ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ಯಾನ್ಸಿ’ ಫಲಕ: ಪರವಾನಗಿಗೆ ಮಾರಕ

ಆರು ತಿಂಗಳಲ್ಲೇ 36 ಸಾವಿರ ಪ್ರಕರಣ ದಾಖಲು; 2 ಬಾರಿ ದಂಡ, ಮೂರನೇ ಬಾರಿಗೆ ಅಮಾನತು
Last Updated 26 ಜುಲೈ 2015, 20:26 IST
ಅಕ್ಷರ ಗಾತ್ರ

ಬೆಂಗಳೂರು: ನಿಯಮ ಉಲ್ಲಂಘಿಸಿ ವಿವಿಧ ವಿನ್ಯಾಸಗಳಲ್ಲಿ ನೋಂದಣಿ ಸಂಖ್ಯೆ ಬರೆಸಿದ ವಾಹನ ಚಾಲಕರ ವಿರುದ್ಧ ನಗರ ಸಂಚಾರ ಪೊಲೀಸರು 6 ತಿಂಗಳಲ್ಲಿ 36ಸಾವಿರ ಪ್ರಕರಣ ದಾಖಲಿಸಿದ್ದಾರೆ.

ಕೇಂದ್ರ ಮೋಟಾರು ವಾಹನ ಕಾಯ್ದೆಯ 50 ಹಾಗೂ 51ನೇ ನಿಯಮದಂತೆ ನೋಂದಣಿ ಫಲಕದ ಮೇಲೆ ನೋಂದಣಿ ಸಂಖ್ಯೆ ಹೊರತು  ಆಲಂಕಾರಿಕ ಅಕ್ಷರಗಳು, ಚಿತ್ರಗಳು, ಬಣ್ಣದ ಪಟ್ಟಿ, ಕಲಾಕೃತಿಗಳು ಇರಕೂಡದು. ನೋಂದಣಿ ಸಂಖ್ಯೆ ಹಾಗೂ ಅಕ್ಷರಗಳು ನಿಗದಿತ ಅಳತೆಯಲ್ಲೇ ಇರಬೇಕು.

ಕರ್ನಾಟಕ ರಾಜ್ಯದ ಕೋಡ್‌ ‘KA’ ಎಂದೇ ಇರಬೇಕು. ಬದಲಾಗಿ ರಾಜ್ಯದ ಪೂರ್ಣ ಹೆಸರನ್ನು ಬರೆಸುವಂತಿಲ್ಲ. ಅಕ್ಷರಗಳು

ಇಂಗ್ಲಿಷ್‌ ಭಾಷೆಯಲ್ಲಿ ಹಾಗೂ ಸಂಖ್ಯೆಗಳು ಅರೇಬಿಕ್ ಶೈಲಿಯಲ್ಲಿರಬೇಕು. ಸರ್ಕಾರಿ ವಾಹನಗಳಿಗೂ ಇದೇ ನಿಯಮ ಅನ್ವಯಿಸುತ್ತದೆ. ಈ ನಿಯಮಗಳಿಗೆ ವಿರುದ್ಧವಾಗಿ ನೋಂದಣಿ ಸಂಖ್ಯೆ ಬರೆಸಿದವರ ವಿರುದ್ಧ  ಕ್ರಮ  ಜರುಗಿಸಲಾಗುತ್ತಿದೆ ಎನ್ನುತ್ತಾರೆ ಪೊಲೀಸರು.

ಫಲಕ ಹೀಗಿರಬೇಕು: ಖಾಸಗಿ ಬಳಕೆಯ ಸ್ಕೂಟರ್, ಬೈಕ್ ಹಾಗೂ ಕಾರುಗಳ ನೋಂದಣಿ ಫಲಕ ಬಿಳಿ ಬಣ್ಣದ್ದಾಗಿರಬೇಕು. ಅದರ ಮೇಲೆ ಬರೆಸುವ ಸಂಖ್ಯೆಗಳು ಕಪ್ಪು ಬಣ್ಣದಿಂದ ಕೂಡಿರಬೇಕು. ಅದೇ ರೀತಿ ಲಾರಿ, ಬಸ್, ಕ್ಯಾಬ್, ಆಟೊ, ಟ್ಯಾಕ್ಸಿ ಸೇರಿದಂತೆ ಯಾವುದೇ ವಾಣಿಜ್ಯ ಬಳಕೆ ವಾಹನಗಳು ಹಳದಿ ಬಣ್ಣದ ಫಲಕ ಹಾಕಿ, ಕಪ್ಪು ಬಣ್ಣದಿಂದ ಸಂಖ್ಯೆಗಳನ್ನು ಬರೆಸಿರಬೇಕು.

ಲಘು ಮೋಟಾರು ವಾಹನಗಳು (ಎಲ್‌ಎಂವಿ) ಒಂದು ಅಥವಾ ಎರಡು ಸಾಲಿನಲ್ಲಿ ನೋಂದಣಿ ಸಂಖ್ಯೆಯನ್ನು ಬರೆಸಿಕೊಳ್ಳಬಹುದು. ಆದರೆ, ಲಾರಿ ಸೇರಿದಂತೆ ಭಾರಿ ಮೋಟಾರು ವಾಹನಗಳಲ್ಲಿ (ಎಚ್‌ಎಂವಿ) ನೋಂದಣಿ ಸಂಖ್ಯೆ ಎರಡು ಸಾಲಿನಿಂದ ಕೂಡಿರಬೇಕು. ಮೊದಲ ಸಾಲಿನಲ್ಲಿ ರಾಜ್ಯದ ಕೋಡ್ (KA)

ಹಾಗೂ ನೋಂದಣಿ ಪ್ರಾಧಿಕಾರದ ಕೋಡ್ ಇರಬೇಕು. ಅದರ ಕೆಳಗಿನ ಸಾಲಿನಲ್ಲಿ ಉಳಿದ ಸಂಖ್ಯೆಗಳು ಇರಬೇಕು.

ಸಾರಿಗೆ ಇಲಾಖೆ: ‘ನೋಂದಣಿ ಫಲಕ ಉಲ್ಲಂಘನೆ ಸಂಬಂಧ ಸಾರಿಗೆ ಇಲಾಖೆ ಕೂಡ ಪ್ರತ್ಯೇಕ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳದಲ್ಲೇ ನೋಂದಣಿ ಫಲಕ ವಶಪಡಿಸಿಕೊಂಡು, ಸವಾರರಿಗೆ ದಂಡ ವಿಧಿಸಲಾಗುತ್ತಿದೆ’ ಎಂದು  ಸಾರಿಗೆ ಇಲಾಖೆ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್ ತಿಳಿಸಿದರು.

‘ಈ ನಿಯಮ ಉಲ್ಲಂಘಿಸುವ ಸವಾರರಿಗೆ ಮೊದಲ ಬಾರಿಗೆ ₨ 100 ದಂಡ ವಿಧಿಸಲಾಗುತ್ತದೆ. ಆ ನಂತರವೂ ನಿಯಮ ಪಾಲಿಸದೆ ಸಿಕ್ಕಿ ಬಿದ್ದರೆ ₨ 300 ದಂಡದ ಜತೆಗೆ ಚಾಲನಾ ಪರವಾನಗಿಯನ್ನು ಅಮಾನತು ಮಾಡಲಾಗುವುದು’ ಎಂದರು.

ನೋಂದಣಿ ಫಲಕ ಉಲ್ಲಂಘನೆ ಸಂಬಂಧ 2014ರಲ್ಲಿ 67,677 ಪ್ರಕರಣ ದಾಖಲಿಸಲಾಗಿತ್ತು. ಈ ವರ್ಷದ ಮೊದಲ ಆರು ತಿಂಗಳಲ್ಲಿ 36,095 ಪ್ರಕರಣ ದಾಖಲಾಗಿವೆ -ಎಂ.ಎ.ಸಲೀಂ, ಹೆಚ್ಚುವರಿ ಪೊಲೀಸ್ ಕಮಿಷನರ್ ಸಂಚಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT