ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿಗಿಲುಗೊಂಡಿದ್ದೆ ಗೆಜ್ಜೆನಾದಕ್ಕೆ’

Last Updated 29 ಜನವರಿ 2016, 19:51 IST
ಅಕ್ಷರ ಗಾತ್ರ

ಈಗ್ಗೆ ಮೂರು ವರ್ಷಗಳ ಹಿಂದೆ ನನ್ನ ಸಹೋದರ ಅಪಘಾತದಲ್ಲಿ ತೀರಿಹೋದ. ಇದಾದ ಎರಡು ಮೂರು ತಿಂಗಳ ನಂತರ ನಮ್ಮ ಓಣಿಯ ಹೆಣ್ಣು ಮಗಳೊಬ್ಬಳು ವಿಚಿತ್ರವಾಗಿ ವರ್ತಿಸತೊಡಗಿದಳು. ಅವಳ ಪತಿ ನನ್ನ ಸಹೋದರನ ಸ್ನೇಹಿತ. ಅವನು ಇದು ದೆವ್ವವೆಂದು ನಿನ್ನ ಸಹೋದರನೇ ಎಂದು ತಿಳಿಸಿದಾಗ ನನಗೆ ಆಶ್ಚರ್ಯವಾಗಿ ಏನು ಹೇಳಬೇಕೆಂದು ತೋಚದಾಯಿತು.

ಅಷ್ಟೇ ಅಲ್ಲ ಅವನು ಮುಂದುವರೆದು  ’ನಾವು ಅವನಿಗೆ ಏನು ಅನ್ಯಾಯ ಮಾಡಿದ್ದೇವೆ ಹೀಗೆ ನನ್ನ ಹೆಂಡತಿಯ ಮೈಯನ್ನು ಹೊಕ್ಕು ಪೀಡಿಸುತ್ತಿದ್ದಾನಲ್ಲ’ ಎಂದು ತನ್ನ ಅಳಲನ್ನ ತೋಡಿಕೊಂಡ. ನಾನು ನಿನ್ನ ಹೆಂಡತಿಗೆ ಸೂಕ್ತ ಚಿಕೆತ್ಸೆ ಕೊಡಿಸಿ, ಎಲ್ಲ ಸರಿಯಾದೀತು ಎಂದು ಸಲಹೆ ಕೊಟ್ಟಾಗ ನಮ್ಮದೇ ತಪ್ಪು ಎನ್ನುವ ಹಾಗೆ ದಿಟ್ಟಿಸಿ ನೋಡಿದ. ಹೀಗೆ  ಗ್ರಾಮೀಣ ಪ್ರದೇಶದಲ್ಲಿ  ಇಂಥ ಹಲವಾರು ಘಟನೆಗಳನ್ನು ಕಾಣುತ್ತೇವೆ. ಇನ್ನೂ ಕೆಲವರು ದೆವ್ವವೆಂಬ ಭ್ರಮೆಯಿಂದ ಸತ್ತವರ ಮನೆಯಲ್ಲಿ ಗಲಾಟೆ, ಹೊಡೆದಾಟ ಮಾಡಿದ್ದುಂಟು.

ನಾನು ದೆವ್ವ, ಪ್ರೇತ. ಪಿಶಾಚಿಗಳನ್ನು ನಂಬುವವನಲ್ಲ. ಮಧ್ಯರಾತ್ರಿ ಸುಡುಗಾಡಿಗೆ ಹೋಗಿ ಬರುವ ಧೈರ್ಯದವನೂ ಅಲ್ಲ. ಸೂಕ್ಷ್ಮ ಮನಸ್ಸಿನವರು ಯಾವುದೇ ಒಂದು ವಿಷಯವನ್ನು ಅಥವಾ ತಮ್ಮಲ್ಲಿರುವ ಅಸಹಾಯಕತೆಯನ್ನು, ದೋಷವನ್ನು ಮನಸ್ಸಿನಾಳಕ್ಕೆ ಕೊಂಡೊಯ್ಯುತ್ತಾರೆ. ಅದು ಭೂತಾಕಾರವಾದಾಗ ದೆವ್ವ ಎಂದು ನಂಬುತ್ತಾರೆ. ನನ್ನ ಜೀವನದಲ್ಲಿ ನಡೆದ ಘಟನೆಯೊಂದು ಹೀಗಿದೆ.

ಒಮ್ಮೆ ನನ್ನ ಹಿರಿಯ ಸ್ನೇಹಿತನನ್ನು ಕಾಣಲು ಹೋದೆ. ನನ್ನ ಸ್ನೇಹಿತ ಬಾಗಲಕೋಟೆ ಹತ್ತಿರದ ಹಳ್ಳಿಯೊಂದರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕ ಮತ್ತು ಧೈರ್ಯವಂತ. ಅವನು ವಾಸವಿದ್ದ ಬಾಡಿಗೆ ಮನೆ ಊರಾಚೆ ಇತ್ತು. (ಸುಮಾರು ನೂರು ಮೀಟರ್ ಅಂತರ)  ನಾನು ಅವನನ್ನು ಕಂಡು ಕುಶಲೋಪರಿ ವಿಚಾರಿಸಿದ ನಂತರ ರಾತ್ರಿ ಎಂಟು ಗಂಟೆಗೆ ಊಟ ಮಾಡಿದೆವು. ಊರ ಒಳಗಡೆ ಬಾಡಿಗೆ ಮನೆ ಸಿಗಲಿಲ್ಲವೆ? ಎಂದು ವಿಚಾರಿಸಿದಾಗ ಅವನು ಹೇಳಿದ್ದೇನೆಂದರೆ- ಇದು ಬಾಡಿಗೆ ಕಡಿಮೆ ಇರುವ ಮನೆ ಅಲ್ಲದೆ  ಎರಡು ವರ್ಷದ ಹಿಂದೆ ಅಜ್ಜಿಯೊಬ್ಬಳು ನೇಣು ಹಾಕಿಕೊಂಡು ತೀರಿ ಹೋದಳೆಂದೂ, ರಾತ್ರಿ ಹೊತ್ತು ಅಜ್ಜಿ ದೆವ್ವವಾಗಿ ಇಲ್ಲಿ ಓಡಾಡುತ್ತಾಳೆಂದೂ ಆದ್ದರಿಂದ ಯಾರು ಈ ಮನೆಯಲ್ಲಿ ವಾಸವಿರಲ್ಲಿಲ್ಲವೆಂದೂ ತಿಳಿಸಿದ.

ತಾನು ಧೈರ್ಯವಂತ, ದೆವ್ವ ಗಿವ್ವ ನಂಬುವವನಲ್ಲ ಎಂಬುದು ಅವನ ಮಾತಿನ ಧಾಟಿಯಾಗಿತ್ತು. ಸುಮಾರು 9 ಗಂಟೆಗೆ ಮಲಗಲು ಹಾಸಿಗೆ ಸಿದ್ದ ಮಾಡಿಕೊಳ್ಳುತ್ತಿರಬೇಕಾದರೆ ಅವನ ದೂರದ ಸಂಬಂಧಿಯೊಬ್ಬ ಬಂದು ‘ನಮ್ಮ ಮನೆಯಲ್ಲಿ ಇಂದು ಮಗಳ ಕಾರ್ಯವಿದೆ ಊಟಕ್ಕೆ ಬರಬೇಕು’ ಎಂದು ತಿಳಿಸಿದಾಗ ಅವನು ಹೋಗಲು ಅಣಿಯಾದ. ನನಗೆ ಅರ್ಧಗಂಟೆಯಲ್ಲಿ ಬರುವೆ; ನೀನು ಮಲಗಿರು ಎಂದು ಹೇಳಿ ಹೋದ. ನಾನು ಬಾಗಿಲು ಕೊಂಡಿ ಹಾಕದೇ ಹಾಗೆ ಮುಚ್ಚಿ ದೀಪ ಆರಿಸಿ ಮಲಗಿಕೊಂಡೆ.

ಸುಮಾರು ಮಧ್ಯ ರಾತ್ರಿ ಹೊತ್ತಿಗೆ ನನಗೆ ಎಚ್ಚರವಾದಾಗ, ನಾನು ತಣ್ಣಗಾದೆ. ಏಕೆಂದರೆ ಊಟಕ್ಕೆ ಹೋದ ನನ್ನ ಸ್ನೇಹಿತ ವಾಪಸ್ಸಾಗಿರಲಿಲ್ಲ. ನಾನು ಮಲಗಿದಲ್ಲೆ ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ಕೈಯಾಡಿಸಿದೆ. ಅವನ ಹೆಸರು ಕೂಗಲು ನನಗೆ ಧೈರ್ಯ ಬರಲಿಲ್ಲ. ಎದ್ದು ಹೋಗಿ ಲೈಟ್ ಹಾಕಲೂ ಹೆದರಿಕೆಯಾಗುತ್ತಿದೆ. ಅವನು ಹೇಳಿದ ಅಜ್ಜಿಯ ಕಥೆ ನೆನಪಾಯಿತು. ಗೆಜ್ಜೆ ಸಪ್ಪಳ ಮಾಡುತ್ತ ಹೊರಗಡೆ ಕುಣಿಯುತ್ತಿರುವುದಾಗಿ ಭಾಸವಾಗುತ್ತಿದೆ. ಗಿಲ್ ಗಿಲ್ ಎಂಬ ಧ್ವನಿ ಕೇಳಿಬರುತ್ತಿದೆ. ನನಗೆ ದಿಕ್ಕೇ ತೋಚದಾಗಿ ಭಯಗೊಂಡೆ.

ನಿದ್ದೆ ದೂರ ಹೋಯಿತು. ಮತ್ತೇ ಅದೇ ಗೆಜ್ಜೆ ನಾದ. ಭಂಡ ಧೈರ್ಯ ಮಾಡಿಕೊಂಡು ಎದ್ದು ಕುಳಿತೆ. ನಿಧಾನವಾಗಿ ಬಾಗಿಲು ಹತ್ತಿರ ಬಂದೆ. ಮೆಲ್ಲಗೆ ಕದ ತೆಗೆಯುತ್ತಿದ್ದಂತೆ ಗೆಜ್ಜೆ ಸಪ್ಪಳ ನಿಂತುಹೋಯಿತು. ಮತ್ತೆ ಮಲಗಲು ಬರುತ್ತಿದ್ದಂತೆ ಮತ್ತೆ ಗಿಲ್ ಗಿಲ್ ಗೆಜ್ಜೆ ಧ್ವನಿ. ನನ್ನ ಜೀವವೇ ಉಡುಗಿ ಹೋಯಿತು. ಒಂದೆರಡು ಸಲ ಹೀಗೆ ಮಾಡಿದೆ. ಕದ ತೆಗೆಯುತ್ತಿದಂತೆ ನಿಲ್ಲುವ ಧ್ವನಿ, ವಾಪಸ್ಸಾಗುತ್ತಿದ್ದಂತೆ ಅದೆ ಮರುಕಳಸುತ್ತಿತ್ತು.

ಈಗ ನಿಧಾನವಾಗಿ ಬಾಗಿಲು ಬಳಿ ಬಂದು ಕದದ ಸಂದಿನಲ್ಲಿ ಇಣುಕಿ ಹೊರಗೆ ದೃಷ್ಟಿ ಹಾಯಿಸಿದೆ. ಏನೂ ಕಾಣಿಸಲಿಲ್ಲ. ಆದರೆ ಅಲ್ಲೇ ನನಗೆ ಆಶ್ಚರ್ಯಯೊವೊಂದು ಕಾದಿತ್ತು. ದೂರದಲ್ಲಿದ್ದಾಗ ಕೇಳಿಸುವ ಗೆಜ್ಜೆ ಸಪ್ಪಳ ಕದಕ್ಕೆ ಕಿವಿಗೊಟ್ಟಾಗ ಕಠೋರವೇನಿಸಿತು. ಆ ಕದದ ಸಂದಿಯಲ್ಲಿ ಕಟ್ಟಿಗೆ ಹುಳು. ಅದನ್ನು ’ಕುಂಬಾರ ಹುಳ’ ಎಂತಲೂ ಕರೆಯುತ್ತಾರೆ. ಆವಾಗ ನಾನು ನೆಮ್ಮದಿಯ ನಿಟ್ಟುಸಿರುಬಿಟ್ಟೆ. ನನ್ನ ಭ್ರಮಾಲೋಕ ಮಾಯವಾಯಿತು. ಬೆಳಿಗ್ಗೆ ಸ್ನೇಹಿತ ವಿಷಯ ತಿಳಿದು ನನ್ನ ಅವಸ್ಥೆಗೆ ಮರುಕಪಟ್ಟ. ಹೀಗೆ ಪೂರ್ವಾಗ್ರಹ ಪೀಡಿತರಾದಾಗ ಮನುಷ್ಯ ಏನೆಲ್ಲಾ ಕಷ್ಟ ಅನುಭವಿಸುತ್ತನಲ್ಲ ಎಂದೆನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT