಈ ನಡುವೆ ಅವರು ಯಾವ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಅತಿ ಉತ್ತಮ ಎನಿಸುವ, ‘ಸ್ಟಾರ್‌’ ನಟರು ಇರುವಂಥ ಸಿನಿಮಾಗಳಲ್ಲಿ ಮಾತ್ರ ನಟಿಸಬೇಕು ಎಂಬ ನಿಯಮವನ್ನು ಅವರು ಅಳವಡಿಸಿಕೊಂಡಿದ್ದಾರೆ.

‘ಐರಾವತ’ ಆಯ್ದುಕೊಂಡಿರುವುದೂ ಈ ಕಾರಣಕ್ಕಾಗಿಯೇ. ‘ಐರಾವತ’ದಿಂದ ತಮ್ಮ ವೃತ್ತಿ ಬದುಕಿನ ದೆಸೆ ಬದಲಾಗುತ್ತದೆ ಎಂದು ಊರ್ವಶಿ ನಂಬಿದ್ದಾರೆ. ಬಾಲಿವುಡ್‌ ಹಾಗೂ ಇತರೆ ಭಾಷೆಯ ಚಿತ್ರರಂಗಗಳಲ್ಲಿ ಬಿಜಿಯಾಗಿದ್ದರೂ ಕನ್ನಡದಲ್ಲಿ ನಟಿಸುವುದನ್ನು ಮರೆಯುವುದಿಲ್ಲ ಎಂದೂ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT