ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾನೊ ತಂತ್ರಜ್ಞಾನದಿಂದ ಶುದ್ಧ ಕುಡಿಯುವ ನೀರು’

Last Updated 8 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾನೊ ತಂತ್ರಜ್ಞಾನದಿಂದ ಇಡೀ ದೇಶಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಸಾಧ್ಯ’ ಎಂದು ಕರ್ನಾಟಕ ವಿಷನ್‌ ಗ್ರೂಪ್‌ ಆನ್‌ ನ್ಯಾನೊ ಟೆಕ್ನಾಲಜಿ ಅಧ್ಯಕ್ಷ ಪ್ರೊ. ಸಿ.ಎನ್. ಆರ್‌. ರಾವ್‌ ಹೇಳಿದರು.

ಮಾರ್ಚ್‌ 3ರಿಂದ 5ರವರೆಗೆ ನಡೆಯಲಿರುವ ‘ಬೆಂಗಳೂರು ಇಂಡಿಯಾ ನ್ಯಾನೊ 2016’ ಸಮ್ಮೇಳನದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿದರು.

‘ಶುದ್ಧ ಕುಡಿಯುವ ನೀರು ಇಲ್ಲದಿರುವುದು ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿರುವುದು ಅನೇಕ ಕಾಯಿಲೆಗಳಿಗೆ ಕಾರಣವಾಗಿದೆ. ಪಂಜಾಬ್‌ ರಾಜ್ಯದಲ್ಲಿ ನೀರಿನಲ್ಲಿ ಯುರೇನಿಯಂ ಅಂಶ ಬೆರೆತಿದೆ. ಇದರಿಂದಾಗಿ ಅಲ್ಲಿ  ಶೇಕಡ 30ರಿಂದ 40 ಜನ ಕ್ಯಾನ್ಸರ್‌ ಕಾಯಿಲೆಯಿಂದ ಸಾಯುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿ ಸಂಗತಿ’ಎಂದರು.

‘ಅತ್ಯಂತ ಹಿಂದುಳಿದ ಪ್ರದೇಶಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ  ನ್ಯಾನೊ ಮಿಷನ್‌ ಪ್ರಾಜೆಕ್ಟ್‌ ಸಹಕಾರಿಯಾಗಲಿದೆ’ ಎಂದು ಹೇಳಿದರು.

ಮಾರ್ಚ್‌ನಲ್ಲಿ ನ್ಯಾನೊ ಸಮ್ಮೇಳನ 
ಮಾರ್ಚ್‌ 3ರಿಂದ 5ರವರೆಗೆ ‘ಬೆಂಗಳೂರು ಇಂಡಿಯಾ ನ್ಯಾನೊ 2016’ ಸಮ್ಮೇಳನ ಆಯೋಜಿಸಲಾಗಿದೆ. ಈ ಕುರಿತು ನೀಡಿದ ಕರ್ನಾಟಕ ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ಮಂಜುಳಾ ಮಾಹಿತಿ ನೀಡಿದರು.

ನ್ಯಾನೊ ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳು,  ಆರೋಗ್ಯ, ಶುದ್ಧ ಕುಡಿಯುವ ನೀರು, ಇಂಧನ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ನ್ಯಾನೊ ತಂತ್ರಜ್ಞಾನ ಕುರಿತು ಚರ್ಚಿಸಲಾಗುವುದು. ನ್ಯಾನೊ ಫ್ಯಾಬ್ರಿಕೇಷನ್‌ ತಂತ್ರಜ್ಞಾನ, ನ್ಯಾನೊ ಮೆಡಿಸಿನ್‌, ಎಲೆಕ್ಟ್ರಾನ್ ಮೈಕ್ರೊಸ್ಕೊಪಿ ಮತ್ತು ನ್ಯಾನೊ ಫೋಟೊನಿಕ್ಸ್  ಮುಂತಾದ ವಿಚಾರಗಳ  ಕುರಿತು ಪ್ರಬಂಧಗಳು ಮಂಡನೆಯಾಗಲಿವೆ.

ಸಮ್ಮೇಳನದಲ್ಲಿ ಅರುವತ್ತು ತಜ್ಞರು ಭಾಗವಹಿಸಲಿದ್ದಾರೆ. ಹದಿಮೂರು ಗೋಷ್ಠಿಗಳಿರುತ್ತವೆ. ಅಮೆರಿಕ, ರಷ್ಯಾ, ಜರ್ಮನಿ, ಕೆನಡ, ಕೊರಿಯಾ, ಬಲ್ಗೇರಿಯಾ, ಫ್ರಾನ್ಸ್‌, ಸಿಂಗಪುರ  ದೇಶಗಳ ಐನೂರು ಮಂದಿ ನ್ಯಾನೊ ಉದ್ಯಮ ತಜ್ಞರು,  ನಲುವತ್ತಕ್ಕೂ ಹೆಚ್ಚು ಪ್ರದರ್ಶನಕಾರರು ಭಾಗವಹಿಸಲಿದ್ದಾರೆ

ನ್ಯಾನೊ ವಿಜ್ಞಾನ ಪ್ರಶಸ್ತಿ
2016ರ ಸಾಲಿನ ‘ಸಿ.ಎನ್‌.ಆರ್. ರಾವ್‌ ಬೆಂಗಳೂರು ಇಂಡಿಯಾ ನ್ಯಾನೊ  ವಿಜ್ಞಾನ ಪ್ರಶಸ್ತಿ’ಗೆ ಮುಂಬೈ ಐಐಟಿಯ ಪ್ರೊ. ವಿ. ರಾಮಗೋಪಾಲ್‌ ರಾವ್‌ ಅವರನ್ನು ಆಯ್ಕೆ ಮಾಡಲಾಗಿದೆ. ಆರು ಮಂದಿ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ನೀಡುವ ಯುವ ವಿಜ್ಞಾನಿ ಪ್ರಶಸ್ತಿ ಮತ್ತು ಅತ್ಯುತ್ತಮ ಪ್ರದರ್ಶನ ಪ್ರಶಸ್ತಿಯನ್ನು ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಲಾಗುವುದು ಎಂದು  ಎಂ.ಎಂ. ಆ್ಯಕ್ಟಿವ್‌ ಸೈನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್‌ ಪಟ್ನಾಕರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT