ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾಕ್‌ ಮೇಲೆ ವಿಶ್ವಾಸವಿಲ್ಲದೆ ಒಬಾಮ ಕೈಗೊಂಡ ನಿರ್ಧಾರ’

ಲಾಡೆನ್ ವಿರುದ್ಧ ಅಮೆರಿಕ ಏಕಾಂಗಿ ಕಾರ್ಯಾಚರಣೆ
Last Updated 3 ಮೇ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ವಿವಿಧ ಭಯೋತ್ಪಾದಕ ಸಂಘಟನೆಗಳ ಜತೆ ‘ಆತ್ಮೀಯ ಸಂಬಂಧ’ ಹೊಂದಿದ್ದ ಪಾಕಿಸ್ತಾನದ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದ್ದರಿಂದ ಅಮೆರಿಕವು ಲಾಡೆನ್ ಹತ್ಯೆಯನ್ನು ಏಕಾಂಗಿಯಾಗಿ ಮಾಡಿ ಮುಗಿಸಿತ್ತು ಎಂದು ಸಿಐಎ ಮಾಜಿ ನಿರ್ದೇಶಕ ಲಿಯೋನ್ ಪೆನೆಟ್ಟಾ ಹೇಳಿದ್ದಾರೆ.

2011ರಲ್ಲಿ ಪಾಕ್‌ನ ಅಬೋಟಾಬಾದ್‌ನಲ್ಲಿ ಅಲ್ ಕೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆಯನ್ನು ಅಮೆರಿಕದ ಸಿಐಎ ನಡೆಸಿತ್ತು.
‘ಪಾಕ್‌ ಜತೆ ಕೆಲಸ ಮಾಡಲು ಅಮೆರಿಕ ಬಯಸಿತ್ತು. ಆದರೆ ಪಾಕ್‌ ಬಗ್ಗೆ ನಂಬಿಕೆಯ ಪ್ರಶ್ನೆಗಳು ಎದುರಾಗಿದ್ದವು. ಕೊನೆಗೆ ಅಧ್ಯಕ್ಷ ಬರಾಕ್ ಒಬಾಮ ಅವರು ಏಕಾಂಗಿಯಾಗಿ ಕಾರ್ಯಾಚರಣೆಗೆ ಧುಮುಕುವ ನಿರ್ಧಾರ ಕೈಗೊಂಡರು’ ಎಂದು ಪೆನೆಟ್ಟಾ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

‘ಲಾಡೆನ್ ಹತ್ಯೆಯಾಗಿ ಸೋಮವಾರಕ್ಕೆ ಐದು ವರ್ಷ ಕಳೆದಿವೆ. ಈಗಲೂ ಭಯೋತ್ಪಾದನೆ ಎಂಬುದು ಆತಂಕಕಾರಿ ವಿಷಯವೇ ಆಗಿ ಉಳಿದಿದೆ. ಪಾಕ್‌ ಜತೆಗಿನ ಸಂಬಂಧವನ್ನು ಮರುಸ್ಥಾಪಿಸುವುದು ಸವಾಲಿನ ಕೆಲಸ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿಯೂ  ಆಗಿದ್ದ ಅವರು ಅಭಿಪ್ರಾಯಪಟ್ಟಿದ್ದಾರೆ.

ಐಎಸ್, ಬೊಕೊ ಹರಾಮ್, ಅಲ್–ಶಬಾಬ್ ಉಗ್ರ ಸಂಘಟನೆಗಳ ಬಗ್ಗೆ ಅಮೆರಿಕ ಸೇರಿ ಜಗತ್ತಿನ ಎಲ್ಲ ರಾಷ್ಟ್ರಗಳು ಗಮನ ಹರಿಸಬೇಕು. ಇದೊಂದು ದೀರ್ಘಕಾಲೀನ ಹೋರಾಟ. ಇದರಲ್ಲಿ ಸ್ವಲ್ಪಮಟ್ಟಿನ ಯಶಸ್ಸನ್ನೂ ಸಾಧಿಸಿದ್ದೇವೆ’ ಎಂದಿದ್ದಾರೆ.

‘26/11ನಂತರ ಮತ್ತೊಂದು ದಾಳಿ ಘಟಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಇದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇವೆ. ಅಮೆರಿಕವನ್ನು ಸಂಭಾವ್ಯ ದಾಳಿಗಳಿಂದ ರಕ್ಷಿಸಲು ಇನ್ನಷ್ಟು ಕ್ರಮಗಳು ಅಗತ್ಯ. ಮುಖ್ಯವಾಗಿ ಪಾಕಿಸ್ತಾನದಲ್ಲಿ ಅಲ್‌ಕೈದಾ ಬೆಳವಣಿಗೆಯನ್ನು ನಿಯಂತ್ರಿಸಿದ್ದೇವೆ’ ಎಂದು ಲಿಯೋನ್ ಪೆನೆಟ್ಟಾ ಅವರು ಹೇಳಿದ್ದಾರೆ.

ಯಶಸ್ವಿ ಕಾರ್ಯಾಚರಣೆ ಬಗ್ಗೆ ನಂಬಿಕೆಯಿರಲಿಲ್ಲ
‘ಲಾಡೆನ್ ಹತ್ಯೆಯಂತಹ ಉದ್ವೇಗದ ಕಾರ್ಯಾಚರಣೆಯ ಪ್ರತಿಯೊಂದು ಕ್ಷಣಗಳನ್ನು ನಾವು ಗಮನಿಸುತ್ತಿದ್ದೆವು.  ಆ ಸಮಯದಲ್ಲಿ ಯಾರೊಬ್ಬರೂ ಸಂಭ್ರಮಪಡುವಂತಿರಲಿಲ್ಲ. ಏಕೆಂದರೆ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಯಾರಿಗೂ ಖಚಿತತೆ ಇರಲಿಲ್ಲ’ ಎಂದು ಒಬಾಮ ಅವರು ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

‘ಯಶಸ್ಸಿನ ಸಂಭಾವ್ಯತೆಯು 50–50 ಇದ್ದರೂ ಕಠಿಣ ನಿರ್ಧಾರ ಕೈಗೊಂಡಿದ್ದೆ. ಒಸಾಮ ಹತ್ಯೆಗೆ ಅದಕ್ಕಿಂತ ಉತ್ತಮ ಸಮಯ ಬೇರೆ ಇರಲಿಲ್ಲ’ ಎಂದು ಒಬಾಮ ಅವರು ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT