ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಳಚರಂಡಿ ಸಮಸ್ಯೆ ಸಮರ್ಥವಾಗಿ ನಿರ್ವಹಿಸಿ’

Last Updated 15 ನವೆಂಬರ್ 2014, 5:22 IST
ಅಕ್ಷರ ಗಾತ್ರ

ಕಾರ್ಕಳ: ನಗರದ ಒಳಚರಂಡಿ ಸಮಸ್ಯೆಯನ್ನು ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸಿ ಕಾಮ­ಗಾರಿಯ ಅವಧಿಯನ್ನು ಕೂಡಾ ಮೊದಲೇ ನಿರ್ಧರಿಸಿ ಬಹಿರಂಗಪಡಿಸಬೇಕು ಎಂದು ಶಾಸಕ ವಿ.ಸುನೀಲ್ ಕುಮಾರ್ ಪುರಸಭಾ ಅಧಿಕಾರಿಗಳಿಗೆ ತಿಳಿಸಿದರು.

ಪುರಸಭಾ ಭವನದಲ್ಲಿ ಈಚೆಗೆ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪುರಸಭಾ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಒಳಚರಂಡಿ ವ್ಯವಸ್ಥೆ ಕಳೆದ ೨೫ ವರ್ಷಗಳ ಹಿಂದಿನ­ದ್ದಾಗಿದೆ. ಇದೀಗ ವ್ಯವಸ್ಥಿತ ರೀತಿಯ ಒಳಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಒಳಚರಂಡಿ ಮಂಡಳಿ ನಗರದ ೧೮ ಕಡೆಗಳಲ್ಲಿ ಟ್ರೀಟ್ಮೆಂಟ್ ಕೇಂದ್ರಗಳನ್ನು ಗುರುತಿಸಿದ್ದು ಈಗಾಗಲೇ ಸಾಕಾಷ್ಟು ಜನ ಈ ಕುರಿತು ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಇವೆಲ್ಲವುಗಳ ಪರಿಹಾರಕ್ಕಾಗಿ ಒಳಚರಂಡಿ ಮಂಡಳಿಯ ಅಧಿಕಾರಿ­ಗಳು ಪ್ರತ್ಯೇಕವಾದ ಸಭೆಯನ್ನು ಮುಂದಿನ ದಿನಗಳಲ್ಲಿ ನಡೆಸಬೇಕು. ಜತೆಗೆ ಈಗಾಗಲೇ ಗುರುತಿಸಿದ ಪ್ರದೇಶ­ಗಳನ್ನು ವೀಕ್ಷಿಸಿ ಬಳಿಕ ಒಳಚರಂಡಿಯ ಬಗ್ಗೆ ವಿವರಣೆ ನೀಡಿದ್ದಲ್ಲಿ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.

ಒಳಚರಂಡಿ ಮಂಡಳಿಯ ಅಧಿಕಾರಿ ನಟರಾಜ್ ಮಾತನಾಡಿ, ಒಳಚರಂಡಿ ಯೋಜನೆಗೆ ಸುಮಾರು ₨ ೫೫ ಕೋಟಿ ಯೋಜನೆಯನ್ನು ಸಿದ್ದಪಡಿಸಲಾಗಿದೆ. ಇದೀಗ ತೆಳ್ಳಾರು, ಜೋಗಲ್ಬೆಟ್ಟು ಮತ್ತು ಬಂಗ್ಲೆ­ಗುಡ್ಡೆಯ ಎರಡು ಕಡೆ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಸಂಸ್ಕರಣಾ ಘಟಕಗಳನ್ನು ಸಿದ್ದ­ಪಡಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಈ ಯೋಜನೆಗೆ ಸುಮಾರು ೨೦ರಿಂದ ೨೫ ಸೆಂಟ್ಸ್ ಭೂಮಿ ಅವಶ್ಯಕತೆಯಿದೆ. ಪುರಸಭೆಯು ಆ ನಿವೇಶನ­ವನ್ನು ಸೂಚಿಸಿದ್ದಲ್ಲಿ ಅಥವಾ ಭೂಸ್ವಾಧೀನಗೊಳಿಸಿ­ಕೊಟ್ಟಲ್ಲಿ ಮಂಡಳಿಯ ವತಿಯಿಂದ ಪರಿಹಾರವನ್ನು ನೀಡುವ ವ್ಯವಸ್ಥೆಯಿದೆ. ೨೦೧೧ರ ಜನಗಣತಿ ಪ್ರಕಾರ ೨೫,೮೦೦ ಜನಸಂಖ್ಯೆಗೆ ಅನುಗುಣವಾಗಿ ಹಾಗೂ ದೂರದೃಷ್ಟಿಯನ್ನು ಮುಂದಿಟ್ಟುಕೊಂಡು ಯೋಜನೆ­ಯನ್ನು ಸಿದ್ದಪಡಿಸಲಾಗಿದೆ.

ಅನುದಾನಗಳ ಪೈಕಿ ಯೋಜನೆ­ಯನ್ನು ವಿವಿಧ ಹಂತದ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಜನತೆಗೆ ತೊಂದರೆಯಾಗದ ರೀತಿ­ಯಲ್ಲಿ ಕಾರ್ಯನಿರ್ವಹಸಲಾಗುವುದು. ಜತೆಗೆ ಕಾಮ­ಗಾರಿ ಆರಂಭಿಸಿದ ಎರಡೇ ವರ್ಷದಲ್ಲಿ ಪೂರ್ಣ­ಗೊಳಿಸ­ಲಾಗುವುದು. ಕಾಮಗಾರಿ ನಿರ್ವಹಣೆಯ ಸಂದರ್ಭ ತುಂಡರಿಸಲಾದ ರಸ್ತೆ ಹಾಗೂ ಇನ್ನಿತರ ಕಾಮಗಾರಿಗಳನ್ನು ಕೂಡಾ ಅಚ್ಚುಕಟ್ಟಾಗಿ ನಿರ್ವಹಿ­ಸುವ ಜವಾಬ್ದಾರಿಯನ್ನು ಮಂಡಲಿಯದ್ದೇ ಆಗಿದೆ ಎಂದರು.

ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಶಿಕಲಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾ ರಾಜೇಂದ್ರ, ಮುಖ್ಯಾಧಿಕಾರಿ ರಾಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT