ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರರ್ಥಕ ಗುಜರಾತ್‌ ಮಾದರಿ ದೇಶಕ್ಕೆ ಬೇಡ’

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಯುಪಿಎ ಹಾಗೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ­ವಲಯ­ದಲ್ಲಿ ಪ್ರಮುಖ­ರೆನ್ನೆಸಿಕೊಂಡ ಕೆಲವರಲ್ಲಿ ಅಹಮ್ಮದ್‌ ಪಟೇಲ್‌ ಕೂಡ ಒಬ್ಬರು. ಇಷ್ಟು ವರ್ಷ­ಗಳ ಕಾಲ ನೇಪಥ್ಯ­ದಲ್ಲಿದ್ದು ಕೆಲಸ ಮಾಡು­ತ್ತಿದ್ದ ಸೋನಿಯಾ ಅವರ ರಾಜಕೀಯ ಕಾರ್ಯ­ದರ್ಶಿಯೂ ಆದ 64 ವರ್ಷದ ಪಟೇಲ್‌ ಈಗ ಮುಂಚೂಣಿಗೆ ಬಂದು ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ಹೇಳಿ ಕೇಳಿ ಗುಜರಾತ್‌ನಲ್ಲಿ 15 ವರ್ಷ­ಗಳಿಂದ ಕಾಂಗ್ರೆಸ್‌ ಇನ್ನಿಲ್ಲದಂತೆ ನೆಲ­ಕಚ್ಚಿದೆ. ಹೆಚ್ಚುಕಡಿಮೆ ಒಂದು ದಶಕ­ದಿಂದ ಮಾಧ್ಯಮಗಳಿಂದ ದೂರವೇ ಇದ್ದ ಪಟೇಲ್‌ ಈಗ ಸ್ವಕ್ಷೇತ್ರ ಭರೂಚ್‌ನಲ್ಲಿ ಪ್ರಚಾರ ನಿರತರಾಗಿದ್ದು, ನರೇಂದ್ರ ಮೋದಿ ಅವರ ಪ್ರಧಾನಿ ಆಸೆಗೆ ತಡೆ­ಯೊಡ್ಡುವ ಕಾರ್ಯತಂತ್ರಗಳನ್ನೂ ಹೆಣೆ­ಯು­ತ್ತಿದ್ದಾರೆ. ಈ ಸಂದರ್ಭ­ದಲ್ಲಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

*ಚುನಾವಣಾ ಪೂರ್ವ ಸಮೀಕ್ಷೆ­ಗಳೆಲ್ಲಾ ಕಾಂಗ್ರೆಸ್‌ಗೆ ವಿರುದ್ಧವಾಗಿವೆ. ಗುಜರಾತ್‌­ನಲ್ಲಂತೂ ನಿಮ್ಮ ಪಕ್ಷಕ್ಕೆ ನೆಲೆಯೇ ಇಲ್ಲ ಎನ್ನಬಹುದು. ಇಂತಹ ಸ್ಥಿತಿಯಲ್ಲಿ ನೀವು ಹೇಗೆ ಪ್ರಭಾವ ಬೀರುತ್ತೀರಿ?
ಉ: ನಾವು ವಾಸ್ತವ ಸಂಗತಿಗಳ ಮೇಲೆ ಪ್ರಚಾರ ನಡೆಸುತ್ತೇವೆಯೇ ಹೊರತು ಭ್ರಮಾತ್ಮಕ ಸತ್ಯಗಳಿಂದ ಜನರನ್ನು ಮರುಳು ಮಾಡುವುದಿಲ್ಲ. ಪಕ್ಷದ ನಾಯಕರು ಕೂಡ ಯುಪಿಎ ಸರ್ಕಾರ ಮಾಡಿದ ಕೆಲಸಗಳಾವುವು ಎಂಬುದನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ.

*ಬಿಜೆಪಿ ಹಾಗೂ ಅದರ ಪ್ರಧಾನಿ ಅಭ್ಯರ್ಥಿ ಬಳಸುತ್ತಿರುವ ತಂತ್ರಜ್ಞಾನ–  ಪ್ರಚಾರ ವೈಭವ ನಿಮ್ಮ ಪಕ್ಷವನ್ನು ಕಂಗೆಡಿಸಿಲ್ಲವೇ?
ಉ: ಹಾಗೇನೂ ಇಲ್ಲ. ಸುಳ್ಳನ್ನು ಕೂಗಿ ಕೂಗಿ ಹೇಳಿದರೆ ಅದು ಸತ್ಯ­ವಾಗದು ಎಂಬುದು ಜನತೆಗೆ ಗೊತ್ತು. ‘ಗುಜರಾತ್‌ ಮಾದರಿ’ಯಿಂದ ಏನೂ ಪ್ರಯೋಜನವಿಲ್ಲ ಎಂಬುದೂ ಅವರಿಗೆ ಮನವರಿಕೆ­ಯಾಗಿದೆ. ಮೋದಿ ಅವರಿಂದ ರಾಜ್ಯ ಮಟ್ಟದಲ್ಲಿ ಆಗಿರುವ ಹಾನಿ­ಯನ್ನು ಕಂಡಿರುವ ಜನ ಈಗ ರಾಷ್ಟ್ರ ಮಟ್ಟದಲ್ಲಿ ಅಂತಹ ಹಾನಿ ಆಗಬಾರದು ಎಂದೇ ಬಯಸುತ್ತಿದ್ದಾರೆ.

*ಗುಜರಾತ್‌ನ ನಾಯಕರೊಬ್ಬರು ಪ್ರಧಾನಿ ಅಭ್ಯರ್ಥಿಯಾಗಿರುವುದು ಆ ಪಕ್ಷಕ್ಕೆ ರಾಜ್ಯದಲ್ಲಿ ಅನುಕೂಲ ಮಾಡಿಕೊಡುತ್ತದೆಯೇ?
ಉ: ರಾಷ್ಟ್ರವನ್ನು ಮುನ್ನಡೆಸಲು ಯಾರು ಸೂಕ್ತ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿಯೇ ಗೊತ್ತು. ಬಿಜೆಪಿ ಜನರ ಭಾವನೆಗಳನ್ನು ಕೆರಳಿಸಿ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ. ಆದರೆ ಅದು ಫಲ ನೀಡದು. ಕಾಂಗ್ರೆಸ್‌ ಪಕ್ಷವು 2009ರ ಚುನಾವಣೆ­ಯಲ್ಲಿ ಗಳಿಸಿ­ದ್ದ­ಕ್ಕಿಂತ ಕನಿಷ್ಠ ಒಂದು ಸ್ಥಾನವನ್ನಾ­ದರೂ ಹೆಚ್ಚು ಪಡೆಯಲಿದೆ.

*ನಿಮ್ಮ ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಿರುವುದರಿಂದ ಏನಾದರೂ ಅನುಕೂಲವಾಗುತ್ತದೆಯೇ?
ಉ: ಹೌದು. ಯುವ ನಾಯಕರು ಚುನಾ­ವಣಾ ತಯಾರಿಯಲ್ಲಿ ಸಕ್ರಿಯ­ವಾಗಿ ತೊಡಗಿಸಿ­ಕೊಂಡಿ­ದ್ದಾರೆ. ಟಿಕೆಟ್‌ ಹಂಚಿಕೆಯಲ್ಲೂ ಯುವಕರಿಗೆ ಹೆಚ್ಚಿನ ಪ್ರಾತಿ­ನಿಧ್ಯ ಕೊಡಲಾಗಿದೆ. ಟಿಕೆಟ್‌ ನೀಡಿಕೆಯಲ್ಲಿ ಕೆಲವು ತಪ್ಪುಗಳಾಗಿದ್ದರೂ ಅದು ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರದು. ರಾಹುಲ್‌ ಗಾಂಧಿ ಅವರು ಅಭ್ಯರ್ಥಿಗಳ ಆಯ್ಕೆಗಾಗಿ ನಡೆ­ಸಿದ ಪೂರ್ವಭಾವಿ ಚುನಾವಣಾ ಪದ್ಧತಿಯು ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬಲ ತುಂಬಿದೆ. ಇವೆಲ್ಲ­ವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಜನತೆ ನಮ್ಮ ಪಕ್ಷವನ್ನು ಖಂಡಿತ­ವಾಗಿಯೂ ಬೆಂಬಲಿಸುತ್ತಾರೆ.

*ಪ್ರಧಾನಿ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್‌ ಬಾರು ಅವರ ಪುಸ್ತಕ­ದಿಂದ ಪಕ್ಷಕ್ಕೆ ನಷ್ಟ­ವಾ­ಗುತ್ತದೆಯೇ?
ಉ: ಇದರಿಂದ ಯಾವ ರೀತಿಯ ನಷ್ಟವೂ ಆಗದು. ಆ ಪುಸ್ತಕದಲ್ಲಿ (ಆ್ಯಕ್ಸಿಡೆಂಟಲ್‌ ಪಿಎಂ) ಸತ್ಯದ ಲವಲೇಶವೂ ಇಲ್ಲ. ಈ ಪುಸ್ತಕ ಬಿಡುಗಡೆ ಮಾಡಿರುವ ಸಂದರ್ಭದ ಬಗ್ಗೆಯೂ ಜನರಿಗೆ ಅನುಮಾನಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT