ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಂಸಾಪುರ’ದಲ್ಲಿ ಪ್ರೇಮವೂ ಸಂಗೀತವೂ...

Last Updated 23 ಜೂನ್ 2016, 19:30 IST
ಅಕ್ಷರ ಗಾತ್ರ

ಸಂಗೀತ ನಿರ್ದೇಶಕರ ಪೈಕಿ ಹಲವರು ಅಲ್ಲಿಗಷ್ಟೇ ಸೀಮಿತಗೊಳ್ಳದೇ ‘ಆ್ಯಕ್ಷನ್–ಕಟ್’ ಹೇಳುವ ಮಟ್ಟ ತಲುಪಿದ್ದಾರೆ. ಆರ್.ಎಸ್. ಗಣೇಶ್ ನಾರಾಯಣ್ ಆ ಸಾಲಿಗೆ ಸೇರುವ ಹೊಸ ಹೆಸರು. ಅನೇಕ ಸಿನಿಮಾಗಳಿಗೆ ಸಂಗೀತ ಹೊಸೆದ ಅನುಭವವಿರುವ ಅವರು ಪ್ರೇಮಕಥೆಯೊಂದನ್ನು ತೆರೆಗೆ ತರುವ ಹುಮ್ಮಸ್ಸಿನಲ್ಲಿ ಇದ್ದಾರೆ.

‘ಕಂಸಾಪುರ’ ಅವರ ಮೊದಲ ನಿರ್ದೇಶನದ ಸಿನಿಮಾ. ಚಿತ್ರತಂಡವನ್ನು ಪರಿಚಯಿಸಲೆಂದು ಪತ್ರಕರ್ತರನ್ನು ಆಹ್ವಾನಿಸಿದ್ದ ಗಣೇಶ್ ನಾರಾಯಣ, ತಮ್ಮ ಮಾತಿನಲ್ಲೆಲ್ಲೂ ಕಥೆಯ ಸುಳಿವು ಬಿಟ್ಟುಕೊಡಲಿಲ್ಲ. ‘ಕಂಸಾಪುರ ಎಂಬ ಶೀರ್ಷಿಕೆಯೇ ಕುತೂಹಲ ಹುಟ್ಟಿಸುವಂತಿದೆ. ಅಂಥ ಹೆಸರು ಯಾಕೆ ಎಂಬುದನ್ನು ಆಮೇಲೆ ಹೇಳುತ್ತೇನೆ’ ಎಂದು ಅವರು ಭರವಸೆ ನೀಡಿದರು.

ಈ ಚಿತ್ರಕ್ಕಾಗಿ ಅವರು ಆಯ್ದುಕೊಂಡಿರುವುದು ಹಳ್ಳಿಯ ಕಥೆಯನ್ನು. ಅದರೊಂದಿಗೆ ಸ್ವಲ್ಪ ಆ್ಯಕ್ಷನ್ ಕೂಡ ಇದೆಯಂತೆ. ‘ಇದೊಂದು ಭಾರಿ ವಿಭಿನ್ನ ಚಿತ್ರ ಅಂತ ಉತ್ಪ್ರೇಕ್ಷೆಯಿಂದ ಹೇಳಲಾರೆ. ಆದರೆ ಜನರು ಇಷ್ಟಪಟ್ಟು ನೋಡುವಂಥ ಸಿನಿಮಾ ಎಂದಷ್ಟೇ ಹೇಳಬಲ್ಲೆ. ಎಲ್ಲಕ್ಕಿಂತ ಮುಖ್ಯವಾಗಿ ತಂತ್ರಜ್ಞರ ಪ್ರತಿಭೆಯನ್ನು ಇದರ ಮೂಲಕ ಪರಿಚಯಿಸಲಿದ್ದೇನೆ’ ಎಂದ ಅವರು, ಸಂಗೀತದಿಂದ ನಿರ್ದೇಶನದ ಕಡೆ ತಾವು ಹಾಕುತ್ತಿರುವ ಹೆಜ್ಜೆಗೆ ಸಹಕಾರ ನೀಡುವಂತೆ ಕೋರಿದರು.

ದೇಶದ ಮೊದಲ ರಾಷ್ಟ್ರಪತಿಯಾಗಿದ್ದ ಎಸ್. ರಾಧಾಕೃಷ್ಣನ್ ಅವರ ಮೊಮ್ಮಗ ಸುಬ್ರಹ್ಮಣ್ಯಂ ಶರ್ಮಾ ಹಲವು ಉದ್ಯಮಗಳನ್ನು ನಡೆಸುತ್ತಿದ್ದಾರೆ. ಚಿತ್ರರಂಗಕ್ಕೂ ಬಂದಿರುವ ಅವರು ಅನ್ಯಭಾಷೆ ಸಿನಿಮಾ ನಿರ್ಮಿಸಿದ್ದಾರೆ. ಕನ್ನಡದಲ್ಲಿ ಇದು ಅವರ ಮೊದಲ ಚಿತ್ರ. ‘ಇದು ಕನ್ನಡ ಚಿತ್ರರಸಿಕರಿಗೆ ನನ್ನ ಪ್ರೀತಿಯ ಕಾಣಿಕೆ. ಇನ್ನೂ ಎರಡು ಸಿನಿಮಾ ಮಾಡುವ ಆಸೆಯಿದೆ’ ಎಂದು ಅವರು ಹೇಳಿಕೊಂಡರು.

ಈ ಹಿಂದೆ ತೆರೆ ಕಂಡ ‘ಕ’ ಚಿತ್ರದ ಆರು ಹೀರೊಗಳಲ್ಲಿ ಶರತ್ ಕೂಡ ಒಬ್ಬರು. ‘ಕಂಸಾಪುರ’ದಲ್ಲಿ ಅವರು ನಾಯಕ. ‘ಒಂದು ವರ್ಷದ ತಯಾರಿ ಬಳಿಕ ಈ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ರಫ್ ಅಂಡ್ ಟಫ್ ಪಾತ್ರ ನನ್ನದು’ ಎಂದು ಪರಿಚಯ ಮಾಡಿಕೊಂಡರು. ನಾಯಕಿ ಅಂಜನಾ ಅವರಿಗೆ ಇದು ಮೂರನೇ ಸಿನಿಮಾ. ಇದರಲ್ಲಿ ಅವರು ಸಾಂಪ್ರದಾಯಿಕ ವೇಷಭೂಷಣ ತೊಡಲಿದ್ದಾರೆ.

ಛಾಯಾಗ್ರಾಹಕ ಸೋಮಶೇಖರ, ಸಂಕಲನಕಾರ ಶ್ರೀ ಮತ್ತಿತರ ತಂತ್ರಜ್ಞರು ಮಾತನಾಡಿದರು. ಸುಬ್ರಹ್ಮಣ್ಯಂ ಶರ್ಮಾ ಅವರ ಉದ್ದಿಮೆಗಳ ಕಿರುಚಿತ್ರ ಪ್ರದರ್ಶನದ ಬಳಿಕ, ಸಿನಿಮಾದ ಶೀರ್ಷಿಕೆ ಅನಾವರಣ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT