ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಬಿಎಂಪಿ ಚುಕ್ಕಾಣಿಗಾಗಿ ಕಾಂಗ್ರೆಸ್‌ ವಾಮಮಾರ್ಗ’

ಆರ್. ಅಶೋಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
Last Updated 4 ಸೆಪ್ಟೆಂಬರ್ 2015, 19:39 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕಾಗಿ ಆಡಳಿತಾರೂಢ ಕಾಂಗ್ರೆಸ್‌ ವಾಮಮಾರ್ಗ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಶಾಸಕ ಆರ್. ಅಶೋಕ ನೇತೃತ್ವದಲ್ಲಿ ನಗರದ ಪುರಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ನಗರದ ಜನತೆ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ತೀರ್ಪು ಕೊಟ್ಟಿದ್ದಾರೆ. ಹೀಗಿದ್ದರೂ, ಹಿಂಬಾಗಿಲ ಮೂಲಕ ಪಾಲಿಕೆ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಯತ್ನಿಸುತ್ತಿದೆ’ ಎಂದು ಅಶೋಕ ಆರೋಪಿಸಿದರು.

‘ಅಧಿಕಾರ ದಾಹಕ್ಕಾಗಿ ಕಾಂಗ್ರೆಸ್‌ ಮತದಾರರ ಸಂಖ್ಯೆಯನ್ನು 250ರಿಂದ 260ಕ್ಕೆ ಏರಿಸಿ ಬೋಗಸ್ ಪಟ್ಟಿಯನ್ನು ಸಿದ್ಧಪಡಿಸಿ, ಮೋಸದ ರಾಜಕಾರಣ ಮಾಡುತ್ತಿದೆ’ ಎಂದರು.

‘ಪಾಲಿಕೆ ಚುನಾವಣೆಯಲ್ಲಿ ವಿರೋಧ ಪಕ್ಷ ಜಯಗಳಿಸಿದ್ದು ಚರಿತ್ರೆಯಲ್ಲೇ ಇಲ್ಲ. ಇದನ್ನು ಸಹಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವುದಕ್ಕಾಗಿ ವಾಮಮಾರ್ಗ ಅನುಸರಿಸುತ್ತಿದ್ದಾರೆ’ ಎಂದರು.

‘ರೆಸಾರ್ಟ್ ರಾಜಕಾರಣವನ್ನು ಮತ್ತೆ ಆರಂಭಿಸಿರುವ ಕಾಂಗ್ರೆಸ್‌, ಜನರ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದೆ. ನಂಬರ್‌ ಗೇಮ್‌ನ ಈ ರೆಸಾರ್ಟ್‌ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ. ಅಧಿಕಾರ ಸಿಗುವವರೆಗೂ ಬಿಜೆಪಿಗೆ ಹೋರಾಟ ನಡೆಸಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಜೆಡಿಎಸ್‌ನ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಬೈಯುತ್ತಲೆ ಇದ್ದ ಕಾಂಗ್ರೆಸ್ ನಾಯಕರು, ಅಧಿಕಾರದ ಆಸೆಗಾಗಿ ಇದೀಗ ಅವರ ಮನೆ ಬಾಗಿಲಿಗೆ ಹೋಗಿದ್ದಾರೆ. ಇಂತಹ ಅಕ್ರಮ ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್‌ ಮುಂದೆ ರಾಜ್ಯದಲ್ಲಿ  ನಾಶವಾಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಪಿ.ಸಿ. ಮೋಹನ್, ವಿಧಾನ ಪರಿಷತ್ ಸದಸ್ಯ  ಜಗ್ಗೇಶ್, ನಟಿ ಮಾಳವಿಕಾ ಅವಿನಾಶ್, ಜಯನಗರ ಶಾಸಕ ವಿಜಯಕುಮಾರ್ ಹಾಗೂ ಬೆಂಗಳೂರು ನಗರ ಬಿಜೆಪಿ ಘಟಕದ ಅಧ್ಯಕ್ಷ ಸುಬ್ಬಣ್ಣ ಇತರರು ಭಾಗವಹಿಸಿದ್ದರು.

ದೂರು: ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಅವರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

‘ಇತ್ತಿಚೆಗೆ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಪಾವಗಡ ತಾಲ್ಲೂಕು ವೆಂಕಟಾಪುರ ಗ್ರಾಮದಲ್ಲಿ ಉಗ್ರಪ್ಪ ಮತದಾನ ಮಾಡಿದ್ದರು. ನಗರದ ಎಚ್‌ಎಸ್‌ಆರ್‌ ಬಡಾವಣೆ ಮತದಾರರ ಪಟ್ಟಿಯಲ್ಲೂ ಅವರ ಹೆಸರಿದೆ.

‘ಕೆಲವು ದಿನಗಳ ಹಿಂದಷ್ಟೇ ತುಮಕೂರಿನ ಅಧಿಕಾರಿಗಳಿಗೆ ಹೆಸರು ವೆಂಕಟಾಪುರ ಗ್ರಾಮದ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವಂತೆ ಪತ್ರ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT