ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬರ್ಮುಡಾ ತ್ರಿಕೋನ’ದಂತೆ ಮಾಯಾಜಾಲ!

Last Updated 25 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಅಟ್ಲಾಂಟಿಕ್‌ ಮಹಾಸಾಗರದ ‘ಬರ್ಮುಡಾ ತ್ರಿಕೋನ’ದಂತೆ ನಮ್ಮ ಬೆಂಗಳೂರಿನ ರಸ್ತೆ ಗುಂಡಿಗಳ ಚಮತ್ಕಾರ ಕೂಡ ವಿಸ್ಮಯಕಾರಿ. ಪ್ರತಿವರ್ಷ ನೂರಾರು ಕೋಟಿ ತೆರಿಗೆ ಹಣಖರ್ಚು ಮಾಡಿ ಹರಡುವ ಜಲ್ಲಿಕಲ್ಲು, ಸುರಿವ ಕರ್ರನೆ ಡಾಂಬರು ಈ ಗುಂಡಿಗಳಲ್ಲಿ ಅದುಹೇಗೆ ಅದೃಶ್ಯ ಆಗಿಬಿಡುವುವೋ ಗೊತ್ತಾಗುವುದಿಲ್ಲ. ಮುಚ್ಚಿದ ಕೆಲವು ದಿನಗಳಲ್ಲೇ ಗುಂಡಿಗಳು ಯಥಾಪ್ರಕಾರ ಬಾಯ್ದೆರೆದು ಕುಳಿತಿರುತ್ತವೆ!

ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ 67 ಸಾವಿರ ಚದರ ಮೀಟರ್‌ನಷ್ಟು ಟಾರಿನ ಮೇಲ್ಪದರು ಕಿತ್ತು ಹೋಗಿದ್ದು, 30 ಸಾವಿರ ಗುಂಡಿಗಳು ಬಿದ್ದಿವೆ ಎಂಬ ವಿವರಣೆ ನೀಡುತ್ತದೆ ಪಾಲಿಕೆ ಎಂಜಿನಿಯರ್‌ಗಳೇ ನಡೆಸಿದ ಸಮೀಕ್ಷೆ.

‘ಹೊಸ ಕಾಮಗಾರಿಗೆ ಸಿಗುವಂತಹ ಮಹತ್ವವು ನಿರ್ವಹಣೆಗೆ ಸಿಗದಿರುವುದೇ ರಸ್ತೆಗಳ ಇಂದಿನ ಸ್ಥಿತಿಗೆ ಕಾರಣ’ ಎಂದಿದ್ದರು ಪಾಲಿಕೆ ಆಡಳಿತಾಧಿಕಾರಿಯಾಗಿದ್ದ ಟಿ.ಎಂ.ವಿಜಯಭಾಸ್ಕರ್‌. ಅವರ ಈ ಮಾತು ಎಷ್ಟೊಂದು ಅರ್ಥಗರ್ಭಿತ. ಗುತ್ತಿಗೆದಾರನೊಬ್ಬ ಕಾಮಗಾರಿ ವಹಿಸಿಕೊಂಡು ಯಾವುದೇ ರಸ್ತೆಗೆ ಮರು ಡಾಂಬರೀಕರಣ ಮಾಡಿದರೆ ಮುಂದಿನ ಮೂರು ವರ್ಷಗಳ ಕಾಲ ಆ ರಸ್ತೆಯನ್ನು ನಿರ್ವಹಣೆ ಮಾಡಬೇಕೆಂಬ ಷರತ್ತು ಇರುತ್ತದೆ. ಆದರೆ, ಕಾಮಗಾರಿ ಮುಗಿದು ಮರುವಾರವೇ ಗುಂಡಿ ಬಿದ್ದರೆ ಎಂಜಿನಿಯರ್‌ಗಳು ಪಾಲಿಕೆ ಖರ್ಚಿನಲ್ಲಿ ಅದನ್ನು ಮುಚ್ಚಿಸುತ್ತಾ ಬಂದಿದ್ದಾರೆ. 

ರಸ್ತೆ ದುರಸ್ತಿ ಎಂಬುದು ವಾರ್ಷಿಕ ವಿಧಿಯಾಗಿದ್ದು, ಕಳೆದ ಐದು ವರ್ಷಗಳಲ್ಲಿ ಪ್ರಮುಖ ರಸ್ತೆಗಳಿಗೆ ಟಾರು ಹಾಕಲು ಪಾಲಿಕೆ ಹೆಚ್ಚು–ಕಡಿಮೆ ಸಾವಿರ ಕೋಟಿ ರೂಪಾಯಿ ವ್ಯಯಿಸಿದೆ. ಅದೇ ಮಾರ್ಗಗಳಲ್ಲೀಗ ಮತ್ತೆ ಗುಂಡಿಗಳ ರಾಜ್ಯಭಾರ. ಈ ರಸ್ತೆಗಳೇಕೆ ಅಲ್ಪಾಯುಷಿಗಳು ಎನ್ನುವುದು ಸದಾ ಕಾಡುವ ಪ್ರಶ್ನೆ. ಯಾವ ದಿಕ್ಕಿನಿಂದ ಉತ್ತರ ಹುಡುಕುತ್ತಾ ಬಂದರೂ ಅದು ಗುತ್ತಿಗೆದಾರರ ಮಾಫಿಯಾ ಕಡೆಗೆ ಕೈತೋರುತ್ತದೆ. ಈ ಮಾಫಿಯಾದ ವಿಷವರ್ತುಲದಲ್ಲಿ ಜನಪ್ರತಿನಿಧಿಗಳೂ ಇದ್ದಾರೆ, ಎಂಜಿನಿಯರ್‌ಗಳೂ ಇದ್ದಾರೆ. ಈಗ ಕೆಲ ಗುತ್ತಿಗೆದಾರರೇ ಪಾಲಿಕೆ ಸದಸ್ಯರಾಗಿ ಬಂದು ಕುಳಿತಿದ್ದಾರೆ.

2001ರಿಂದ 2010ರ ಅವಧಿಯಲ್ಲಿ ರಾಜಧಾನಿಯ ರಸ್ತೆಗೆ ಸಂಬಂಧಿಸಿದ ಕಾಮಗಾರಿ­ಗಳಿಗೆ ₹ 10,782 ಕೋಟಿ ವ್ಯಯಿ­ಸಲಾಗಿದೆ. ಪ್ರತಿ ಕಿ.ಮೀ. ರಸ್ತೆಗೆ ಒಂದು ಕೋಟಿ ವೆಚ್ಚ ಮಾಡಲಾಗಿದೆ ಅಂದುಕೊಂಡರೂ 10,782 ಕಿ.ಮೀ. ಉದ್ದದ ರಸ್ತೆ ನುಣುಪಾದ ಮೇಲ್ಮೈ­ಯಿಂದ ನಳನಳಿಸಬೇಕಿತ್ತು. ಆದರೆ, ಪತ್ರಿಕೆಗಳಲ್ಲಿ ಬರುತ್ತಿರುವ ಗುಂಡಿ ಚಿತ್ರಗಳು ಕಡತಗಳ ‘ಕಥೆ’ಗಿಂತ ಭಿನ್ನವಾದ ಚಿತ್ರಣ ಕಟ್ಟಿಕೊಡುತ್ತವೆ.
ಬೆಂಗಳೂರಿನ 1,940 ಕಿ.ಮೀ. ಉದ್ದದ ಮುಖ್ಯ ಹಾಗೂ ಉಪ ರಸ್ತೆಗಳ ಜಾಲವೇ ಶೇ 70ರಷ್ಟು ಸಂಚಾರದ ಭಾರವನ್ನು ಹೊರುತ್ತಿದೆ. ಆ ಜಾಲದಲ್ಲಿ ಗುಂಡಿ ಇಲ್ಲದಂತೆ ನೋಡಿಕೊಳ್ಳಲು ಪಾಲಿಕೆಗೆ ಇದುವರೆಗೆ ಸಾಧ್ಯವಾಗಿಲ್ಲ.

ನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲೂ ವಾಹನ ಓಡಾಟ ಹೆಚ್ಚಾಗಿಯೇ ಇದೆ. ಆದರೆ, ಅವು ಗಟ್ಟಿಮುಟ್ಟಾಗಿವೆ. ಅದೇ ನಗರದ ರಸ್ತೆಗಳು ಮಾತ್ರ ಮೈತುಂಬಾ ಗಾಯ ಮಾಡಿಕೊಂಡು ನರಳುತ್ತಿವೆ; ಹೀಗೇಕೆ ಎಂದು ಕೇಳಿದಾಗ, ಭಾರತೀಯ ವಿಜ್ಞಾನ ಸಂಸ್ಥೆಯ ಸಾರಿಗೆ ತಜ್ಞ ಆಶಿಶ್‌ ವರ್ಮಾ ಅವರು ನೀಡುವ ಉತ್ತರ ನಮ್ಮ ಕಾಮಗಾರಿಗಳ ಗುಣಮಟ್ಟದ ಮೇಲೆ ಬೆಳಕು ಚೆಲ್ಲುತ್ತದೆ.

‘ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಲು ಅಗತ್ಯವಾದ ಎಲ್ಲ ತಂತ್ರಜ್ಞಾನವೂ ದೇಶದಲ್ಲಿ ಲಭ್ಯವಿದೆ. ಒಂದೊಮ್ಮೆ ವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಿಸಿದರೆ ಕನಿಷ್ಠ ಐದು ವರ್ಷ ಬಾಳಿಕೆ ಬರುತ್ತವೆ. ಅದಕ್ಕಿಂತ ಬೇಗ ರಸ್ತೆ ಹಾಳಾದರೆ ಕಳಪೆ ಕಾಮಗಾರಿಯಲ್ಲದೆ ಬೇರೆ ಕಾರಣವೇ ಇರಲಾರದು’ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.

‘ತುರ್ತು ಅನುದಾನ’ ಬಿಡುಗಡೆಗೆ ಗುಂಡಿ ಮುಚ್ಚಿಸುವ ಕಾಮಗಾರಿ ದೊಡ್ಡ ರಹದಾರಿ. ಕಳೆದ ವರ್ಷ ಪ್ರತಿ ವಾರ್ಡ್‌ಗೆ ₹ 25 ಲಕ್ಷ ಅನುದಾನವನ್ನು ಆದ್ಯತೆ ಮೇರೆಗೆ ಬಿಡುಗಡೆ ಮಾಡಲಾಗಿತ್ತು. ಈ ಸಲವೂ ಗುಂಡಿಗಳ ನಿರ್ವಹಣೆಗಾಗಿ  ಅನುದಾನ ನೀಡಲಾಗುತ್ತದೆ ಎಂಬ ಘೋಷಣೆ ಹೊರಬಿದ್ದಿದೆ. ಈ ಅನುದಾನವನ್ನು ನಗರದ ಗುಂಡಿಗಳು ‘ಬರ್ಮುಡಾ ತ್ರಿಕೋನ’ದಂತೆ ಅದೃಶ್ಯ ಮಾಡಿಬಿಡುತ್ತವೆ.

ಗುಂಡಿಗಳ ಕಾರಣದಿಂದ ತೆರಿಗೆದಾತರಿಗೆ ಬೀಳುತ್ತಿರುವ ಆರ್ಥಿಕ ಪೆಟ್ಟು ಬಲು ದೊಡ್ಡದು. ಕೊಟ್ಟ ತೆರಿಗೆ ಹಣದ ದುರುಪಯೋಗ ಒಂದೆಡೆಯಾದರೆ, ಹೆಚ್ಚಿದ ಮಾಲಿನ್ಯ, ವಾಹನಗಳ ದುರಸ್ತಿ, ಇಂಧನದ ಪೋಲು, ಸಮಯಪಾಲನೆ ಒತ್ತಡ, ಹದಗೆಡುವ ಆರೋಗ್ಯ ಮೊದಲಾದವುಗಳ ದೂರಗಾಮಿ ಪರಿಣಾಮಗಳು ಇನ್ನೊಂದೆಡೆ.

ರಸ್ತೆಯ ಮಧ್ಯಭಾಗದಿಂದ ಎಡ–ಬಲ ಎರಡೂ ದಿಕ್ಕಿನಲ್ಲಿ ಮೇಲ್ಮೈ ಇಳಿಜಾರು ಇರಬೇಕು. ರಸ್ತೆ ಅಂಚಿನಲ್ಲಿ ನೀರು ಸಾಗಿಸಲು ಚರಂಡಿ ಇರಬೇಕು ಎನ್ನುವುದು ನಿಯಮ. ಇದರಿಂದ ಬಿದ್ದ ಮಳೆನೀರು ಸರಾಗವಾಗಿ ಹರಿದು ಹೋಗಲು ಸಹಕಾರಿ ಆಗುತ್ತದೆ. ಆದರೆ, ನಮ್ಮ ನಗರದ ರಸ್ತೆಗಳು ಚಪ್ಪಟೆಯಾಗಿವೆ. ಬಿದ್ದ ನೀರು ಹರಿದುಹೋಗಲು ಸ್ಥಳಾವಕಾಶ ಇಲ್ಲದೆ ರಸ್ತೆಗಳೇ ಕಾಲುವೆ ರೂಪ ತಾಳುತ್ತವೆ. ಗುಂಡಿಗಳ ರಾಜ್ಯಭಾರಕ್ಕೆ ಈ ತಾಂತ್ರಿಕ ಅಂಶವೂ ಕಾರಣವಾಗಿದೆ.

ನಗರದ ರಸ್ತೆಗಳು 10ರಿಂದ 12 ಲಕ್ಷ ವಾಹನಗಳ ಧಾರಣ ಸಾಮರ್ಥ್ಯವನ್ನಷ್ಟೇ ಹೊಂದಿದ್ದರೆ ವಾಹನಗಳು ಇರುವುದು 53 ಲಕ್ಷ. ಗುಣಮಟ್ಟದ ಕಾಮಗಾರಿ ನಡೆದಾಗಲೂ ಸೂಕ್ತ ನಿರ್ವಹಣೆ ಇಲ್ಲದಿದ್ದರೆ ರಸ್ತೆಗಳನ್ನು ಸುಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಕಷ್ಟ. ಆಯುಕ್ತರ ತಾಂತ್ರಿಕ ತನಿಖಾ ಕೋಶದ (ಟಿವಿಸಿಸಿ) ಪರಿಶೀಲನಾ ವರದಿಗಳ ಮೇಲೊಮ್ಮೆ ಕಣ್ಣು ಹಾಯಿಸಿದರೆ ಬಹುತೇಕ ಕಾಮಗಾರಿಗಳು ಕಳಪೆ ಎನ್ನುವುದು ವೇದ್ಯವಾಗುತ್ತದೆ. ಟಿವಿಸಿಸಿ ತನಿಖೆ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕಾಗಿದ್ದ ಹಿಂದಿನ ಆಯುಕ್ತರೊಬ್ಬರು ವರದಿಯೇ ಪ್ರಮಾದದಿಂದ ಕೂಡಿದೆ ಎಂದಿದ್ದರು.

ನಗರದ ರಸ್ತೆಗಳಿಗೆ ಬೊಜ್ಜಿನ ಸಮಸ್ಯೆ. ಪ್ರತಿವರ್ಷದ ಕಳಪೆ ಕಾಮಗಾರಿಯಿಂದ ಪದರಗಳು ಹೆಚ್ಚುತ್ತಿವೆಯೇ ಹೊರತು ಗುಣಮಟ್ಟ ಸುಧಾರಿಸುತ್ತಿಲ್ಲ. ಗುಂಡಿಗಳನ್ನು ಮುಚ್ಚಲು ಪೈಥಾನ್‌–5000 ಎಂಬ ಅಮೆರಿಕ ತಂತ್ರಜ್ಞಾನದ ಯಂತ್ರ ತರಿಸಲಾಗಿದೆ. ಒಂದು ಮುಚ್ಚಿದರೆ, ಹತ್ತು ಗುಂಡಿಗಳು ಬಾಯ್ದೆರೆವ ಈ ನಗರದಲ್ಲಿ ಪೈಥಾನ್‌, ಕೋಟ್ಯಂತರ ಆದಾಯ ಬಾಚಿಕೊಂಡು ಸುಮ್ಮನಾಗಿದೆ.

ರಸ್ತೆಗಳ ಗುಂಡಿ ಮುಚ್ಚುವುದು, ದುರಸ್ತಿ ಹಾಗೂ ನಿರ್ವಹಣೆ ಮಾಡುವುದಕ್ಕಾಗಿ ಭಾರತೀಯ ರಸ್ತೆ ಕಾಂಗ್ರೆಸ್‌ನಲ್ಲಿ ಸ್ಪಷ್ಟವಾದ ನಿಯಮಾವಳಿಯೇ ಇದೆ. ಮೊದಲು ರಸ್ತೆಯನ್ನು ಶಿಥಿಲಗೊಳಿಸಿದ ಮತ್ತು ಸಡಿಲಗೊಂಡ ಎಲ್ಲ ಸಾಮಗ್ರಿಯನ್ನು ಅಲ್ಲಿಂದ ತೆರವುಗೊಳಿಸಬೇಕು. ಗುಂಡಿಗಳ ಮೂಲದವರೆಗೆ ಎಲ್ಲ ಕಲ್ಮಶವನ್ನು ಸ್ವಚ್ಛಗೊಳಿಸಬೇಕು. ರಸ್ತೆಯನ್ನು ನಿರ್ಮಿಸುವಾಗ ಬಳಸಿದ ಸಾಮಗ್ರಿಗಿಂತ ಗುಂಡಿಯನ್ನು ಮುಚ್ಚಲು ಬಳಸುವ ಸಾಮಗ್ರಿ ಹೆಚ್ಚಿನ ಗುಣಮಟ್ಟದಿಂದ ಕೂಡಿರಬೇಕು. ಗುಂಡಿಗೆ ತುಂಬಿದ ಸಾಮಗ್ರಿ ಯಾವುದೇ ಕಾರಣಕ್ಕೂ ರಸ್ತೆ ಮೇಲ್ಮೈಗಿಂತ ಮೇಲೆ ಇಲ್ಲವೆ ಕೆಳಗೆ ಇರಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಧಾವಂತದಲ್ಲಿ ಟಾರು ಸುರಿಯುತ್ತಾ ಹೊರಟವರಿಗೆ ಮಾರ್ಗಸೂಚಿ ಕುರಿತು ಯೋಚಿಸಲು ಪುರುಸೊತ್ತಿಲ್ಲ.

ರಸ್ತೆ ಕಾಮಗಾರಿಗಳನ್ನು ಹಗರಣಮುಕ್ತ ಮಾಡಲು 30- 40 ವರ್ಷ ಬಾಳಿಕೆ ಬರುವ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವುದು ಒಳಿತು ಎನ್ನುವ ಸಲಹೆಯೂ ಸಾರಿಗೆ ತಜ್ಞರಿಂದ ಬಂದಿದೆ. ಆದರೆ, ಕಾಂಕ್ರೀಟ್‌ ಕಾಮಗಾರಿ ಕಳಪೆಯಾದರೆ ಪೋಲಾಗುವ ಹಣವೂ ಹೆಚ್ಚು, ಅಡ್ಡಪರಿಣಾಮಗಳೂ ಅಧಿಕ ಎಂಬ ಆತಂಕ ಅದರ ಹಿಂದಿದೆ. ಸೇವಾ ಸಂಸ್ಥೆಗಳ ಅಗೆತದಿಂದ ಉತ್ತಮ ರಸ್ತೆಗಳೂ ಹಾಳಾದ ಉದಾಹರಣೆ ಇದೆ. ಸೇವಾ ಸಂಸ್ಥೆಗಳ ನಡುವಿನ ಸಮನ್ವಯಕ್ಕಾಗಿ ಸಮಿತಿ ರಚನೆಯಾಗಿದ್ದರೂ ರಸ್ತೆಗಳಲ್ಲಿ ಇನ್ನೂ ಆ ಸಮನ್ವಯ ಕಾಣುತ್ತಿಲ್ಲ. ಪಾಲಿಕೆ ರಸ್ತೆಗೆ ಹಾಕಿಸಿದ ಟಾರಿನ ಬಿಸಿ ಆರುವ ಮುನ್ನವೇ ಜಲಮಂಡಳಿ ಅಗೆತ ಆರಂಭಿಸಿರುತ್ತದೆ.

ಸೇವಾ ಮಾರ್ಗಗಳ ಡಕ್ಟ್‌ಗಳಿಗೆ ಪ್ರತ್ಯೇಕ ಸೌಲಭ್ಯ ಒದಗಿಸುವ ಟೆಂಡರ್‌ ಶ್ಯೂರ್‌ ಯೋಜನೆ ಕೆಲ ರಸ್ತೆಗಳಲ್ಲಿ ಅಗೆತದ ಸಮಸ್ಯೆಗೆ ಪರಿಹಾರವನ್ನೇನೋ ಒದಗಿಸಿದೆ. ಆದರೆ, ಮಳೆನೀರು ಸರಾಗವಾಗಿ ಹರಿಯುವ ಸೌಲಭ್ಯ ಇಲ್ಲಿಯೂ ಇಲ್ಲವಾಗಿದೆ. ಎಲ್ಲ ರಸ್ತೆಗಳಿಗೂ ಟೆಂಡರ್‌ ಶ್ಯೂರ್‌ ಯೋಜನೆ ತರುವುದು ಕಷ್ಟದ ಕೆಲಸ. ಅದರ ಬದಲು ನೀರು, ದೂರ ಸಂಪರ್ಕ ಹಾಗೂ ವಿದ್ಯುತ್‌ ಸರಬರಾಜು ಮಾರ್ಗಗಳಿಗೆ ರಸ್ತೆ ಒಂದು ಬದಿಯಲ್ಲಿ ‘ಯುಟಿಲಿಟಿ ಮಾರ್ಗ’ ಬಿಟ್ಟರೆ ಸಾಕು, ರಸ್ತೆ ಅಗೆಯುವ ಪರಿಪಾಠಕ್ಕೆ ಕೊನೆ ಹಾಡಬಹುದು ಎಂಬುದು ತಜ್ಞರು ಹೇಳಿಕೊಡುವ ಸುಲಭದ ದಾರಿಯಾಗಿದೆ.

ಹೈಕೋರ್ಟ್‌ ನಿರ್ದೇಶನದಂತೆ ಕ್ಯಾಪ್ಟನ್‌ ರಾಜಾರಾವ್‌ ಅವರ ಸಮಿತಿ 12 ತಿಂಗಳು ರಸ್ತೆಗಳ ಅಧ್ಯಯನ ನಡೆಸಿ, ಅವುಗಳ ನಿರ್ವಹಣೆಗೆ ನೂರಕ್ಕೂ ಅಧಿಕ ಶಿಫಾರಸುಗಳನ್ನು ಮಾಡಿತ್ತು. ಟೆಂಡರ್‌ ಪ್ರಕ್ರಿಯೆ ಆರಂಭವಾದ ಮೇಲೆ ಜನಪ್ರತಿನಿಧಿಗಳ ಹಸ್ತಕ್ಷೇಪಕ್ಕೆ ಅವಕಾಶ ಇರಬಾರದು, ರಸ್ತೆ ಅಗೆತಕ್ಕೆ ಆಸ್ಪದ ಇಲ್ಲದಂತೆ ಪ್ರತಿ ಮನೆ ಮುಂದೆಯೂ ಡಕ್ಟ್‌ ಬಿಡಬೇಕು, ಸಾಧ್ಯವಾದ ಕಡೆಗಳಲ್ಲಿ ಮೇಲ್ಸೇತುವೆ ಮಾರ್ಗ ನಿರ್ಮಿಸಿ, ಸದ್ಯದ ರಸ್ತೆಜಾಲದ ಮೇಲಿನ ಹೊರೆ ಕಡಿಮೆ ಮಾಡಬೇಕು ಎಂಬುವು ಅದರಲ್ಲಿ ಪ್ರಮುಖವಾದವು. ತಮ್ಮ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ ಎಂದಮೇಲೆ ಜನಪ್ರತಿನಿಧಿಗಳು ಈ ವರದಿಗೆ ಕಿಮ್ಮತ್ತು ನೀಡುವುದಾದರೂ ಹೇಗೆ?

ಪಾರದರ್ಶಕತೆ ಅಪೇಕ್ಷಿಸಿದ್ದ ಕೆಲವು ಪಾಲಿಕೆ ಸದಸ್ಯರ ಯತ್ನ ಹಾಗೂ ತಮ್ಮ ಆಡಳಿತಾವಧಿಯಲ್ಲಿ ವಿಜಯಭಾಸ್ಕರ್‌ ತೋರಿದ ಮುತುವರ್ಜಿಯಿಂದ ರಸ್ತೆ ಇತಿಹಾಸ ದಾಖಲೀಕರಣ ಯೋಜನೆ ಈಗ ಸನ್ನದ್ಧವಾಗಿದೆ. ಗುಂಡಿರಹಿತ ರಸ್ತೆಗಳ ನಿರ್ವಹಣೆಗೆ ಅದರ ಸಮರ್ಪಕ ಬಳಕೆಯೊಂದೇ ಸಾಕು. ಆದರೆ, ಆ ಇಚ್ಛಾಶಕ್ತಿಯೂ  ಕಾಣುತ್ತಿಲ್ಲ.
*
ಹೊಸ ತಂತ್ರಜ್ಞಾನ ಬಳಕೆ
ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದಾಗಿ ಅನೇಕ ಅಪಘಾತಗಳು, ಸಾವು ನೋವು ಸಂಭವಿಸಿವೆ. ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ರಸ್ತೆ ಗುಂಡಿ ಮುಚ್ಚಲು ನಿರ್ಧರಿಸಲಾಗಿದೆ. ಇದಕ್ಕೆ ಬೇಕಾದ ಯಂತ್ರ ಖರೀದಿ ಮಾಡಲಾಗುವುದು. ಅಕ್ಟೋಬರ್‌ ಅಂತ್ಯದೊಳಗೆ ಮುಖ್ಯ ರಸ್ತೆಗಳು ಹಾಗೂ ಉಪ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಮೂಲಕ ನಗರದ ಎಲ್ಲ ರಸ್ತೆಗಳನ್ನೂ ಸುಸ್ಥಿತಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
– ರಾಮಲಿಂಗಾ ರೆಡ್ಡಿ,
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ

*

ಬೆಂಗಳೂರು
ನಗರದಲ್ಲಿರುವ ರಸ್ತೆಗಳ ಸಂಖ್ಯೆ 93 ಸಾವಿರ
ನಗರದ ರಸ್ತೆಗಳ ಒಟ್ಟು ಉದ್ದ 14 ಸಾವಿರ ಕಿ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT