ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಸ್ತೂಲ್‌ ರಾಜ’ ಜಿತುಗೆ ಬಂಗಾರ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಗ್ಲಾಸ್ಗೊ (ಪಿಟಿಐ/ಐಎಎನ್‌ಎಸ್‌): ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತದ ಶೂಟರ್‌ಗಳ ಪ್ರಾಬಲ್ಯ ಮುಂದು ವರಿದೆ. ‘ಪಿಸ್ತೂಲ್‌ ರಾಜ’ ಎಂದೇ ಖ್ಯಾತಿ ಹೊಂದಿರುವ ಜಿತು ರಾಯ್‌ 50ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರೆ, ಗುರ್ಪಾಲ್ ಸಿಂಗ್‌ ರಜತ ಪದಕವನ್ನು ತಮ್ಮದಾಗಿಸಿಕೊಂಡರು.



ವಿಶ್ವ ರ್‍್ಯಾಂಕ್‌ನಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಜಿತು ಒಟ್ಟು 194.1 ಪಾಯಿಂಟ್‌ಗಳನ್ನು ಕಲೆ ಹಾಕಿ ಕಾಮನ್‌ವೆಲ್ತ್ ಕೂಟದಲ್ಲಿ ಮೊದಲ ಪದಕ ಗೆದ್ದ ಸಾಧನೆ ಮಾಡಿದರು. ಹೋದ ತಿಂಗಳು ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಟೂರ್ನಿಯಲ್ಲಿ ಜಿತು ಒಂದು ಚಿನ್ನ (10ಮೀ. ಏರ್‌ ಪಿಸ್ತೂಲ್‌) ಮತ್ತು ಬೆಳ್ಳಿ (50ಮೀ. ಪಿಸ್ತೂಲ್) ಪದಕಗಳನ್ನು ಜಯಿಸಿದ್ದರು.

ಜಿತು ಮೊದಲ ಯತ್ನದಲ್ಲಿ 29.5 ಪಾಯಿಂಟ್‌ಗಳನ್ನು ಗಳಿಸಿ ಉತ್ತಮ ಆರಂಭ ಪಡೆದರು. ನಂತರವೂ ಅವರ ‘ಗುರಿ’ ತಪ್ಪಲಿಲ್ಲ.
ಚೊಚ್ಚಲ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಗುರ್ಪಾಲ್‌ ಸಿಂಗ್‌ ಒಟ್ಟು 187.2 ಪಾಯಿಂಟ್‌ ಗಳಿಸಿ ಪದಕ ತಮ್ಮದಾಗಿಸಿಕೊಂಡರು. ಇದರಿಂದ ಭಾರತದ ಪದಕದ ಸಂಖ್ಯೆ ಶೂಟಿಂಗ್‌ನಲ್ಲಿ ಒಟ್ಟು 12ಕ್ಕೆ ಏರಿತು. ನಾಲ್ಕು ಚಿನ್ನ, ಏಳು ಬೆಳ್ಳಿ ಮತ್ತು ಒಂದು ಕಂಚು ಲಭಿಸಿದೆ.

ಕೊನೆಯ ಮೂರು ಸುತ್ತುಗಳಲ್ಲಿ ಜಿತು ಹೆಚ್ಚು ಪಾಯಿಂಟ್‌ಗಳನ್ನು ಗಳಿಸಲು ವಿಫಲರಾದರು. ಆದ್ದರಿಂದ ಬಂಗಾರ ಗೆಲ್ಲುವ ಅವಕಾಶ ಗುರ್ಪಾಲ್‌ಗೆ ಲಭಿಸಿತ್ತು. ಈ ಶೂಟರ್‌ ಏಳು, ಎಂಟು ಮತ್ತು ಒಂಬತ್ತನೇ ಸುತ್ತಿನಲ್ಲಿ ಕ್ರಮವಾಗಿ 18.3, 18.9 ಮತ್ತು 20 ಪಾಯಿಂಟ್‌ಗಳನ್ನು ಕಲೆ ಹಾಕಿದ್ದರು. ಆದರೆ, ಆರಂಭದ ಸುತ್ತುಗಳಲ್ಲಿ ಜಿತು ಹೆಚ್ಚು ಪಾಯಿಂಟ್‌ ಗಳಿಸಿದ್ದರಿಂದ ಅವರಿಗೆ ಸ್ವರ್ಣ ಸಾಧನೆ ಮಾಡಲು ಸಾಧ್ಯವಾಯಿತು. ಆಸ್ಟ್ರೇಲಿಯದ ಡೇನಿಯಲ್‌ ರೆಪಚೊಲಿ ಒಟ್ಟು 166.6 ಪಾಯಿಂಟ್‌ ಕಲೆ ಹಾಕಿ ಕಂಚು ತಮ್ಮದಾಗಿಸಿಕೊಂಡರು.

ಬೆಳ್ಳಿ ಜಯಿಸಿದ ಗಗನ್‌ ನಾರಂಗ್
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಹಿರಿಯ ಶೂಟರ್‌ ಗಗನ್‌ ನಾರಂಗ್ 50ಮೀ. ರೈಫಲ್‌ ಪ್ರೊನೊ ವಿಭಾಗದಲ್ಲಿ ರಜತ ಪದಕ ಗೆದ್ದುಕೊಂಡಿದ್ದಾರೆ.
ಭಾನುವಾರ ನಡೆದ ಸ್ಪರ್ಧೆಯಲ್ಲಿ ಗಗನ್‌ ಒಟ್ಟು 203.6 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿದರು. ನಾರಂಗ್‌ 2006 ಮತ್ತು 2010ರ ಕೂಟಗಳಲ್ಲಿ ಒಟ್ಟು ಎಂಟು ಚಿನ್ನದ ಪದಕಗಳನ್ನು ಜಯಿಸಿದ್ದರು.

204.3 ಪಾಯಿಂಟ್‌ಗಳನ್ನು ಕಲೆ ಹಾಕಿದ ಆಸ್ಟ್ರೇಲಿಯದ ವಾರೆನ್‌ ಪೊಟೆಂಟ್‌ ಚಿನ್ನ ತಮ್ಮದಾಗಿಸಿಕೊಂಡರು. ಈ ವಿಭಾಗದ ಕಂಚು ಇಂಗ್ಲೆಂಡ್‌ನ ಕೆನೆತ್‌ ಪಾರ್ ಪಾಲಾಯಿತು. ಕಾಮನ್‌ವೆಲ್ತ್‌ ಕೂಟದ 50ಮೀ. ರೈಫಲ್‌ ಪ್ರೊನೊದಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಪದಕವಿದು. 2006ರ ಮೆಲ್ಬರ್ನ್‌ ಕೂಟದಲ್ಲಿ ಸಂಜೀವ್ ರಜಪೂತ್‌ ಕಂಚು ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT