ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರಾವಳಿಗೆ ದ್ರೋಹವೆಸಗಿದ ಮಾಜಿ ಮುಖ್ಯಮಂತ್ರಿಗಳು’

ಎತ್ತಿನಹೊಳೆ ಯೋಜನೆ: ಬಹಿರಂಗ ಪತ್ರ
Last Updated 13 ಮಾರ್ಚ್ 2014, 9:54 IST
ಅಕ್ಷರ ಗಾತ್ರ

ಮಂಗಳೂರು:  ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ ಮತ್ತು ವೀರಪ್ಪ ಮೊಯಿಲಿ ಇಬ್ಬರೂ ದಕ್ಷಿಣ ಕನ್ನಡ ಜಿಲ್ಲೆಗೆ ದ್ರೋಹ ಎಸಗಿರುವುದಾಗಿ ಸಹ್ಯಾದ್ರಿ ಸಂರಕ್ಷಣಾ ಸಂಚಯದ ಮುಖಂಡರು ಹೇಳಿದ್ದು, ಇಬ್ಬರೂ ಮಾಜಿ ಮುಖ್ಯಮಂತ್ರಿಗಳನ್ನು ಉಲ್ಲೇಖಿಸಿ ಬಹಿರಂಗ ಪತ್ರ ಬರೆಯಲಾಗಿದೆ.

ಇತ್ತೀಚೆಗಷ್ಟೆ ಸದಾನಂದ ಗೌಡರು ಪಶ್ಚಿಮ ಘಟ್ಟದ ಪರವಾಗಿ ಮಾತನಾಡುವವರನ್ನು ‘ಢೋಂಗಿ ಪರಿಸರವಾದಿಗಳು’ ಎಂದು ಟೀಕಿಸಿರುವುದು ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೇ ಮಾಡಿದ ಅವಮಾನ. ಯಾಕೆಂದರೆ ಮಾರ್ಚ್‌ 3ರಂದು ದಕ್ಷಿಣ ಕನ್ನಡದ ಜನತೆ ನೇತ್ರಾವತಿ ನದಿ ಉಳಿಸುವ ನಿಟ್ಟಿನಲ್ಲಿ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಸ್ವಯಂ ಪ್ರೇರಿತರಾಗಿ ಬಂದ್‌ ಆಚರಿಸಿದ್ದು ಜಿಲ್ಲೆಯ ಇತಿಹಾಸದಲ್ಲಿಯೇ ಅಪರೂಪದ ಘಟನೆಯಾಗಿದೆ. ತಮ್ಮದೇ ಜಿಲ್ಲೆಯ ಜನರ ಅಭಿಪ್ರಾಯಗಳನ್ನು ಅರಿಯುವಲ್ಲಿ ಸೋತಿರುವ ಸದಾನಂದ ಗೌಡರು ಸ್ವಯಂಪ್ರೇರಿತ ಬಂದ್‌ ಆಚರಣೆಯ ಸಂದೇಶವನ್ನೂ, ಜನತೆಯ ಆಕ್ರೋಶವನ್ನೂ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರಾಜಕೀಯ ಆಶ್ರಯ ಕೊಟ್ಟು ಮುಖ್ಯಮಂತ್ರಿ ಮಾಡಿದ ಜಿಲ್ಲೆಯ ಜನತೆಯನ್ನೇ ಸದಾನಂದ ಗೌಡರು ಢೋಂಗಿ ಎಂದು ಕರೆದಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವೀರಪ್ಪ ಮೊಯಿಲಿ ಅವರೂ ಕೂಡ, ‘ತಮ್ಮ ಸಮಾಧಿಯಾದರೂ ಸರಿ, ಯೋಜನೆಯನ್ನು ಜಾರಿ ಮಾಡದೇ ಬಿಡುವುದಿಲ್ಲ’ ಎಂದು ಶಂಕುಸ್ಥಾಪನೆ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಶಂಕುಸ್ಥಾಪನೆಯ ದಿನ ಚಿಕ್ಕಬಳ್ಳಾಪುರದಲ್ಲಿಯೂ ದಕ್ಷಿಣ ಕನ್ನಡದಲ್ಲಿಯೂ ಬಂದ್‌ ಆಚರಿಸಲಾಗಿದೆ. ಹಾಗಾದರೆ ಯಾರಿಗಾಗಿ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂಬುದನ್ನು ಮೊಯಿಲಿ ಅವರು ಸ್ಪಷ್ಟಪಡಿಸಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.

ಅಷ್ಟೆ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ವೀರಪ್ಪ ಮೊಯಿಲಿ ವಿರುದ್ಧ ಆಕ್ರೋಶವಿದ್ದರೂ, ಮಗನನ್ನೇ ಚುನಾವಣೆಗೆ ನಿಲ್ಲಿಸುವ ದರ್ಪ ಮತ್ತು ಅಹಂಕಾರವನ್ನು ಮೊಯಿಲಿ ಪ್ರದರ್ಶಿಸಿದ್ದಾರೆ. ಇಬ್ಬರೂ ಮುಖ್ಯಮಂತ್ರಿಗಳು ನದಿ ಯೋಜನೆ ಮೂಲಕ ಕರಾವಳಿ ಜನತೆಗೇ ವಂಚನೆ ಮಾಡಿರುವ ಕಾರಣ ‘ಅಸಹ್ಯ ಮಾಜಿ ಮುಖ್ಯಮಂತ್ರಿಗಳು’ ಎಂಬ ಶಾಶ್ವತ ಬಿರುದು ಕಟ್ಟಿಕೊಂಡಂತಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಮಾಜಿ ಸಿಎಂಗಳಿಗೆ ಪ್ರಶ್ನೆ
*ಸದಾನಂದ ಗೌಡರು ಎತ್ತಿನ ಹೊಳೆ ಯೋಜನೆಯ ಮೂಲಕ ಜಿಲ್ಲೆಯ ಜನತೆಗೆ ಯಾವುದೇ ವಂಚನೆ ಮಾಡಿಲ್ಲ ಎಂದಾದರೆ ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಪಲಾಯನ ಮಾಡಬೇಕಾದ ಅಗತ್ಯವೇನು ?

*ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಯಾವುದೇ ಹಾನಿ ಇಲ್ಲ ಎಂಬ ವಿಷಯವನ್ನು ಪರಿಸರಪರ ಹೋರಾಟಗಾರರ ಮುಂದೆ ಸ್ಪಷ್ಟಪಡಿಸಲು ಸದಾನಂದಗೌಡರು ಯಾಕೆ ಮುಂದಾಗುವುದಿಲ್ಲ ?

*ಎತ್ತಿನಹೊಳೆ ಎಲ್ಲಿದೆ, ಅಲ್ಲಿನ ಅಡವಿಯ ಸೂಕ್ಷ್ಮ ಜೈವಿಕ ವ್ಯವಸ್ಥೆ ಹೇಗಿದೆ, ಎಷ್ಟು ನೀರಿದೆ ಎಂಬ ಬಗ್ಗೆ ಸದಾನಂದ ಗೌಡರಿಗೆ ಅರಿವಿದೆಯೇ ? ಬರೀ ಪತ್ರಿಕಾ ಹೇಳಿಕೆಗಳನ್ನು ನೀಡುವ ಬದಲು ಈ ಬಗ್ಗೆ ಹೋರಾಟಗಾರರೊಂದಿಗೆ ನೇರ ಚರ್ಚೆಗೆ ಬರಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT