ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕವಿರಾಜ’ ಮಾರ್ಗಂ

Last Updated 1 ಜುಲೈ 2015, 19:30 IST
ಅಕ್ಷರ ಗಾತ್ರ

ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದ ಕವಿರಾಜ್, ಇನ್ನೂ ಏನಾದರೂ ಮಾಡಬೇಕಲ್ಲ ಎಂದುಕೊಳ್ಳುವಾಗ ಅವರ ಮನದಲ್ಲಿ ಹುಟ್ಟಿದ್ದು ಕವಿತೆ. ಅದಾದ ನಂತರ ‘ಕವನ ಮಾರ್ಗ’ ಹಿಡಿದ ಕವಿರಾಜ್ ತಮ್ಮದೇ ರೀತಿಯ ‘ಕವಿರಾಜ ಮಾರ್ಗ’ ರೂಪಿಸಿಕೊಂಡವರು.

ಅವರೇ ಹೇಳುವಂತೆ ‘ರೆಪ್’ ಆಗಿದ್ದಾಗ ಅಕ್ಷರಶಃ ಒಂಟಿ ಭಾವ ಅವರನ್ನು ಕಾಡಿತ್ತು. ಆದರೆ ಕವನದ ಸಖ್ಯ ಬೆಳೆದ ಮೇಲೆ ಅವರ ಜಗತ್ತೇ ಹೊಸ ಅರ್ಥ ಕಂಡಿದೆ. ಇದುವರೆಗೆ ಗೀತರಚನಕಾರರಾಗಿದ್ದ ಅವರು ಈಗ ಸಿನಿಮಾ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ತಮ್ಮ ಈ ಹೊಸ ಜಗತ್ತಿನ ಒಡನಾಟದ ಕುರಿತು ಕವಿರಾಜ್ ‘ಕಾಮನಬಿಲ್ಲು’ ಜೊತೆ ಮಾತನಾಡಿದ್ದಾರೆ.

ಕವಿರಾಜರ ಮೊದಲ ಕವನದ ಸಾಲು ಯಾವುದು?
ಮೊದಲ ಬಾರಿ ಕವನ ಗೀಚಿದ್ದು ನಾಲ್ಕು–ಐದನೇ ತರಗತಿಯಲ್ಲಿದ್ದಾಗ. ತುಂಬಾ ಸಮಯವಾಗಿದ್ದಕ್ಕೆ ಸಾಲುಗಳ್ಯಾವುವೂ ಈಗ ನೆನಪಿಲ್ಲ. ಆದರೆ ಆಗ ತಂಗಿ, ನಾಯಿ, ಬೆಕ್ಕು ಇಂಥವುಗಳ ಬಗ್ಗೆಯೇ ಬರೆದಿದ್ದು. 

ಈ ರಾಜ ಯಾವುದಕ್ಕೆ ಒಡೆಯ? ಆ ಒಡೆತನ ಸಿಕ್ಕಿದ್ದು ಯಾವಾಗ?
ಒಂದರ್ಥದಲ್ಲಿ ಹುಟ್ಟಿನಿಂದಲೇ ರಾಜ ನಾನು. ಕವಿರಾಜ ಎಂಬುದು ಅಪ್ಪ–ಅಮ್ಮ ಇಟ್ಟ ಹೆಸರು. ಇನ್ನು ಒಡೆತನದ ವಿಚಾರಕ್ಕೆ ಬಂದರೆ, ಮೆಡಿಕಲ್ ರೆಪ್ರೆಸೆಂಟ್ ಆಗಿದ್ದ ನಾನು ಸಿನಿಮಾಗಳಿಗೆ ಕವಿತೆ ಬರೆಯಲು ಆರಂಭಿಸಿ ನಾಲ್ಕೈದು ವರ್ಷಗಳಷ್ಟೇ ಆಗಿವೆ. ಮಹಾರಾಜರೆಲ್ಲ ಇಲ್ಲಿದ್ದಾರೆ. ಆದರೂ ಈ ಕ್ಷೇತ್ರದಲ್ಲಿ ನನ್ನದೇ ಒಂದು ‘ಸ್ಪೇಸ್’ ಅನ್ನು ಜನರು ಕೊಟ್ಟಿದ್ದಾರೆ. ಆ ಚಿಕ್ಕ ರಾಜ್ಯಕ್ಕೆ ನಾನೇ ಒಡೆಯ.

ಈ ಕವಿರಾಜನ ಮಾರ್ಗ ಯಾವುದು?
ಹಾಡುಗಳ ಮೂಲಕ ಜೀವನ ನಡೆಸುತ್ತಿದ್ದೇನೆ. ಹಾಗಾಗಿ ನನ್ನದು ‘ಕವನ ಮಾರ್ಗ’.

ಕಾಲೇಜು ದಿನಗಳಲ್ಲಿ ಪ್ರೇಯಸಿಯರಿಗೆಂದು ಕವನ ಬರೆದಿದ್ದಿದೆಯಾ?
ಹಾಂ. ಬರೆದಿದ್ದೆ. ಆದರೆ ಅದನ್ನು ಬಟವಾಡೆ ಮಾಡಿಲ್ಲ. ನಾನೇ ಇಟ್ಟುಕೊಂಡಿದ್ದೇನೆ. ಜೀವನದಲ್ಲಿ ಕವನದ ಮೂಲಕ ಯಾರಿಗೂ ಪ್ರೇಮ ನಿವೇದನೆ ಮಾಡಿಲ್ಲ. ಹಾಗಂತ ಈಗ ಕ್ಲಿಕ್ ಆಗುತ್ತಿರುವುದು ಯಾವುದೂ ‘ಓಲ್ಡ್ ಸ್ಟಾಕ್’ ಅಲ್ಲ. ಇವೆಲ್ಲ ಹೊಸದೇ.

ಹೆಂಡತಿಯನ್ನಾದರೂ ಕವಿತೆ ಮೂಲಕ ಓಲೈಸೋಕೆ ಪ್ರಯತ್ನಿಸಿದ್ದೀರಾ?
ಇಲ್ಲ ಇಲ್ಲ. ಮಾತಿನಲ್ಲೇ ಓಲೈಸ್ತೀನಿ. ಇಡೀ ದಿನ ಕವಿತೆಯ ಲೋಕದಲ್ಲೇ ಇದ್ದು ಏಕತಾನತೆ ಕಾಡುತ್ತದೆ. ಹಾಗಾಗಿ ವೈಯಕ್ತಿಕ ಜೀವನದಲ್ಲಿ ಅದರಿಂದ ಸ್ವಲ್ಪ ದೂರವೇ ಇರ್ತೀನಿ. ಆದರೆ ನಾನು ಬರೆವ ಹಾಡಿನ ಮೊದಲ ವಿಮರ್ಶಕಿ ನನ್ನ ಪತ್ನಿಯೇ.

ನಿಮ್ಮಲ್ಲಿ ಕವಿತೆ ಜನ್ಮತಾಳುವ ಸಮಯ ಯಾವುದು?
ಮನಸು ಉಲ್ಲಾಸವಾಗಿದ್ದಾಗ ಯಾವಾಗ ಬೇಕಾದರೂ ಸಾಲುಗಳು ರೂಪು ತಾಳುತ್ತವೆ. ಅದರಲ್ಲೂ ಬೆಳಗಿನ ಸಮಯ ಹೆಚ್ಚು ಪ್ರಶಸ್ತವಾದದ್ದು. ಇಷ್ಟಕ್ಕೂ ಅದು ಸೃಜನಾತ್ಮಕ ಪ್ರಕ್ರಿಯೆ. ಕೆಲವೊಮ್ಮೆ ಬೇಗ ಬರೆದರೆ ಇನ್ನು ಕೆಲವೊಮ್ಮೆ ತುಂಬಾ ಸಮಯವೂ ಬೇಕಾಗುತ್ತದೆ. ‘ಈ ಪ್ರೀತಿ ಒಂಥರ ಕಚಗುಳಿ’ ಹಾಡನ್ನು ತುಂಬ ಬೇಗ ಬರೆದಿದ್ದೆ. ‘ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ’ ಬರೆಯಲು ಒಂದಿಡೀ ದಿನವೇ ಹಿಡಿಯಿತು.

ಒಮ್ಮೆ ಮದುವೆಯಾದ ನೀವೀಗ ಮತ್ತೆ ‘ಮದುವೆಯ ಮಮತೆಯ ಕರೆಯೋಲೆ’ ಕೊಡೋಕೆ ತಯಾರಿ ನಡೆಸಿದ್ದೀರಿ!
ನಿಜ ಜೀವನದಲ್ಲಿ ಮದುವೆ ಆಗಿದೆ. ಇದೀಗ ಮತ್ತೆ ‘ಮದುವೆಯ ಮಮತೆಯ ಕರೆಯೋಲೆ’ ಸಿದ್ಧವಾಗ್ತಿದೆ. ಅಂದರೆ ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಒಂದೊಳ್ಳೆ ರೊಮ್ಯಾಂಟಿಕ್ ಕಾಮೆಡಿ ಕಥೆ ಇದರಲ್ಲಿದೆ. ಕುಟುಂಬವೆಲ್ಲ ಮೆಚ್ಚಬಹುದಾದ ಕಥೆ.

ಕವಿತೆಗಳು ನನಗೆ ಕೊಟ್ಟ ಯಶಸ್ಸನ್ನೇ ಈ ಚಿತ್ರ ಕೂಡ ಕೊಡುವ ಭರವಸೆ ಇದೆ. ಎಲ್ಲ ಹಾಡುಗಳಿಗೂ ನಾನೇ ಸಾಹಿತ್ಯ ಬರೆದಿದ್ದೇನೆ. ಅರ್ಧದಷ್ಟು ಕೆಲಸ ಮುಗಿದಿದೆ. ಈ ವರ್ಷವೇ ಚಿತ್ರ ತೆರೆಗೆ ಬರುವುದು ಖಂಡಿತ. ಒಟ್ಟಾರೆ ಹೇಳುವುದಾದರೆ ‘ಮದುವೆಯ ಮಮತೆಯ ಕರೆಯೋಲೆ’ ಹಂಚುವವನೂ ನಾನೇ, ಅದಕ್ಕೆ ಪೂಜಾರಿಯೂ ನಾನೇ!

ನಿಮ್ಮ ಜೀವನದ ತಮಾಷೆ ಸಂಗತಿ?
ಎಲ್ಲರಿಗೂ ಇರುವಂತೆ ನನಗೂ ಬಾಲ್ಯದ ಸಂಗತಿಯೊಂದು ನೆನಪಿದೆ. ನನಗೆ ಕ್ರಿಕೆಟ್‌ನಲ್ಲಿ ತುಂಬಾ ಆಸಕ್ತಿ. ಒಮ್ಮೆ ಕ್ರಿಕೆಟ್ ಆಡುವಾಗ ನಮ್ಮೂರಿನ ಒಬ್ಬರು, ‘ಕವಿರಾಜ್ ಕೊನೇವರೆಗೂ ನಾಟೌಟ್ ಆಗಿ ಉಳಿದರೆ ಇನ್ನೂರು ರೂಪಾಯಿ ಕೊಡ್ತೀನಿ’ ಎಂದಿದ್ದರು. ನಾನು ಆ ದುಡ್ಡನ್ನೂ ಗಿಟ್ಟಿಸಿದೆ. ಆದರೆ ಅವರು ಮರುದಿನ ಬಂದು ಆ ಹಣವನ್ನು ವಾಪಸ್ ಕೇಳಿದರು. ಆದರೆ ಸ್ನೇಹಿತರೆಲ್ಲ ಸೇರಿ ಅದಾಗಲೇ ಪಾರ್ಟಿ ಮಾಡಿ ಹಣ ಖರ್ಚು ಮಾಡಿದ್ದಾಗಿತ್ತು. ಹಿಂದಿನ ದಿನ ಅವರು ಕುಡಿದ ಅಮಲಲ್ಲಿ ಹಣ ಕೊಟ್ಟಿದ್ದರು. ಮರುದಿನ ಅಮಲು ಇಳಿದ ಮೇಲೆ ವಾಪಸ್ ಕೇಳಿದರು. ಆ ಮನುಷ್ಯನಿಂದ ತಪ್ಪಿಸಿಕೊಳ್ಳುವ ಒದ್ದಾಟಗಳೆಲ್ಲ ಇನ್ನೂ ನೆನಪಾಗುತ್ತವೆ.

ಕಳೆದು ಹೋದ ಅವಕಾಶಕ್ಕೆ ಕೈ ಹಿಸುಕಿಕೊಂಡಿದ್ದು?
ಕೆಲವೊಮ್ಮೆ ಒತ್ತಡಗಳಿಂದಾಗಿ ಎಷ್ಟೋ ಹಾಡು ಬರೆಯುವುದನ್ನು ತಪ್ಪಿಸಿಕೊಂಡಿದ್ದೇನೆ. ‘ಮುಂಗಾರು ಮಳೆ’ ಚಿತ್ರಕ್ಕೆ ಇನ್ನೂ ಹಾಡುಗಳನ್ನು ಬರೆಯಬೇಕಿತ್ತು. ಆಗಿಲ್ಲ. ಆದರೆ ಅದಕ್ಕೆ ಏನೂ ಮಾಡಲಾಗುವುದಿಲ್ಲ. ಎಲ್ಲೋ ಒಂದು ಲೆಕ್ಕಾಚಾರ ತಪ್ಪಾಗಿದ್ದರೆ ಇನ್ನೆಲ್ಲೋ ಅದಕ್ಕೆ ಪರಿಹಾರವೂ ಇರುತ್ತದೆ.

ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದು?
ಒಮ್ಮೆ ಕಾಲೇಜಲ್ಲಿ ಯಾರೋ ಹಾಜರಿ ಪುಸ್ತಕವನ್ನೇ ಕಾಣೆ ಮಾಡಿದ್ದರು. ಅದು ನನ್ನ ಮೇಲೆ ಬಂದಿತ್ತು.

ತಿಳಿದೂ ತಿಳಿದೂ ಹಳ್ಳಕ್ಕೆ ಬಿದ್ದಿದ್ದು?
ಕೆಲವೊಮ್ಮೆ ಯಾವುದೋ ಕೆಲಸ ಮಾಡಬಾರದು ಎಂದುಕೊಂಡರೂ ಯಾರದೋ ದಾಕ್ಷಿಣ್ಯಕ್ಕೆ ಒಳಗಾಗಿ ಅಂಥ ಕೆಲಸವನ್ನು ಮಾಡಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT