ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಪದ ಸಂಗೀತ ಅಂತರಾತ್ಮದ ಒಳದನಿ’

Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

‘ಭೋಜ್‌ಪುರಿ ಕ್ವೀನ್‌’ ಎಂದೇ ಖ್ಯಾತರಾದ ಜನಪದ ಗಾಯಕಿ ಕಲ್ಪನಾ ಪಟೋವರಿ. ಅಸ್ಸಾಮಿ ಮೂಲದ ಈ ಗಾಯಕಿ ಭೋಜ್‌ಪುರಿ ಸಂಗೀತದಲ್ಲಿ ವಿಶೇಷ ಪರಿಣತಿ ಹೊಂದಿದವರು.

ಹಿಂದೂಸ್ತಾನಿ ಸಂಗೀತ ಸೇರಿದಂತೆ ಪಾಪ್‌, ಜಾಜ್‌ಗಳಂತಹ ಪಾಶ್ಚಾತ್ಯ ಸಂಗೀತಗಳ ಪರಿಚಯವೂ ಅವರಿಗಿದೆ. ಬೇರೆ ಬೇರೆ ಪ್ರದೇಶಗಳ ಜಾನಪದ ಸಂಗೀತಗಳನ್ನು ಆಧುನಿಕ ಸಂಗೀತದೊಡನೆ ಸೇರಿಸಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಕಲ್ಪನಾ,‘ದಿ ಲೆಜೆನ್ಸಿ ಆಫ್‌ ಭಿಕಾರಿ ಠಾಕೂರ್‌’ ಸೇರಿದಂತೆ ಅನೇಕ ಆಲ್ಬಂಗಳನ್ನು ಹೊರತಂದಿದ್ದಾರೆ. 

ಇದುವರೆಗೆ ಸುಮಾರು 28 ಭಾಷೆಗಳಲ್ಲಿ ಹಾಡಿರುವ ಕಲ್ಪನಾ, ಕನ್ನಡದ ಸಿನಿಮಾ ಗೀತೆಗಳಿಗೂ ಧ್ವನಿಯಾಗಿದ್ದಾರೆ.

ನಿಮ್ಮ ಪಾಲಿಗೆ ಸಂಗೀತ ಎಂದರೆ ಏನು?
ಸಂಗೀತ ನನಗೆ ಏನು ಎಂದು ಯೋಚಿಸಲು ಸಮಯವೇ ಸಿಕ್ಕಿಲ್ಲ ನೋಡಿ. ಬಹುಶಃ ಸಂಗೀತ ನನ್ನ ತುಂಬ ಒಳ್ಳೆಯ ಸ್ನೇಹಿತ. ಬದುಕಿನ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಅನುಭವಗಳಾಗುತ್ತವೆ. ಒಂದು ಹಂತದಲ್ಲಿನ ಎಷ್ಟೋ ಸಂಗತಿಗಳು ಇನ್ನೊಂದು ಹಂತದಲ್ಲಿ ಇರುವುದಿಲ್ಲ. ಆದರೆ ಈ ಸಂಗೀತ ಇದೆಯಲ್ಲ, ಅದು ಅಷ್ಟು ಸುಲಭವಾಗಿ ನನ್ನ ತೊರೆದು ಹೋಗುವುದಿಲ್ಲ. ನನ್ನ ಸಂಗೀತದ ಸಂಬಂಧ ಅಷ್ಟು ಗಾಢವಾದದ್ದು.

ಸಂಗೀತದೆಡೆಗೆ ಆಕರ್ಷಿಸಿದ್ದು ಹೇಗೆ?
ನನ್ನ ತಂದೆ ಬಿಪಿನ್‌ ಪಟೋವರಿ ಅಸ್ಸಾಂ ಜನಪದ ಗಾಯಕರಾಗಿದ್ದರು.  ಅವರಿಂದಲೇ ಸಂಗೀತದೆಡೆಗೆ ಆಕರ್ಷಿತಳಾಗಿದ್ದು. ಆಸ್ಸಾಮಿ ಜನಪದ ಗೀತೆಗಳಿಂದಲೇ ನನ್ನ ಸಂಗೀತ ಜೀವನ ಆರಂಭಗೊಂಡಿದ್ದು. ನಂತರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿದೆ. ನಂತರ ಬೇರೆ ಭಾಷೆಗಳನ್ನು, ಪ್ರಕಾರಗಳನ್ನು ಕಲಿಯುತ್ತಾ ಹೋದೆ.

ಭೋಜ್‌ಪುರಿ ಸಂಗೀತದ ಬಗ್ಗೆ ಹೇಳಿ?
ರಾಮಾಯಣ ಕತೆಯನ್ನೇ ತೆಗೆದುಕೊಂಡರೆ ರಾಮನ ಊರು ಉತ್ತರ ಪ್ರದೇಶದ ಅವಧ್‌. ಸೀತೆ ಬಿಹಾರದ ಮಿಥಿಲಾದವಳು. ಕೃಷ್ಣ  ಉತ್ತರ ಪ್ರದೇಶದ ಮಥುರೆಯವನು... ಬುದ್ಧ, ಸಾಮ್ರಾಟ್‌ ಅಶೋಕ ಹೀಗೆ ಯಾರನ್ನು ತೆಗೆದುಕೊಂಡರೂ ಅವರು ಉತ್ತರ ಭಾರತದ ಈ ಕೆಲವು ರಾಜ್ಯಗಳವರು. ಈ ಪ್ರದೇಶದಿಂದಲೇ ರೂಪುಗೊಂಡಿದ್ದು ಭೋಜ್‌ಪುರಿ ಸಂಗೀತ. ಭೋಜ್‌ಪುರಿ ಸಂಗೀತದ ಇತಿಹಾಸ ತುಂಬ ಶ್ರೀಮಂತವಾದದ್ದು. ‘ಕೈತಿ’ ಎಂಬುದು ಭೋಜ್‌ಪುರಿಯ ಮೂಲ ಲಿಪಿಯಾಗಿತ್ತು. ಅದೀಗ ನಶಿಸಿಹೋಗಿದೆ.

ಭೋಜಪುರಿ ಸಂಗೀತದಲ್ಲಿ ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಒಂದೊಂದು ಹಾಡಿದೆ. ಮಗು ಹುಟ್ಟಿದಾಗ, ಮದುವೆಯಲ್ಲಿ ಹಾಡಲು ಬೇರೆಯದೇ ಹಾಡಿದೆ. ಕೊನೆಗೆ ಸಾವಿನ ಮನೆಯಲ್ಲಿ ಹಾಡುವ ಹಾಡುಗಳೂ ಇವೆ. ಹೀಗೆ ಅನೇಕ ವೈಶಿಷ್ಟ್ಯಗಳು ಭೋಜ್‌ಪುರಿ ಸಂಗೀತದಲ್ಲಿವೆ.
ಇದುವರೆಗಿನ ನಿಮ್ಮ ಸಂಗೀತಯಾನದ ಬಗ್ಗೆ ಹೇಳಿ.

ಈ ವಿಷಯದಲ್ಲಿ ನಾನು ಅದೃಷ್ಟವಂತೆ. ನಾನು ಭಾರತದ ಪೂರ್ವಭಾಗದ ಆಸ್ಸಾಂನವಳು. ನನ್ನ ಕಾರ್ಯಕ್ಷೇತ್ರ ಉತ್ತರ ಪ್ರದೇಶ ಮತ್ತು ಬಿಹಾರ. ಇಂದು ನಾನು ದಕ್ಷಿಣ ಭಾರತದ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದೇನೆ. ಇಂತಹ ಅವಕಾಶಗಳು ಅದೃಷ್ಟವಂತ ಕಲಾವಿದರಿಗೆ ಮಾತ್ರ ಸಿಗಲು ಸಾಧ್ಯ. ಇಂದು ಇಡೀ ಜಗತ್ತಿನಲ್ಲಿ ವಲಸೆ ಎಂಬುದು ಅತ್ಯಂತ ವ್ಯಾಪಕವಾಗಿದೆ. ಹಾಗೆ ನೋಡಿದರೆ ನಾನೂ ವಲಸಿಗಳು. ನನ್ನ ಸಂಗೀತವೂ ಮುಖ್ಯವಾಗಿ ಈ ವಲಸೆಯ ನೋವಿನ ಭಾವವನ್ನು ಅಂತಸ್ಥಗೊಳಿಸಿಕೊಂಡಿದೆ.

ಬೆಂಗಳೂರನ್ನೇ ತೆಗೆದುಕೊಳ್ಳಿ. ಯಾವುದೋ ರಾಜ್ಯದ ಯಾವುದೋ ಊರುಗಳಿಂದ ಜನರು ನಗರಕ್ಕೆ ವಲಸೆ ಬರುತ್ತಾರೆ. ಒಂದಿಷ್ಟು ಹಣ ಗಳಿಸುವುದಕ್ಕಾಗಿ ಊರು ಮನೆಯನ್ನು ತೊರೆದಿರುತ್ತಾರೆ. ಯಾರದೋ ಪತ್ನಿ ಗರ್ಭಿಣಿಯಾಗಿರುತ್ತಾಳೆ, ಇನ್ಯಾರೋ ಇಲ್ಲಿಂದ ಹಣ ಗಳಿಸಿಕೊಂಡು ಹೋಗಿ ಸಹೋದರಿಯ ಮದುವೆ ಮಾಡಬೇಕಿರುತ್ತದೆ. ನನ್ನ ಸಂಗೀತ ಇಂಥವರ ಭಾವನೆಗಳನ್ನು ಧ್ವನಿಸಬೇಕು ಎನ್ನುವುದು ನನ್ನ ಆಸೆ. ಮೂಲದ ಸೆಳೆತ, ಅಗಲುವಿಕೆಯ ನೋವು ಇವೇ ನನ್ನ ಹಾಡಿನ ಮೂಲಭಾವಗಳು.

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಜನಪದ ಸಂಗೀತದ ಮಹತ್ವವೇನು?
ನಾವು ಎಷ್ಟೇ ಆಧುನಿಕ ಬಟ್ಟೆ ತೊಟ್ಟುಕೊಳ್ಳಬಹುದು. ಆದರೆ ಒಳಗೊಂದು ಆತ್ಮವಿರುತ್ತದಲ್ಲ. ಅದರ ಮಾತು ಬೇರೆಯದೇ ಆಗಿರುತ್ತದೆ. ಸರಿ ತಪ್ಪುಗಳನ್ನು ನಮ್ಮ ಅಂತರಾತ್ಮವೇ ನಿರ್ದೇಶಿಸುತ್ತಿರುತ್ತದೆ. ಹೊರಗಿನ ಜಗತ್ತಿಗಿಂತ ಬೇರೆಯದೇ ಆದ ಒಂದು ಒಳಗಿನ ಧ್ವನಿ ಅದು. ಜನಪದ ಸಂಗೀತ ಅಂತಹ ಅಂತರಾತ್ಮದ ಒಳದನಿ. ಜಗತ್ತಿನ ಯಾವುದೇ ಭಾಗಕ್ಕೆ ತೆರಳಲಿ, ಆಸ್ಸಾಮಿ ಸಂಸ್ಕೃತಿ, ಭೋಜ್‌ಪುರಿ ಸಂಗೀತವನ್ನು ನಾನು ಉಳಿಸಿಕೊಳ್ಳಬೇಕು. ಯಾಕೆಂದರೆ ಅವೇ ನನ್ನ ಅಸ್ತಿತ್ವದ ಗುರುತುಗಳು.

ನೀವು ಅನೇಕ ಭಾಷೆಗಳಲ್ಲಿ ಹಾಡಿದ್ದೀರಿ? ನಿಮಗೆ ಭಾಷೆ ಎಂಬುದು ಏನು?
ನಾನು ಸಾಹಿತ್ಯದ ವಿದ್ಯಾರ್ಥಿಯಾಗಿದ್ದೆ. ನನಗೆ ಭಾಷೆ ಮತ್ತು ಸಾಹಿತ್ಯದಲ್ಲಿ ತುಂಬ ಆಸಕ್ತಿಯಿದೆ. ಬೇರೆ ಬೇರೆ ಭಾಷೆಗಳಿಗೆ ಬೇರೆಯದೇ ವೈಶಿಷ್ಟ್ಯಗಳಿರುತ್ತವೆ. ಭಾಷೆಯೂ ಒಂದು ಭಾವವೇ ಅಲ್ಲವೇ? ನಮ್ಮ ಭಾವಕ್ಕೆ ಶಬ್ದದ ರೂಪುನೀಡಿ ನಾವು ಆಡುತ್ತೇವಷ್ಟೆ. ಸಂಗೀತದಲ್ಲಿಯೂ ಭಾಷೆಯಷ್ಟೇ ಭಾವ ಮುಖ್ಯ.

ಈ ಜನಪದ ಸಂಗೀತ ಮುಂದಿನ ಪೀಳಿಗೆಗೂ ದೊರಕಿಸುವ ನಿಟ್ಟಿನಲ್ಲಿ ನೀವು ಏನು ಮಾಡುತ್ತಿದ್ದೀರಿ?
ತುಂಬ ಮುಖ್ಯ ಪ್ರಶ್ನೆ ಇದು. ನಾನು ಸಿನಿಮಾ ಹಾಡು, ಐಟಂ ಸಾಂಗ್‌ಗಳನ್ನೂ ಹಾಡುತ್ತೇನೆ. ಅದರಿಂದ ಕೀರ್ತಿ, ಹಣ ಎಲ್ಲ ಸಿಗುತ್ತದೆ. ಮಾರುಕಟ್ಟೆಯಲ್ಲಿ ಅವೇ ಮಾರಾಟವಾಗುತ್ತವೆ.

ಆದರೆ ಜನಪದ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ಕೆಲಸವನ್ನು ನನ್ನ ತೃಪ್ತಿಗಾಗಿ ಮಾಡುತ್ತಿದ್ದೇನೆ. ಭಕ್ತಿ ಚಳವಳಿಯ ಹಾಡುಗಳನ್ನು, ಸಂತರ ಗೀತೆಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇನೆ. ಇನ್ನು ನೂರು ವರ್ಷದ ನಂತರ ಜನಪದ ಸಂಗೀತದಲ್ಲಿ ಆಸಕ್ತಿ ಇದ್ದವರಿಗೆ ಅದಕ್ಕಾಗಿ ತಡಕಾಡುವ ಪರಿಸ್ಥಿತಿ ಎದುರಾಗಬಾರದು. ಅದರ ನೈಜರೂಪದಲ್ಲಿಯೇ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಇಂತಹ ಹಲವಾರು ಕೆಲಸಗಳನ್ನು ಮಾಡುತ್ತಿದ್ದೇನೆ. ಭೋಜ್‌ಪುರಿ ಸಂಗೀತ ತುಂಬ ಜನಪ್ರಿಯವಾದದ್ದು. ಅದರಲ್ಲಿ ತಕ್ಷಣಕ್ಕೆ ಇಷ್ಟವಾಗುವ ಕೆಲವು ರೀತಿಯ ಹಾಡುಗಳಷ್ಟೇ ಜನಪ್ರಿಯವಾಗಿವೆ. ಇನ್ನೂ ಹೆಚ್ಚು ಜನಪ್ರಿಯವಾಗದ ಅನೇಕ ಹಾಡುಗಳು ಇವೆ. ಅವುಗಳನ್ನು ಜನರಿಗೆ ತಲುಪಿಸಬೇಕು ಎನ್ನುವುದು ನನ್ನ ಉದ್ದೇಶ.
*
ಇನ್ನೊಂದು ಆಸೆ
ನನಗೊಂದು ಆಸೆಯಿದೆ. ಕನ್ನಡದಲ್ಲಿಯೂ ಸಾಕಷ್ಟು ಜನಪದ ಗಾಯಕರಿರಬೇಕಲ್ಲವೇ? ಒಳ್ಳೆಯ ಕನ್ನಡದ ಜಾನಪದ ಗಾಯಕರು ಸಿಕ್ಕರೆ ಉತ್ತರ ಮತ್ತು ದಕ್ಷಿಣದ ಜಾನಪದ ಸಂಗೀತವನ್ನು ಸೇರಿಸಿ ಒಂದು ಕಾರ್ಯಕ್ರಮ ನೀಡಬೇಕು ಎಂಬ ಆಸೆ ನನಗಿದೆ. ಅಂತಹ ಕಲಾವಿದರ್‍ಯಾರಾದರೂ ಇದ್ದರೆ ನನ್ನನ್ನು ಸಂಪರ್ಕಿಸಬಹುದು. ನನ್ನ ದೂರವಾಣಿ ಸಂಖ್ಯೆ 09821437026.

***

ವಲಸಿಗರ ನೋವಿಗೆ ಹಾಡಿನ ಕಾವು...
‘ಇಲ್ಲಿ ಬಿಹಾರ ಮೂಲದವರು ಎಷ್ಟು ಜನರಿದ್ದೀರಿ?’ ವೇದಿಕೆಯ ಮೇಲಿಂದ ಪ್ರಶ್ನೆ ತೂರಿ ಬರುತ್ತಿದ್ದಂತೆಯೇ ಎದುರಿನ ಪ್ರೇಕ್ಷಕರಲ್ಲಿ ಒಂದಿಷ್ಟು ಜನ ‘ಹೋ..’ ಎಂದು ಕೂಗುತ್ತಾ ಕೈಯೆತ್ತಿದರು. ‘ಹಾಗಾದರೆ ಉತ್ತರ ಪ್ರದೇಶದವರು?’ ಈ ಪ್ರಶ್ನೆಗೆ ಇನ್ನೊಂದಿಷ್ಟು ಜನ ಕೈಯೆತ್ತಿ ಕೂಗಿದರು. ಅವರ ಪ್ರತಿಕ್ರಿಯೆಗೆ ನೀಲಿ, ಹಸಿರು ಬಣ್ಣದ ಪಗಡಿಯನ್ನು ತಲೆಗೆ ಸುತ್ತಿಕೊಂಡು ಮೈಕ್‌ ಹಿಡಿದು ವೇದಿಕೆಯ ಮೇಲೆ ನಿಂತಿದ್ದ ‘ಭೋಜ್‌ಪುರಿ ಕ್ವೀನ್‌’ ಕಲ್ಪನಾ ಪಟೋವರಿ ನಗುತ್ತಾ ‘ಅಚ್ಛಾ.. ನಾನು ನಿಮ್ಮೆಲ್ಲರಿಗಾಗಿ ಹಾಡುತ್ತೇನೆ’ ಎಂದಿದ್ದೇ ಪ್ರೇಕ್ಷಕರ ಕೇಕೆ ಮುಗಿಲು ಮುಟ್ಟಿತು.

 ಭಾನುವಾರ ಸಂಜೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿನ ಸಂಸ ಬಯಲು ರಂಗಮಂದಿರದಲ್ಲಿ ಪ್ರಸಿದ್ಧ ಭೋಜ್‌ಪುರಿ ಗಾಯಕಿ ಕಲ್ಪನಾ ನಡೆಸಿಕೊಟ್ಟ ‘ಪುರಬಿಯಾ ರಾತ್‌’ ಎಂಬ ಉತ್ತರ  ಭಾರತದ ಜನಪದ ಗೀತೆಗಳ  ಸಂಗೀತ ಕಾರ್ಯಕ್ರಮ ಗಾಯನದ ಹೊರತಾದ ಅನೇಕ ಭಾವನಾತ್ಮಕ ಸನ್ನಿವೇಶಗಳಿಗೂ ಸಾಕ್ಷ್ಮಿಯಾಯಿತು.

‘ಮರ’ ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ‘ಮರ’ ನಗರದ ಕಾರ್ಮಿಕ ವರ್ಗದೊಂದಿಗೆ ಕಳೆದ ಏಳು ವರ್ಷಗಳಿಂದ ಸಂಪರ್ಕವಿಟ್ಟುಕೊಂಡಿರುವ ಸಂಘಟನೆ. ಬೇರೆ ಬೇರೆ ರಾಜ್ಯಗಳಿಂದ ಕೆಲಸಕ್ಕೆ ವಲಸೆ ಬಂದ ಕಾರ್ಮಿಕರಿಗೆ ನಗರದ ಜನರೊಂದಿಗೆ ಬೆರೆಯಲು ಮತ್ತು ತಮ್ಮ ಊರಿನ ಸಂಗೀತವನ್ನು ಆಸ್ವಾದಿಸಲು ಅವಕಾಶ ಮಾಡಿಕೊಡುವ ಉದ್ದೇಶ ಈ ಕಾರ್ಯಕ್ರಮಕ್ಕಿತ್ತು.

ಸಂಜೆ 5 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಪ್ರಾರಂಭವಾದಾಗ ಗಡಿಯಾರದ ಮುಳ್ಳುಗಳು 6.30 ಸೂಚಿಸುತ್ತಿದ್ದವು.  ಪ್ರಾರಂಭದಲ್ಲಿ ಬೆಂಗಳೂರಿನ ‘ಇಂಡಿಯನ್‌ ಫೋಕ್‌ ಬ್ಯಾಂಡ್‌’   ವಾದ್ಯಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಅದರ ನಂತರ ಕಲ್ಪನಾ ವೇದಿಕೆಗೆ ಬಂದಾಗ ಏಳು ಗಂಟೆಯಾಗಿತ್ತು. ಹಿತವಾದ ತಣ್ಣನೆಯ ಗಾಳಿಯ ಆ ಇಳಿಸಂಜೆಯಲ್ಲಿ ಕಲ್ಪನಾ ‘ವಕ್ರತುಂಡ ಮಹಾಕಾಯ’ ಶ್ಲೋಕದ ಮೂಲಕ ತಮ್ಮ ಗಾನಯಾನವನ್ನು ಆರಂಭಿಸಿದರು. ಅಲ್ಲಿ ನೆರೆದಿದ್ದ ಕನ್ನಡಿಗರನ್ನು ಉದ್ದೇಶಿಸಿ ‘ನಾನು ಕನ್ನಡ ಸಿನಿಮಾಗಳಲ್ಲಿಯೂ ಹಾಡಿದ್ದೇನೆ’ ಎಂದು ಹೇಳಿದ್ದಲ್ಲದೇ ಕೆಲವು ಸಾಲುಗಳನ್ನು ಹಾಡಿ ಬೆಂಗಳೂರಿಗರ ಉತ್ಸಾಹವನ್ನು ಹೆಚ್ಚಿಸಿದರು.

ನಂತರ ಅವರು ಭೋಜ್‌ಪುರಿಯ ಖ್ಯಾತ ಗಾಯಕ, ಕವಿ, ನಾಟಕಕಾರ ಭಿಕಾರಿ ಠಾಕೂರ್‌ ಅವರ ‘ಗಂಗಾಸ್ನಾನ್‌’ ನಾಟಕದ ಗೀತೆಯನ್ನು ಹಾಡಿದರು. ಮನುಷ್ಯನೊಬ್ಬ ತಾನು ದಡದಲ್ಲಿ ಆಡಿ ಬೆಳೆದ ನದಿಯೊಟ್ಟಿಗೆ ನಡೆಸುವ ಆತ್ಮನಿವೇದನೆಯ ಹಾಡದು. ಸಂಸಾರದ ಕ್ಷಣಿಕತೆ, ಸಂಬಂಧಗಳ ಭಂಗುರತೆಯನ್ನು ಸಾರುವ ಈ ಹಾಡು ಭೋಜ್‌ಪುರಿ ಜನಪದ ಸಾಹಿತ್ಯದ ಶ್ರೀಮಂತಿಕೆಯನ್ನೂ, ಸಂಗೀತದ ಸಮೃದ್ಧತೆಯನ್ನೂ ಒಟ್ಟೊಟ್ಟಿಗೇ ಬಿಂಬಿಸುವಂತಿತ್ತು.

ಕಲ್ಪನಾ ಹಲವು ಸಂಗೀತ ಪ್ರಕಾರಗಳನ್ನು ಅಭ್ಯಸಿಸಿದವರು ಹಾಗೂ ಬೇರೆ ಬೇರೆ ಪ್ರಕಾರದ ಸಂಗೀತಗಳನ್ನು ಕೂಡಿಸಿ ಹೊಸ ರೀತಿಯ ಹಾಡುಗಳನ್ನು ಕಟ್ಟುವ ಪ್ರಯೋಗಶೀಲರು. ಆಫ್ರಿಕನ್‌ ಸಂಗೀತದ ಬಿಟ್‌ನೊಂದಿಗೆ ಹೊಂದಿಸಿ ಹಾಡಿದ ಆಸ್ಸಾಂನ ಬಿಹು ಶೈಲಿಯ ಹಾಡು ಅವರ ಪ್ರಯೋಗಶೀಲತೆಗೆ ನಿದರ್ಶನದಂತಿತ್ತು. ಆಸ್ಸಾಮಿ ಭಾಷೆಯ ಚಟಪಟ ಚಟಪಟ ಸಿಡಿಯುವಂತೆ ತೋರುವ ಶಬ್ದಗಳ ಓಟಕ್ಕೂ ಆಫ್ರಿಕನ್‌ ಬಿಟ್‌ನ ಚುರುಕುತನಕ್ಕೂ ಆಶ್ಚರ್ಯವಾಗುವಷ್ಟು ಚೆನ್ನಾಗಿ ಹೊಂದಿಕೆಯಾಗುತ್ತಿತ್ತು. ಆ ಹಾಡನ್ನು ಕೇಳುತ್ತಾ ಪರವಶರಾದ ಪ್ರೇಕ್ಷಕ ಗಣದಲ್ಲಿನ ಆಸ್ಸಾಮಿ ಕುಟುಂಬವೊಂದು ವೇದಿಕೆಯ ಮೇಲೆ ಬಂದು ಪಕ್ಕಾ ಆಸ್ಸಾಮಿ ಶೈಲಿಯಲ್ಲಿ ನರ್ತಿಸತೊಡಗಿತು.

ನಂತರ ಭೋಜ್‌ಪುರಿ ಭಾಷೆಯ ವಿರಹಗೀತೆಯನ್ನು ಹಾಡಿದಾಗ ಪ್ರೇಕ್ಷಕ ಸಮೂಹ ಭಾವುಕತೆಯಲ್ಲಿ ಮುಳುಗಿತು. ಮದುವೆಯಾದ ಕೆಲಸವನ್ನು ಹುಡುಕಿಕೊಂಡು ಬೇರೆ ಊರಿಗೆ ಹೊರಟ ಪತಿಯನ್ನು ಕುರಿತು ‘ನನ್ನ ಕೈಯ ಮದರಂಗಿ ಬಣ್ಣವಿನ್ನೂ ಆರಿಲ್ಲ... ಅದಕ್ಕೂ ಮೊದಲೇ ನನ್ನ ಬಿಟ್ಟು ಹೋಗುತ್ತಿರುವೆ’ ಎಂದು ನೋವಿನಿಂದ ಹಾಡುವ ಹಾಡದು.

ಭೋಜ್‌ಪುರಿ ಸಂಗೀತ ಕಾರ್ಯಕ್ರಮ ಎಂದು ಕರೆಯಲಾಗಿದ್ದರೂ ಇಲ್ಲಿ ಕಲ್ಪನಾ ಆಸ್ಸಾಂ, ಬಿಹಾರಿ, ಉತ್ತರಪ್ರದೇಶ ಹೀಗೆ ಅನೇಕ ರಾಜ್ಯಗಳ ಜನಪದ ಗೀತೆಗಳ ರುಚಿಯನ್ನು ಉಣಿಸಿದರು. ಅಲ್ಲದೇ ಸಿನಿಮಾ ಗೀತೆಗಳ ರಸದೌತಣವೂ ಇತ್ತು. ‘ಸಸೂರಾ ಬಡಾ ಪೈಸಾವಾಲಾ’ ಚಿತ್ರದ ‘ಸಯ್ಯಾ ಜಿ ದಿಲ್ ಬಾ..’ ಎಂಬ ಹಾಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

ಸಂಸ ರಂಗಮಂದಿರದ ತೆರೆದ ಬಯಲಲ್ಲಿ ಕಲ್ಪನಾ ಅವರ ಮುಕ್ತಕಂಠ ಒಂದು ಗಾನ ವಾತಾವರಣದ ಚೌಕಟ್ಟು ಕಟ್ಟಿತ್ತು. ಅಲ್ಲಿನ ಪ್ರೇಕ್ಷಕರಲ್ಲಿ  ಇನ್‌ಷರ್ಟ್‌ ಮಾಡಿದ, ಜುಬ್ಬಾ ತೊಟ್ಟವರೂ ಇದ್ದರು. ಹಾಗೆಯೇ ಕೆಸರು ಅಂಗಿ ತೊಟ್ಟು, ಹಿಮ್ಮಡಿ ಬಳಿ ಹರಿದ ಜೀನ್ಸ್‌ ತೊಟ್ಟ ಹುಡುಗರೂ ಇದ್ದರು. ತಮ್ಮ ಸಮವಸ್ತ್ರ ಧರಿಸಿಯೇ ಬಂದಿದ್ದ ಮೆಟ್ರೊ ಕಾರ್ಮಿಕರೂ ಇದ್ದರು. ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದಿರುವ ಕಾರ್ಮಿಕರೇ ಹೆಚ್ಚಾಗಿದ್ದರು.

ತಮ್ಮೂರಿನ ಜನಪದ ಗೀತೆಗಳಿಗೆ ಅವರು ಮೈಮರೆತು ಹಾಕುತ್ತಿದ್ದ ಹೆಜ್ಜೆಗಳು, ಹೊಟ್ಟೆಪಾಡಿಗಾಗಿ ಹುಟ್ಟಿದ ಊರನ್ನು ಬಿಟ್ಟುಬಂದವರ ಆರ್ತತೆ ಅನಾಥತೆ ಎಲ್ಲರದ ಅಭಿವ್ಯಕ್ತಿಯಂತೆಯೂ ಕಾಣುತ್ತಿತ್ತು. ಹೀಗೆ ಪ್ರೇಕ್ಷಕರು ವೇದಿಕೆಯ ಮೇಲೆಯೇ ಬಂದು ನರ್ತನಕ್ಕಿಳಿದಾಗ ಕಲ್ಪನಾ ಕೊಂಚವೂ ಹಿಂಜರಿಯದೇ ಅವರೊಂದಿಗೆ ಹೆಜ್ಜೆ ಹಾಕಿದರು. ಅವರನ್ನೂ ತಮ್ಮ ಹಾಡಿನ ಭಾಗವಾಗಿಸಿಕೊಂಡರು.

ಇದೇ ಸಂದರ್ಭದಲ್ಲಿ ಕಲ್ಪನಾ ತಮ್ಮ ಹೊಸ ಆಲ್ಬಂ ‘ಬಿರಾಹಾ’ವನ್ನೂ ಬಿಡುಗಡೆಗೊಳಿಸಿದರು. ಯಾವುದೋ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಈ ನಗರವನ್ನು ಕಟ್ಟುತ್ತಿರುವ ಕಾರ್ಮಿಕರು ಈ ಆಲ್ಬಂ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಎಂಟೂವರೆಯಷ್ಟು ಹೊತ್ತಿಗೆ ಕಲ್ಪನಾ ತಮ್ಮ ಗಾಯನವನ್ನು ಮುಗಿಸಿದರೂ ಪ್ರೇಕ್ಷಕರು ಇನ್ನೊಂದು ಹಾಡಿಗೆ ಒತ್ತಾಯಿಸುತ್ತಲೇ ಇದ್ದರು. ದಿನವಿಡೀ ದುಡಿದ ಕಾರ್ಮಿಕರು ಅವರ ಹಾಡಿನ ಮೋಡಿಯಲ್ಲಿ ದಣಿವನ್ನು ಮರೆತಂತಿದ್ದು, ಅವರ ಹಣೆ ಮೇಲೆ ಮೂಡಿದ ಬೆವರ ಹನಿ ಸಾಲನ್ನೂ ಮೀರಿ ತಮ್ಮೂರಿನ ಹಾಡಿಗೆ ಕುಣಿದ ಸಾರ್ಥಕತೆಯ ನಗು ಅವರ ತುಟಿಗಳಲ್ಲಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT