ಬೆಂಗಳೂರು: ‘ಕುಮಾರವ್ಯಾಸ ಕೇವಲ ವಿದ್ವಾಂಸರಿಗೆ ಅರ್ಥವಾಗುವ ಕವಿ ಎಂಬುದು ತಪ್ಪು ಕಲ್ಪನೆ. ಆತ ಜನಪದ ಕವಿ. ಜನಪರವಾಗಿದ್ದವನು’ ಎಂದು ಕವಿ ಡಾ.ಸಾ.ಶಿ.ಮರುಳಯ್ಯ ಅವರು ಅಭಿಪ್ರಾಯಪಟ್ಟರು.

ನಗರದ ವಾಡಿಯಾ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಅ.ರಾ.ಮಿತ್ರ ಸಂಪಾದಿಸಿರುವ ‘ಕುಮಾರವ್ಯಾಸ ಭಾರತ ಸಂಗ್ರಹ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಯಾವುದೇ ಗ್ರಂಥದ ಸಂಗ್ರಹ ಅಷ್ಟು ಸುಲಭವಲ್ಲ. ಕುಮಾರವ್ಯಾಸ ಭಾರತ ಸಂಗ್ರಹ ಮತ್ತಷ್ಟು ಕಠಿಣವಾದ ಕೆಲಸ. ಅಂಥ ಕೆಲಸವನ್ನು ಮಿತ್ರ ಅವರು ಸುಲಲಿತವಾಗಿ ಮಾಡಿದ್ದಾರೆ. ಅವರ ಸಂಗ್ರಹ ಶಕ್ತಿ ಅದ್ಭುತ’ ಎಂದು ಬಣ್ಣಿಸಿದರು.

‘ಈ ಸಂಗ್ರಹದಲ್ಲಿ ಸಣ್ಣ ತಪ್ಪುಗಳು ಉಳಿದುಕೊಂಡಿವೆ. ಪ್ರಮುಖ ಪದ್ಯಗಳು ಕೈತಪ್ಪಿ ಹೋಗಿವೆ. ಕರ್ಣನ ಸಾವಿನ ಸಂದರ್ಭದಲ್ಲಿ ಕೃಷ್ಣ ದರ್ಶನ ಕೊಟ್ಟ ಕ್ಷಣದಲ್ಲಿ ಒಂದು ಪದ್ಯ ಇರಬೇಕಿತ್ತು. ಮಹಾಭಾರತಕ್ಕೆ ಕರ್ಣನ ಉಪಸ್ಥಿತಿಯಿಂದಾಗಿ ತೂಕ ಬಂದಿದೆ. ಇಲ್ಲದಿದ್ದರೆ ಕೇವಲ ಅಣ್ಣ ತಮ್ಮಂದಿರ ಜಗಳವಾಗುತ್ತಿತ್ತು. ಕರ್ಣನ ನಿಷ್ಠೆ ಅದ್ಭುತ. ಆದರೆ, ಕೊನೆಯಲ್ಲಿ ಭೂಮಿತಾಯಿ ಕೂಡ ಆತನಿಗೆ ದ್ರೋಹ ಬಗೆಯುತ್ತಾಳೆ’ ಎಂದು ವ್ಯಾಖ್ಯಾನಿಸಿದರು.

ಸಾಹಿತಿ ಡಾ.ಪಿ.ವಿ.ನಾರಾಯಣ ಅವರು ಕುಮಾರವ್ಯಾಸ ಭಾರತ ಗ್ರಂಥವನ್ನು ಆಧಾರವಾಗಿಟ್ಟುಕೊಂಡು ಕನ್ನಡ ಸಾಹಿತ್ಯದ ಇತಿಹಾಸವನ್ನು ಹೊಸ ರೀತಿಯಲ್ಲಿ ವಿಶ್ಲೇಷಿಸಿದರು.

‘ಕನ್ನಡದ ಜನಪ್ರಿಯ ಕವಿ ಕುಮಾರವ್ಯಾಸ. ಕನ್ನಡ ಇರುವವರೆಗೆ ಆತನ ಹೆಸರು ಶಾಶ್ವತ. ಹಾಗೇ, ಆತನನ್ನು ಟೀಕಿಸುವ ಹಕ್ಕು ಕೂಡ ನಮಗಿದೆ. ಅದೇನೇ ಇರಲಿ, ಮಿತ್ರ ಅವರು ಕಷ್ಟದ ಕೆಲಸವನ್ನು ಕೈಗೆತ್ತಿಕೊಂಡು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಕುಮಾರವ್ಯಾಸ ಪೀಠಕ್ಕೆ ಮಿತ್ರ ಅಧಿಪತಿ ಎನ್ನಬಹುದು’ ಎಂದರು.

‘ಇಷ್ಟಾಗಿಯೂ ಈ ಸಂಗ್ರಹದಲ್ಲಿ ಕೆಲ ಕೊರತೆಗಳಿವೆ. ಕುಮಾರವ್ಯಾಸ ರಚಿಸಿರುವ ಪದ್ಯಗಳಲ್ಲಿ ಶೇ 30ರಷ್ಟನ್ನು ಮಾತ್ರ ಇಲ್ಲಿ ಬಳಸಲಾಗಿದೆ’ ಎಂದು ಹೇಳಿದರು.

ತಮ್ಮ ಸಂಪಾದಕತ್ವದ ಕೃತಿ ಬಗ್ಗೆ ಮಾತನಾಡಿದ ಅ.ರಾ.ಮಿತ್ರ ಅವರು, ‘ಕೆಲ ಪದ್ಯಗಳನ್ನು ಬಳಸಿಲ್ಲ ಎಂಬ ದೂರು ಈ ಸಭೆಯಲ್ಲಿ ವ್ಯಕ್ತವಾಗಿದೆ. ಆದರೆ, ಈ ಕೃತಿಯನ್ನು ಇತಿಮಿತಿಯಲ್ಲಿ ಸಂಪಾದಿಸಿದ್ದೇನೆ. ಮೂಲಗ್ರಂಥವನ್ನು ಜನ ಸಾಮಾನ್ಯರಿಗೆ, ಗಮಕಿಗಳಿಗೆ ಸುಲಭವಾಗಿ ಅರ್ಥ ಮಾಡಿಸಬೇಕು ಎಂಬುದು ನನ್ನ ಉದ್ದೇಶ. ನೀವು ಹೇಳಿದ ಪದ್ಯವನ್ನೇ ಹಾಕುತ್ತೇನೆ. ಈ ಸಂಗ್ರಹದಲ್ಲಿರುವ ಯಾವ ಪದ್ಯವನ್ನು ತೆಗೆದು ಹಾಕಬೇಕು ಎಂಬುದನ್ನು ನೀವೇ ಹೇಳಿ’ ಎಂದರು.

‘ಕುಮಾರವ್ಯಾಸ ಹರಿಯುವ ನದಿ ಇದ್ದಂತೆ. ಆತನನ್ನು ಒಂದು ಕೊಡದಲ್ಲಿ ಹಿಡಿದಿಡುವುದು ಅಸಾಧ್ಯ. ಅಂಥ ಮಹಾಕವಿಯ ಬಗ್ಗೆ ಕೊಡದಷ್ಟಾದರೂ ಮಾಹಿತಿಯನ್ನು ಜನರಿಗೆ ತಲುಪಿಸಬೇಕು. ಆತನ ಬಗ್ಗೆ ನನಗೆ ಹುಚ್ಚು ಅಭಿಮಾನವಿದೆ. ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೇ ಆಸಕ್ತಿ ಬೆಳೆಯಿತು. ಆತನೊಂದಿಗಿನ ಸಂಬಂಧಕ್ಕೆ ಈಗ 70 ವರ್ಷ’ ಎಂದು ನುಡಿದರು.

ಹಿರಿಯ ವಿದ್ವಾಂಸ ಪ್ರೊ.ಎಂ.ಎಚ್.ಕೃಷ್ಣಯ್ಯ, ‘ಕೃತಿ ಸಂಪಾದನೆಯಲ್ಲಿ ಕವಿಯ ಜೀವನ ದರ್ಶನ ಮಾತ್ರವಲ್ಲ; ಸಂಪಾದಕನ ಜೀವನ ದೃಷ್ಟಿಯೂ ಇರುತ್ತದೆ. ಮೂಲಗ್ರಂಥವನ್ನು ಮೂರನೇ ಒಂದು ಭಾಗಕ್ಕೆ ಇಳಿಸುವುದಷ್ಟೇ ಲೇಖಕನ ಕೆಲಸವಲ್ಲ. ಹಾಗಾಗಿ ಸಂಗ್ರಹವನ್ನು ಹಗುರವಾಗಿ ಪರಿಗಣಿಸಬೇಕಾಗಿಲ್ಲ. ವಿಸ್ತಾರವಾದ ಪ್ರಸ್ತಾವನೆ ಕಟ್ಟಿಕೊಡುವುದು ಕೂಡ ಮುಖ್ಯ’ ಎಂದು ಅಭಿಪ್ರಾಯಪಟ್ಟರು.
ಬಿಡುಗಡೆಯಾದ ಪುಸ್ತಕ: ಕುಮಾರವ್ಯಾಸ ಭಾರತ ಸಂಗ್ರಹ: ಬೆಲೆ: ₨ 400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.