ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬದುಕು-ಭವಿಷ್ಯಕ್ಕಾಗಿ ದಾಂಪತ್ಯ’

Last Updated 27 ನವೆಂಬರ್ 2015, 19:30 IST
ಅಕ್ಷರ ಗಾತ್ರ

ನಮ್ಮ ಮದುವೆಯಾಗಿ ಸುಮಾರು ಒಂದೂವರೆ ದಶಕಗಳಾಗುತ್ತಾ ಬಂತು. ಆಗ ತಾನೆ ಪದವಿ ಮುಗಿಸಿ, ಫಲಿತಾಂಶ ಹೊರಬೀಳುವುದರೊಳಗೆ ನನ್ನ ಬದುಕಿನಲ್ಲಿ ಗಂಡನ ಪ್ರವೇಶವಾಗಿತ್ತು! ಕೇವಲ ಕಾಲೇಜು, ಮನೆ, ಬಸ್ಸು, ಓದು, ಗೆಳೆಯ–ಗೆಳತಿಯರದ್ದೇ ಪ್ರಪಂಚದಲ್ಲಿದ್ದ ನನಗೆ ನನ್ನವರು ನಿಜಕ್ಕೂ ಒಬ್ಬ ಒಳ್ಳೆಯ ಗೆಳೆಯನಾಗಿಯೇ ಸಂಸಾರ ಶುರುಮಾಡಿದರು. ತೀರಾ ಸಂಪ್ರದಾಯಸ್ಥರ ಜೊತೆಗೆ ನಮ್ಮ ಸಂಸಾರದ ಬಂಡಿ ಸಾಗುತ್ತಾ ಇದುವರೆಗೂ ಬಂದಿದೆಯೆಂದರೆ ತಪ್ಪಾಗಲಿಕ್ಕಿಲ್ಲ.

ಮದುವೆಯಾಗಿ ಒಂದೂವರೆ ವರ್ಷಗಳ ಬಳಿಕ ಮಗಳು ಹುಟ್ಟಿದಳು. ಯಾವಾಗಲೂ ತೊಡೆಯ ಮೇಲೆಯೇ ನಿದ್ರಿಸುವ ಮಗುವನ್ನು ಎರಡು ವರ್ಷಗಳ ಕಾಲ ರಾತ್ರಿ ಹೊತ್ತು ನಾವಿಬ್ಬರೂ ಒಬ್ಬರಾದ ಮೇಲೆ ಒಬ್ಬರಂತೆ ಪಾಳಿಯ ಮೇಲೆ ಎತ್ತಿಕೊಂಡು ಬೆಳಗು ಮಾಡುತ್ತಿದ್ದೆವು. ನಂತರ ನಮ್ಮ ಬದುಕಿಗೆ ಮತ್ತೊಬ್ಬ ಮಗನೂ ಸೇರ್ಪಡೆಯಾದ. ಇಬ್ಬರು ಮಕ್ಕಳನ್ನು ಬೆಳೆಸುವಲ್ಲಿ ನನಗಿಂತ ನನ್ನವರ ಪಾತ್ರವೇ ಹೆಚ್ಚು. ಮಕ್ಕಳು ಚಿಕ್ಕವರಿರುವಾಗ, ನಾನು ತಿಂಗಳಲ್ಲಿ ಮೂರು ದಿನ ರಜೆ ತೆಗೆದುಕೊಂಡಾಗಲೂ ಮಕ್ಕಳಿಬ್ಬರನ್ನು ರಾತ್ರಿಯ ಹೊತ್ತು ಅವರೇ ಸಂಭಾಳಿಸುತ್ತಿದ್ದರು.

ಈಗ ಮಕ್ಕಳಿಬ್ಬರೂ ಶಾಲೆಗೆ ಹೋಗುತ್ತಾರೆ. ನನ್ನವರೂ ಕೂಡಾ  ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಹಾಗಾಗಿ, ಬೆಳಿಗ್ಗೆ ಎಂಟು ಗಂಟೆಯ ಒಳಗೆ ಮಕ್ಕಳನ್ನು ತಯಾರು ಮಾಡಿ, ಹತ್ತು ಗಂಟೆಯ ಒಳಗೆ ನಮ್ಮ ಶಿಕ್ಷಕರನ್ನು ಕಳುಹಿಸಿಕೊಡಬೇಕು. ಆಗಲೂ ಕೂಡಾ ನಾನು ಮಗಳಿಗೆ ತಲೆ ಬಾಚಿ ತಯಾರು ಮಾಡುವುದರೊಳಗೆ, ನನ್ನವರು ಬೆಳಗಿನ ವಾಕಿಂಗ್ ಮುಗಿಸಿ ಬಂದು ಮಗನನ್ನು ಎಬ್ಬಿಸಿ ಸ್ನಾನ ಮಾಡಿಸಿ, ತಯಾರು ಮಾಡುತ್ತಾರೆ. ಆಗ ಇಬ್ಬರೂ ಒಟ್ಟಾಗಿ ತಿಂಡಿ ತಿಂದು ಮಕ್ಕಳು ಶಾಲೆಗೆ ಹೋದ ಮೇಲೆ ನಮ್ಮ ದಿನಚರಿಯಾದ ದನದಕೊಟ್ಟಿಗೆ ಕೆಲಸ ಮುಗಿಸಿ ಬಂದ ನಮ್ಮ ಡ್ರಾಯಿಂಗ್ ಸರ್ ಚಹಾ ಕುಡಿಯಲು ತಯಾರಾಗುತ್ತಾರೆ.

ವಾರದಲ್ಲಿ ಏಳುದಿನಗಳು ನಾನು ಅವರಿಗೆ ಚಹಾ ಮಾಡಿಕೊಟ್ಟರೆ, ಭಾನುವಾರ ಮಾತ್ರ ಅವರು ನನಗೆ, ಮಕ್ಕಳಿಗೆ ಚಹಾ ಮಾಡಿಕೊಡುತ್ತಾರೆ. ಮಕ್ಕಳಿಗೆ ಹೋಂವರ್ಕ್ ಮಾಡಿಸುವಾಗಲೂ ಅಷ್ಟೇ, ಡ್ರಾಯಿಂಗ್ ಮತ್ತು ಗಣಿತ ಕಲಿಸುವುದು ಅಪ್ಪ, ಉಳಿದೆಲ್ಲಾ ವಿಷಯ ಕಲಿಸುವುದು ಅಮ್ಮ ಎಂದು ಮಕ್ಕಳೇ ನಿರ್ಧರಿಸಿದ್ದಾರೆ. ಮಕ್ಕಳಿಗೆ ಏನು ಬೇಕು, ಯಾವುದು ಬೇಡ ಎಂದು ತೀರ್ಮಾನಿಸುವುದು ಅಂತಿಮವಾಗಿ ನಾನೇ ಆದರೂ, ಅಲ್ಲಿ ನನ್ನವರ ಸಹಮತವೂ ಇರುತ್ತದೆ.

ನಮ್ಮಿಬ್ಬರಲ್ಲಿ  ಯಾವುದೇ ಮುಚ್ಚುಮರೆಯಿಲ್ಲ. ಮಕ್ಕಳೆದುರಿಗೆ ಯಾವತ್ತೂ ಜಗಳವಾಡಿಲ್ಲ. ಅಧಿಕಾರಶಾಹಿ ಧೋರಣೆ ನಮ್ಮಿಬ್ಬರಲ್ಲಿಯೂ ಇಲ್ಲ. ಸಾಮಾನ್ಯವಾಗಿ ಬಟ್ಟೆ ತೊಳೆಯುವ ಕೆಲಸ ನನ್ನದಾದ್ದರಿಂದ ಯಾವಾಗಲಾದರೂ, ತೊಳೆಯುವ ಬಟ್ಟೆ ತುಂಬಾ ದಿನಗಳಿಂದ ಅದೇ ಜಾಗದಲ್ಲಿ ಕಂಡರೆ, ಗಂಡನೆಂಬ ‘ಅಧಿಕಾರಿ’ ಅಲ್ಲಿ ಕೆಲಸ ಮಾಡುವುದಿಲ್ಲ, ಮುಖ್ಯವಾಗಿ ಗಂಡ–ಹೆಂಡಿರ ಮಧ್ಯೆ ಪರಸ್ಪರ ಅಭಿಮಾನ  ಗೌರವಗಳಿರಬೇಕು. ಅನುಮಾನವೆಂಬ ಅತಿಥಿಗೆ ಅವಕಾಶವಿರಬಾರದು. ಸಂಸಾರ ಎಂದ ಮೇಲೆ ಒಮ್ಮೊಮ್ಮೆ ನಾಲ್ಕು ಮಾತು ಹೆಚ್ಚಾಗಿಯೇ ಬರಬಹುದು, ಆದರೆ ಅದನ್ನೇ ದೊಡ್ಡ ಕಂದಕ ಮಾಡಿಕೊಳ್ಳಬಾರದು.

ಗಂಡ–ಹೆಂಡಿರ ಜಗಳ ಉಂಡು ಮಲಗುವವರೆಗೆ, ಎಂದಾದರೆ ನಮ್ಮದು ಬೇರೆಯದೇ ಸೂತ್ರ. ನಮ್ಮಲ್ಲಿ ಭಿನ್ನಾಭಿಪ್ರಾಯ ಏನೇ ಇದ್ದರೂ ಅದು ಮಲಗಿ ಏಳುವುದರೊಳಗೆ ಪರಿಹಾರವಾಗಿರುತ್ತದೆ. ಈ ಗಾದೆ ಮಾತನ್ನು ಸ್ವಲ್ಪ ತಿರುಚಿ ಮಾಡಲಾಗಿದೆಯೆಂದರೆ, ಇರಬಹುದೇನೋ ಎಂದು ನಮ್ಮ ಡ್ರಾಯಿಂಗ್ ಸರ್ ಮರುನುಡಿಯುತ್ತಾರೆ. ನಮಗೆ ಏನಿದೆಯೋ, ಎಷ್ಟಿದೆಯೋ ಅದರಲ್ಲಿಯೇ ಸಮಾಧಾನದಿಂದ, ಹೊಂದಿಕೊಂಡು ಜೀವನ ಮಾಡಿದರೆ, ಜಗಳಕ್ಕೆ ಅವಕಾಶವಿರುವುದಿಲ್ಲ. ‘ನಮ್ಮ ಮಕ್ಕಳ ಬದುಕು-ಭವಿಷ್ಯಕ್ಕಾಗಿ ನಮ್ಮ ಜೀವನ’ ಎಂಬ ಸರಳ ಸೂತ್ರ ಅಳವಡಿಸಿಕೊಂಡರೆ ಯಾವ ಸಮಸ್ಯೆಯೂ ಎದುರಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT