ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಯಲುಬಂದಿ’ಗಳಾದ ಜನಪ್ರತಿನಿಧಿಗಳು

Last Updated 9 ಅಕ್ಟೋಬರ್ 2015, 20:08 IST
ಅಕ್ಷರ ಗಾತ್ರ

ಬೆಂಗಳೂರು: ರಾಹುಲ್‌ ಗಾಂಧಿ ಬರುವಿಕೆಗಾಗಿ ಎರಡು ಗಂಟೆಗೂ ಹೆಚ್ಚು ಕಾಲ ಕಾದು ಕಾದು ಸುಸ್ತಾದ ಕಾಂಗ್ರೆಸ್‌ನ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಸಿವು ಮತ್ತು ಬಾಯಾರಿಕೆಯಿಂದ ಬಳಲಿದ ಪ್ರಸಂಗ ಶುಕ್ರವಾರ ನಡೆಯಿತು.

ಇಲ್ಲಿನ ಅರಮನೆ ಮೈದಾನದಲ್ಲಿ ಗ್ರಾಮಸ್ವರಾಜ್‌ ಸಮಾವೇಶ ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಬಂದಿದ್ದ  ರಾಜ್ಯದ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ನಾಲ್ಕೈದು ಗಂಟೆಗಳ ಕಾಲ ಪೊಲೀಸರ ‘ಬಂದಿ’ಗಳಾಗಿ ಕಳವಳಿಸಿದರು.

ಮಂಡ್ಯ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ 2.30ಕ್ಕೆ ರಾಹುಲ್‌ ಅರಮನೆ ಮೈದಾನಕ್ಕೆ ಬರಬೇಕಿತ್ತು. ಹೀಗಾಗಿ ಬೆಳಿಗ್ಗೆ 11ರಿಂದಲೇ ಸಭಾಂಗಣದ ಒಳಗೆ ಜನಪ್ರತಿನಿಧಿಗಳನ್ನು ಕೂರಿಸಲಾಗಿತ್ತು. ಯಾರಿಗೂ ಎದ್ದು ಹೊರಗೆ ಹೋಗಲು ಬಿಟ್ಟಿರಲಿಲ್ಲ. ಮಧ್ಯದಲ್ಲಿ ಒಮ್ಮೆ ಊಟಕ್ಕೆ ಬಿಟ್ಟರೂ ಬಹುಬೇಗ ಅದನ್ನೂ ಸ್ಥಗಿತಗೊಳಿಸಿದರು. ಕೆಲವರಿಗೆ ಊಟ ಸಿಕ್ಕಿದರೆ, ಇನ್ನೂ ಕೆಲವರಿಗೆ ಅದೂ ಸಿಗಲಿಲ್ಲ. ಇದರಿಂದ ಕಂಗಾಲಾದ ಜನಪ್ರತಿನಿಧಿಗಳು ರೋಸಿ ಹೋಗಿದ್ದುದು ಕಂಡು ಬಂದಿತು.

ಇಷ್ಟೆಲ್ಲ ಆದರೂ ರಾಹುಲ್‌ಗಾಂಧಿ ಅವರಿಗಾಗಿ ಕಷ್ಟಪಟ್ಟು ಕಾದು ಕುಳಿತೇ ಇದ್ದರು. ಕೊನೆಗೂ ಸಂಜೆ 4.30ಕ್ಕೆ ರಾಹುಲ್‌ ಅರಮನೆ ಮೈದಾನದೊಳಕ್ಕೆ ಬಂದರು. ಕಾರ್ಯಕ್ರಮವನ್ನು  ಸ್ಥಳೀಯ ಜನಪ್ರತಿನಿಧಿಗಳ ಭಾಷಣದ ಮುಖಾಂತರ ಆರಂಭಿಸಲಾಯಿತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ  ಹಾಗೂ ಅಂತಿಮವಾಗಿ ರಾಹುಲ್‌ ಮಾತನಾಡಿದರು. ಆ ವೇಳೆಗೆ ಹಸಿವು ಮತ್ತು ಬಾಯರಿಕೆಯಿಂದ ಬಳಲಿದ್ದ ಜನಪ್ರತಿನಿಧಿಗಳು ರಾಹುಲ್‌ ಭಾಷಣ ಆರಂಭಿಸುತ್ತಿದ್ದಂತೆಯೇ ತಾವು ಕುಳಿತ ಸ್ಥಳದಿಂದ ಎದ್ದು ಹೊರ ನಡೆಯಲು ಆರಂಭಿಸಿದರು. ಪೊಲೀಸರು ಮತ್ತು ಪಕ್ಷದ ಮುಖಂಡರು ಕೆಲಹೊತ್ತು ಜನಪ್ರತಿನಿಧಿಗಳನ್ನು ತಡೆಯುವ ಪ್ರಯತ್ನ ಮಾಡಿದರು.

ಕೆಲವರು ‘ಮೂತ್ರ ವಿಸರ್ಜನೆ ಮಾಡಬೇಕು ಬಿಡ್ರಪ್ಪ’ ಎಂದು ಜೋರಾಗಿ ಕೂಗುತ್ತಾ ಓಡಿದರು. ಇನ್ನೂ ಕೆಲವರು ‘ಕುಡಿಯಲು ನೀರು ಕೊಡಿ’ ಎಂದು ಕೂಗಿದರು. ಪರಿಸ್ಥಿತಿ ಅರ್ಥ ಮಾಡಿಕೊಂಡ ರಾಹುಲ್‌ ಗಾಂಧಿ 15 ನಿಮಿಷದಲ್ಲಿ ಭಾಷಣ ಮುಗಿಸಿದರು.

ಷರೀಫ್‌ ಹೆಸರು ಪ್ರಸ್ತಾಪ: ವೇದಿಕೆ ಮೇಲಿದ್ದ ಮುಖಂಡರ ಹೆಸರು ಹೇಳುವಾಗ ರಾಹುಲ್‌ ಗಾಂಧಿ ಅವರು ಪಕ್ಷದ ಹಿರಿಯ ನಾಯಕ ಸಿ.ಕೆ. ಜಾಫರ್‌ ಷರೀಫ್‌ ಅವರ ಹೆಸರು ಪ್ರಸ್ತಾಪಿಸಿದರು.  ಆದರೆ, ಷರೀಫ್‌ ವೇದಿಕೆಯಲ್ಲಿ ಇರಲಿಲ್ಲ.

ವಂದೇ ಮಾತರಂಗೆ ಅಗೌರವ: ಗಾಯಕಿ ಸಂಗೀತಾ ಕಟ್ಟಿ ಅವರು ‘ವಂದೇ ಮಾತರಂ’ ಹಾಡು ಹೇಳಿ ಮುಗಿಸುವುದಕ್ಕೂ ಮುನ್ನವೇ ರಾಹುಲ್‌ ಒಮ್ಮೆಲೇ ಕುರ್ಚಿ ಮೇಲೆ ಕುಳಿತು ನಂತರ ತಕ್ಷಣ ಎದ್ದು ಗೌರವ ಸೂಚಿಸಿದರು.

ವೇದಿಕೆಯ ಮೇಲೆ ಶತಪಥ ಹಾಕಿದ ಖರ್ಗೆ: ರಾಹುಲ್‌ ಬರುವುದು ತಡವಾದ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರು ಕೆಲಹೊತ್ತು  ವೇದಿಕೆ ಮೇಲೆ ಶತಪಥ ಹಾಕಿದರು.

ಮಧ್ಯಾಹ್ನ 3 ಗಂಟೆಗೆ ವೇದಿಕೆಗೆ ಬಂದ ಅವರು ಕೆಲ ಸಮಯ ಕುರ್ಚಿಯಲ್ಲಿ ಕೂರುವುದು, ಇನ್ನೂ ಕೆಲ ಸಮಯ ವೇದಿಕೆಯ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಹೋಗಿ ಎಲ್ಲರ ಕುಶಲೋಪರಿ ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

* ರಾಹುಲ್ ಬರಬೇಕಿದ್ದದ್ದು ಮಧ್ಯಾಹ್ನ 2.30ಕ್ಕೆ
* ಬೆಳಿಗ್ಗೆ 11ರಿಂದಲೇ ಸಭಾಂಗಣದಲ್ಲಿ ಕುಳಿತಿದ್ದ ಜನಪ್ರತಿನಿಧಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT