ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬದಲಾದ ಜೀವನಶೈಲಿಯೇ ಮಧುಮೇಹ ಹೆಚ್ಚಳಕ್ಕೆ ಕಾರಣ’

Last Updated 27 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಕರ್ನಾಟಕ– ಆಂಧ್ರಪ್ರದೇಶ ಗಡಿಭಾಗದ ಕಾಸಿಪಲ್ಲಿ ಎಂಬ ಸಣ್ಣ ಹಳ್ಳಿಯಿಂದ ಬಂದ ಡಾ. ವಿ. ಲಕ್ಷ್ಮೀನಾರಾಯಣ್‌ ಅವರು 35 ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿರುವವರು. ಬಾಲ್ಯದಲ್ಲೇ ಕಂಡ ವೈದ್ಯರಾಗಬೇಕೆಂಬ ಕನಸನ್ನು ಛಲಬಿಡದೆ ನನಸಾಗಿಸಿಕೊಂಡವರು ಅವರು. ಸದ್ಯ ಮೈಸೂರಿನ ಶ್ರೀಹರಿ ಡಯಾಬಿಟೀಸ್‌ ಫೌಂಡೇಷನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ತಮ್ಮ ಪುತ್ರ ಡಾ. ಸೂರಜ್‌ ತೇಜಸ್ವಿ ಜತೆ ಸೇರಿ ಬರೆದಿರುವ ‘ಮಧುಮೇಹ– ಭಾರತದ ಅಗೋಚರ ಶತ್ರು’ ಪುಸ್ತಕ ಭಾನುವಾರ (ನ.29) ಮೈಸೂರಿನಲ್ಲಿ ಬಿಡುಗಡೆಯಾಗುತ್ತಿದೆ. ಡಾ. ವಿ. ಲಕ್ಷ್ಮೀನಾರಾಯಣ್‌ ಅವರು ಮಧುಮೇಹದ ಬಗ್ಗೆ ತಮ್ಮ ಒಳನೋಟಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.

* ಭಾರತದಲ್ಲಿ ದಿನದಿಂದ ದಿನಕ್ಕೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣವೇನು?
ಭಾರತೀಯರ ವಂಶವಾಹಿಗಳಲ್ಲಿ ಮಧುಮೇಹ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ, ಆ ಸಾಧ್ಯತೆಗಳನ್ನು ನಾವೇ ಹೆಚ್ಚಿಸಿಕೊಳ್ಳುತ್ತಿದ್ದೇವೆ. ಬದಲಾದ ಜೀವನ ಶೈಲಿಯಿಂದ ತನ್ನ ಪಾಡಿಗೆ ತಾನಿರುವ ಮಧುಮೇಹದ ಸಾಧ್ಯತೆಯನ್ನು ಬಡಿದೆಬ್ಬಿಸುತ್ತಿದ್ದೇವೆ. ಬದಲಾದ ಜೀವನಶೈಲಿ, ಮಾನಸಿಕ ಒತ್ತಡ ಮಧುಮೇಹ ಹೆಚ್ಚಳಕ್ಕೆ ಮುಖ್ಯ ಕಾರಣ. ನಮ್ಮ ಜೀವನ ಶೈಲಿಯು ಆರೋಗ್ಯದಿಂದ ಅನಾರೋಗ್ಯದ ಕಡೆಗೆ ನಡೆಯುತ್ತಿದೆ. ಆಹಾರ ಕ್ರಮದ ಬದಲಾವಣೆ, ವ್ಯಾಯಾಮ ರಹಿತ ಜೀವನ, ಸುತ್ತಲಿನ ಪರಿಸರ, ಮಾನಸಿಕ ಸಂತುಲನೆ ಕಾಯ್ದುಕೊಳ್ಳದೇ ಇರುವುದು ಮಧುಮೇಹ ಹೆಚ್ಚಾಗುತ್ತಿರಲು ಕಾರಣಗಳು. 2030ರ ವೇಳೆಗೆ ಭಾರತದಲ್ಲಿ 10 ಕೋಟಿಗೂ ಹೆಚ್ಚು ಜನ ಮಧುಮೇಹಿಗಳಾಗಿರುತ್ತಾರೆ ಎಂದರೆ ಆತಂಕವಾಗುವುದು ಸಹಜ.

* ಆಧುನಿಕ ಜೀವನ ಕ್ರಮ ಎನ್ನುವುದು ನಗರಿಗರಿಗೆ, ಅದರಲ್ಲೂ ಮಹಾನಗರಿಗರಿಗೆ ಅನಿವಾರ್ಯ. ಹೀಗಿರುವಾಗ ಮಧುಮೇಹ ತಡೆಗಟ್ಟಲು ಅವರೇನು ಮಾಡಬೇಕು?
ಜೀವನ ಕ್ರಮ ಬದಲಾಗುತ್ತಿರುವುದು ಅನಿವಾರ್ಯ. ಇಂದು ಬಹುತೇಕರಿಗೆ ರಾತ್ರಿ ಹಗಲಾಗಿದೆ, ಹಗಲು ರಾತ್ರಿಯಾಗಿದೆ. ಇದರಿಂದ ದೇಹದ ಬಯೋರಿದಂ ಹಿಡಿತಪ್ಪುತ್ತಿದೆ. ದೇಹದಲ್ಲಿ ಏನಾಗುತ್ತಿದೆ ಎಂದು ದೇಹಕ್ಕೇ ತಿಳಿಯದ ಸ್ಥಿತಿ ಇದು. ರಾತ್ರಿ ಎಲ್ಲಾ ಕೆಲಸ ಮಾಡಿ ಹಗಲು ಸರಿಯಾಗಿ ನಿದ್ರೆ ಮಾಡದೆ ಇರುವುದು, ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು, ದೇಹಕ್ಕೆ ಅಗತ್ಯವಿರುವಷ್ಟು ದೈಹಿಕ ಶ್ರಮ ನೀಡದೆ ಇರುವುದು–ಇವೆಲ್ಲಾ ನಮ್ಮನ್ನು ಅನಾರೋಗ್ಯದ ಕಡೆಗೆ ಕರೆದೊಯ್ಯುತ್ತವೆ. ಹೀಗಾಗಿ ಜೀವನ ಶೈಲಿಯಲ್ಲಿ ಬದಲಾವಣೆಯಾಗುತ್ತಿದ್ದರೂ ಅಗತ್ಯವಿರುವಷ್ಟು ನಿದ್ರೆ, ವ್ಯಾಯಾಮ, ಸೂಕ್ತ ಆಹಾರ ಕ್ರಮ, ಮಾನಸಿಕ ಸಂತುಲನೆ ಕಾಪಾಡಿಕೊಳ್ಳುವುದರಿಂದ ಮಧುಮೇಹ ಮಾತ್ರವಲ್ಲ ಎಲ್ಲ ಖಾಯಿಲೆಗಳನ್ನೂ ದೂರವಿಡಬಹುದು.

* ಮಧುಮೇಹಿಗಳಿಗೆ ಸೂಕ್ತ ಆಹಾರ ಕ್ರಮ, ನಿಯಮಿತ ವ್ಯಾಯಾಮ ಎಷ್ಟು ಮುಖ್ಯ?
ಸರಿಯಾದ ಆಹಾರ ಕ್ರಮ, ನಿಯಮಿತ ವ್ಯಾಯಾಮದಿಂದ ಮಧುಮೇಹವನ್ನು ಬಹುತೇಕ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಆಹಾರ ಸೇವನೆಯಿಂದ ದೇಹದಲ್ಲಿ ಗ್ಲೂಕೋಸ್‌ ಉತ್ಪಾದನೆಯಾಗುತ್ತದೆ. ಆ ಗ್ಲೂಕೋಸ್‌ ಪ್ರತಿಯೊಂದು ಜೀವಕೋಶಕ್ಕೂ ಹೋಗಿ ಶಕ್ತಿ ತುಂಬಬೇಕಾಗುತ್ತದೆ. ಆದರೆ, ಗ್ಲೂಕೋಸ್‌ ಜೀವಕೋಶದ ಬಾಗಿಲು ತೆರೆದು ಒಳಹೋಗಲು ಇನ್ಸುಲಿನ್‌ ಒಂಬ ಕೀಲಿಕೈ ಬೇಕು. ದೇಹದಲ್ಲಿ ಇನ್ಸುಲಿನ್‌ ಕೊರತೆಯಾದಾಗ ಜೀವಕೋಶದ ಬಾಗಿಲು ತೆರೆಯುವುದಿಲ್ಲ. ಇದರಿಂದ ಗ್ಲೂಕೋಸ್‌ನ ಶಕ್ತಿ ಜೀವಕೋಶಕ್ಕೆ ದೊರೆಯುವುದಿಲ್ಲ. ಇದನ್ನೆಲ್ಲಾ ತಡೆಯಲು ನಿಧಾನವಾಗಿ ಜೀರ್ಣವಾಗುವ ರಾಗಿ ಮುದ್ದೆ, ಹಣ್ಣು, ತರಕಾರಿ, ಬೇಳೆ ಕಾಳು, ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವನೆ ಮಾಡಬೇಕು. ನಿಯಮಿತ ವ್ಯಾಯಾಮದಿಂದ ದೇಹದಲ್ಲಿರುವ ಕೊಬ್ಬು ಕರಗಿ ಅದು ಗ್ಲೂಕೋಸ್‌ ಆಗಿ ಪರಿವರ್ತನೆಯಾಗುತ್ತದೆ. ಮಧುಮೇಹಿಗಳಿಗೆ ಮಾತ್ರವಲ್ಲ ಇತರರಿಗೂ ಸೂಕ್ತ ಆಹಾರ ಕ್ರಮ ಹಾಗೂ ನಿಯಮಿತ ವ್ಯಾಯಾಮ ಅಗತ್ಯ.

* ಬೊಜ್ಜು ದೇಹದವರನ್ನು ಕಂಡರೆ ಮಧುಮೇಹಕ್ಕೆ ಇಷ್ಟವೇ?
ಖಂಡಿತ. ಬೊಜ್ಜಿನ ದೇಹ, ಸ್ಥೂಲಕಾಯದವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಕೆಟ್ಟ ಕೊಬ್ಬಿನಂಶ, ಹೆಚ್ಚಿನ ಕೊಬ್ಬಿನಂಶ ದೇಹದಲ್ಲಿದ್ದರೆ ಅಂತಹ ದೇಹ ಹಲವು ರೋಗಗಳಿಗೆ ಆಹ್ವಾನ ಕೊಟ್ಟಂತೆ. ಬೊಜ್ಜಿನ ದೇಹ ಹಲವು ವ್ಯಾಧಿಗಳಿಗೆ ಮೂಲ. ಹೀಗಾಗಿ ಬೊಜ್ಜುದೇಹ ಬಾರದಂತೆ ನೋಡಿಕೊಳ್ಳುವುದು, ದೇಹದ ತೂಕ ಹೆಚ್ಚಾಗದಂತೆ ಕಾಯ್ದುಕೊಳ್ಳುವುದು ಆರೋಗ್ಯಕರ ಜೀವನಕ್ಕೆ ಬಹು ಮುಖ್ಯ. ಹಾಗೆಂದು ಸಣ್ಣಗಿರುವವರಿಗೆ ಮಧುಮೇಹ ಬರುವುದೇ ಇಲ್ಲ ಎಂದೂ ಹೇಳುವಂತಿಲ್ಲ. ಈಗ ಮಧುಮೇಹಕ್ಕೆ ವಯಸ್ಸು, ಅಂತಸ್ತು, ಗಾತ್ರ, ಬಣ್ಣ ಯಾವುದೂ ಮುಖ್ಯವಾಗುತ್ತಿಲ್ಲ.

* ಕುವೆಂಪು ಅವರ ಸಂಧ್ಯಾಕಾಲದಲ್ಲಿ ಅವರ ಆಪ್ತ ವೈದ್ಯರಾಗಿದ್ದವರು ನೀವು. ಆ ಅನುಭವ ಹೇಗಿತ್ತು?
ನಾನು ಕುವೆಂಪು ಅವರ ಆಪ್ತ ವೈದ್ಯನಾಗಿದ್ದು ನನ್ನ ಪುಣ್ಯವೆಂದೇ ಹೇಳಬೇಕು. ಕುವೆಂಪು ಅವರ ಕೊನೆಯ ಹತ್ತು ವರ್ಷಗಳ ಕಾಲ ನಾನು ಅವರ ಆರೋಗ್ಯ ಸೇವೆ ಮಾಡುವಂತಾಯಿತು. ಅವರ ರಕ್ತದೊತ್ತಡ ಮತ್ತಿತರ ಸಮಸ್ಯೆಗಳಿದ್ದಾಗಲೆಲ್ಲಾ ತಾರಿಣಿ ಕರೆ ಮಾಡುತ್ತಿದ್ದರು. ತಕ್ಷಣವೇ ನಾನು ಕುವೆಂಪು ಅವರ ಮನೆಗೆ ಹೋಗಿ ಅಗತ್ಯ ಔಷಧೋಪಚಾರ ಮಾಡುತ್ತಿದೆ. ಕುವೆಂಪು ನನ್ನನ್ನು ಆತ್ಮೀಯವಾಗಿ ಕಾಣುತ್ತಿದ್ದರು. ಆ ಹೊತ್ತಿಗೆ ಅವರ ದೇಹದ ಶಕ್ತಿ ಕಡಿಮೆಯಾಗುತ್ತಿತ್ತು. ಆದರೆ, ಅವರು ಕೊನೆಗಾಲದಲ್ಲೂ ಸದಾ ಏನಾದರೂ ಓದುತ್ತಿರುತ್ತಿದ್ದರು.

* ನೀವು ಆರೋಗ್ಯ ಸಾಹಿತ್ಯ ರಚನೆಗೆ ಮುಂದಾಗಿದ್ದು ಹೇಗೆ?
ಕನ್ನಡದಲ್ಲಿ ಆರೋಗ್ಯ ವಿಜ್ಞಾನ ಕುರಿತ ಪುಸ್ತಕಗಳು ಬರಬೇಕೆಂದು ಕುವೆಂಪು ಅವರು ಹೇಳುತ್ತಿದ್ದರು. ಡಾ. ಪ್ರಧಾನ್‌ ಗುರುದತ್ತ ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಮಧುಮೇಹದ ಬಗ್ಗೆ ಕನ್ನಡದಲ್ಲಿ ಪುಸ್ತಕ ಬರೆಯಲೇ ಬೇಕು ಎಂದು ಆತ್ಮೀಯವಾಗಿ ಒತ್ತಾಯ ಮಾಡಿದರು. ಹಿಂದಿನಿಂದಲೂ ಆರೋಗ್ಯ ವಿಜ್ಞಾನದ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದೆ. ಮಧುಮೇಹದ ಬಗ್ಗೆಯೇ ಒಂದು ಪುಸ್ತಕ ಬರೆಯಬೇಕಾದ ಅನಿವಾರ್ಯ ಮನಗಂಡು ‘ಮಧುಮೇಹ– ದಶವ್ಯಾಧಿಗಳ ಮೂಲ’ ಎಂಬ ಪುಸ್ತಕ ಬರೆದೆ. 2011ರಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದಲೇ ಆ ಪುಸ್ತಕ ಪ್ರಕಟವಾಯಿತು. ನಾನು ಆರೋಗ್ಯ ವಿಜ್ಞಾನದ ಬಗ್ಗೆ ಬರೆಯಲು ಡಾ. ಪ್ರಧಾನ್‌ ಗುರುದತ್ತ ಅವರ ಒತ್ತಾಸೆಯೇ ಕಾರಣ.

* ‘ಮಧುಮೇಹ– ಭಾರತದ ಅಗೋಚರ ಶತ್ರು’ ಪುಸ್ತಕ ರಚನೆಯ ತಯಾರಿ ಹೇಗಿತ್ತು?
ಮೊದಲ ಪುಸ್ತಕ ಪ್ರಕಟವಾದ ಬಳಿಕ ಮಧುಮೇಹದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಒಳಗೊಂಡ ಪುಸ್ತಕ ರಚಿಸಬೇಕೆಂಬ ಕನಸಿತ್ತು. ವೈದ್ಯನೂ ಆಗಿರುವ ನನ್ನ ಪುತ್ರ ಡಾ. ಸೂರಜ್‌ ತೇಜಸ್ವಿ ಮತ್ತು ನಾನು ಸೇರಿ ಇಂಗ್ಲಿಷ್‌ನಲ್ಲಿ ‘DIABETES - India’s Invisible Enemy’ ಎಂಬ ಪುಸ್ತಕ ಬರೆದೆವು. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯಿತು. ಆ ಪುಸ್ತಕದ ಸಾರವನ್ನು ಕನ್ನಡಿಗರಿಗೂ ತಿಳಿಸಬೇಕೆಂಬ ಕಾರಣದಿಂದ ಅದೇ ಪುಸ್ತಕವನ್ನು ನಾವಿಬ್ಬರೂ ಮತ್ತೆ ಕನ್ನಡದಲ್ಲಿ ಬರೆದೆವು. ಅದೇ ‘ಮಧುಮೇಹ– ಭಾರತದ ಅಗೋಚರ ಶತ್ರು’ ಪುಸ್ತಕ. 35 ವರ್ಷಗಳ ವೈದ್ಯ ವೃತ್ತಿಯ ಅನುಭವದ ಜತೆಗೆ ಹತ್ತು ವರ್ಷಗಳ ಮಧುಮೇಹ ವಿಷಯದ ಸಂಶೋಧನೆಯ ಹಿನ್ನೆಲೆ ಈ ಪುಸ್ತಕಕ್ಕಿದೆ.

‘ಮಧುಮೇಹ ಭಾರತದ ಅಗೋಚರ ಶತ್ರು’
ಮಧುಮೇಹದ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಪುಸ್ತಕವಿದು. ಡಾ. ವಿ. ಲಕ್ಷ್ಮೀನಾರಾಯಣ್‌ ಅವರು ಅಮೆರಿಕದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ತಮ್ಮ ಪುತ್ರ ಡಾ. ಸೂರಜ್‌ ತೇಜಸ್ವಿ ಅವರ ಜತೆಗೆ ಅಧ್ಯಯನ ನಡೆಸಿ ರಚಿಸಿರುವ ಪುಸ್ತಕವಿದು. ಮಧುಮೇಹ ಬರಲು ಕಾರಣ, ನಿಯಂತ್ರಣ, ಔಷಧೋಪಚಾರ, ಮಧುಮೇಹದಿಂದ ಉಂಟಾಗುವ ಇತರೆ ಆರೋಗ್ಯ ಸಮಸ್ಯೆಗಳು, ಸಮಸ್ಯೆಗಳ ಪರಿಹಾರೋಪಾಯಗಳ ಬಗ್ಗೆ 28 ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಆಪ್ತವೆನಿಸುವ ಉದಾಹರಣೆಗಳು, ಚಿತ್ರಗಳ ಮೂಲಕ ಮಧುಮೇಹದ ವಿಷಯವನ್ನು ಸರಳ ಭಾಷೆಯಲ್ಲಿ ನಿರೂಪಿಸಲಾಗಿದೆ. ಸಪ್ನ ಬುಕ್‌ಹೌಸ್‌ ಹೊರತಂದಿರುವ ಈ ಪುಸ್ತಕ ಭಾನುವಾರ (ನ.29) ಮೈಸೂರು ವಿಶ್ವವಿದ್ಯಾಲಯದ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಪುಸ್ತಕದ ಬೆಲೆ ₹ 200.

ಡಾ. ವಿ. ಲಕ್ಷ್ಮೀನಾರಾಯಣ್‌ ಅವರ ಸಂಪರ್ಕ ಸಂಖ್ಯೆ: 094498 24994

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT