ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರ್ಯಾಯ’ ಅಭಿವೃದ್ಧಿ

Last Updated 26 ಜೂನ್ 2015, 19:30 IST
ಅಕ್ಷರ ಗಾತ್ರ

ದೇಶದ ಯುವ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವುದು ಹೇಗೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕವಾದ ಚರ್ಚೆಗಳು, ಚಿಂತನೆಗಳು ನಡೆಯುತ್ತಿರುವುದು  ಸ್ವಾಗತಾರ್ಹ ಬೆಳವಣಿಗೆ. ಆದರೆ ಇಂತಹ ಚರ್ಚೆಗಳು ಏಕಮುಖವಾಗಿ ಇರುವುದರಿಂದ ಬಹು ಆಯಾಮದ ಚಿಂತನೆಗಳಿಗೆ ಬಾಗಿಲು ಮುಚ್ಚಿದಂತಾಗಿದೆ. 

ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸರ್ಕಾರಗಳು ಹಾಗೂ ಖಾಸಗಿ ಉದ್ಯಮಿಗಳು ಹೆಚ್ಚೆಚ್ಚು ಬಂಡವಾಳ ಹೂಡಿಕೆ ಮಾಡಬೇಕು. ಈ ಮೂಲಕ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯ ಎಂಬ ಧೋರಣೆ ಬಹುತೇಕರಲ್ಲಿ ಇದೆ. ಆದರೆ ಉದ್ಯೋಗ ಸೃಷ್ಟಿಗೆ ಪೂರಕವಾಗುವ ಪರ್ಯಾಯ ಚಿಂತನೆಗಳ ಬಗ್ಗೆ ತೆರೆದ ಮನಸ್ಸಿನ ಚರ್ಚೆಗಳಿಗೆ ಅವಕಾಶ ನೀಡಬೇಕಾಗಿದೆ. ಇಂತಹ ಪರ್ಯಾಯ ಚಿಂತನೆಗೆ ಪೂರಕವಾಗಿ ಕೆಳಗಿನ ಉದಾಹರಣೆ ನೀಡಬಹುದು:

ರಾಜ್ಯ ಸರ್ಕಾರ ವಿದ್ಯುತ್ ಉತ್ಪಾದನೆಗಾಗಿ ರಾಯಚೂರು ಜಿಲ್ಲೆಯ ಗಡಿ ಭಾಗದ ದೇವಸೂಗೂರ ಹೋಬಳಿ (ಕಂದಾಯ ಕೇಂದ್ರ) ಕೇಂದ್ರದಲ್ಲಿ ಕರ್ನಾಟಕ ಪವರ್ ಕಾರ್ಪೊರೇಶನ್ (ಕೆ.ಪಿ.ಸಿ.) ಘಟಕವನ್ನು ಸ್ಥಾಪಿಸಿದೆ. 1982ರಲ್ಲಿ ಕೇವಲ 500 ಕುಟುಂಬಗಳನ್ನು ಹೊಂದಿದ್ದ ಈ ಭಾಗದಲ್ಲಿ 1800 ಜನ ಇದ್ದರು. ಇಂದು ಇಲ್ಲಿನ ಜನಸಂಖ್ಯೆ 20 ಸಾವಿರಕ್ಕೂ ಹೆಚ್ಚಾಗಿದ್ದು, ಹಲವಾರು ಸಾವಿರ ಕುಟುಂಬಗಳಿಗೆ ಉದ್ಯೋಗ, ಅರೆ ಉದ್ಯೋಗ, ಸ್ವಯಂ ಉದ್ಯೋಗಗಳನ್ನು ಒದಗಿಸಲಾಗಿದೆ. ದೇವಸೂಗೂರ ಇಂದು ಶಕ್ತಿ ನಗರವಾಗಿ ಮಾರ್ಪಟ್ಟಿದೆ.  ಇಲ್ಲಿ ಚರ್ಚಿಸಲು ಹೊರಟಿರುವ ವಿಷಯ ಕೆ.ಪಿ.ಸಿ. ಕುರಿತಲ್ಲ. ಹೋಬಳಿ ಕೇಂದ್ರಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವುದರಿಂದ ಅತ್ಯಂತ ಕಡಿಮೆ ಸಂಪನ್ಮೂಲದಲ್ಲಿ ಹೆಚ್ಚು ಉದ್ಯೋಗಗಳನ್ನು ಹೇಗೆ ಸೃಷ್ಟಿ ಮಾಡಬಹುದು ಎಂಬ ಬಗ್ಗೆ. ಅಂತಹ ಹೋಬಳಿ ಕೇಂದ್ರಿತ ಕೈಗಾರಿಕೆಗಳು ಸೃಷ್ಟಿಸುವ ಉದ್ಯೋಗಗಳು ಹೇಗೆ ಕೃಷಿ, ಹಾಗೂ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿರುತ್ತವೆ, ಕೃಷಿ ಕೂಲಿಕಾರರು, ಬಡ ಮತ್ತು ಮಧ್ಯಮ ವರ್ಗದ ರೈತ ಕುಟುಂಬಗಳಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ರಕ್ಷಣೆಯನ್ನು ಹೇಗೆ ಒದಗಿಸುತ್ತವೆ, ಗ್ರಾಮೀಣ ಬಡವರು ನಗರಗಳಿಗೆ ವಲಸೆ ಹೋಗುವುದನ್ನು ಹೇಗೆ ತಡೆಗಟ್ಟುತ್ತವೆ, ಪರಿಸರ ಹಾಗೂ ಜೀವವೈವಿಧ್ಯಕ್ಕೆ ಹೇಗೆ ಪೂರಕವಾಗಿರುತ್ತವೆ ಎಂಬುದಕ್ಕೆ ಈ ಘಟಕ ಸ್ಥಾಪನೆಯಿಂದಾಗಿರುವ ವಿದ್ಯಮಾನಗಳನ್ನು ಅವಲೋಕಿಸಬಹುದಾಗಿದೆ. ಆ ಮೂಲಕ, ಬೃಹತ್ ಕೈಗಾರಿಕಾ ನಗರಗಳನ್ನು, ಕೈಗಾರಿಕಾ ಕಾರಿಡಾರ್‌ ಯೋಜನೆಗಳನ್ನು ಸ್ಥಾಪಿಸಿ ಸೃಷ್ಟಿ ಮಾಡುವ ಉದ್ಯೋಗಗಳು, ಅದರಿಂದಾಗುವ ಲಾಭ, ನಷ್ಟಗಳೊಟ್ಟಿಗೆ ತುಲನೆಯನ್ನೂ ಮಾಡಬೇಕಾಗಿದೆ.

1982ರಲ್ಲಿ ಸ್ಥಾಪನೆಗೊಂಡ ಕೆ.ಪಿ.ಸಿ. 2,500 ಜನರಿಗೆ ಕಾಯಂ ಉದ್ಯೋಗ, 3 ಸಾವಿರ ಜನರಿಗೆ ಗುತ್ತಿಗೆಯಾಧಾರದಲ್ಲಿ ದಿನಗೂಲಿ, ಸುಮಾರು 2 ಸಾವಿರ ಜನರಿಗೆ ಅಗತ್ಯದ ಆಧಾರದಲ್ಲಿ ಕೆಲಸ ಹಾಗೂ 2 ಸಾವಿರಕ್ಕೂ ಹೆಚ್ಚು ಮಂದಿಗೆ ಸ್ವಯಂ ಉದ್ಯೋಗಗಳನ್ನು ಒದಗಿಸಿದೆ. ಒಟ್ಟಾರೆ ಸರಾಸರಿ 10 ಸಾವಿರ ಕುಟುಂಬಗಳಿಗೆ ಆಶ್ರಯ ನೀಡಿದೆ. ಕಾಯಂ ಉದ್ಯೋಗಿಗಳಿಗೆ ವಸತಿ ಸೌಕರ್ಯ, ವಿದ್ಯುತ್‌, ಕುಡಿಯುವ ನೀರಿನಂತಹ ಸವಲತ್ತುಗಳನ್ನು ಒದಗಿಸಲಾಗಿದೆ. ಇನ್ನುಳಿದ 7-8 ಸಾವಿರ ಕುಟುಂಬಗಳು ಕೆ.ಪಿ.ಸಿ.ಯನ್ನು ಅವಲಂಬಿಸಿಲ್ಲ.
ದೇವಸೂಗೂರ ಹೋಬಳಿ ವ್ಯಾಪ್ತಿಯಲ್ಲಿ 30 ಹಳ್ಳಿಗಳಿವೆ. ಸರಾಸರಿ 10 ಸಾವಿರ ಕುಟುಂಬಗಳು ಇಲ್ಲಿಯ ಮೂಲ ನಿವಾಸಿಗಳಾಗಿವೆ. ಗ್ರಾಮಸ್ಥರು ಮೂಲತಃ ಕೃಷಿಕರು. ಹಿಂದೆ ಭೂಮಿಯಿಲ್ಲದ ಕೃಷಿ ಕೂಲಿಕಾರರು ಕೃಷಿ ಭೂಮಿಯಲ್ಲಿ ಸಿಗುವ ಕೆಲಸವನ್ನು ಅವಲಂಬಿಸಿದ್ದರು.
ದೊಡ್ಡ ಹಿಡುವಳಿ ರೈತರು ಮಾತ್ರ ಕೃಷಿ ಕೂಲಿಕಾರರಿಗೆ ಕೆಲಸವನ್ನು ಒದಗಿಸುತ್ತಿದ್ದುದರಿಂದ ಬಹುಸಂಖ್ಯಾತರಿಗೆ ಕೆಲಸ ದೊರೆಯದೆ ಸಂಕಷ್ಟದಲ್ಲಿ ಬಳಲುವಂತೆ ಆಗಿತ್ತು. ಅಂತಹ ಸಂದರ್ಭದಲ್ಲಿ ಕೆ.ಪಿ.ಸಿ. ಹಲವಾರು ಸಾವಿರ ಉದ್ಯೋಗಗಳನ್ನು ಸೃಷ್ಟಿ ಮಾಡಿತು. ಕೃಷಿ ಕಾರ್ಮಿಕರು, ಬಡ ಹಾಗೂ ಮಧ್ಯಮ  ರೈತರು ಈ ಉದ್ಯೋಗಗಳನ್ನು ಬಳಸಿಕೊಳ್ಳಲು ಮುಂದಾದರು. 5 ಸಾವಿರಕ್ಕಿಂತಲೂ ಹೆಚ್ಚಿನ ಕುಟುಂಬಗಳು ಮನೆಗೊಂದು ಇಲ್ಲವೇ ಎರಡು ಉದ್ಯೋಗಗಳನ್ನು ಪಡೆದುಕೊಂಡಿವೆ. ಆ ಮುಖಾಂತರ ಇವರೆಲ್ಲ ವಲಸೆ ಹೋಗದೆ ಕೃಷಿಯಲ್ಲೇ ಉಳಿದುಕೊಳ್ಳುವಂತಾಗಿದೆ. ಕೃಷಿ ಉತ್ಪಾದನೆಯಲ್ಲಿ ನಷ್ಟವಾದಾಗಲೂ ಮನೆಗೊಬ್ಬರು ಮಾಡುವ ಉದ್ಯೋಗದಿಂದಾಗಿ, ಕುಟುಂಬಕ್ಕೆ ಆರ್ಥಿಕ ರಕ್ಷಣೆ ದೊರೆಯುತ್ತದೆ. ಕಳೆದ 30 ವರ್ಷಗಳಲ್ಲಿ ಹೋಬಳಿ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ಇರುವವರೆಲ್ಲ ಆರ್ಥಿಕ ದೃಢತೆ ಪಡೆಯಲು ಸಾಧ್ಯವಾಗಿದ್ದು, ಕೃಷಿ ಭೂಮಿಯನ್ನು ಮಾರಾಟ ಮಾಡದೆ, ಜಂಟಿ ಕುಟುಂಬ ವ್ಯವಸ್ಥೆಯಲ್ಲಿ ನೆಮ್ಮದಿ ಕಾಣುತ್ತಿದ್ದಾರೆ. ಬೆಳಿಗ್ಗೆ ಬೈಸಿಕಲ್‌, ಮೋಟಾರ್‌ಬೈಕ್‌ ಇಲ್ಲವೇ ಬಸ್‌ಗಳ ಮುಖಾಂತರ ಕೆ.ಪಿ.ಸಿ.ಗೆ ಬಂದು, ಸಂಜೆ ಮರಳಿ ಗ್ರಾಮಕ್ಕೆ ಹೋಗುವುದರಿಂದ ತಾಯಿ, ತಂದೆ, ಅಜ್ಜ, ಅಜ್ಜಿ, ಮಕ್ಕಳು ಒಂದೇ ಮನೆಯಲ್ಲಿ ವಾಸಮಾಡುವ ಅವಕಾಶಗಳು ಉಳಿದುಕೊಂಡಿವೆ. ಇದರಿಂದಾಗಿ ಶಕ್ತಿನಗರ ಕೇಂದ್ರದಲ್ಲಿ ವಸತಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳಿಲ್ಲ. ಕೈಗಾರಿಕಾ ಕೇಂದ್ರಗಳಲ್ಲಿ ಉಂಟಾಗುವ ಪರಿಸರ ಸಮಸ್ಯೆಗಳು ಉಲ್ಬಣವಾಗದಂತೆ ನೋಡಿಕೊಳ್ಳಲು ಸಾಧ್ಯವಾಗಿದೆ. ಆರ್ಥಿಕ ಭದ್ರತೆಯಿಂದ ಗ್ರಾಮಗಳಲ್ಲಿ ಶೈಕ್ಷಣಿಕ ಪ್ರಗತಿ ಸಾಧ್ಯವಾಗಿದೆ. ತಾಂತ್ರಿಕ ಶಿಕ್ಷಣ ಸಂಸ್ಥೆಗಳೂ ಅಭಿವೃದ್ಧಿಯಾಗಿವೆ.

ದೇಶದ 7 ಲಕ್ಷ ಗ್ರಾಮಗಳಲ್ಲಿರುವ 15 ಕೋಟಿ ಕೃಷಿ ಹಿಡುವಳಿಗಳಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆಯೇ ಹೆಚ್ಚು. 1.5ರಿಂದ 10 ಎಕರೆವರೆಗಿನ ಭೂಮಿಯ ಒಡೆಯರಾಗಿರುವ ಸಣ್ಣ ಹಿಡುವಳಿದಾರರು ಆರ್ಥಿಕ ಅಭದ್ರತೆಯಲ್ಲಿ ಬದುಕು ಸವೆಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ಹಾಗೂ ಅಂತಹ ಆಲೋಚನೆಯಲ್ಲಿ ತೊಡಗುವವರು ಕೂಡ ಇದೇ ಗುಂಪಿಗೆ ಸೇರಿದವರು. ಇವರಲ್ಲಿ ಹೆಚ್ಚಿನವರು ಹರಿಜನ, ಗಿರಿಜನ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಜಾತಿ, ಕೋಮುಗಳಿಗೆ ಸೇರಿದವರಾಗಿದ್ದಾರೆ. ಈ ಕುಟುಂಬಗಳಿಂದ ಬಂದ ಯುವಕರೇ ಹೆಚ್ಚಿನ ಅಭ್ಯಾಸ ಮಾಡದೆ ನಿರುದ್ಯೋಗಿಗಳಾಗಿದ್ದಾರೆ.

ಹೋಬಳಿ ಕೇಂದ್ರಿತ (ವಿಕೇಂದ್ರೀಕೃತ) ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾದಲ್ಲಿ, ಈ ಕೈಗಾರಿಕೆಗಳಿಗೆ ಒದಗಿಸುವ ಮೂಲ ಸೌಕರ್ಯಗಳನ್ನು ಸುತ್ತಲಿನ ಗ್ರಾಮಗಳಿಗೂ ವಿಸ್ತರಿಸಬಹುದಾಗಿದೆ. ಕೃಷಿ ಕಾರ್ಮಿಕರು, ಸಣ್ಣ ಹಿಡುವಳಿದಾರರ ಕುಟುಂಬಗಳ ಸದಸ್ಯರಿಗೆ ಉದ್ಯೋಗ ಭದ್ರತೆಯನ್ನು ಒದಗಿಸಿ, ಕೃಷಿಯಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ಪರಿಹಾರ ಪಡೆಯಬಹುದಾಗಿದೆ. ಇದೇ ವೇಳೆ ಸಣ್ಣ ಹಿಡುವಳಿದಾರರಿಗೆ ಕೃಷಿಯಲ್ಲಿ ತಾಂತ್ರಿಕ ಅಳವಡಿಕೆ, ಮೌಲ್ಯವರ್ಧನೆ, ಆಹಾರ ಸಂಸ್ಕರಣೆ ತರಬೇತಿ, ತಾಂತ್ರಿಕ ಸಹಾಯ, ಆರ್ಥಿಕ ಸಹಾಯ ಒದಗಿಸಿ ಬಹುಸಂಖ್ಯಾತ ಕೃಷಿ ಕುಟುಂಬಗಳ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ. ಈ ಮೂಲಕ ದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಇಂತಹ ಪರ್ಯಾಯ ಮಾರ್ಗಗಳ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳು ಚಿಂತಿಸಬೇಕಾದ ಅಗತ್ಯ ಬಹಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT