ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಟಾಚಾರಕ್ಕೆ ರಾಜ್ಯೋತ್ಸವ ಆಚರಣೆ ಬೇಡ’

Last Updated 21 ಅಕ್ಟೋಬರ್ 2014, 8:10 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬ­ಗಳ ಆಚರಣಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆ ಶಾಸಕ ಟಿ. ವೆಂಕಟರ­ಮಣಯ್ಯ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯ್ತಿ ಸಭಾಂಗಣ­ದಲ್ಲಿ ಸೋಮವಾರ ನಡೆಯಿತು.

ಕನ್ನಡ ರಾಜ್ಯೋತ್ಸವ ಕನ್ನಡಿಗರ ಮಹತ್ವದ ಕಾರ್ಯಕ್ರಮ. ಅಧಿಕಾರಿ­ಗಳು ಕನ್ನಡದ ಕಾರ್ಯಕ್ರಮಗಳನ್ನು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಕಾಟಾಚಾರಕ್ಕೆ ರಾಜ್ಯೋತ್ಸವ ಮಾಡು­ವು­ದಾ­ದರೆ ಸಹಕಾರ ನೀಡುವುದಿಲ್ಲ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತು­ವಾರಿ ಸಚಿವರು ಈ ಬಾರಿ ತಪ್ಪದೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವಂತೆ ಶಾಸಕರು ಹಾಗೂ ತಹಶೀಲ್ದಾರರು ಮುಂದಾಳತ್ವ ವಹಿಸ­ಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಶಾಲಾಕಾಲೇಜು­ಗಳಲ್ಲಿ  ಹಾಗೂ ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಸಂಬಂಧ­ಪಟ್ಟ ಇಲಾಖೆ­ಗಳು ಸುತ್ತೋಲೆ ಹೊರಡಿ­ಸಬೇಕು. ವೇದಿಕೆಯಲ್ಲಿ ಶಿಷ್ಟಾಚಾರ ಪಾಲಿಸಬೇಕು. ತಾಲ್ಲೂಕು ಮಟ್ಟದಲ್ಲಿ  ಕನ್ನಡ ಅನುಷ್ಠಾನ ಸಮಿತಿಗಳನ್ನು ರಚಿಸ­ಬೇಕು ಎನ್ನುವ ಸಲಹೆಗಳು ವ್ಯಕ್ತ­ವಾದವು. ರಾಜ್ಯೋತ್ಸವ ಸಮಾರಂಭ­ವನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಸನ್ಮಾನ ಸಮಿತಿಗಳನ್ನು ರಚಿಸಲಾಯಿತು.

ನಗರದ ಪುರಭವನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ನಡೆ­ಸಲು ತೀರ್ಮಾನಿಸಲಾಯಿತು. ಕಲಾ­ತಂಡಗಳೊಂದಿಗೆ ಶ್ರೀಭುವನೇಶ್ವರಿ ದೇವಿಯ ಅದ್ದೂರಿ ಮೆರವಣಿಗೆಯಲ್ಲಿ ಜಾನಪದ ತಂಡಗಳನ್ನು ಕರೆಸಲು ತೀರ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ಅರ್ಥ­ಪೂರ್ಣ­­ವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ತಮ್ಮ ಸಹಕಾರವಿದೆ. ರಾಜ್ಯೋತ್ಸವ ಆಚರಿಸಲು ಎಲ್ಲಾ ಕನ್ನಡಪರ ಹಾಗೂ ವಿವಿಧ ಸಂಘಟನೆ­ಗಳ ಸಹಕಾರ ಅಗತ್ಯವಾಗಿದೆ. ತಾಲ್ಲೂ­ಕಿನಲ್ಲಿ ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದು, ಸಚಿವರ ಗಮನಕ್ಕೆ ತರಲಾಗಿದೆ ಎಂದರು. ಶಾಲೆಗಳಲ್ಲಿ ರಾಜ್ಯೋತ್ಸವ­ವನ್ನು ಅದ್ದೂರಿಯಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾ­ಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಪರಭಾಷೆ ಚಿತ್ರಪ್ರದರ್ಶನಕ್ಕೆ ವಿರೋಧ: ನವೆಂಬರ್ ಪೂರ್ತಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ, ಹೊಸ ಚಲನಚಿತ್ರ­ಗಳು ಸಿಗುವುದಿಲ್ಲ. ಚಿತ್ರಮಂದಿರ­ಗಳಲ್ಲಿ ಪ್ರೇಕ್ಷಕರ ಕೊರತೆಯಿದ್ದು, ತೀರಾ ನಷ್ಟ ಅನುಭವಿಸುವಂತಾಗುತ್ತಿದೆ. ಈ ನಿಟ್ಟಿ­ನಲ್ಲಿ ನ.೧ರಂದು ಮಾತ್ರ ಕನ್ನಡ ಚಿತ್ರ­ಗಳನ್ನು ಪ್ರದರ್ಶಿಸಿ, ಉಳಿದ ಸಮಯ­ದಲ್ಲಿ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸಲು ಕನ್ನಡಪರ ಸಂಘಟನೆಗಳ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅನುವು ಮಾಡಿಕೊಡಬೇಕು ಎಂದು ಚಿತ್ರಮಂದಿರದ ಮಾಲೀಕರು ಸಭೆ­ಯಲ್ಲಿ ಮನವಿ ಮಾಡಿದರು.

ಇದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯ­ಕರ್ತರು ವಿರೋಧ ವ್ಯಕ್ತಪಡಿಸಿ, ಇಡೀ ವರ್ಷ ಪರಭಾಷೆ ಚಿತ್ರಗಳನ್ನು ಪ್ರದ­ರ್ಶಿಸಿ ಹಣ ಗಳಿಸುವ ಚಿತ್ರಮಂದಿರದ ಮಾಲೀಕರು ಒಂದು ತಿಂಗಳು ಕನ್ನಡ ಚಿತ್ರಗಳನ್ನು ಪದರ್ಶಿಸಲು ನಿರ್ಲಕ್ಷಿ­ಸು­ವುದು ಸರಿಯಲ್ಲ. ಎಂದಿನಂತೆ ನವೆಂಬರ್‌­ನಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ತಹಶೀಲ್ದಾರ್ ಎಂ.ಕೆ.ರಮೇಶ್, ತಾ.ಪಂ ಅಧ್ಯಕ್ಷೆ ಶ್ಯಾಮಲಾ ಲಕ್ಷ್ಮೀಪತಿ, ಎಪಿಎಂಸಿ ಅಧ್ಯಕ್ಷ ತಿ.ರಂಗರಾಜು, ಉಪತಹಸೀಲ್ದಾರ್ ಶಿವರಾಜ್  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT