ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೂಲಿಯೂ ಇಲ್ಲ, ಊಟವೂ ಇಲ್ಲ’

Last Updated 31 ಜುಲೈ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನೂರು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ. ಮನೆ ಬಿಟ್ಟು ಬಂದು 6 ವರ್ಷಗಳಾದವು. ಮಂಡಿಯಲ್ಲಿ ಮೂಟೆ ಹೊರುವ ಕೂಲಿ ಕೆಲಸ ಮಾಡುತ್ತಿದ್ದೇನೆ. ದಿನಕ್ಕೆ ರೂ 150 ಹಣ ಸಿಗುತ್ತೆ. ಮನೆ ಇಲ್ಲ. ಸರಕು ಸಾಗಣೆ ಲಾರಿಯಲ್ಲೇ ಮಲಗಿ ರಾತ್ರಿಗಳನ್ನು ಕಳೆಯುತ್ತೇನೆ. ಆದರೆ, ಬಂದ್‌ನಿಂದಾಗಿ ಗುರುವಾರ 10 ರೂಪಾಯಿ ಕೂಡ ಸಿಗಲಿಲ್ಲ. ಕೂಲಿ ನಂಬಿಕೊಂಡೇ ದಿನ ದೂಡುವ ನನಗೆ ಈ ರೀತಿ ಬಂದ್‌ಗಳಿದ್ದಾಗ ತುಂಬಾ ಕಷ್ಟವಾಗುತ್ತದೆ’
–ಹೀಗೆಂದು ಹೇಳಿ ಬೇಸರ ವ್ಯಕ್ತಪಡಿಸಿದ್ದು ಕೆ.ಆರ್‌. ಮಾರುಕಟ್ಟೆಯಲ್ಲಿ ಮೂಟೆ ಹೊರುವ ಪುಟ್ಟಣ್ಣ.

‘ಇಡೀ ದಿನ ಲಾರಿಗಳೇ ಬರಲಿಲ್ಲ. ಇನ್ನೆಲ್ಲಿ ಕೂಲಿ? ಬೆಳಿಗ್ಗೆಯಿಂದ ಕಾದೆ. ಕೂಡಿಟ್ಟಿದ್ದ ಹಣವನ್ನು ಬಟ್ಟೆಗೆಂದು ಖರ್ಚು ಮಾಡಿದ್ದೆ. ಬೆಳಿಗ್ಗೆ, ಮಧ್ಯಾಹ್ನ ಕಾಫಿ ಕುಡಿದು ದಿನ ದೂಡಿದೆ. ರಾತ್ರಿಯ ಊಟಕ್ಕೇನು ಮಾಡುವುದು ಎಂಬ ಚಿಂತೆ ಶುರುವಾಗಿದೆ’ ಎಂದು ಅವರು ಭಾವುಕರಾದರು.

ಬಂದ್‌ನಿಂದಾಗಿ ಕೆಲಸ ಇಲ್ಲದೇ ಗುರುವಾರ ನೂರಕ್ಕೂ ಅಧಿಕ ಕೂಲಿ ಕಾರ್ಮಿಕರು ಕೆ.ಆರ್‌.ಮಾರುಕಟ್ಟೆಯ ಮೇಲ್ಸೇತುವೆ ಕೆಳಗೆ ಕುಳಿತ್ತಿದ್ದರು. ಕೆಲವರು ಟ್ರಾಲಿಯೊಳಗೆ ಮಲಗಿ ನಿದ್ರಿಸುತ್ತಿದ್ದರು. ಅವರೆಲ್ಲಾ ಬಂದ್‌ನಿಂದ ತಮಗಾದ ನಷ್ಟವನ್ನು ಹೇಳಿಕೊಂಡರು.
‘ದಿನಕ್ಕೆ ರೂ 150–200 ಹಣ ಸಿಗುತ್ತೆ. ಬಂದ್‌ನಿಂದಾಗಿ ಏನೂ ಸಿಕ್ಕಿಲ್ಲ. ಹೋಟೆಲ್‌ನಲ್ಲಿ ಅನ್ನ ಸಾಂಬಾರ್‌ಗೆ ರೂ 30 ಕೇಳುತ್ತಾರೆ. ಯಾರಿಗೇನಾದರೆ ನಮಗೇನು? ಕೂಲಿ ಇಲ್ಲದಿದ್ದರೆ ನಮಗೆ ಊಟವೂ ಸಿಗಲ್ಲ’ ಎಂದು ಮತ್ತೊಬ್ಬ ಕಾರ್ಮಿಕ ರಂಗಪ್ಪ ತಿಳಿಸಿದರು.

ಟ್ರಾಲಿಯಲ್ಲಿ ಹೂವು ಹಾಗೂ ತರಕಾರಿ ಸಾಗಿಸುವ ಮಣಿ ಅವರದ್ದು ಮತ್ತೊಂದು ಕಥೆ. ‘ನಾನು ಇಲ್ಲಿ 10 ವರ್ಷದ ಬಾಲಕನಾಗಿದ್ದಾಗಿನಿಂದ ತಂದೆ ಜೊತೆ ಕೆಲಸ ಮಾಡುತ್ತಿದ್ದೇನೆ. ಈಗ 37 ವರ್ಷವಾಗಿದೆ. ದಿನದ ದುಡಿಮೆ ರೂ 200 ದಾಟಿಲ್ಲ. ಬಂದ್‌ನಿಂದಾಗಿ ಈ ದಿನ ಅದಕ್ಕೂ ಕುತ್ತು ಬಿದ್ದಿದೆ. ಹೆಂಡತಿ ಮಕ್ಕಳಿಗೆ ಏನು ಹೇಳುವುದು’ ಎಂದರು.

ಮಣಿ ಅವರ ಸಹೋದರ ಶ್ರೀನಿವಾಸ್‌ ಕೂಡ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೂವರು ಮಕ್ಕಳು. ಈ ದುಡಿಮೆ ಯಿಂದಲೇ ಅವರ ಜೀವನ ಸಾಗುತ್ತಿದೆ. ‘ದಿನದ ದುಡಿಮೆಯಿಂದ ಪ್ರತಿ ದಿನ ರೂ 50 ಹಣವನ್ನು ಮಕ್ಕಳ ಭವಿಷ್ಯಕ್ಕಾಗಿ ಎತ್ತಿಡುತ್ತಿದ್ದೇನೆ. ಬಂದ್‌ನಿಂದಾಗಿ ರೂ 150 ಹಣ ನಷ್ಟವಾಯಿತು’ ಎಂದು ಶ್ರೀನಿವಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT