ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃತಕ ಹಾಲು ತಯಾರಿಕೆ ತಡೆಗೆ ಕಾನೂನು’

Last Updated 29 ಸೆಪ್ಟೆಂಬರ್ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು: ರಾಸಾಯನಿಕ ಬಳಸಿ ಕೃತಕವಾಗಿ ವಿಷಯುಕ್ತ ಹಾಲು ತಯಾ­ರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ರೂಪಿಸುವು­ದಾಗಿ ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಲ (ಕೆಎಂಎಫ್‌) ಮತ್ತು ಟೆಟ್ರಾ ಪ್ಯಾಕ್‌ ಇಂಡಿಯಾ ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ‘ವಿಶ್ವ ಹೃದಯ ದಿನಾ­ಚರಣೆ’ ಉದ್ಘಾಟಿಸಿದ ಅವರು, ‘ರಾಸಾಯನಿಕಗಳನ್ನು ಬಳಸಿ ವಿಷಯುಕ್ತ ಹಾಲು ತಯಾರಿಸಿ ಜನರಿಗೆ ವಿತರಿಸುವ ಜಾಲ ಆಂಧ್ರಪ್ರದೇಶ ಮತ್ತು ಮಹಾ­ರಾಷ್ಟ್ರದ ಗಡಿ ಭಾಗ­ಗಳಲ್ಲಿ ಇವೆ. ಈ ಜಾಲವನ್ನು ನಿಯಂತ್ರಿಸಲು ಸಾಧ್ಯವಾ­ಗುತ್ತಿಲ್ಲ’ ಎಂದರು.

ಸನ್ಮಾನ: ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್‌ ಮಂಜುನಾಥ್‌,  ಮಲ್ಯ ಆಸ್ಪತ್ರೆಯ ಹೃದಯ ತಜ್ಞ ಡಾ.ವಿ.ಕೆ. ಶ್ರೀನಿವಾಸ್‌, ಸಮತ್ವಂ–ಎಂಡೊ ಕ್ರೈನಾಲಜಿ ಡಯಾ­ಬಿಟಿಕ್‌ ಸೆಂಟರ್‌ನ ಡಾ. ಎಸ್‌.ಎಸ್‌. ಶ್ರೀಕಂಠ ಅವರನ್ನು ಸಚಿವರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

ಬಳಿಕ ವಿಶೇಷ ಉಪನ್ಯಾಸ ನೀಡಿದ ಡಾ. ಮಂಜುನಾಥ್‌, ‘ದೇಶದಲ್ಲಿ ಶೇ 75­ರಷ್ಟು ಜನರು ವಿಟಮಿನ್‌ ‘ಡಿ’ ಕೊರ­ತೆ­ಯಿಂದ ಬಳಲು­ತ್ತಿದ್ದಾರೆ. ಹೃದಯ ಕಾಯಿಲೆಗೆ ಹಾಗೂ ವಿಟ­ಮಿನ್‌ ‘ಡಿ’ ಕೊರತೆಯ ನಡುವೆ ಸಂಬಂಧವಿದೆ ಎಂದು ಇತ್ತೀಚಿನ ಸಂಶೋಧನೆಗಳು ಹೇಳಿವೆ. ಇದನ್ನು ಗಮನದ­ಲ್ಲಿಟ್ಟು­ಕೊಂಡು ಒಂದೂವರೆ ವರ್ಷದ ಹಿಂದೆ ಕೆಎಂಎಫ್‌ಗೆ ಪತ್ರ ಬರೆದು, ನಂದಿನಿ ಹಾಲಿನಲ್ಲಿ ವಿಟಮಿನ್‌ ‘ಎ’ ಮತ್ತು ‘ಡಿ’ ಸೇರಿಸುವ ಪ್ರಯತ್ನ ಮಾಡುವಂತೆ ಮನವಿ ಮಾಡಿದ್ದೆ. ಈಗ ಕೆಎಂಎಫ್‌ ಅಂತಹ ಹಾಲನ್ನು ಪೂರೈಸುತ್ತಿರುವುದು ಖುಷಿ ನೀಡಿದೆ’ ಎಂದರು.

ಗರ್ಭಿಣಿಯರಿಗೆ ಪ್ರತ್ಯೇಕ ಹಾಲು: ಪ್ರಸ್ತಾವಿಕವಾಗಿ ಮಾತನಾಡಿದ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎ.ಎಸ್‌. ಪ್ರೇಮನಾಥ್‌, ಗರ್ಭಿಣಿ­ಯರಿಗಾಗಿ ಹೆಚ್ಚು ಕಬ್ಬಿಣದ ಅಂಶ ಹಾಗೂ ಇತರ ಪೋಷಕಾಂಶಗಳನ್ನು ಹೊಂದಿರುವ ವಿಶೇಷ ಹಾಲನ್ನು ಮುಂದಿನ ವರ್ಷಾರಂಭದ ಒಳಗಾಗಿ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದರು.

ವೈದ್ಯರಾದ ಡಾ.ವಿ.ಕೆ. ಶ್ರೀನಿವಾಸ್‌ ಮತ್ತು ಡಾ. ಎಸ್‌.ಎಸ್‌. ಶ್ರೀಕಂಠ ಅವರು ಹೃದಯದ ಆರೋಗ್ಯಕ್ಕೆ ಸಂಬಂಧಿ­ಸಿದಂತೆ ಉಪನ್ಯಾಸ ನೀಡಿದರು.

ರೂ. 20 ಲಕ್ಷ ದೇಣಿಗೆ
ಅಧ್ಯಕ್ಷತೆ ವಹಿಸಿದ್ದ ಕೆಎಂಎಫ್‌ನ ನೂತನ ಅಧ್ಯಕ್ಷ ಪಿ ನಾಗರಾಜು, ಈ ಕಾರ್ಯಕ್ರಮದ ನೆನಪಿಗಾಗಿ ಜಯ­ದೇವ ಹೃದ್ರೋಗ ಸಂಸ್ಥೆಯ ಬಡ ರೋಗಿಗಳ ನಿಧಿಗೆ ಕೆಎಂಎಫ್‌ ವತಿ­ಯಿಂದ ರೂ. 20 ಲಕ್ಷ ದೇಣಿಗೆ ನೀಡಲಾ­ಗುವುದು  ಎಂದು ಘೋಷಿಸಿದರು.

‘ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ’
ಜಯಲಲಿತಾ ಬಂಧನ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜಯಚಂದ್ರ, ‘ಇದು ಎರಡು ರಾಜ್ಯಗಳ ನಡುವಣ ಘರ್ಷಣೆ ಅಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಪ್ರಕರಣ ರಾಜ್ಯಕ್ಕೆ ವರ್ಗಾವಣೆ ಆಗಿತ್ತು. ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅವಕಾಶ ಜಯಲಲಿತಾ ಅವರಿಗೆ ಇದೆ. ಅವರ ಬೆಂಬಲಿಗರು ಹಿಂಸಾಚಾರಕ್ಕಿಳಿದು ಸೌಹಾರ್ದ ವಾತಾವರಣ ಕದಡುವುದು ಸರಿ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT