ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಗರಸಭೆಯಾಗಿ ಪುತ್ತೂರು: ಅಭಿವೃದ್ಧಿಗೆ ಪೂರಕ-’

Last Updated 22 ಜುಲೈ 2014, 10:52 IST
ಅಕ್ಷರ ಗಾತ್ರ

ಪುತ್ತೂರು: ಇಲ್ಲಿನ ಪುರಸಭೆಯು 2011ರ ಜನಗಣತಿ ಪ್ರಕಾರ 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ನಗರಸಭೆಯಾಗಿ ಪರಿವರ್ತಿಸ­ಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತ­ನಾಡಿದ ಅವರು, ಪೂರಕ ಕಾರ್ಯಸೂಚಿಯಲ್ಲಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆ­ಗೇರಿಸಲಾಗಿದೆ. ಪುತ್ತೂರಿಗೆ ಆಯುಕ್ತರ ನೇಮಕ­ವಾಗಲಿದೆ. ಸಿಬ್ಬಂದಿ ವ್ಯವಸ್ಥೆ ಬದಲಾಗಲಿದ್ದು, ಅನು­ದಾನದ ಮೊತ್ತ ಹೆಚ್ಚಲಿದೆ. ಯೋಜನಾ ಪ್ರಾಧಿಕಾರ­ವನ್ನು ನಗರ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಮೊದಲನೇ ಹಂತದಲ್ಲಿ 50 ಸಾವಿರ ಮಿಕ್ಕಿ ಜನಸಂಖ್ಯೆ ಹೊಂದಿರುವ ಪುರಸಭೆಯನ್ನು ನಗರಸಭೆ­ಯಾಗಿ, 20 ಸಾವಿರ ಮಿಕ್ಕಿ ಜನಸಂಖ್ಯೆಯಿರುವ ಪಟ್ಟಣ ಪಂಚಾಯಿತಿಯನ್ನು ಪುರಸಭೆ ಮಾಡಲಾ­ಗಿದೆ. ಮುಂದೆ 2ನೇ ಹಂತದ ಪ್ರಕ್ರಿಯೆ ನಡೆಸಲಾಗು­ವುದು ಎಂದರು.

ಒಳಚರಂಡಿ ವ್ಯವಸ್ಥೆಗಾಗಿ ಪುತ್ತೂರಿಗೆ ₨75ರಿಂದ 80 ಕೋಟಿ ಬಿಡುಗಡೆ ಮಾಡಲಾಗಿದೆ. ಪುತ್ತೂರಿ­ನಲ್ಲಿ ನೀರು ಪೂರೈಕೆಗೆ ಎಡಿಬಿ ಯೋಜನೆಯಡಿ ₨15 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನೀರಿನ ಟ್ಯಾಂಕ್, ನೀರಿನ ವ್ಯವಸ್ಥೆ ವಿಸ್ತರಣೆ, ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಸುಳ್ಯಕ್ಕೆ ₨40 ಕೋಟಿ  ಬಿಡುಗಡೆ ಮಾಡಿದ್ದು, ಬೆಳ್ತಂಗಡಿಗೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವಿಭಾಗ: ಘನತ್ಯಾಜ್ಯ, ಕುಡಿಯುವ ನೀರು, ಚರಂಡಿ ವ್ಯವಸ್ಥೆಗೆ ಪ್ರತ್ಯೇಕ ವಿಭಾಗ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಹಿಂದೆ ತ್ಯಾಜ್ಯ ವಿಲೇವಾರಿ ಮಾಡಲು ಹೊರಗಿನವರಿಗೆ ಗುತ್ತಿಗೆ ನೀಡಲಾಗುತ್ತಿತ್ತು. ಗುತ್ತಿಗೆ ನೀಡಿದರೆ, ಆಡಳಿತಕ್ಕೆ ಯಾವುದೇ ಹತೋಟಿ ಇರುವುದಿಲ್ಲ ಎಂದರು.

ಮಾಣಿ- ಬೆಂಗಳೂರು ರಸ್ತೆ ಮುಂದೆ ಪ್ರಮುಖ ಹೆದ್ದಾರಿಯಾಗಲಿದೆ. ಪ್ರವಾಸಿ ಸ್ಥಳದ ಪ್ರಮುಖ ರಸ್ತೆಯಾಗಿರುವುದರಿಂದ ಹೆದ್ದಾರಿಯನ್ನು ಸಂಪರ್ಕಿ­ಸುವ ಪ್ರಮುಖ ರಸ್ತೆಗಳ  ಅಗಲ ಹೆಚ್ಚಿಸುವ ಅಗತ್ಯ ಇದೆ ಎಂದು ಸಚಿವರು ಉದ್ಯಮಿ ಎಸ್.ಕೆ.ಆನಂದ್ ಅವರ ಸಲಹೆಗೆ ಪ್ರತಿಕ್ರಿಯೆ ನೀಡಿದರು.

ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಪುತ್ತೂರು ಮುಖ್ಯರಸ್ತೆಯಲ್ಲಿ ಸರಕು ಲಾರಿಗಳನ್ನು ನಿಲುಗಡೆ­ಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಇದರಿಂದ ವರ್ತಕರು ಮತ್ತು ಪೊಲೀಸರ ನಡುವೆ ತಿಕ್ಕಾಟ ಶುರುವಾಗಿದೆ. ಅಲ್ಲದೇ ಹಮಾಲಿ ಕೊರತೆ ಹಾಗೂ ಹೊರ ಜಿಲ್ಲೆಗಳಿಂದ ಸರಕು ತರುವ ಲಾರಿ ಗಳು ಇತರ ಸಮಯಗಳಲ್ಲಿ ಲಭ್ಯವಿರುವುದಿಲ್ಲ. ಇದರಿಂದಾಗಿ ವರ್ತಕರಿಗೆ ಸಮಸ್ಯೆಯಾಗಿದೆ ಎಂದು ಮನವಿ ಮಾಡಲಾಯಿತು. ಪ್ರತಿಕ್ರಿಯಿಸಿದ ಸಚಿವರು, ನೇರ ಹೋಗುವ ಲಾರಿಗಳನ್ನು ಬೈಪಾಸ್ ರಸ್ತೆಯಾಗಿ ತೆರಳಲು ವ್ಯವಸ್ಥೆ ಕಲ್ಪಿಸುವಂತೆ ಉಪ ವಿಭಾಗಾಧಿ­ಕಾರಿಗೆ ಸೂಚಿಸಿದರು.

ಪರ್ಲಡ್ಕ ಬಾಲವನದ ಡಾ.ಶಿವರಾಮ ಕಾರಂತರ ವಾಸದ ಮನೆ ಬೀಳುವ ಸ್ಥಿತಿಯಲ್ಲಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಲಾ ಯಿತು. ಸದ್ಯದ ಪರಿಸ್ಥಿತಿಯಲ್ಲಿ ಮಾಡು ದುರಸ್ತಿ ಮಾಡಬ­ಹುದು. ಈ ರೀತಿ ಮಾಡಿದರೆ ಗೋಡೆಗೆ ಅಧಿಕ ಒತ್ತಡ ಬೀಳಲಿದೆ. ಆದ್ದರಿಂದ ಮನೆ ಪುನರ್‌ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು ಎಂದು ಉಪ ವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ವಿವರಿಸಿ­ದರು.

ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ತಹಶೀಲ್ದಾರ್ ಎಂ.ಟಿ.ಕುಳ್ಳೇಗೌಡ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಸದಸ್ಯರಾದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮೊದಲಾದವರು   ಉಪಸ್ಥಿತ­ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT