ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರುಣೆ ಕ್ರಾಂತಿ’ ಎಂಬ ಬೆಳಕು

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ದಾರ್ಶನಿಕರ ಚಿತ್ರ, ಶಿಲ್ಪಗಳನ್ನು ತೋರಿಸಿ ಜನರೊಂದಿಗೆ ಭಾವನಾತ್ಮಕ ವ್ಯಾಪಾರ ಮಾಡುವ ವ್ಯವಸ್ಥೆಯು ನಿಜ ಜೀವನದ ಹಕ್ಕುಗಳನ್ನು ಪೂರೈಸುವಲ್ಲಿ ನಿರ್ಲಕ್ಷ್ಯ ತಾಳಿದೆ. ಇಂತಹ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿ ಕೊಳ್ಳಲು ಸಾಧ್ಯವಾಗದಿರುವುದು ಸಾಮುದಾಯಿಕ ದುರಂತ. ಹೀಗೆ ಚಿತ್ರ ತೋರಿಸಿ ಯಾಮಾರಿಸುವ ವ್ಯವಸ್ಥೆಗೆ ದಮನಿತ ಸಮುದಾಯಗಳು ಒಗ್ಗಿಹೋಗಿರುವುದಕ್ಕೆ ಈಚೆಗೆ ಚಾಮರಾಜನಗರದಲ್ಲಿ ನಡೆಯಬೇಕಿದ್ದ ದಲಿತ ಯುವ ಸಾಹಿತ್ಯ ಮೇಳ ಸ್ಥಗಿತಗೊಂಡಿರುವುದೇ ಸಾಕ್ಷಿ.

ಬಾಬಾಸಾಹೇಬ್‌ ಅಂಬೇಡ್ಕರರ ಭಾವಚಿತ್ರದ ಭಾವನಾತ್ಮಕತೆಗೆ ಸಿಲುಕಿ ದಲಿತ ಸಬಲೀಕರಣವನ್ನು ದಲಿತರೇ ನಿರ್ಬಲೀಕರಣಗೊಳಿಸಿಕೊಂಡಂತೆ ಕಾಣುತ್ತಿದೆ. ಇದರಿಂದ ದಲಿತ ಸಾಂಸ್ಕೃತಿಕ ರಾಜಕಾರಣ ದುರ್ಬಲ ಗೊಂಡಿರುವುದೂ ಸಾಬೀತಾಗಿದೆ.

ನಮ್ಮ ಸಾಂಸ್ಕೃತಿಕ ರಾಜಕೀಯ ವ್ಯವಸ್ಥೆಯು ಮಹಾನ್ ದಾರ್ಶನಿಕರ ಭಾವಚಿತ್ರಗಳನ್ನು ವರ್ಣರಂಜಿತವಾಗಿ ತೋರಿಸುತ್ತಾ ದಲಿತಾದಿ ದಮನಿತರನ್ನು ಭಾವನಾತ್ಮ ಕವಾಗಿ ತೃಪ್ತಿಪಡಿಸುವ ಹುನ್ನಾರ ಮಾಡುತ್ತಲೇ ಬರುತ್ತಿದೆ. ಆದರೆ ಇದಕ್ಕೆ ಬದಲಾಗಿ  ಆನ್ವಯಿಕ ನೆಲೆಯಲ್ಲಿ ದಲಿತ ಲೋಕದ ವಿವಿಧ ಘಟಕಗಳನ್ನು ಒಗ್ಗೂಡಿಸಿ  ಮಹ ನೀಯರ ತತ್ವಗಳ ಬಗ್ಗೆ ಸಂವಾದ ನಡೆಸುವ ಅಪರೂಪದ ಕಾರ್ಯಕ್ರಮ ಇದಾಗಿತ್ತು.

ಸಮ್ಮೇಳನದಲ್ಲಿ ಏನೇ ಅಡ ಚಣೆಗಳಾಗಿದ್ದರೂ ಆಯೋಜಕರೊಂದಿಗೆ ಕುಳಿತು ಕೂಲಂ ಕಷವಾಗಿ ಚರ್ಚಿಸಿ ಪರ್ಯಾಯ ವ್ಯವಸ್ಥೆಯನ್ನು ಕಂಡು ಕೊಳ್ಳಬಹುದಿತ್ತು. ತಪ್ಪುಗಳಾಗಿದ್ದರೂ ಸಂವಾದ ಸಂಸ್ಕೃ ತಿಯ ಮೂಲಕ ಬಗೆಹರಿಸಿಕೊಳ್ಳಬೇಕೇ ಹೊರತು ಬ್ಯಾನರ್ ಹರಿದು ಕಾರ್ಯಕ್ರಮವನ್ನೇ ನಿಲ್ಲಿಸುವ ಅತಿರೇಕಕ್ಕೆ ಹೋಗಬಾರದಿತ್ತು.

ಅಂಬೇಡ್ಕರ್ ಚಿತ್ರ ಹಾಗೂ ದಲಿತರ ನಡುವೆ ಭಾವ ನಾತ್ಮಕ ನಂಟಿರುವುದು ನಿಜ. ಹಾಗೆಂದು ವ್ಯಕ್ತಿಪೂಜೆ ಯನ್ನು ತೀರಾ ಕಟುವಾಗೇ ವಿರೋಧಿಸಿದ್ದ ಅಂಬೇಡ್ಕರ್ ದರ್ಶನವನ್ನೇ ಕುಬ್ಜಗೊಳಿಸುವಂತೆ ಅವರ ಚಿತ್ರವಿಲ್ಲ ವೆಂದು ಗಲಾಟೆ ಮಾಡಿದ್ದು ಅಂಬೇಡ್ಕರ್ ಅವರಿಗೇ ಅವಮಾನ ಮಾಡಿದಂತಲ್ಲವೇ?

ಅವರ ಚಿತ್ರ ಇದ್ದರೂ ಇರದಿದ್ದರೂ ಚಿಂತನೆಗಳ ಬಗೆಗಿನ ಸಂವಾದ ಮತ್ತು ಅನ್ವಯ ಇಂದಿನ ತುರ್ತಾಗಿದೆ. ವ್ಯವಸ್ಥೆಯು ದಲಿತ ಲೋಕದ ಮೂಗಿಗೆ ಕೊಂಚ ಸವಲತ್ತುಗಳ ತುಪ್ಪ ಸವರಿ ನಯವಂಚನೆ ಮಾಡುತ್ತಿರುವುದೇ ಸರಿಯೆನ್ನುವಂತೆ ಭಾವಚಿತ್ರದ ಅಪೇಕ್ಷೆಯೇ ದೊಡ್ಡ ಸಾಧನೆಯೆಂದು ಭಾವಾತಿರೇಕದಲ್ಲಿ ಮೈಮರೆಯುವುದು ಸರಿಯೇ? ಇದು ದಮನಿತ ಸಮುದಾಯಕ್ಕೆ ವಿದ್ಯಾವಂತ ವರ್ಗ ಹಾಗೂ ಹೋರಾಟಗಾರ ವರ್ಗ ಮಾಡುತ್ತಿರುವ ದ್ರೋಹವಲ್ಲವೇ?

ಅಂಬೇಡ್ಕರೋತ್ತರ ದಲಿತ ಸಾಂಸ್ಕೃತಿಕ ಕ್ರಾಂತಿಯ ಆಧುನಿಕ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಬಹುದೊಡ್ಡ ಬೆಲೆ ಮತ್ತು ಬೆಂಬಲ ಇತ್ತು. ಅರ್ಥಾತ್ ವ್ಯವಸ್ಥೆಯೇ ಹೆದರಿ ದಲಿತದನಿ ಕೇಳುವ ತಾಕತ್ತು ಬಂದಿತ್ತು. ಆದರೆ ಕೆಲವರ ಅವಕಾಶವಾದಿತನದ ಕುತಂತ್ರ ದಲ್ಲಿ ಭಾವಚಿತ್ರವೂ ಅಪಮೌಲ್ಯೀಕರಣಗೊಂಡು, ಅಧಿ ಕಾರ ರಾಜಕಾರಣವು ಬರೀ ಭಾವಚಿತ್ರಗಳನ್ನು ತೋರುತ್ತಾ ದಲಿತ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ.

ನಿಜಕ್ಕೂ ನೀಡಬೇಕಾದ ಸವಲತ್ತುಗಳನ್ನು ಕಾಲದಿಂದ ಕಾಲಕ್ಕೆ ನಿರ್ಲಕ್ಷಿಸುತ್ತಾ ಬಂದಿದೆ. ಬುದ್ಧ-ಬಸವ-ಅಂಬೇಡ್ಕರ್ ಅವರಂತೆ ಕರುಣೆಯಿಂದ ಕ್ರಾಂತಿ ಮಾಡಬೇಕೇ ಹೊರತು ಸ್ವಾರ್ಥಹಿತ ಕುತಂತ್ರಗಳಿಗೆ ಬಲಿಯಾಗಿ ಅವಿವೇಕದಿಂದ ಕೂಗಾಡುವುದಲ್ಲ. ಕರುಣೆಯ ಕ್ರಾಂತಿಯೇ ಭವಿಷ್ಯ ಭಾರತದ ಮಹಾಬೆಳಕು.

ಈ ಮೂಲಕವೇ ವ್ಯವಸ್ಥೆಯ ಬದಲಾವಣೆ ಹಾಗೂ ತಳ ಸಮುದಾಯಗಳ ಸಮಪಾಲಿನ ಸಹಬಾಳ್ವೆ ಸಾಧ್ಯ. ಇಲ್ಲವಾದರೆ ಭವಿಷ್ಯದಲ್ಲಿ ಭಾವಚಿತ್ರಗಳು ಮಾತ್ರ ವಿಜೃಂಭಿಸಬಹುದೇ ಹೊರತು ನಿರಾತಂಕ ಬದುಕುಗಳಲ್ಲ. ಆದ್ದರಿಂದ ದಮನಿತರ ಬದುಕಿನಲ್ಲಿ ಅಂಬೇಡ್ಕರ್ ಭಾವಬಿಂಬಗಳನ್ನು ಹುಡುಕಬೇಕೇ ಹೊರತು ಬ್ಯಾನರ್‌ಗಳಲ್ಲಿ ಅಲ್ಲ.
-ಕುಎಂಬೈ, ಮೈಸೂರು
***

ಮನೆಯಲ್ಲೇ ಕಾದಾಡಿದರೆ...
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಚಾಮರಾಜ ನಗರದಲ್ಲಿ ಹಮ್ಮಿ ಕೊಂಡಿದ್ದ ‘ದಲಿತ ಯುವ ಸಾಹಿತ್ಯ ಸಮಾವೇಶ’ದಲ್ಲಿ ನಾನೂ ಕವಿಗೋಷ್ಠಿಯ ಆಹ್ವಾನಿತನಾಗಿದ್ದೆ. ಕಾರ್ಯಕ್ರಮ ರದ್ದಾಗಿದ್ದಕ್ಕೆ ಬೇಸರವಿಲ್ಲ. ಆದರೆ ಕಾರ್ಯಕ್ರಮವನ್ನು ನಮ್ಮವರೇ ಬಹಿಷ್ಕರಿಸಿದ್ದರಿಂದ ನನಗೆ ಆಶ್ಚರ್ಯ, ನೋವು ಎರಡೂ ಆಗಿದೆ.

ವಡ್ಡಗೆರೆ ನಾಗರಾಜಯ್ಯ ಅವರು ಹೇಳಿದಂತೆ (ಸಂಗತ, ಜೂನ್‌ 30) ದಲಿತ ಸಂಘರ್ಷ ಸಮಿತಿಯ ಆಶಯವು ಅಲೆಮಾರಿಗಳು, ಎಲ್ಲ ತಳ ಸಮುದಾಯಗಳ ಒಳಗೊಳ್ಳುವಿಕೆಯಿಂದ ಆದದ್ದು ಎಂಬುದು ಸಾರ್ವಕಾಲಿಕ ಸತ್ಯ. ಅಲೆಮಾರಿ ಸಮುದಾಯದ ನಾನೂ ಅಂಬೇಡ್ಕರ್ ಅವರ ಮಾತೃಮಮತೆಯನ್ನು ಉಂಡು ಬೆಳೆದವನು. ಆತ್ಮಸ್ಥೈರ್ಯವನ್ನು ಅಂಬೇಡ್ಕರ್ ಹೆಸರು ಹೇಳುತ್ತಲೇ ಪಡೆದವನು. ಆದರೆ ಅವರ ಕರುಣೆ, ಪ್ರೀತಿ, ಅನುಕಂಪ ಎಲ್ಲವೂ ಅವರನ್ನು ಅನುಸರಿಸುತ್ತಿರುವ ನನ್ನ ಬಂಧುಗಳೆಲ್ಲರಲ್ಲೂ ಬರಲಿ ಎಂಬುದು ನನ್ನ ಆಶಯ.

ಅಂಬೇಡ್ಕರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರ ಆತ್ಮವೇ ಆಗಿರುವಾಗ ಅವರ ಭಾವಚಿತ್ರವನ್ನು ಪ್ರದರ್ಶಿಸುವುದು ಸಾಂಕೇತಿಕವಷ್ಟೇ. ನಮ್ಮ ಮನೆಯಲ್ಲಿ ನಾವೇ ಕಾದಾಡಿದರೆ ಇನ್ನಾರಿಗೆ ದೂರುವುದು? ಮುಂದಿನ ದಿನಗಳಲ್ಲಿ ಹೀಗಾಗದಿರಲಿ. ಕಾರ್ಯಕ್ರಮ ಮತ್ತೆ ಚಾಮರಾಜ ನಗರದಲ್ಲಿ ಎಲ್ಲರ ಭಾಗ ವಹಿಸುವಿಕೆಯಲ್ಲಿ ಆಗಲಿ.
-ಸತ್ಯಮಂಗಲ ಮಹದೇವ, ಬೆಂಗಳೂರು
***


ಬೇಕಾಗಿದೆ ಹೊಸ ತರಬೇತಿ
ಬಾಬಾ ಸಾಹೇಬ್‌ ಅಂಬೇಡ್ಕರ್ ಅವರು ಎಲ್ಲ ಶೋಷಿತ ಸಾಮಾಜಿಕ ವಲಯಗಳನ್ನೂ ಒಳಗೊಂಡು ಬುದ್ಧ ಭಾರತದ ನಿರ್ಮಾಣಕ್ಕೆ ಮುಂದಾಗಿದ್ದರು. ಬುದ್ಧ ಮತ್ತು ಬಸವಣ್ಣ ಮೂರ್ತಿ ಆರಾಧಕರಾಗಿರಲಿಲ್ಲ. ವ್ಯಕ್ತಿಪೂಜೆಯನ್ನು ಒಪ್ಪಿಕೊಂಡಿರಲಿಲ್ಲ. ಬುದ್ಧ ಮತ್ತು ಅಂಬೇಡ್ಕರ್‌ ಅವರನ್ನು ಮೂರ್ತೀಕರಿಸಿ ಅವರ ತತ್ವಗಳನ್ನು ಸಾಂಸ್ಥೀಕರಿಸಿದ ಪರಿಣಾಮವಾಗಿ ಚಾಮರಾಜನಗರದ ದಲಿತರು ಅಂಬೇಡ್ಕರ್ ಮತ್ತು ಬುದ್ಧ ಗುರುವಿನ ವಿರುದ್ಧವಾದ ದಿಕ್ಕಿನಲ್ಲಿ ನಡೆದು ಹೋಗಿದ್ದಾರೆ.

ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲೋಹಿಯಾ ಈ ಯಾರನ್ನೂ ಸರಿಯಾಗಿ ಓದಿಕೊಳ್ಳದ ಮತ್ತು ಅರ್ಥ ಮಾಡಿಕೊಳ್ಳದ ಅವಿವೇಕತನ ಹಾಗೂ ಬೌದ್ಧಿಕ ದಾರಿದ್ರ್ಯ ಇರುವವರನ್ನು ಕಟ್ಟಿಕೊಂಡು ಹೊಸ ಭೀಮಯಾನದ ಸಾಧ್ಯತೆ ಸಾಧ್ಯವಿಲ್ಲ. ಆದ್ದರಿಂದ ಯುವ ದಲಿತರಿಗೆ ದೇಸಿ ಸಾಂಸ್ಕೃತಿಕ ವೀರರು, ಸಮಾಜ ಸುಧಾರಕರು, ಸಾಮಾಜಿಕ ನ್ಯಾಯದ ಚಳವಳಿಗಳು ಮುಂತಾದವುಗಳ ಬಗ್ಗೆ ಹೊಸ ತರಬೇತಿಯನ್ನು ನೀಡಬೇಕಾದ ಅಗತ್ಯವಿದೆ. ಈ ದಿಕ್ಕಿನಲ್ಲಿ ಪ್ರಜ್ಞಾವಂತ ಕವಿ, ಸಾಹಿತಿಗಳು ಮತ್ತು ಹೋರಾಟಗಾರರು ಯೋಚಿಸುವಂತಾಗಲಿ.
-ಎಂ.ಲಿಂಗರಾಜು, ಹಟ್ಟಿ ಚಿನ್ನದ ಗಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT