ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆನಪಿನಂಗಳದಲ್ಲಿ ಸಿ.ಆರ್‌. ಸಿಂಹ ಶಾಶ್ವತ’

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಗಲಿದ ಚೇತನ ಸಿ.ಆರ್‌. ಸಿಂಹ ಅವರನ್ನು ನೆನೆದು ಕೆಲವರ ಕಣ್ಣಂಚಿನಲ್ಲಿ ನೀರು, ಇನ್ನು  ಕೆಲವರಲ್ಲಿ ಅಭಿಮಾನ, ಇನ್ನು ಹಲವರಲ್ಲಿ ಅವರು ಮರೆಯಾಗಿಯೇ ಇಲ್ಲ ನಮ್ಮ ನೆನಪಿನಂಗಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂಬ ನಂಬಿಕೆ... ನಟರಂಗ–ವೇದಿಕೆ, ರಂಗ ನಿರಂತರ–ಸ್ಪಂದನ ಸಂಸ್ಥೆ­ಗಳು ಮಂಗಳವಾರ ರವೀಂದ್ರ ಕಲಾ­ಕ್ಷೇತ್ರದಲ್ಲಿ ಆಯೋಜಿ­ಸಿದ್ದ ‘ನಮ್ಮ ಸಿಮ್ಮ– ರಂಗಭೂಮಿ ಸಿಂಹ’ ಸಿ.ಆರ್‌. ಸಿಂಹ ನೆನಪಿನ ಕಾರ್ಯಕ್ರಮದಲ್ಲಿ ಈ ಎಲ್ಲ ಭಾವನೆಗಳು ಮೂಡಿ ಬಂದವು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಸಭಾ ಸದಸ್ಯೆ ಬಿ.ಜಯಶ್ರೀ ಅವರು, ‘ಸಿಂಹ ನಮ್ಮಿಂದ ಎಂದಿಗೂ ದೂರವಾಗಿಯೇ ಇಲ್ಲ. ನಮ್ಮ ಮನಸ್ಸಿ­ನಲ್ಲಿ ಅಚ್ಚಳಿಯದೆ ಉಳಿದಿ­ದ್ದಾರೆ. ಅವರ ನೆನಪು ಮತ್ತು ಸಾಧನೆ ನಮಗೆಲ್ಲರಿಗೂ ದಾರಿದೀಪವಾಗಿದೆ’ ಎಂದರು. ‘ಸಿಂಹ ರಂಗಭೂಮಿಯಲ್ಲಿ ದೊಡ್ಡ ವ್ಯಕ್ತಿ, ಸಾಮ್ರಾಟ್‌ನಾದರೂ ಜನರ ಮನಸ್ಸಿನಲ್ಲಿ ತುಘಲಕ್‌ ಆಗಿದ್ದಾರೆ. ಅವರ ವ್ಯಕ್ತಿತ್ವ, ಪ್ರತಿಭೆ ಎಂದಿಗೂ ಉಳಿದವರಿಗೆ ಮಾದರಿ. ಅವರು ಸರಳ ವ್ಯಕ್ತಿ, ಪಾತ್ರಗಳಲ್ಲಿ ಪಾತ್ರವೇ ಆಗು­ವಂತಹ ವ್ಯಕ್ತಿತ್ವ ಅವರದು. ಅವರ ಪ್ರತಿಯೊಂದು ಹಾವ ಭಾವ ಕಣ್ಣಿಗೆ ಕಟ್ಟಿದಂತಿದೆ’ ಎಂದು ನುಡಿದರು.

ನಟಿ ಜಯಂತಿ, ‘ನಗುಮುಖದ ಭಾವ­­ ಹೊಂದಿ, ಎಲ್ಲರಿಗೂ ತಮ್ಮಿಂ­ದಾದ ನಗುವನ್ನು ಉಣಬಡಿ­ಸುವ ವ್ಯಕ್ತಿ. ಸಿಂಹ ಎಂದಿದ್ದರೂ ಸಿಂಹವೇ. ಅವರದು ನಾಟಕ, ಚಲನ­ಚಿತ್ರ­ದಲ್ಲಿ ಮಾತ್ರ ಅಭಿನಯವಲ್ಲ. ನಿಜ ಬದು­ಕಿನಲ್ಲಿಯೂ ಆದರ್ಶದ ವ್ಯಕ್ತಿತ್ವ’ ಎಂದರು. ‘ಸಿಂಹ ಅವರ ಆರೋಗ್ಯ ಹದಗೆಟ್ಟಿದೆ­ಯೆಂದು ಯಾರೊಬ್ಬರೂ ಹೇಳಲಿಲ್ಲ. ಇದರಿಂದ ಬೇಸರವಾಗಿದೆ. ಇರುವಷ್ಟು ದಿನ ಪ್ರೀತಿಯಿಂದ ಜೀವಿಸಬೇಕು. ಎರಡು ಮಾತನಾಡಿದರೆ ನಾವು ಏನೂ ಕಳೆದುಕೊಳ್ಳುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನಟಿ ಅರುಂಧತಿ ನಾಗ್‌, ‘ಸಿಂಹ ಅವರಲ್ಲಿ ಯಾವುದೇ ವಿಷಯಗಳ ಕುರಿತು ಚರ್ಚಿಸಬಹುದಿತ್ತು. ಅವರು ಎಲ್ಲವನ್ನೂ ತಿಳಿದುಕೊಂಡಿದ್ದರು. ಆದರೆ, ಇಂದಿನ ಪೀಳಿಗೆಯವರಿಗೆ ಓದುವ, ತಿಳಿಯುವ ಹವ್ಯಾಸವಿಲ್ಲ’ ಎಂದರು. ನಟ ದ್ವಾರಕೀಶ್‌, ‘ಜೀವನದಲ್ಲಿ ನನಗೆ ಒಬ್ಬ ಆತ್ಮೀಯ ಗೆಳೆಯ. ನಾನು ನಿರ್ಮಿಸಿದ ಚಿತ್ರಗಳಲ್ಲಿ ಎರಡು ಸಿಂಹ­ಗಳು ಪ್ರಧಾನ ಪಾತ್ರವನ್ನು ವಹಿಸಿದ್ದರು. ಒಬ್ಬ ವಿಷ್ಣುವರ್ಧನ್‌, ಇನ್ನೊಬ್ಬ ಸಿಂಹ’ ಎಂದು ಇಬ್ಬರೂ ಗೆಳೆಯರನ್ನು ನೆನಪಿಸಿಕೊಂಡರು.

ನಿರ್ದೇಶಕ ಟಿ.ಎಸ್‌. ನಾಗಾ­ಭರಣ ಮಾತನಾಡಿ, ‘ಅವರು ಮಾಡಿದ ಏಕ­ವ್ಯಕ್ತಿ ಪ್ರಯೋಗ, ರಂಗ­ದಲ್ಲಿ ಎರಡು ಗಂಟೆ ವೀಕ್ಷಕರೊಂದಿಗೆ ಸಂವಾದ ನಡೆ­ಸುವ ರೀತಿ ಅದ್ಭುತ­ವಾಗಿತ್ತು. ಆ ಮೂಲಕ ರಂಗಭೂಮಿ­ಯಲ್ಲಿ ಹೊಸ ಆಯಾಮವನ್ನು ಕಟ್ಟಿಕೊಟ್ಟರು’ ಎಂದರು.
ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌, ‘ಎಲ್ಲಕ್ಕಿಂತ ಹೆಚ್ಚಾಗಿ ಅವರು ಒಬ್ಬ ಮಹಾನ್‌ ಮಾನವ­ತಾ­ವಾದಿ­ಯಾಗಿದ್ದರು. ಅವರ ಜೀವಿತಾವಧಿ­ಯಲ್ಲಿ ಎಂದಿಗೂ ಬೇರೆಯವರ ಬಗ್ಗೆ ನಕಾರಾತ್ಮಕವಾಗಿ  ಮಾತನಾಡಿದ­ವರಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT