ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವಮಾನವ’ ಬಂಧನಕ್ಕೆ ಅಡ್ಡಿ

ಭಕ್ತರಿಂದಲೇ ಪೊಲೀಸರ ಮೇಲೆ ಗುಂಡು, ಪೆಟ್ರೋಲ್‌ ಬಾಂಬ್‌ ದಾಳಿ
Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬರ್‌ವಾಲಾ / ಹರಿಯಾಣ (ಪಿಟಿಐ): ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಜಾಮೀನು ರಹಿತ  ವಾರಂಟ್‌ ಹೊರಡಿ­ಸಲಾಗಿರುವ  ಸ್ವಯಂಘೋಷಿತ ‘ದೇವ­ಮಾನವ’ ರಾಮ್‌ಪಾಲ್ ಅವರನ್ನು ಬಂಧಿಸಲು ಮಂಗಳವಾರ  ಅವರ ಆಶ್ರ­ಮಕ್ಕೆ ಪೊಲೀಸರು ಹೋದ ಸಂದರ್ಭ­ದಲ್ಲಿ ರಾಮ್‌ಪಾಲ್‌ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಭಾರಿ ಘರ್ಷಣೆ ನಡೆಯಿತು.

ಈ ವೇಳೆ ರಾಮ್‌ಪಾಲ್‌ ಆಶ್ರಮದ ಒಳಗಿದ್ದರೇ ಅಥವಾ ಅವರ ಬೆಂಬಲಿ­ಗರು ಹೇಳುವಂತೆ ಹೊರಗಿದ್ದರೇ ಎಂಬುದು ದೃಢಪಟ್ಟಿಲ್ಲ.
ಭಾರಿ ಸಂಖ್ಯೆಯಲ್ಲಿ ಸೇರಿದ್ದ ರಾಮ್‌ ಪಾಲ್ ಬೆಂಬಲಿಗರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ ಲಾಠಿ ಪ್ರಹಾರ ನಡೆಸಿದರು. ಇದಕ್ಕೆ ಪ್ರತಿ­ಯಾಗಿ ಬೆಂಬಲಿಗರು ಗುಂಡಿನ ದಾಳಿ ನಡೆ­ಸಿದರು. ಈ ಘಟನೆಯಲ್ಲಿ ಪತ್ರ­ಕರ್ತರು, ಪೊಲೀಸರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜನರಿಗೆ ಗಾಯ­ಗಳಾಗಿವೆ.

ರಾಮ್‌ಪಾಲ್ ಬಂಧನಕ್ಕೆ ಅವಕಾಶ ನೀಡಬೇಕು ಎಂದು ಧ್ವನಿವರ್ಧಕದ ಮೂಲಕ ಪೊಲೀಸರು ಪದೇ ಪದೇ ಘೋಷಣೆ ಮಾಡಿದ್ದೇ ಘರ್ಷಣೆಗೆ ಕಾರಣವಾಯಿತು.ಪೊಲೀಸ್, ಅರೆಸೇನಾಪಡೆ ಸೇರಿ­ದಂತೆ ಆಶ್ರಮದ ಸಮೀಪ ಸೇರಿದ್ದ ಭಾರಿ ಸಂಖ್ಯೆಯ ಭದ್ರತಾ ಸಿಬ್ಬಂದಿ ಆಶ್ರಮದ ಒಳಭಾಗದಲ್ಲಿ ಸೇರಿದ್ದ ಸಾವಿರಾರು ರಾಮ್‌ಪಾಲ್‌ ಬೆಂಬಲಿಗರನ್ನು ಅಲ್ಲಿಂದ ಕಳುಹಿಸಲು ನಡೆಸಿದ ಕಾರ್ಯಾ­ಚರಣೆಗೆ   ವಿರೋಧ ವ್ಯಕ್ತವಾ­ಯಿತು. ಪೊಲೀಸರ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್‌ ಹಾಗೂ ಆ್ಯಸಿಡ್‌ ಬಾಟಲಿಗಳನ್ನು ಎಸೆಯಲಾಯಿತು.  ಇದರಿಂದಾಗಿ ಮಹಿಳೆ­ಯರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಇಬ್ಬರು ಪೊಲೀಸರಿಗೆ ಗುಂಡು ತಗಲಿದೆ. ಮಹಿ­ಳೆ­ಯೊಬ್ಬರಿಗೆ ಸುಟ್ಟ ಗಾಯಗಳಾಗಿವೆ. 

ಬೆಂಬಲಿಗರಿಂದ ಗುಂಡಿನ ದಾಳಿ: ಆಶ್ರ­ಮದ ಒಳಗಿನಿಂದ ರಾಮ್‌ ಪಾಲ್ ಬೆಂಬಲಿ­ಗರು ಗುಂಡಿನ ದಾಳಿ ನಡೆಸಿ­ದರು. ಇದಕ್ಕೆ ಪೊಲೀಸರು ಪ್ರತಿ­ರೋಧ ಒಡ್ಡಿದರು. ಘರ್ಷಣೆ­ಯಲ್ಲಿ ಆಶ್ರಮದ ಹೊರ ಭಾಗದ ಗೋಡೆಗೆ ಹಾನಿ­ಯಾ­ಗಿದೆ.  ಆಶ್ರಮದ ಒಳಗಿನಿಂದ ರಾಮ್‌ ಪಾಲ್ ಬೆಂಬಲಿಗರು ತಮ್ಮ ಮೇಲೆ ಕಲ್ಲು­­ತೂರಾಟ ನಡೆಸಿದರು ಎಂದು ಪೊಲೀ­ಸರು ಹೇಳಿದ್ದಾರೆ. ರಾಮ್‌­ಪಾಲ್‌ ತಮ್ಮ ಭದ್ರತೆಗೆ  ‘ಖಾಸಗಿ ಸೇನೆ’­­  ನಿಯೋಜಿಸಿಕೊಂಡಿದ್ದರು ಎಂದು ಪೊಲೀಸರು ದೂರಿದ್ದಾರೆ.

ಆಶ್ರಮದಿಂದ ಹೊರಹಾಕಿದ ಬೆಂಬಲಿ­ಗರನ್ನು ಪೊಲೀಸ್ ವಾಹನದಲ್ಲಿ ಕರೆ­ದೊಯ್ಯಲಾಯಿತು. ಗಾಯ­ಗೊಂಡ­ವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ‘ರಾಮ್‌ಪಾಲ್ ಕಾನೂನಿನ ಕಣ್ಣು ತಪ್ಪಿಸಿ ಎಲ್ಲಿಗೂ ಓಡಿ ಹೋಗಲ್ಲ. ಅವರ ಆರೋಗ್ಯ ಸುಧಾರಿಸಿದ ಕೂಡಲೇ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ. ಪೊಲೀ­ಸರು ಅವರನ್ನು ಬಂಧಿಸಲು ಯಾವುದೇ ಪ್ರಯತ್ನಿಸಬಾರದು’ ಎಂದು ಆಶ್ರಮದ ವಕ್ತಾರ ರಾಜ್‌ ಕಪೂರ್‌ ಹೇಳಿದ್ದಾರೆ.

ಜಾಮೀನು ಕಾಯ್ದಿರಿಸಿದ ಆದೇಶ:  2006 ರಲ್ಲಿ ನಡೆದ ಹತ್ಯೆ ಸಂಬಂಧ ರಾಮ್‌ಪಾಲ್ ವಿರುದ್ಧ ಜಾಮೀನು ತಿರಸ್ಕರಿಸಿದ ಆದೇಶವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌  ಮಂಗಳವಾರ ಕಾಯ್ದಿರಿಸಿದೆ. ರಾಮ್‌ಪಾಲ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ಮರು­ದಿನವೇ ಈ ಆದೇಶ ಹೊರಬಿದ್ದಿದೆ.

ಪತ್ರಕರ್ತಕರಿಗೆ ಪೊಲೀಸರಿಂದ ಥಳಿತ: ರಾಮ್‌ಪಾಲ್‌ ಆಶ್ರಮದಲ್ಲಿ ಪೊಲೀ­ಸರು ಮತ್ತು ರಾಮ್‌ಪಾಲ್‌ ಬೆಂಬಲಿ­ಗರ ನಡುವೆ ನಡೆಯುತ್ತಿದ್ದ ಘರ್ಷಣೆ­ಯನ್ನು ವರದಿ ಮಾಡಲು ತೆರಳಿದ್ದ ಮಾಧ್ಯಮ­ದವರ ಮೇಲೆ ಪೊಲೀಸರು ನಡೆಸಿದ ಅಪ್ರಚೋದಿತ ದಾಳಿಯಲ್ಲಿ  ಹಲವು ಪತ್ರಕರ್ತರು ಗಾಯ­ಗೊಂಡಿದ್ದಾರೆ.

ಆಶ್ರಮದ ಸಮೀಪದಲ್ಲೇ ಸೇರಿದ್ದ ಪತ್ರಕರ್ತರು ಪೊಲೀಸರ ದಾಳಿಗೆ ಸಿಲುಕಿದರು.ಹರಿಯಾಣ ಪೊಲೀಸ್‌ ಮಹಾ­ನಿರ್ದೇಶಕ ಎಸ್‌.ವಿ.ವಸಿಷ್ಟ ಅವರ ಮೌಖಿಕ ಸೂಚನೆ ಮೇರೆಗೆ ಪೊಲೀಸರೇ ಮಾಧ್ಯಮವರನ್ನು ಆಶ್ರಮದ ಸಮೀಪಕ್ಕೆ ಕರೆದುಕೊಂಡು ಹೋಗಿದ್ದರು.  ‘ದೂರದಿಂದಲೇ ನಿಂತು ಗಲಾಟೆಯ ವರದಿ ಮಾಡುತ್ತಿ­ರು­ವಾಗ ಹಿಂದಿನಿಂದ ಬಂದ ಪೊಲೀಸರು ಏಕಾಏಕಿ ನಮ್ಮ ಮೇಲೆ ದಾಳಿ ನಡೆಸಿದರು.  ಲಾಟಿ ಯಿಂದ ಹೊಡೆದಿದ್ದರಿಂದ ಹಲವರು ಗಾಯಗೊಂಡರು’ ಎಂದು ಸ್ಥಳದಲ್ಲಿದ್ದ ಪತ್ರಕರ್ತರೊಬ್ಬರು ಹೇಳಿದ್ದಾರೆ.

‘ಪೊಲೀಸರಿಗೆ ಈ ಘಟನೆ ಚಿತ್ರೀಕರಿ ಸುವುದು ಬೇಡವಾಗಿತ್ತು. ಕ್ಯಾಮೆರಾ­ಗಳನ್ನು ಒಡೆದು ಹಾಕಿ, ಪತ್ರಕರ್ತರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆ ದಿದ್ದಾರೆ ಹಾಗೂ ಗಾಯಗೊಂಡವರಿಗೆ ಯಾವುದೇ ರೀತಿಯ ವೈದ್ಯಕೀಯ  ನೆರವು ನೀಡಿಲ್ಲ. ಕ್ಯಾಮೆರಾ ಸೇರಿದಂತೆ ಹಲವು ಉಪಕರಣಗಳನ್ನು ಒಡೆದು ಹಾಕಿದ್ದಾರೆ ಎಂದು ಸುದ್ದಿ ವಾಹಿನಿಯ ಪತ್ರಕರ್ತರೊಬ್ಬರು ಹೇಳಿದ್ದಾರೆ.

ದೆಹಲಿ ಮೂಲದ ವಾಹನಗಳ ತಪಾಸಣೆ: (ಚಂಡೀಗಡ ವರದಿ): ರಾಮ್‌ಪಾಲ್ ಬೆಂಬಲಿಗರ ಚಲನ­ವಲನದ ಮೇಲೆ ಕಣ್ಣಿಡಲು ದೆಹಲಿ ಮೂಲದ ವಾಹನಗಳ ತಪಾಸಣೆಗೆ ಹರಿಯಾಣ ಸರ್ಕಾರ ಆದೇಶ ಹೊರಡಿಸಿದೆ.

ರಾಮ್‌ಪಾಲ್ ಬೆಂಬಲಿಗರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವ ಸುಳಿವಿನ ಕಾರಣ  ವಾಹನಗಳನ್ನು ಕೂಡಲೇ ತಪಾಸಣೆ ಮಾಡಬೇಕು ಎಂದು ಸರ್ಕಾರ ಬೇಹುಗಾರಿಕಾ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಸಂಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ಕಾರ್, ಬಸ್‌, ಹರಿಯಾಣ ರಾಜ್ಯ ಸರ್ಕಾರಿ ವಾಹನಗಳು ಸೇರಿದಂತೆ ಎಲ್ಲ ಖಾಸಗಿ ವಾಹನಗಳನ್ನು ತಪಾಸಣೆ ಮಾಡುವಂತೆ ಆದೇಶ ಹೊರಡಿಸ­ಲಾಗಿದೆ.  ಹರಿಯಾಣದಿಂದ ಕಾರ್ಯಾಚರಣೆ ನಡೆಸುವ ದೆಹಲಿ ಕಡೆಗೆ ಸಂಚರಿಸುವ ರೈಲುಗಳನ್ನು ರೈಲ್ವೆ ಪೊಲೀಸರು ತಪಾಸಣೆ ನಡೆಸಲಿದ್ದಾರೆ.ರಾಮ್‌ಪಾಲ್‌ ಬೆಂಬಲಿಗರು ಎಂಬ ಶಂಕೆ ವ್ಯಕ್ತವಾದವರನ್ನು ವಾಹನದಿಂದ ಇಳಿಸಿ ವಿಚಾರಣೆ ನಡೆಸಲಾಗಿದೆ.

ರಾಮ್‌ಪಾಲ್ ಆಶ್ರಮದಲ್ಲೇ ಇದ್ದಾರೆ: ಡಿಜಿಪಿ
ರಾಮ್‌ಪಾಲ್ ಆಶ್ರಮದಲ್ಲೇ ಇದ್ದಾರೆ. ಅವರನ್ನು ಹೊರತಂದು ಹೈಕೋರ್ಟ್‌ ಮುಂದೆ ಹಾಜರುಪ­ಡಿಸು­ವ­ವರೆಗೆ ಕಾರ್ಯಾಚರಣೆ ಮುಂದುವರಿ­ಯಲಿದೆ ಎಂದು ಹರಿಯಾಣಾ ಡಿಜಿಪಿ ಎಸ್.ಎನ್‌.ವಸಿಷ್ಠ ಹೇಳಿದ್ದಾರೆ.ರಾಮ್‌ಪಾಲ್‌ ವಿರುದ್ಧ ಮೂರು ಎಫ್‌ಐಆರ್‌ ದಾಖಲಿಸಲಾಗಿದ್ದು, ಒಂದ­ರಲ್ಲಿ ಹತ್ತಾರು ಜೀವಗಳನ್ನು ಅಪಾಯಕ್ಕೆ ದೂಡಿದ ಆರೋಪ ಹೊರಿಸಲಾಗಿದೆ.ಮತ್ತೊಂದು ಎಫ್‌ಐಆರ್‌ನಲ್ಲಿ ಆಶ್ರಮ­ದಲ್ಲಿ ಬೆಂಬಲಿಗರನ್ನು ಒತ್ತೆಯಾ­ಳಾ­ಗಿರಿಸಿಕೊಂಡ ಆರೋಪ ಹೊರಿಸ­ಲಾಗಿದೆ. 50 ಜನ ರಾಮ್‌ಪಾಲ್‌ ಬೆಂಬಲಿಗರು ಆತ್ಮಾಹುತಿಗೆ ಮುಂದಾದ ಘಟನೆಗೆ ಸಂಬಂಧಿಸಿ ಇನ್ನೊಂದು ಎಫ್‌ಐಆರ್‌ ದಾಖಲಿಸಲಾಗಿದೆ.ಹರಿಯಾಣ ಮುಖ್ಯಮಂತ್ರಿ ಮನೋ­ಹರ್ ಲಾಲ್ ಖಟ್ಟರ್‌ ಅವರು, ಆಶ್ರಮದಲ್ಲಿನ ಬೆಳವಣಿಗೆಯನ್ನು ಅವಲೋಕಿಸುತ್ತಿದ್ದಾರೆ. ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT