ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲದ ಒತ್ತಡದಿಂದ ಬರೆಯಲು ಪ್ರೇರಣೆ’

Last Updated 25 ಮೇ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸೃಜನಶೀಲ ಲೇಖಕ ಮಾತ್ರ ಚಿಂತನೆಯ ರಕ್ತ ಮಾಂಸದ ದ್ರವ್ಯಗಳನ್ನು ಅಕ್ಷರಕ್ಕಿಳಿಸಲು ಸಾಧ್ಯ’ ಎಂದು ವಿಮರ್ಶಕ ಡಾ.ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.

ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನವು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಮೈಯೇ ಸೂರು ಮನವೇ ಮಾತು’ ಎಂಬ ಅವರ ವಿಮರ್ಶಾ ಕೃತಿಗೆ  ‘ಪ್ರೊ.ಆ.ಸೊ. ವೆಂಕಟರಾಮಯ್ಯ ಆರಗ ವಿಮರ್ಶಾ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಆಯಾ ಕಾಲದ ಒತ್ತಡಗಳು ಪ್ರತಿಯೊಬ್ಬ ಲೇಖಕನನ್ನು ಬರೆಯಲು ಪ್ರೇರೆಪಿಸುತ್ತವೆ. 30 ವರ್ಷಗಳಿಂದ ಸಾಹಿತ್ಯ ವಿಮರ್ಶೆ, ಓದಿನಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಸುತ್ತಲೂ ಇರುವ ಸಂತಗುಣದ ಸ್ನೇಹಿತರಿಂದಾಗಿ ಸಾಹಿತ್ಯಿಕ ಮೌಲ್ಯಗಳನ್ನು ಇಂದಿಗೂ ಉಳಿಸಿಕೊಳ್ಳಲು ಸಾಧ್ಯವಾಗಿದೆ’ ಎಂದು ಹೇಳಿದರು.

‘ಇಂದಿನ ರಾಜಕೀಯ ಕುತಂತ್ರದಿಂದಾಗಿ ಪ್ರಜಾಪ್ರಭುತ್ವದ ನೈಜ ಸ್ವರೂಪ ಮರೆಯಾಗುತ್ತಿದೆ. ನನ್ನ ವಿಮರ್ಶಾ ಕೃತಿಯಲ್ಲಿ ಆಧುನಿಕ ಚಿಂತನೆಯ ಲೇಖನಗಳಿವೆ. ಅವುಗಳ ಮೂಲಕ ಪ್ರಜಾಪ್ರಭುತ್ವದ ನೈಜ ಚಿಂತನೆಯನ್ನು ವಿವರಿಸಲು ಪ್ರಯತ್ನಿಸಿದ್ದೇನೆ’ ಎಂದರು.

ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಮಾತನಾಡಿ,  ‘ಪ್ರೊ.ಆ.ಸು. ವೆಂಕಟರಾಮಯ್ಯ ಅವರದು ಸಾತ್ವಿಕ ವ್ಯಕ್ತಿತ್ವ. 30 ವರ್ಷಗಳ ಕಾಲ ನಾನು ಅವರೊಂದಿಗೆ ಒಡನಾಡಿದ್ದರೂ ಅವರು ತಾನೊಬ್ಬ ಕಥೆಗಾರ ಎಂದು ಹೇಳಿಕೊಂಡಿರಲಿಲ್ಲ. ಅವರಲ್ಲಿ ಪ್ರದರ್ಶಕ ಗುಣ ಇರಲಿಲ್ಲ’ ಎಂದರು.

ವಿಮರ್ಶಕ ಡಾ.ಬಸವರಾಜ ಕಲ್ಗುಡಿ ಅವರಿಗೆ ಪ್ರೊ.ಆ.ಸೊ.ವೆಂ.ಆರಗ ವಿಮರ್ಶಾ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ನೇರವಾಗಿ ಹೇಳುವ ಧೈರ್ಯ, ಮುಕ್ತ ಮನಸ್ಸು ಅವರಲ್ಲಿದೆ ಎಂದು ಹೇಳಿದರು. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಪ್ರೊ.ಜಿ.ಅಬ್ದುಲ್‌ ಬಷೀರ್‌ ಮಾತನಾಡಿ, ಪ್ರೊ.ಆ.ಸೊ.ವೆಂಕಟರಾಮಯ್ಯ ಅವರ ಪುತ್ರ ರಮೇಶ್‌ ಅವರು ಪ್ರತಿಷ್ಠಾನದಲ್ಲಿ ಸ್ಥಾಪಿಸಿರುವ ₨2 ಲಕ್ಷ ದತ್ತಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ₨10 ಸಾವಿರ ನಗದು,  ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT