ಭಾರತೀಸುತ ವೇದಿಕೆ (ಮಡಿಕೇರಿ): ‘ಕವಿ ಕಾಲದ ಕೂಸು’ ಎಂದು ಎಲ್.ಹನುಮಂತಯ್ಯ ತಮ್ಮ ಆಶಯ ಭಾಷಣದಲ್ಲಿ ಹೇಳುವಷ್ಟರಲ್ಲಿ ಗೋಷ್ಠಿಯಲ್ಲಿದ್ದ ಅರ್ಧದಷ್ಟು ಕವಿ/ ಕವಯಿತ್ರಿಯರು ಆ ಮಾತನ್ನು ಸಾಕಾರಗೊಳಿಸಿದ್ದರು.

ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಗುರುವಾರ ಸೂರ್ಯ ಮಂಜು ಸರಿಸಿ, ರಶ್ಮಿ ಬೀರಲು ಹೋರಾಡುತ್ತಿದ್ದಂಥ ವಾತಾವರಣದಲ್ಲಿ ಮುಖ್ಯ ವೇದಿಕೆಯ ಮೇಲೆ ಕವಿಗೋಷ್ಠಿ ಶುರುವಾಯಿತು. ಅತ್ಯಾಚಾರ, ಬಡತನ, ನಗರೀಕರಣ, ರಾಜಕಾರಣಿಗಳ ಅನುಕೂಲಸಿಂಧುತ್ವ, ಜಾತೀಯತೆ, ಅಭಿವೃದ್ಧಿಯ ಹೆಸರಿನಲ್ಲಿ ಉದ್ಭವಿಸಿರುವ ಸಮಸ್ಯೆಗಳು ಎಲ್ಲಕ್ಕೂ ಕನ್ನಡಿ ಹಿಡಿಯುವ ಧ್ವನಿಯನ್ನು ಕೆಲವರ ಕಾವ್ಯ ಬಿಂಬಿಸಿತು. ಲಯ, ಶಿಲ್ಪ, ಭಾವದ ಹದಬೆರೆತಂಥ ಪದ್ಯಗಳು ವಿರಳವಾಗಿದ್ದವು. ಆವೇಶ, ಕ್ಷಿಪ್ರ ಪ್ರತಿಕ್ರಿಯಾತ್ಮಕ ಧೋರಣೆಯ ಪದ್ಯಗಳ ಸಂಖ್ಯೆ ಹೆಚ್ಚಾಗಿತ್ತು. ಇದನ್ನು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಕೂಡ ಗುರುತಿಸಿದರು.

ಎಚ್ಚರ... ಅತ್ಯಾಚಾರಿಗಳ ಕಾಲ!
ತಾರಿಣಿ ಶುಭದಾಯಿನಿಯವರ ‘ಇಂದ್ರಪ್ರಸ್ಥ’ ಕವನವು ಅತ್ಯಾಚಾರದಂಥ ಸಮಸ್ಯೆಯ ಸಂಕೀರ್ಣತೆಯನ್ನು ಕೆಲವು ಶಕ್ತ ರೂಪಕಗಳಲ್ಲಿ ಕಟ್ಟಿಕೊಟ್ಟಿತು. ‘ಬಾ ಬೆಂಕಿಯೇ ತಿನ್ನು ಈ ಬನವನ್ನು’ ಎಂದು ಆರಂಭವಾದ ಅವರ ಕವಿತೆ, ‘ಸುಟ್ಟ ಬಾವು ಬೊಕ್ಕೆಯ ಮೇಲೆ ಬಿಳಿ ಮುಲಾಮು ಹಚ್ಚಿದ ಯುವತಿ’, ‘ಸುಟ್ಟ ಬೂದಿಯಲಿ ಉಳಿದ ಕೆಂಡದ ಕಾವು/ ಹನ್ನೆರಡು ವರ್ಷಗಳ ದ್ವೇಷದಲಿ ಕಾಯುತಿದೆ ಹಗೆಯ ಹಾವು’ ಎಂಬಂಥ ಸಾಲುಗಳನ್ನು ದಾಟಿಸಿತು.

ಇದೇ ಆಶಯವನ್ನು ಬೇರೆ ಶಿಲ್ಪದಲ್ಲಿ ಹೇಳಿದ್ದು ಡಾ.ಎಚ್.ಎಸ್.ಅನುಪಮ ಅವರ ಕವಿತೆ. ಅದರ ಶೀರ್ಷಿಕೆಯೇ ‘ಕವಿತೆ ಎಚ್ಚರ... ಇದು ಅತ್ಯಾಚಾರಿಗಳ ಕಾಲ’. ಕೊಡಗಿನ ಬದಲಾದ ಚಿತ್ರವನ್ನು ಹಲವು ಸಾಲುಗಳಲ್ಲಿ ಹೇಳಿ ಅವರ ಕವಿತೆ ಬೇರೆ ಪರಿಧಿಗೆ ಜಿಗಿಯಿತು. ‘ದಾಕ್ಷಿಣ್ಯಕ್ಕೆ ಬಸುರಾದರೆ ಹೆರಲು ಜಾಗ ಸಿಗುವುದಿಲ್ಲ/ ತಾಯೆ, ಎದೆಗೆ ಮೆತ್ತಿದ ನೋವ ತುಟಿಗಂಟಿಸಿಕೊಂಡು ಬದುಕಿಬಿಡು’ ಎಂಬಂಥ ಎಚ್ಚರಿಕೆಯ ಧಾಟಿ ಅವರದ್ದು.

ಮುಗ್ಧ ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಪ್ರೊ.ಟಿ. ಯಲ್ಲಪ್ಪ ಅವರನ್ನು ಕಾಡಿವೆ. ‘ಮೇಲೊಂದು ಗರುಡ ಹಾರುತಿಹುದು /ಕೆಳಗದರ ನೆರಳಿನಲ್ಲಿ ಹೂಮರಿಗಳೆಷ್ಟೋ ಇನ್ನೂ ಆಡುತಿಹವು... ಬಟ್ಟಲುಗಣ್ಣ ತುಂಬೆಲ್ಲ ಹೆಪ್ಪುಗಟ್ಟಿದ ನೋವು’– ಇವು ಅವರಿಟ್ಟ ಸಾಲುಗಳು.

‘ಭಾಷೆಯ ವೀರ್ಯದಿಂದಲೇ ಆತ ಪಡೆದದ್ದು ಗರ್ಭದ ಸಂಯೋಗ’ ಎಂಬ ಸಾಲನ್ನು ತಮ್ಮ ‘ಸಾಲಂಕೃತ ಗುಲಾಮಿ’ ಪದ್ಯದಲ್ಲಿ ಮೂಡಿಸಿದವರು ಕವಯಿತ್ರಿ ಕವಿತಾ ರೈ.

ಈ ಎಲ್ಲಾ ಕವನಗಳ ಸಾಲುಗಳ ನಡುವೆ ಅಡಗಿದ್ದ ಉದ್ದೇಶದಲ್ಲಿ ಸಾಮ್ಯವಿತ್ತು.

ಸಮಸ್ಯೆಗಳು ಇನ್ನೂ ಇವೆ: ‘ತ್ರಿವರ್ಣ ಧ್ವಜದ ಮೇಲೆ ನರಳುತ್ತಿರುವ ನನ್ನಾತ್ಮದ ಗುರುತು’ ಎಂಬ ಪೀರ್ಬಾಷಾ ಹೇಳಿದ ಸಾಲನ್ನು ವೆಂಕಟೇಶಮೂರ್ತಿ ತಮ್ಮ ಅಧ್ಯಕ್ಷ ಭಾಷಣದಲ್ಲಿ ನೆನಪಿಸಿಕೊಂಡು, ಅಂಥ ಸಾಲುಗಳು ಹಿಡಿದು ಕೂರಿಸುವಂಥವು ಎಂದರು.
‘ಈಗಲೇ ಬೀಳುವ ಸೂರು/ ತಂಗಳು ಮುದ್ದೆಗೆ ಎರಡು ದಿನಗಳ ಸಾಲು’– ಹೀಗೆ ಬಡತನದ ಚಿತ್ರಣದೊಂದಿಗೆ ಶುರುವಾಗುವ ಗೊರೂರು ಶಿವೇಶ್ ಅವರ ಪದ್ಯ, ಭೂಮಿಯ ಮೇಲೆ ಬೇರುಬಿಟ್ಟ ತಾಯಿಪ್ರೀತಿಯ ತೀವ್ರತೆ ಕಟ್ಟಿಕೊಡುತ್ತಲೇ ರಿಯಲ್ ಎಸ್ಟೇಟ್ ಸಮಸ್ಯೆಗೆ ಕನ್ನಡಿ ಹಿಡಿಯಿತು.

ಎಸ್.ಎಸ್.ಹಳ್ಳೂರ, ‘ಓ ದೇವರುಗಳೆ ನಿಮಗೇಕೆ ಇಷ್ಟೊಂದು ಐಶ್ವರ್ಯ?’ ಎಂದು ತಮ್ಮ ವಾಚ್ಯವಾದ ಸಾಲುಗಳಲ್ಲಿ ಕೇಳಿದರು. ‘ಗಾಳಿ ಬೀಸಿದರೆ ಗೌಡರ ಹುಡುಗನ ರೊಟ್ಟಿ ನನ್ನೆಡೆಗೆ ಹಾರಿ ಬರುತ್ತಿತ್ತು’ ಎಂಬುದು ಬಸವರಾಜ ಸೂಳಿಬಾವಿ ಅವರ ನಿರೀಕ್ಷೆ. ‘ಗೋರಿ ಇವೆ ಗುಡಿ ಇವೆ ಶಾಸನಗಳು ಏನೆಲ್ಲಾ ಇವೆ/ ಎಲ್ಲಾ ಇದ್ದೂ ಕಳೆದುಹೋಗಿದ್ದೇವೆ; ವಿಳಾಸವಿಲ್ಲದೆ’ ಎಂದ ಎಚ್.ಎಲ್.ಪುಷ್ಪಾ ಅವರ ಕಣ್ಣಿಗೆ ಚಂದಿರನೂ ವಯಸ್ಸಾದಂತೆ ಕಂಡಿದ್ದಾನೆ.

ಎಸ್.ಸಿ.ದಿನೇಶ್ ಕುಮಾರ್ ‘ಹೌದು ಸ್ವಾಮಿ’ ಎಂಬ ಕವನದ ಸಾಲುಗಳಿಗೆ ವ್ಯಂಗ್ಯ ಸವರಿ ಜಾತಿ ತರತಮದ ಧ್ವನಿಯನ್ನು ದಾಟಿಸಿದರು.
ವಸ್ತು ವೈವಿಧ್ಯ: ಎಸ್.ಎಂ.ಕಂಬಾಳಿಮಠ್, ನೆಲ್ಸನ್ ಮಂಡೇಲಾ ಕುರಿತ ‘ಕಪ್ಪು ಸೂರ್ಯ’ ಕವನ ಓದಿದರು. ವೈ.ಎಂ.ಯಾಕೊಳ್ಳಿ ಮೊಬೈಲ್ ಬಗೆಗಿನ ತೆಳುವಾದ ಸಾಲುಗಳ ಪದ್ಯ ಹೇಳಿದರು. ವಡ್ಡಗೆರೆ ನಾಗರಾಜಯ್ಯ ಹಾಡಿನ ಶೈಲಿಯಲ್ಲೇ ದೇಸಿ ಕವಿತೆ ವಾಚಿಸಿದರೆ, ಭಾರತಿ ಪಾಟೀಲರು ಬುದ್ಧನೂ ಸಿದ್ಧಾರ್ಥನೂ ಆಗುವ ಗಂಡನ ಕುರಿತ ಮಹಿಳೆಯ ಹಳಹಳಿಕೆಯನ್ನು ಅರುಹಿಸಿದರು.

ಮಾಲತಿ ಪಟ್ಟಣಶೆಟ್ಟಿ ಗುಬ್ಬಚ್ಚಿಗಳನ್ನೂ ಬ್ರಹ್ಮಾಂಡದ ಶಕ್ತಿಯನ್ನೂ ಒಂದು ರೂಪಕದಲ್ಲಿ ಹಿಡಿದಿಡುವ ಯತ್ನ ಮಾಡಿದರೆ, ಹಿರಿಯ ಕವಿ ಡಾ.ಜಿ.ಎಸ್.ಉಬರಡ್ಕ ‘ನಿಜಗುಣ’ ಪದ್ಯದಲ್ಲಿ ಮಹಾಭಾರತದ ಶಾಂತಿಪರ್ವದ ಪ್ರಸಂಗವನ್ನು ಅಡಕಮಾಡಿದರು.

ವಾಚ್ಯವೂ ಹಾಡೂ: ‘ಹಾಳು ಹಂಪಿಯ ನೆರಳು’ ಕವನದಲ್ಲಿ ಅಪ್ಪಾಜಿ ನಗರೀಕರಣದ ಸಮಸ್ಯೆಯನ್ನು ಅತಿ ವಾಚ್ಯವಾಗಿ ಹೇಳಿದರು. ಜಿ.ನಾರಾಯಣ ಸ್ವಾಮಿ ‘ರಾಜಕೀಯ ರಣಹದ್ದುಗಳು’ ಎಂಬ ಎಲ್ಲಾ ಸಮಸ್ಯೆಗಳನ್ನು ಹೇಳುವ ಧಾವಂತವಿದ್ದ ತೆಳುವಾದ ಕವನವನ್ನು ವೀರಾವೇಷದಿಂದ ಓದಿ, ಚಪ್ಪಾಳೆ ಗಿಟ್ಟಿಸಿದರು.

‘ಕಾವೇರಿಗೆ ಸ್ನಾನ ಮಾಡಿಸಬೇಕು’ ಎಂಬ ಗಮನಾರ್ಹ ಸಾಲಿನ ಸಣ್ಣ ಕವನವನ್ನು ಕುಶಾಲನಗರದ ಭಾರದ್ವಾಜ್ ಕೆ.ಆನಂದತೀರ್ಥ ವಾಚಿಸಿದರು. ಜನಪದ ಗಾಯಕ ಮೋಹನ್ ಪಾಳೇಗಾರ್ ದೊಡ್ಡ ಪದ್ಯವನ್ನು ತುಸುವೂ ಬೇಸರವಿಲ್ಲದೆ ಹಾಡಿದರು.
ಎರಡು ಗಂಟೆಗೆ ನಿಗದಿಯಾಗಿದ್ದ ಗೋಷ್ಠಿ ಮೂರೂವರೆ ಗಂಟೆಯವರೆಗೆ ಲಂಬಿಸಿತು.

ಮಾತು ಬೇರ್ಪಡಿಸುವ ಕಷ್ಟ
‘ಮಾತಿನಿಂದ ಕವಿತೆಯನ್ನು ಬೇರ್ಪಡಿಸಿಕೊಳ್ಳುವುದು ಹೇಗೆ ಎಂಬುದು ಈ ಕಾಲದ ಕವಿಗಳ ದೊಡ್ಡ ಸಮಸ್ಯೆ’ ಕವಿಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ಎಚ್.ಎಸ್.ವೇಂಕಟೇಶ ಮೂರ್ತಿ ಹೇಳಿದ ಕಿವಿಮಾತು ಇದು.

‘ಎಲ್ಲಾ ಬಗೆಯ ಮಾತುಗಳಿಂದ ಕವಿತೆ ಬೇರ್ಪಡಿಸುವುದು ಸುಲಭವಲ್ಲ. ಸಮಾಜಮುಖತೆ, ಅಂತರಂಗದ ಅಭಿವ್ಯಕ್ತಿ ಎರಡನ್ನೂ ಕವಿತೆ ಸಾಧಿಸಬೇಕು. ಭೂಮಿ ತನ್ನ ಪರಿಧಿಯಲ್ಲಿ ತಾನು ಹಾಗೂ ಸೂರ್ಯನ ಸುತ್ತ ಏಕಕಾಲದಲ್ಲಿ ಸುತ್ತುವ ಗುಣ ಕವಿತೆಗಳಿಗೆ ಇರಬೇಕು’ ಎಂದು ತಮ್ಮ ನಿರೀಕ್ಷೆಯನ್ನು ಹೇಳಿಕೊಂಡರು.

ನಾಲ್ಕು ತಾಸಿನಷ್ಟು ದೀರ್ಘಾವಧಿ ಪ್ರೇಕ್ಷಕರನ್ನು ಕವಿತೆಗಳು ಮಾತ್ರ ಹಿಡಿದು ಕೂರಿಸಬಲ್ಲವು ಎಂಬುದು ಗುರುವಾರ ಅವರಿಗಾದ ಅನುಭವ. ‘ನೂರು ಮರ ನೂರು ಸ್ವರ/ ಒಂದೊಂದೂ ಅತಿಮಧುರ’ ಎಂಬ ಬೇಂದ್ರೆಯವರ ಸಾಲುಗಳನ್ನು ಉಲ್ಲೇಖಿಸಿದ ಅವರು, ‘ನೂರು ಮರ ನೂರು ಸ್ವರ/ ಒಂದೊಂದೂ ಬೇರೆ ಥರ’ ಎಂದು ಈ ಗೋಷ್ಠಿಗೆ ಅನ್ವಯಿಸಿ ಹೇಳಿದರು. ಹತ್ತು ನಿಮಿಷಕ್ಕೆ ತಮ್ಮ ಭಾಷಣವನ್ನು ಸೀಮಿತಗೊಳಿಸಿದ ಅವರು ಮೂರು ಪದ್ಯಗಳನ್ನು ವಾಚಿಸಿದರು.

ಮುಚ್ಚಿರುವ ಬಾಗಿಲುಗಳ ತೆರೆಯಿರಿ: ‘ನಿಜಧರ್ಮದ ದಾರಿ ಇಲ್ಲವಾಗಿದೆ. ಅಧ್ಯಾತ್ಮದ ಹಾದಿಯೂ ಕಲ್ಲುಮುಳ್ಳಿನಿಂದ ತುಂಬಿದ ಕಾಲಮಾನವಿದು. ಮುಚ್ಚಿರುವ ಬಾಗಿಲುಗಳ ತೆರೆದು ನೋಡುವ ಒಳಗಣ್ಣನ್ನು ಕಾವ್ಯ ನೀಡಬೇಕು’ ಎಂಬ ಸಲಹೆಯನ್ನು ಕವಿ ಎಲ್.ಹನುಮಂತಯ್ಯ ತಮ್ಮ ಆಶಯ ಭಾಷಣದಲ್ಲಿ ಕೊಟ್ಟರು.

ಯುವಪಡೆಯ ಕಾವ್ಯರಚನೆಯು ಆಶಾದಾಯಕವಾಗಿದೆ, ಬಿರುಸನ್ನು ಇಟ್ಟುಕೊಂಡಿದೆ ಎಂದ ಅವರು, ಕಾಲದ ಕೂಸಾದ ಕವಿಯ ಪರಂಪರೆಯನ್ನು ಮೆಲುಕು ಹಾಕಿದರು. ಪರಹಿತವನ್ನು, ಪರರ ವಿಚಾರಗಳನ್ನು ಸಹಿಸುವ ಗುಣವೇ ಚಿನ್ನ ಎಂಬ ಕವಿರಾಜಮಾರ್ಗಕಾರನ ಮಾತನ್ನು ನೆನಪಿಸಿದರು. ಅಲ್ಲಮಪ್ರಭುವಿನ ‘ಹಿಂದಣ ಹೆಜ್ಜೆಯನರಿಯದೆ ನಿಂದ ಹೆಜ್ಜೆಯನರಿಯಬಾರದು’ ಎಂಬ ನುಡಿಮುತ್ತನ್ನೂ ಹೇಳಿದರು. ಅವರು ಆಶಯ ಭಾಷಣ ಮಾಡುವಷ್ಟರಲ್ಲಿ ಗೋಷ್ಠಿಯಲ್ಲಿ ಅರ್ಧದಷ್ಟು ಕವಿಗಳು ಕವಿತೆ ವಾಚನ ಮಾಡಿ ಆಗಿತ್ತು.

ಡಿಸೋಜ ಕ್ಷಮೆ ಕೇಳಬೇಕಿಲ್ಲ
ಬಸವರಾಜ ಸೂಳಿಬಾವಿ, ಬಿ.ಪೀರ್ಬಾಷಾ, ಡಾ.ಎಚ್.ಎಸ್.ಅನುಪಮ, ರಮೇಶ ಹಿರೇಜಂಬೂರ ಕವಿತೆ ವಾಚಿಸುವ ಮೊದಲು ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಂಬಲ ಸೂಚಿಸಿದರು. ಇಬ್ಬರು ರಾಜಕಾರಣಿಗಳು ಕ್ಷಮೆ ಕೇಳುವಂತೆ ಅವರನ್ನು ಒತ್ತಾಯಿಸಿರುವುದು ಸರಿಯಲ್ಲ ಎಂದು ಅವರೆಲ್ಲಾ ನಾ.ಡಿಸೋಜ ಅವರನ್ನು ಬೆಂಬಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.