ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗರದಲ್ಲಿ ಬೆರಳೆಣಿಕೆಯಷ್ಟು ಕೆರೆ’

Last Updated 5 ಜೂನ್ 2015, 20:40 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಾಲಕ್ಕೆ ನೂರಾರು ಕೆರೆಗಳಿದ್ದ ಬೆಂಗಳೂರು ನಗರದಲ್ಲಿಂದು ಬೆರಳೆಣಿಕೆಯಷ್ಟು ಮಾತ್ರ ಕೆರೆಗಳಿರುವುದು ನಮ್ಮ ಪಾಲಿನ ದುರಂತ. ಕೆರೆಗಳಿದ್ದರೆ ಪರಿಸರ ಉಳಿಯಬಲ್ಲದು ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ವೆಂಕಟಗಿರಿಗೌಡ ಸಭಾಂಗಣದಲ್ಲಿ ನಡೆದ  ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಸಿದ್ದಪ್ಪ ಮಾತನಾಡಿ, ‌ಮಾನವನ ಅತಿ ದುರಾಸೆಯಿಂದಾಗಿ ಪರಿಸರ ಹಾಳಾಗುತ್ತಿದೆ ಎಂದರು.

ಸೈಕಲ್‌ ಜಾಥಾ: ಅರ್ಕಾವತಿ ಬಡಾವಣೆಯ ಸಂಪಿಗೇಹಳ್ಳಿಯಲ್ಲಿರುವ ಪಿಕೆಎಸ್‌  ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಅರಿವು ಮೂಡಿಸುವ ಭಿತ್ತಿಚಿತ್ರಗಳನ್ನು ಹಿಡಿದು, ಸಂಪಿಗೇಹಳ್ಳಿ, ವೆಂಕಟೇಶಪುರ, ಅಗ್ರಹಾರ ಹಾಗೂ ಶ್ರೀರಾಮಪುರ ಗ್ರಾಮಗಳಲ್ಲಿ ಸೈಕಲ್‌ ಹಾಗೂ ಕಾಲ್ನಡಿಗೆ ಜಾಥಾ ನಡೆಸಿದರು.  ಬೀದಿ ನಾಟಕ ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿವಿಧೆಡೆ ಪರಿಸರ ದಿನ ಆಚರಣೆ– ಬಿಷಪ್‌ ಕಾಟನ್‌ ಶಾಲೆ:  ಬಿಷಪ್‌ ಕಾಟನ್‌ ಬಾಲಕರ ಶಾಲೆಯಿಂದ ನಗರದಲ್ಲಿ ಆಯೋಜಿಸಿದ್ದ  ಸೈಕ್ಲೋಥಾನ್‌ನಲ್ಲಿ 900 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ದಕ್ಷಿಣ ಭಾರತ ಚರ್ಚ್‌ಗಳ ಬಿಷಪ್‌ ಪಿ.ಕೆ. ಸ್ಯಾಮುಯೆಲ್‌ ಅವರು ಸೈಕ್ಲೋಥಾನ್‌ಗೆ ಹಸಿರು ನಿಶಾನೆ ತೋರಿಸಿದರು.
ಇದೆ ವೇಳೆ ಪರಿಸರ ಸಂಬಂಧಿ ಸಾಕ್ಷಚಿತ್ರ ಪ್ರದರ್ಶನ ನಡೆಯಿತು. ಪೋಸ್ಟರ್‌ ತಯಾರಿಕೆ, ಛಾಯಾಚಿತ್ರ ಸ್ಪರ್ಧೆ ಆಯೋಜಿಸಲಾಗಿತ್ತು.

ಅನುಸಂಧಾನ ಸಂಸ್ಥೆ: ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ಅನುಸಂಧಾನ ಸಂಸ್ಥೆಯು ಆಡುಗೋಡಿಯಲ್ಲಿ ವಿಶ್ವ ಪರಿಸರ ದಿನ ಆಚರಿಸಿತು. ಸಂಸ್ಥೆ ನಿರ್ದೇಶಕ ಡಾ. ರಾಘವೇಂದ್ರ ಭಟ್ಟ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಸಸಿಗಳನ್ನು ನೆಡಲಾಯಿತು.

ಸಮಾಜ ಸೇವಾ ಟ್ರಸ್ಟ್‌: ಭಾರತೀಯ ಸಮಾಜ ಸೇವಾ ಟ್ರಸ್ಟ್‌ನಿಂದ ಬಾಪೂಜಿ ನಗರದ ಜಿ.ಎಸ್‌. ಇಂಗ್ಲಿಷ್‌ ಶಾಲೆಯಲ್ಲಿ ‘ಜೀವನವನ್ನು ರಕ್ಷಿಸಲು ಭೂಮಿಯನ್ನು ಸಂರಕ್ಷಿಸಿ’ ವಿಷಯದ ಕುರಿತು ಮಕ್ಕಳಿಗೆ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ಬಿಎಂಟಿಸಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಜೂನ್ ತಿಂಗಳ ಬಸ್ ದಿನದ ಜೊತೆಗೆ ಪರಿಸರ ದಿನವನ್ನೂ ಆಚರಿಸಿತು. ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು.

ರೈಲು ಗಾಲಿ ಕಾರ್ಖಾನೆ: ರೈಲು ಗಾಲಿ ಕಾರ್ಖಾನೆಯು (ಆರ್‌ಡಬ್ಲ್ಯುಎಫ್‌)  ಘನತ್ಯಾಜ್ಯ ಮತ್ತು ನೀರಿನ ನಿರ್ವಹಣೆ ಕುರಿತು ಚರ್ಚಾಗೋಷ್ಠಿ ಹಮ್ಮಿಕೊಂಡಿತ್ತು.

ನಿವೃತ್ತ ಐಎಎಸ್‌ ಅಧಿಕಾರಿ ಪಿ.ಆರ್‌. ದಾಸಗುಪ್ತಾ, ಆರ್‌ಡಬ್ಲ್ಯುಎಫ್‌ ಪ್ರಧಾನ ವ್ಯವಸ್ಥಾಪಕ ಪಂಕಜ್‌ ಜೈನ್‌ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಸಿಬ್ಬಂದಿ ಪರಿಸರದ ಕುರಿತು ಅರಿವು ಮೂಡಿಸುವ ನಾಟಕ ಪ್ರದರ್ಶಿಸಿದರು. ಕೇಂದ್ರೀಯ ವಿದ್ಯಾಲಯದ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು.

ಪ್ರೆಸಿಡೆನ್ಸಿ ಶಾಲೆ: ನಂದಿನಿ ಬಡಾವಣೆಯ ಪ್ರೆಸಿಡೆನ್ಸಿ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ಬೈಸಿಕಲ್‌ ರ್‍ಯಾಲಿ ನಡೆಸಿ ಪರಿಸರದ ಕುರಿತು ಜಾಗೃತಿ ಮೂಡಿಸಿದರು.

ವಿಪ್ರೊ: ವಿಪ್ರೊ ಸಂಸ್ಥೆಯಿಂದ ನಗರದ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪರಿಸರದ ಮೇಲೆ ಬೆಳಕು ಚೆಲ್ಲುವ ‘ಹೋಮ್‌’ ಸಾಕ್ಷ್ಯಚಿತ್ರ, ಅನಿಲ್‌ ಅಣ್ಣಯ್ಯ ಅವರ ಛಾಯಾಚಿತ್ರ ಪ್ರದರ್ಶನ ನಡೆಯಿತು.

ಸೈಕ್ಲಿಂಗ್‌ ಮತ್ತು ಕಾರ್‌ಪೂಲಿಂಗ್‌ಗೆ ಚಾಲನೆ ನೀಡಿರುವ ಸಂಸ್ಥೆಯ ಉದ್ಯೋಗಿಗಳೊಂದಿಗೆ ಸಂವಾದ ನಡೆಯಿತು. ಹಸಿರು ದಳದ ಸದಸ್ಯರೊಂದಿಗೆ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಸಂವಾದ ಕಾರ್ಯಕ್ರಮವೂ ಜರುಗಿತು.

ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌: ‘ಒಬ್ಬ ವ್ಯಕ್ತಿ ಒಂದು ಸಸಿ’ ಘೋಷಣೆ ಅಡಿ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಅಂಡ್‌ ಸೆಂಟರ್‌ನ ಯೋಧರು ಹಾಗೂ ಅವರ ಕುಟುಂಬ ಸದಸ್ಯರು ಸಂಸ್ಥೆಯ ಆವರಣದಲ್ಲಿ ಸಸಿ ನೆಟ್ಟರು.

ಬಿಇಎಲ್‌: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಿಂದ ನೀರಿನ ಜಲಮೂಲಗಳ ಕುರಿತು ಅರಿವು ಮೂಡಿಸುವ ಕಾರ್ಯ ಕ್ರಮ ಆಯೋಜಿಸಲಾಗಿತ್ತು. ದೊಡ್ಡ ಬೊಮ್ಮಸಂದ್ರ ಪ್ರದೇಶದಲ್ಲಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ 3,500 ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.

ಪ್ರೆಸ್‌ ಕ್ಲಬ್‌: ನಗರದ ಪ್ರೆಸ್‌ಕ್ಲಬ್‌ನಲ್ಲಿ ವನಮಹೋತ್ಸವ ಆಚರಿಸಲಾಯಿತು.  ಕ್ಲಬ್‌ ಆವರಣದಲ್ಲಿ ಹಿರಿಯ ಪತ್ರಕರ್ತ ದೇವನಾಥ ಅವರು ಸಸಿ ನೆಟ್ಟು ನೀರೆರೆದರು.

ಸಾರಕ್ಕಿ ಕೆರೆಯಲ್ಲೂ ನೊರೆ!
ಬೆಂಗಳೂರು ಜೆ.ಪಿ.ನಗರದ ಸಾರಕ್ಕಿ ಕೆರೆಯಲ್ಲೂ ನೊರೆ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

‘ಕೈಗಾರಿಕೆಗಳ ಕಲುಷಿತ ನೀರು ಕೆರೆಗೆ ಸೇರುತ್ತಿದೆ. ಕೆರೆ ಕೋಡಿಯಲ್ಲಿ ಕಳೆದ ಎರಡು ವರ್ಷಗಳಿಂದ ನೊರೆ ಸಮಸ್ಯೆ ಇದೆ. ಮಳೆ ಬಂದಾಗ ಸಮಸ್ಯೆ ಜಾಸ್ತಿ ಆಗುತ್ತಿದೆ. ಕಳೆದ ಕೆಲವು ದಿನಗಳಿಂದ ಸಮಸ್ಯೆ ಗಂಭೀರವಾಗಿದೆ. ಜೋರು ಗಾಳಿ ಬಂದಾಗ ಮನೆಯೊಳಗೆ ನೊರೆ ಹಾರಿ ಬರುತ್ತದೆ’ ಎಂದು ಸ್ಥಳೀಯ ನಿವಾಸಿ ವೆಂಕಟಸ್ವಾಮಿ ಅಳಲು ತೋಡಿಕೊಂಡರು.

‘ಈ ಬಗ್ಗೆ ಬಿಡಿಎ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಸಚಿವ ಅನಂತ ಕುಮಾರ್‌, ಶಾಸಕ ಸತೀಶ್ ರೆಡ್ಡಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ’ ಎಂದು ಹೇಳಿದರು.

ಪುಟ್ಟೇನಹಳ್ಳಿ, ಜರಗನಹಳ್ಳಿ, ಸಾರಕ್ಕಿ, ಕೊತ್ತನೂರು, ಚುಂಚನಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಒಳಚರಂಡಿ­ಗಳ ಕೊಳಚೆ ನೀರು ಹಾಗೂ ಕೈಗಾರಿಕಾ ತ್ಯಾಜ್ಯ ಕೆರೆಯ ಒಡಲು ಸೇರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.

‘ಕಶ್ಮಲ ತುಂಬಿರುವ ಈ ಕೊಳಕಿನಲ್ಲಿ ವಿಷಕಾರಕ ಅಂಶಗಳಿವೆ. ಇದರಿಂದ ಅಂತರ್ಜಲ ಮಲಿನವಾಗುತ್ತಿದೆ. ಸುತ್ತಮುತ್ತಲಿನ ಕೊಳವೆ ಹಾಗೂ ತೆರೆದ ಬಾವಿಗಳ ನೀರು ವಿಷವಾಗಿ ಪರಿವರ್ತಿತವಾಗುತ್ತಿದೆ. ಇಂಥ ನೀರು ಕುಡಿದರೆ ಕ್ಯಾನ್ಸರ್‌ ಬರುತ್ತದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿ ಟಿ.ವಿ.ರಾಮಚಂದ್ರ ಎಚ್ಚರಿಸಿದರು.

‘ಬೆಳ್ಳಂದೂರು ಹಾಗೂ ವರ್ತೂರು ಕೆರೆಯಲ್ಲಿ ನೊರೆ ಸಮಸ್ಯೆ ಇದೆ. ಸಾರಕ್ಕಿ ಕೆರೆಯಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲ’ ಎಂದು ಬಿಡಿಎ ಕೆರೆ ವಿಭಾಗದ ಅಧಿಕಾರಿಗಳು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT