ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ದೇವರನ್ನು ನೋಡಿದ್ದೇನೆ...’

ಆಟೊ ಚಾಲಕನ ಅಭಿಮಾನ
Last Updated 24 ಏಪ್ರಿಲ್ 2014, 20:33 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ದೇವರನ್ನು ನೋಡಿದ್ದೇನೆ, ಆತನನ್ನು ಭೇಟಿಯಾ ಗಿದ್ದೇನೆ, ಆತನೊಂದಿಗೆ ಮಾತನಾ ಡಿದ್ದೇನೆ, ಆತನನ್ನು ಮುಟ್ಟಿದ್ದೇನೆ’ –ಇದು ಉದ್ಯಾನ ನಗರಿಯ ಆಟೊವೊಂದರಲ್ಲಿ ಕಂಡುಬಂದ ಬರಹ. ಆಟೊ ಚಾಲಕ ವೇಲು ಪಾಲಿನ ಆ ದೇವರು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌. ಸಚಿನ್‌ ಅವರ 41ನೇ ಹುಟ್ಟು ಹಬ್ಬದ ಪ್ರಯುಕ್ತ ವೇಲು ಗುರುವಾರ ತನ್ನ ಇಡೀ ಆಟೊವನ್ನು ‘ಸಚಿನ್‌ಮಯ’ವಾಗಿಸಿದ್ದರು.

ಶತಕ ಗಳಿಸಿದಾಗ ಸಚಿನ್‌ ಸಂಭ್ರಮಿಸಿದ ಅಷ್ಟೂ ಫೋಟೊಗಳು ಆ ಆಟೊದ ಮೇಲಿದ್ದವು. ‘ಸಚಿನ್‌ ವಿದಾಯ ಹೇಳಿದಾಗ ನಾನು ತುಂಬಾ ಅತ್ತುಬಿಟ್ಟೆ. ನನ್ನ ಪಾಲಿನ  ಯಾತನೆಯ ಕ್ಷಣವದು’ ಎಂದು 45 ವರ್ಷ ವಯಸ್ಸಿನ ವೇಲು ತನ್ನ ಆಟೊದ ಮೇಲೆ ಅಂಟಿಸಿರುವ ಬ್ಯಾನರ್‌ನಲ್ಲಿ ಬರೆದುಕೊಂಡಿದ್ದಾರೆ.

‘2004ರಲ್ಲಿ ನಾನು ಸಚಿನ್‌ ಅವರನ್ನು ಮೊದಲು ಭೇಟಿಯಾಗಿದ್ದೆ. ಬೆಂಗಳೂರಿನಲ್ಲಿ ಅವರು ಅಭ್ಯಾಸ ನಡೆಸುತ್ತಿದ್ದಾಗ ನನಗೆ ಆ ಅವಕಾಶ ಸಿಕ್ಕಿತ್ತು. ಸಚಿನ್‌ ಜೊತೆ ತೆಗೆಸಿಕೊಂಡ ಫೋಟೊವನ್ನು  ನಾನು ಜೋಪಾನವಾಗಿಟ್ಟುಕೊಂಡಿದ್ದೇನೆ’ ಎಂದು ವೇಲು ‘ಪ್ರಜಾವಾಣಿ’ಗೆ ತಿಳಿಸಿದರು.

ಎಂ.ಜಿ.ರಸ್ತೆಯಲ್ಲಿ ತಿರುಗಾಡುತ್ತಿದ್ದ ವಿದೇಶಿ ಪ್ರವಾಸಿಗರು ಕುತೂಹಲದಿಂದ ಆ ಆಟೊ ವೀಕ್ಷಿಸಿದರು. ಕೆಲವರು ತಮ್ಮ ಮೊಬೈಲ್‌ನಲ್ಲಿ ಆ ಆಟೊ ಫೋಟೊ ಕ್ಲಿಕ್ಕಿಸಿದರು. ‘ಆಟ ನಿಲ್ಲಿಸಿದರೂ ಇವರಿಗೆಲ್ಲಾ ಸಚಿನ್‌ ಮೇಲಿನ ಕ್ರೇಜ್‌ ಕಡಿಮೆಯಾಗಿಲ್ಲ. ಇವರ ಪ್ರೀತಿಯೇ ಸಚಿನ್‌ ಅಷ್ಟೊಂದು ಚೆನ್ನಾಗಿ ಆಡಲು  ಕಾರಣವಿರಬಹುದು’ ಎಂದು ನಗರದ ಕ್ರಿಕೆಟ್‌ ಅಕಾಡೆಮಿಯೊಂದರಲ್ಲಿ ತರಬೇತಿ ನೀಡುತ್ತಿರುವ ಇಂಗ್ಲೆಂಡ್‌ನ ಬ್ರೂಸೆನ್‌ ಫೀಲ್ಡ್‌ ಪತ್ರಿಕೆಗೆ ಪ್ರತಿಕ್ರಿಯಿಸಿದರು.

‘ಸಚಿನ್‌ ಹುಟ್ಟಹಬ್ಬವೇ ನನ್ನ ಪಾಲಿಗೆ ದೊಡ್ಡ ಹಬ್ಬ. ಸಚಿನ್‌ ಆಡಿದ ಪಂದ್ಯಗಳನ್ನು ಮತ್ತೆ ಮತ್ತೆ ವೀಕ್ಷಿಸುತ್ತಿರುತ್ತೇನೆ. ಅದು ನನ್ನನ್ನು ಖುಷಿಯಾಗಿಟ್ಟಿದೆ’ ಎಂದು ಆಟೊ ಚಾಲಕ ವೇಲು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT