ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಿಕ್ಸಿಂಗ್ ಬಗ್ಗೆ ಬಿಸಿಸಿಐ ತನಿಖೆ ನಡೆಸಬೇಕು’

Last Updated 16 ಏಪ್ರಿಲ್ 2014, 11:29 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬೆಟ್ಟಿಂಗ್‌ ಹಾಗೂ ಸ್ಪಾಟ್ ಫಿಕ್ಸಿಂಗ್‌ ಹಗರಣ ಸಂಬಂಧ ಎನ್ ಶ್ರೀನಿವಾಸನ್‌ ಹಾಗೂ ಇತರ 12 ಜನರ ವಿರುದ್ಧ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿತು.

ಇದೇ ವೇಳೆ ಸುಂದರ್‌ ರಾಮನ್‌ ಅವರನ್ನು ಐಪಿಎಲ್‌ ಏಳನೇ ಆವೃತ್ತಿಯ ಮುಖ್ಯ ಆಡಳಿತ ಅಧಿಕಾರಿಯಾಗಿ ಮುಂದುವರಿಯಲು ನ್ಯಾಯಾಲಯ ಅನುಮತಿ ನೀಡಿತು.

ಹಗರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)  ಅಥವಾ ಸಿಬಿಐನಿಂದ ತನಿಖೆ ನಡೆಸುವ ಬಗೆಗಿನ ಅಭಿಪ್ರಾಯವನ್ನು ಕಾಯ್ದಿರಿಸಿಕೊಂಡ ನ್ಯಾಯಮೂರ್ತಿ ಎ ಕೆ ಪಟ್ನಾಯಕ್ ಅವರಿದ್ದ ಪೀಠವು, ‘ಮಂಡಳಿಯ ಸಾಂಸ್ಥಿಕ ಸ್ವಾಯತ್ತತೆಯನ್ನು ಕಾಯಬೇಕಿದ್ದು, ಹಗರಣದ ತನಿಖೆಗೆ ಬಿಸಿಸಿಐ ನೇಮಿಸುವ ಸಮಿತಿಗೆ ಪ್ರಾಶಸ್ತ್ಯ ನೀಡಲಾಗುವುದು’ ಎಂದು  ಹೇಳಿತು.

‘ಕೇಳಿಬಂದಿರುವ ಆರೋಪಗಳ ಸ್ವರೂಪ ಗೊತ್ತಾಗಿಯೂ ನಾವು ಕಣ್ಣು ಮುಚ್ಚಲು ಸಾಧ್ಯವಿಲ್ಲ’ ಎಂದು ಖಾರವಾಗಿ ಚಾಟಿ ಬೀಸಿದ ಪೀಠ, ‘ಇದು ದೇಶದಲ್ಲಿರುವ ಕ್ರೀಡೆಯ ಬಗೆಗಿನ ಕಾಳಜಿಯಾಗಿದ್ದು, ವೈಯಕ್ತಿಯವಾದದ್ದಲ್ಲ’ ಎಂದು ಸ್ಪಷ್ಟ ಪಡಿಸಿತು.

ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಸಮಿತಿ ಮುಚ್ಚಿದ ಲಕೋಟೆಯಲ್ಲಿ ನೀಡಿರುವ ವರದಿಯ ಬಗ್ಗೆ ಪ್ರಸ್ತಾಪಿಸಿದ ನ್ಯಾಯಾಲಯ, ‘ಈ ಆರೋಪಗಳನ್ನು ಅವರ (ಶ್ರೀನಿವಾಸನ್‌) ಗಮನಕ್ಕೆ ತರಲಾಗಿತ್ತು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಅಂದರೆ ಆರೋಪಗಳ ಬಗ್ಗೆ ಗೊತ್ತಿದ್ದೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದೇ ಅರ್ಥ’ ಎಂದು ಹೇಳಿತು.

ರಾಮನ್ ಅವರು ಐಪಿಎಲ್‌ನ ಮುಖ್ಯ ಆಡಳಿತ ಅಧಿಕಾರಿಯಾಗಿ ಮುಂದುವರಿಯುವಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಬಿಸಿಸಿಐನ ಮಧ್ಯಂತರ ಅಧ್ಯಕ್ಷ ಸುನಿಲ್‌ ಗಾವಸ್ಕರ್‌ ಅವರು ಸುಪ್ರೀಂ ಕೋರ್ಟ್‌ಗೆ ಕೋರಿದ್ದ ಹಿನ್ನೆಲೆ ನ್ಯಾಯಾಲಯ, ಅವರಿಗೆ ಹುದ್ದೆಯಲ್ಲಿ ಮುಂದುವರಿಯಲು ಅನುಮತಿ ನೀಡಿತು.

ಇದೇ ವೇಳೆ, ಬಿಸಿಸಿಐ ಅರ್ಜಿಯನ್ನು ವಿಚಾರಣೆಗೆ ಒಪ್ಪಿಗೆ ಸೂಚಿಸಿದ ಪೀಠ, ಮುದ್ಗಲ್‌ ಸಮಿತಿಯು ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ್‌ ಸಿಂಗ್ ದೋನಿ  ಹಾಗೂ  ಶ್ರೀನಿವಾಸನ್‌ ಅವರೊಂದಿಗೆ  ನಡೆಸಿದ ಸಂವಾದದ ಧ್ವನಿಮುದ್ರಣ ಟೇಪ್‌ಗಳನ್ನು ಪಡೆಯಲು ಶ್ರೀನಿವಾಸನ್‌ ಅವರಿಗೆ ಅನುಮತಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT