ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೀತಿ ಕುರುಡಲ್ಲ, ಕಾಮ ಕುರುಡು’

Last Updated 1 ಸೆಪ್ಟೆಂಬರ್ 2014, 9:12 IST
ಅಕ್ಷರ ಗಾತ್ರ

ಮೈಸೂರು: ‘ನಿಜವಾದ ಪ್ರೀತಿ ಕುರುಡಲ್ಲ, ಕಾಮ ಕುರುಡು’ ಎಂದು ಹಿರಿಯ ಲೇಖಕ ಡಾ.ಸಿ.ಪಿ. ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿಯ ವಿಜಯನಗರದ ಮೊದಲನೇ ಹಂತದಲ್ಲಿಯ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನುವಾರ ಪ್ರೊ.ಕೆ. ಭೈರವಮೂರ್ತಿ ಅವರ ‘ಪ್ರೀತಿಯ ಹೊಳಹುಗಳು’ ಹನಿಗವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಪ್ರೀತಿ ಎನ್ನುವುದು ಪ್ರಕೃತಿ, ದ್ವೇಷ ಎನ್ನುವುದು ವಿಕೃತಿ. ಪ್ರೀತಿಯಲ್ಲಿ ನೀತಿ ಮುಖ್ಯ. ಅದು ಬದುಕಿನ ನೀತಿಯಂತಾಗಬೇಕು. ಆದರೆ, ಪ್ರೀತಿ ಈಗ ರೋಗಗ್ರಸ್ತವಾಗಿದೆ. ಜಗತ್ತಿನಾದ್ಯಂತ ಯುದ್ಧ, ರಕ್ತಪಾತ ನಡೆಯುವಾಗ ಪ್ರೀತಿ ಹಾಗೂ ಶಾಂತಿ ಅಗತ್ಯವಾಗಿದೆ. ಅಲ್ಲದೆ, ಪ್ರೀತಿ ಎನ್ನುವುದು ಎದೆಗೂಡು ಬೆಳಗಿಸುವ ಮಿಣುಕು ದೀಪ ಆಗಬೇಕು’ ಎಂದು ಅವರು ಪ್ರತಿಪಾದಿಸಿದರು.

ಕೃತಿ ಕುರಿತು ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್‌ ಮಾತನಾಡಿ, ಪ್ರೀತಿ ಅಮೂರ್ತರೂಪ. ಇದನ್ನು ಉಪಮೆ, ರೂಪಕ ಹಾಗೂ ಪ್ರತಿಮೆಗಳ ಮೂಲಕ ತಮ್ಮ ಕೃತಿಯಲ್ಲಿ ಭೈರವಮೂರ್ತಿ ಅವರು ಕಟ್ಟಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇಡೀ ಜಗತ್ತನ್ನು ಪ್ರೀತಿ ಗೆಲ್ಲುತ್ತದೆ. ಆದರೆ, ಪ್ರೀತಿಯನ್ನು ಕಟ್ಟಿ ಹಾಕುವುದು ಅಧ್ಯಾತ್ಮ. ಇದಕ್ಕೆ ಉತ್ತಮ ಉದಾಹರಣೆ ಬುದ್ಧ. ಅರಮನೆ, ಸುಂದರವಾದ ಹೆಂಡತಿ ಇದ್ದರೂ ಅಧ್ಯಾತ್ಮಕ್ಕೆ ಶರಣಾಗಿ ಎಲ್ಲವನ್ನೂ ತೊರೆಯುತ್ತಾನೆ’ ಎಂದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ದೇಜಗೌ, ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್‌. ಅರಸ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕ ಪ್ರೊ.ಕೆ. ಭೈರವಮೂರ್ತಿ, ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್, ರಂಗನಾಥ್‌ ಮೈಸೂರು ಇದ್ದರು. ದಾಸ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಡಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ನಂತರ ಕವಿಗೋಷ್ಠಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT